ಮಂಗಳವಾರ, ಸೆಪ್ಟೆಂಬರ್ 26, 2017

‘ನ್ಯೂಟನ್‌’ ಇಂಡಿಯಾದ ವಾಸ್ತವಿಕ ಚಿತ್ರ


ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ!
ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್‌ ಐಸಾಕ್‌  ನ್ಯೂಟನ್‌ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ.  ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ ಪ್ರಚೋದನೆ ಅಥವಾ ಬಲಪ್ರಯೋಗ ಇಲ್ಲದೇ ಅದರ ಸ್ಥಾನಪಲ್ಲಟ ಆಗುವುದಿಲ್ಲ’–ಇದು ನ್ಯೂಟನ್‌ ಸಿದ್ಧಾಂತದ ಅತ್ಯಂತ ಸರಳ ವಿವರಣೆ.
ವ್ಯವಸ್ಥೆ ಜಡತ್ವದಲ್ಲಿದ್ದರೆ ಅದು ತಂತಾನೇ ಸರಿ ಹೋಗಲಾರದು. ಅದನ್ನು ಬದಲಾಯಿಸಬೇಕಾಗುತ್ತದೆ. ಬದಲಾವಣೆಗೆ ಕ್ರಿಯೆ ನಡೆಯಬೇಕೆಂದರ್ಥ. ಕಾರ್ಯೋನ್ಮುಖ ಆಗಬೇಕಾದ್ದು ಯಾರು? ನಾವೇ! ಇದೆಷ್ಟು ಸಿಂಪಲ್‌  ಥಾಟ್...
ಆಧುನಿಕ ಯುಗದಲ್ಲೂ ದಂಡಕಾರಣ್ಯದ ಆದಿವಾಸಿ ಪ್ರದೇಶದಲ್ಲಿ ಚುನಾವಣೆ ನಡೆಸುವುದು ಸವಾಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಇಷ್ಟು ದೊಡ್ಡ ಸವಾಲಾಗಲೇಬಾರದಿತ್ತು. ಆದರೆ, ನಕ್ಸಲ್‌ ಹೆಸರಲ್ಲಿ, ಭಯೋತ್ಪಾದನೆಯ ಹೆಸರಲ್ಲಿ ಸವಾಲನ್ನಾಗಿಯೇ ಉಳಿಸಿಕೊಂಡಿದ್ದು ರಾಜಕಾರಣ. ಇಂಥ ರಾಜಕಾರಣ, ವ್ಯವಸ್ಥೆಯ ಸ್ವರೂಪದಲ್ಲಿ ಪೋಷಿಸಲ್ಪಡುತ್ತ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಿದೆ. ಮತಯಂತ್ರ ಇದರ ಸಹಜ ಬಲಿಪಶು. ಈಗೀಗ ಅದನ್ನು ಆಟಿಕೆ ವಸ್ತುವಿನಂತೆ ಬಳಸಿ ಫಲಿತಾಂಶಗಳಲ್ಲಿ ಪವಾಡಗಳನ್ನೇ ಸೃಷ್ಟಿಸಲಾಗುತ್ತಿದೆ.
ಚುನಾವಣಾ ಆಯೋಗ ತನ್ನ ನಿಜವಾದ ಸ್ವಾಯತ್ತತೆಯನ್ನು ಮೆರೆದು ಮತಯಂತ್ರವನ್ನು ಕಬಂಧ ಬಾಹುಗಳಿಂದ ರಕ್ಷಿಸಲೆಂದೇ ರೂಪುಗೊಂಡ ವ್ಯವಸ್ಥೆ. ಅತಿಸೂಕ್ಷ್ಮ ಎಂದೇ ಹಣೆಪಟ್ಟಿ ಹಚ್ಚಿಸಿಕೊಂಡ ಆದಿವಾಸಿ ಪ್ರದೇಶದಲ್ಲಿ ಚುನಾವಣೆ ನಡೆಸಲು ನಿಯೋಜನೆಗೊಂಡ ಯುವಕನೊಬ್ಬ ದೊಡ್ಡ ಸಾಹಸವನ್ನೇ ಮಾಡುತ್ತಾನೆ. ತಾನು ಫಿಜಿಕ್ಸ್‌ ಓದುವಿನಲ್ಲಿ ಕಲಿತ ನ್ಯೂಟನ್‌ ಸಿದ್ಧಾಂತವನ್ನು ಕಾರ್ಯರೂಪಕ್ಕಿಳಿಸಿ ಬಂದೂಕಿನಿಂದ ಹೆದರಿಸಿ ದೂರವಿಟ್ಟ ಮತದಾರರನ್ನು ಬೂತ್‌ಗೆ ಕರೆತಂದು ಮತ ಹಾಕುವಂತೆ ಮಾಡುತ್ತಾನೆ. ತನ್ನ ಜೀವ ಪಣಕ್ಕಿಟ್ಟು ಇಂಥದೊಂದು ಕ್ರಿಯೆಗೆ ಮುಂದಾಗುತ್ತಾನೆ.ಯಶಸ್ವಿಯೂ ಆಗುತ್ತಾನೆ. ಈ ರೋಚಕ ಪ್ಲಾಟ್‌ ಇಟ್ಟುಕೊಂಡು ಪಾಲಿಟಿಕಲ್‌ ಸಟೈರ್‌ ಕಟ್ಟಿಕೊಟ್ಟ ‘ನ್ಯೂಟನ್‌’ ಅತ್ಯಂತ ವಾಸ್ತವಿಕ ಚಿತ್ರ.

ಶನಿವಾರ, ಆಗಸ್ಟ್ 12, 2017

ಪ್ರಭುತ್ವದ ಹಣಾಹಣಿ ಪ್ರಜೆಗಳಿಗೆ ಮೋಜು..

ಒಂದು ಟಿಪ್ಪಣಿ

ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ.
ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್‌ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್‌.
ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್‌ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್‌ ಅಂಗಳದಲ್ಲಿ  ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್‌(ಫುಲ್‌) ಮಿನಿಸ್ಟರ್‌ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್‌ ಪವರ್‌ ಆಜ್ಞಾಪಾಲಕರಂತೆ ತನಿಖಾ ದಳ ನಾಡಿನ ಮೂಲೆ ಮೂಲೆ ಮೂಸಿ ಹೋಯಿತು. ಸುರಕ್ಷಿತ ಕಲಿಗಳು ಗುಜರಾತಿನ ವಿಧಾನಸಭೆಯಲ್ಲಿ ನಿಷ್ಠೆ ಸಾಬೀತುಪಡಿಸಿದರು. ಒಂದಷ್ಟು ಹರಾಂಖೋರತನದ ಪ್ರದರ್ಶನವೂ ಆಯಿತು. ಆಯೋಗ ‘ಕೈ’ ಕೈಮೇಲೆತ್ತಿತು. ಮದಗಜಗಳ ಕಾದಾಟದಿಂದ ರಾಜಕೀಯ ಎನ್ನುವುದು ‘ಡಬ್ಲುಡಬ್ಲುಎಫ್‌’ ಆಟದಂತೆ ರೋಚಕವಾಗಿತ್ತು.
ಹಿಂದೂತ್ವ ವಿರೋಧಿ ಈಗ ನಾಡಧೋರಣೆಯಾದಂಥ ವಾತಾವರಣವಿದೆ. ಇದರ ದಿಕ್ಕೆಡಿಸಿ ತನ್ನದೊಂದು ಹವಾ ಸೃಷ್ಟಿಸಲು ಸರ್ವಜನಾಂಗದ ಶಾಂತಿತೋಟ ಲಾಲ್‌ಬಾಗ್‌ಗೆ ಗುಜರಾತಿನ ರಾಜಕೀಯ ಗೂಳಿಯೊಂದು ನುಗ್ಗಿ ಬಂದಿದೆ. ಹರಕತ್ತುಗಳ ಶುರು ಹಚ್ಚಿಕೊಂಡಿದೆ.
 ಕಾಂಗ್ರೆಸ್‌ನ ಏಕೈಕ ಆಶಾಕಿರಣ ‘ಆಖರೀ ಗಾಂಧಿ’ ಬೃಹತ್‌ ಸಮಾವೇಶ ಸಾಗಿದ ಹೊತ್ತಲ್ಲಿ ಸದ್ಯದ ಕರ್ನಾಟಕ ‘ಅಹಿಂದ ರಾಜಕೀಯ ಕಣ್ಮಣಿ’ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅದರ ಸಂಭ್ರಮ ಚಳಿಯಲ್ಲಿರುವ ಮಾಧ್ಯಮವನ್ನು ಬಿಸಿಯಪ್ಪುಗೆಗೆಳೆದಿದೆ.
 ಈ ನಡುವೆ ಕಲೆಯ ಕರಾಮತ್ತುಗಳೆಲ್ಲ ಮುಗಿದುಹೋದ ನಟನೊಬ್ಬ ಕಣಕ್ಕೆ ಕಣ್ಣಿಟ್ಟಿದ್ದಾನೆ. ಹತಾಶರು ರಾಜಕೀಯ ಗಮನ ಬೇರೆಡೆ ತಿರುಗಿಸಲು ರೂಪಿಸಿದ ತಂತ್ರಗಾರಿಕೆಯ ಒಂದು ಭಾಗವಾಗಲು ಸಜ್ಜಾಗುತ್ತಿದ್ದಾನೆ. ವಿಷಮಗೊಂಡ ಕರಾವಳಿಯ ರಾಜಕಾರಣದಲ್ಲಿ ಮುಖ ಕಳಕೊಂಡವರು ಇಂಥ ಗ್ಲ್ಯಾಮರ್‌ ಮುಖದ ಹಿಂದೆ ನಿಲ್ಲುವ ತಂತ್ರ ಹೂಡಿದ್ದಾರೆ. ಎಂದಿನಂತೆ ಕರಾವಳಿಗರಿಂದಲೇ ತುಂಬಿರುವ ಚಾನೆಲ್‌ಗಳು ತಮಗ್ಹತ್ತಿರದವನ ಬಾಯಿಯಾಗಲಿವೆ. ಒಂದಷ್ಟು ಯುವಕರು ಗ್ಲ್ಯಾಮರ್‌ ಹಿಂದೆ ಬೀಳಬಹುದು. ಒಟ್ಟಿನಲ್ಲಿ ಕೆಲವು ಮುಖ ಉಳಿಸಿಕೊಳ್ಳಲು ಸೃಷ್ಟಿಸಲ್ಪಟ್ಟ ರಾಜಕೀಯದ ‘ನೈಟ್‌ ವಾಚಮನ್‌’ (ಕ್ರಿಕೆಟ್‌ ಪರಿಭಾಷೆಯಲ್ಲಿ)  ತರಹದ ನಮೂನಾವೇ ಇದು ಎನ್ನುವ ಅನುಮಾನ.
ಈ ಗದ್ದಲದಲ್ಲಿ ದೊಡ್ಡ ಕಾರ್ಯಕ್ರಮವಿಲ್ಲದೆ ಸೊರಗಿದ ಪ್ರಾದೇಶಿಕ ಪಕ್ಷವೊಂದರ ಏಕೈಕ ಆಶಾಕಿರಣ ’ಅಣ್ಣ’ ಸಿಂಗಪುರ್‌ಗೆ ಕಳ್ಳಬೆಕ್ಕಿನಂತೆ ಹಾರಿದ್ದಾರೆ. ಅಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ದೇಶ–ರಾಜ್ಯ ರಾಜಕೀಯದ ಆರೋಗ್ಯವೂ ಹದಗೆಟ್ಟಿದ್ದರಿಂದ ಮತ್ತು ಸದ್ಯದ ಅಖಾಡದಲ್ಲಿ ಆಟಕ್ಕಿಳಿಯಲು ಪ್ಲೇಸ್‌ಮೆಂಟ್‌ ಇದ್ದೂ ತಾಲೀಮು ಸಾಕಾಗಲಿಲ್ಲವೇನೋ.. ಸಿಂಗಪುರದಲ್ಲೇ ಇದ್ದು ಒಂದಷ್ಟು ತಾಲೀಮು ಮತ್ತು ಸಂಝೋತಾ ವ್ಯವಸ್ಥೆ ಮಾಡಿಕೊಂಡೇ ವಾಪಸ್‌ ಆಗಬಹುದೇನೋ.
ಒಟ್ಟಿನಲ್ಲಿ ರಾಜಕೀಯ ಅಖಾಡ ಕಲಿಗಳ ಫೈಟ್‌ಗೆ ಭರ್ಜರಿ ಸಜ್ಜಾಗಿದೆ. ರೋಮಾಂಚನದ ನಿರೀಕ್ಷೆ ಹುಟ್ಟಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳ ಹಣಾಹಣಿ ಒಂದು ಮೋಜಿನಾಟದಂತಾಗಿದೆ. ಅನುಭವಿಸುವ ಎಂದಿನ ಅವಕಾಶ ಪ್ರಜೆಗಳದು.

ಬುಧವಾರ, ಜುಲೈ 19, 2017

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ


ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.
 ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ.
ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನನ್ನೊಳಗಿನ ಮನುಷ್ಯ ಅಂತಃಕರಣವನ್ನು ತಾಕಿದವು. ಚಿತ್ರ ಒಂದು ಮಟ್ಟಿಗೆ ಮಾನವೀಯ ನೆಲೆಯಲ್ಲಿಯೇ ಇದೆ.
 ಸಾಮೂಹಿಕ ಅತ್ಯಾಚಾರ ಪ್ರಕರಣದಂಥ ಎಳೆಯನ್ನಿಟ್ಟುಕೊಂಡು ನಿರ್ದೇಶಕರು ಲೀಲಾಜಾಲವಾಗಿ ಭಾವನಾತ್ಮಕ ಸಂಘರ್ಷವನ್ನು ಪರದೆಯ ಮೇಲೆ ಹರಡುತ್ತಾರೆ. ಹಲವು ದೃಶ್ಯಗಳಲ್ಲಿ ಅಂತಃಕರಣವಿದೆ. ಹದಗೆಡುತ್ತಿರುವ ಸಮಾಜದ ಬಗ್ಗೆ ವಿಷಾದವಿದೆ, ಆಕ್ರೋಶವಿದೆ.  ಮಾನವ ಸಹಜ ಎಡವಟ್ಟುಗಳು ಅತ್ಯಾಚಾರದಂಥ ಪೈಶಾಚಿಕ ಕೃತ್ಯಕ್ಕಿಳಿದಾಗ ಏನು ಮಾಡುವುದು? ಎನ್ನುವ ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರ ಮಾತ್ರ ಪ್ರತಿಹಿಂಸೆ! ಇದು ಚಿತ್ರದ ಬಹುದೊಡ್ಡ ಮಿತಿ.
 ಅಪರಾಧ ಕೃತ್ಯಗಳನ್ನು ತಡೆಯುವುದಕ್ಕೆ, ನಿಗ್ರಹಿಸುವುದಕ್ಕೆ ಪೊಲೀಸ್‌, ಕಾನೂನು  ವ್ಯವಸ್ಥೆ ಏನೋ ಇದೆ. ಅವೆಲ್ಲ ಅಸಹಾಯಕ ಅಥವಾ ಜಡಗೊಂಡು ಸೋತಿವೆ. ಹೀಗಾಗಿ ಮನುಷ್ಯ ಅನಿವಾರ್ಯವಾಗಿ ಸೇಡಿನ ಮನೋಭಾವಕ್ಕಿಳಿದುಬಿಡುತ್ತಾನೆ ಎನ್ನುವ ಸಹಜ ನಡಾವಳಿಯತ್ತಲೇ ನಿರೂಪಣೆ ಜಾರಿದ್ದರಿಂದ ಚಿತ್ರ ಮಾನವೀಯ ಪರಿಶೋಧಕ್ಕಿಂತ ವ್ಯವಸ್ಥೆಯ ವೈಫಲ್ಯಗಳ ನೆಪವಿಟ್ಟುಕೊಂಡು ಬೇರೆಯದೇ ಹಿಂಸೆಯತ್ತ ಫೋಕಸ್‌ ಮಾಡಿದೆ.
 ಮಲತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳು ಮತ್ತೊಂದು ಹೆಣ್ಣು ಜೀವದ ಮೇಲೆ ನಡೆದ ದೌರ್ಜನ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸೋಲುತ್ತಾಳೆ. ಹತಾಶಳಾಗುತ್ತಾಳೆ. ಅನ್ಯಾಯಕ್ಕೆ ಸಿಡಿದು ಕಾನೂನು ಕೈಗೆತ್ತಿಕೊಳ್ಳುತ್ತಾಳೆ. ಮಗಳ ಅತ್ಯಾಚಾರ ಮಾಡಿದ ಒಬ್ಬೊಬ್ಬರನ್ನು ಹುಡುಕಿ ಸೇಡು ತೀರಿಸಿಕೊಳ್ಳುತ್ತಾಳೆ. ಇದಿಷ್ಟೇ ಚಿತ್ರದುದ್ದಕ್ಕೂ ಮಿಂಚುತ್ತದೆ.
ದೃಶ್ಯ ಸಂಯೋಜನೆಯಲ್ಲಿ, ವಸ್ತುವಿನ ನಿರೂಪಣಾ ವಿಧಾನದಲ್ಲಿ ಕೊಂಚ ಹೊಸತನವಿದೆ. ಆದರೆ ತಾರ್ಕಿಕ ಅಂತ್ಯ ಕೊಡುವಾಗ ನಿರ್ದೇಶಕ ಮತ್ತದೇ ಪ್ರತೀಕಾರ, ಪ್ರತಿಹಿಂಸೆಯ ಮಾಮೂಲು ಜಾಡಿಗೆ ಸರಿದಿದ್ದಾರೆ.
 ಅತ್ಯಂತ ನಾಜೂಕಾಗಿ ಜನಪ್ರಿಯ ಧಾಟಿಯ ದೇಶಭಕ್ತಿ  ನೆಲೆಯಲ್ಲಿ ಅತ್ಯಾಚಾರದಂಥ ಕೃತ್ಯಗಳಿಗೆ ಪರಸಂಸ್ಕೃತಿಯಂಥ ಬಾಹ್ಯ ಪ್ರಚೋದನೆಗಳೇ ಕಾರಣ ಎಂದು ಜಾಣ್ಮೆಯೊಂದಿಗೆ ಆರೋಪಿಸುವುದು ಪ್ರಬುದ್ಧತೆಯೇ? ಚಿತ್ರದ ಕೇಂದ್ರ ವಸ್ತು ಅತ್ಯಾಚಾರ ಕೃತ್ಯ. ಅದಕ್ಕೆ ಪ್ರಚೋದನೆ ಅಥವಾ ಕಾರಣವಾಗುವುದು  ‘ವ್ಯಾಲೆಂಟೈನ್ಸ್‌ ಡೇ’ ಪಾರ್ಟಿ! ‘ವೆಸ್ಟರ್ನ್‌ ಕಲ್ಚರ್‌’ ಎನ್ನುವರ್ಥದಲ್ಲಿ ಧ್ವನಿಸುವ ಲವ್‌, ಪ್ರೇಮ ನಿವೇದನೆ! ತಿರಸ್ಕೃತಗೊಂಡ ಪರಿಣಾಮ ಹಿಂಸೆ. ಅದಕ್ಕೊಂದು ಪ್ರತಿ ಹಿಂಸೆ. ಇದಷ್ಟೇ ಸಮಸ್ಯೆ ಮತ್ತು ಪರಿಹಾರ ಎಂದುಕೊಂಡ ನಿರ್ದೇಶಕ ಮನುಷ್ಯನ ರಾಗ ದ್ವೇಷಗಳು, ಆಂತರಿಕ ಪ್ರಚೋದನೆಗಳಂಥ ಮಾನವೀಕ ವಿಜ್ಞಾನದ ಸೂಕ್ಷ್ಮಗಳಿಂದ ಹೊರಗೇ ನಿಂತು ಯೋಚಿಸಿದಂತಿದೆ.
 ಚಿತ್ರದ ಒಂದು ಹಂತದಲ್ಲಿ ಹುಡುಗಿ(ಆರ್ಯಾ)ಯನ್ನು ಕೆಣಕುವ ಮೋಹಿತ ಎನ್ನುವ ಹುಡುಗ ಪ್ರೇಮ ನಿವೇದನೆಯಲ್ಲಿ ಕಂಡ ಸೋಲನ್ನು ‘ಚಾರ್ಲ್ಸ್‌’ ಎನ್ನುವ ಗೆಳೆಯನೊಟ್ಟಿಗೆ ಹೇಳುತ್ತಾನೆ. ಅವನಿಗೆ ಮತ್ತೊಬ್ಬ ಸಾಥೀ ಡ್ರಗಿಸ್ಟ್‌ ಜಗನ್‌. ‘ಚಾರ್ಲ್ಸ್‌’ ಹೆಸರಿನ ಧ್ವನಿ, ಡ್ರಗಿಸ್ಟ್‌.. ಇದೆಲ್ಲ ಏನನ್ನು ಸೂಚಿಸುತ್ತದೆ?
  ತಿರಸ್ಕಾರಕ್ಕೊಳಗಾದ ಅವಮಾನಕ್ಕೆ ಇವರೆಲ್ಲ ಹುಡುಗಿಯನ್ನೇ ಅಪಹರಿಸುತ್ತಾರೆ. ಅದಕ್ಕೆ ವಾಚ್‌ಮನ್‌ ನೆರವಾಗುತ್ತಾನೆ. ಈ ಎಲ್ಲರ ಜೊತೆ ಆ ಪ್ರೇಮಿ ಸಾಗುವ ಕಾರಿನಲ್ಲಿ ತನ್ನ ಪ್ರಿಯತಮೆಯನ್ನೇ ಎಲ್ಲರೊಟ್ಟಿಗೆ ಹಂಚಿಕೊಳ್ಳುತ್ತಾನೆ. ಅತ್ಯಾಚರ ನಡೆಸಿ ಚರಂಡಿಗೆಸೆಯುತ್ತಾರೆ. ಅತ್ಯಾಚಾರಿಗಳ ಪೈಕಿ ಚಾರ್ಲ್ಸ್‌, ವಾಚಮನ್‌ ಮತ್ತು ಜಗನ್‌ರನ್ನು ನಿರ್ದೇಶಕರು ಡಿಕೆ ಎನ್ನುವ ದೇಸಿ ಡಿಟೆಕ್ಟಿವ್‌ ಒಬ್ಬನ ನೆರವಿನಿಂದ ಹುಡುಗಿ ತಾಯಿಯ (ದೇವಿಕಾ) ಆಕ್ರೋಶ ಮುಂದುಮಾಡಿ ಮುಗಿಸುತ್ತಾರೆ. ವಾಚಮನ್‌ ಮೇಲೆ ಸೇಡು ತೀರಿಸಿಕೊಳ್ಳಲು ಆರ್ಯಳ ತಾಯಿ ಒಂದಿಬ್ಬರು ಮಂಗಳಮುಖಿಯರ ನೆರವು ಪಡೆಯುತ್ತಾಳೆ. ಅವರಿಗೆ ಸುಪಾರಿ ಕೊಡುವ ದೃಶ್ಯವನ್ನು ನಿರ್ದೇಶಕರು ಸಂಯೋಜಿಸಿದ ರೀತಿ ಅವರ ಅಂತರಂಗದ ಕಿಚ್ಚನ್ನು ಅನಾವರಣಗೊಳಿಸುತ್ತದೆ.
 ಎಲ್ಲ ತಾಯಂದಿರು ತಮ್ಮ ಹೆಣ್ಣು ಮಕ್ಕಳು ಬಾಹ್ಯ ಪ್ರಚೋದನೆಗೊಳಗಾಗುವುದನ್ನು ತಡೆಯಲು ಮತ್ತವರ ಮೇಲೆ ನಡೆವ ಹಲ್ಲೆಗಳನ್ನು ನಿಗ್ರಹಿಸಲು ಚಂಡಿ, ದುರ್ಗೆಯ ಅವತಾರ ತಾಳಬೇಕು ಎನ್ನುವ ಹಾಗೆ ದೇವಿಕಾ ಆ ಇಬ್ಬರು ಮಂಗಳಮುಖಿಯರನ್ನು ಕಾಣಲು ಹೊರಡುತ್ತಾಳೆ. ಕ್ಯಾಮೆರಾ ಪ್ಯಾನ್‌ ಆಗುತ್ತಾ ಆಕಾಶದಿಂದಲೇ ಭಾರಿ ಉದ್ದಕ್ಕೆ ಇಳಿಬಿಟ್ಟಂತೆನಿಸುವ ಅರಿಷಿಣ ಮತ್ತು ಕುಂಕುಮ ಬಣ್ಣದ ಅಸಂಖ್ಯ ಬಟ್ಟೆಗಳ ಮೇಲೆ ಸಾಗುತ್ತದೆ. ಜೊತೆಗೆ ರಣೋತ್ಸಾಹದ ಮೂಡ್‌ ಸೃಷ್ಟಿಸುವ ರೆಹಮಾನ್‌ ಹಿನ್ನೆಲೆ ಸಂಗೀತ. ಇದರ ನಡುವಿಂದ ಆ ಇಬ್ಬರು ಮಂಗಳಮುಖಿಯರು ಎದ್ದು ಬರುತ್ತಾರೆ. ಕೊಲೆಗೆ ಸುಪಾರಿ ಪಡೆಯುತ್ತಾರೆ. ವಾಚಮನ್‌  ಕುಡಿತದಂಥ ಬಾಹ್ಯ ಪ್ರಚೋದನೆಗಳಲ್ಲಿ  ಲೀನವಾಗಿದ್ದ ಸಂದರ್ಭವನ್ನು ಬಳಸಿಕೊಳ್ಳುವ ಮಂಗಳಮುಖಿಯರು ಆತನ ರಾಸಲೀಲೆಯತ್ತ ಸೆಳೆದು ಮರ್ಮಾಂಗವನ್ನೇ ಕತ್ತರಿಸಿಹಾಕುತ್ತಾರೆ. ಈತನಕ ಸಮಾಜದಲ್ಲಿ ಇದ್ದ ಮೌನ ಅಥವಾ ನ್ಯೂಟ್ರಲ್‌ ಮನೋಭಾವನೆಯನ್ನು ಬಡಿದೆಬ್ಬಿಸಿ ಸಂಘರ್ಷಕ್ಕೆ ಅಣಿಗೊಳಿಸುವ ಚಿತ್ರಣ ಕಟ್ಟಿಕೊಡುವ ಯತ್ನವಿದು.
 ಇಷ್ಟೆಲ್ಲ ಅವಾಂತರಗಳಿಗೆ ಮೂಲ ಕಾರಣಕರ್ತ ಅತ್ಯಾಚಾರಿ ಮೋಹಿತ್‌ನನ್ನು ನಿರ್ದೇಶಕ ಬರಿ ಜೈಲಿಗಟ್ಟುತ್ತಾರೆ. ಅಂದರೆ ಮೋಹಿತ ಅಮಾಯಕ. ಆತನ ಪ್ರೇಮ ನಿವೇದನೆ ಸಹಜ. ಅವನು ನಮ್ಮ ನಡುವಿನ ಹುಡುಗ. ಆದರೆ ಆತನ ಸುತ್ತ ಇರುವವರು ಚಾರ್ಲ್ಸ್‌, ಡ್ರಗಿಸ್ಟ್‌ ಜಗನ್‌ನಂಥ ಲಂಪಟರು. ಇವರೆಲ್ಲ ಸೇರುವ ಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ ಪಾರ್ಟಿಯಂಥವು ಬಾಹ್ಯ ಪ್ರಚೋದನಾ ಎಲಿಮೆಂಟ್‌ಗಳು. ಮೋಹಿತ ಇಂಥವುಗಳ ಮೋಹಕ್ಕೊಳಗಾದವ. ಸಹವಾಸ ದೋಷದಲ್ಲಿ ದಾರಿ ತಪ್ಪಿದವ ಅಷ್ಟೇ. ವಿಚಾರಣೆ, ಕೌನ್ಸಿಲಿಂಗ್‌ ಮೂಲಕ ಅವನ ಸರಿ ದಾರಿಗೆ ತರಬಹುದು ಎಂದರ್ಥವೋ... ಹೇಯ ಕೃತ್ಯದ ಮೂಲ ಪುರುಷ ಮೋಹಿತ. ಮಾಡಿದ್ದು ಅತ್ಯಾಚಾರದಂಥ ಪರಮ ತಪ್ಪು. ಆದರೆ ಅದನ್ನು ಸರಿಪಡಿಸಬಹುದಾದ ಜುಜುಬಿ ತಪ್ಪು ಅಂದುಕೊಂಡರಾ ನಿರ್ದೇಶಕರು!
ಮನುಷ್ಯನೊಳಗಿನ ರಾಗ ದ್ವೇಷಗಳು ಪೈಶಾಚಿಕ ಸ್ವರೂಪ ಪಡಕೊಂಡರೆ ನಡೆಯುವ ಅನಾಹುತಗಳು ಇಡೀ ಮನುಷ್ಯ ಕುಲ ತಲೆ ತಗ್ಗಿಸುವಂತಾಗುತ್ತವೆ ಎನ್ನುವ ಎಚ್ಚರ ಮುಖ್ಯ. ಆದರೆ ಚಿತ್ರದ ಉದ್ದೇಶ ಪರಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ, ಡ್ರಗ್ಸ್‌ ಮತ್ತಿತರ ಬಾಹ್ಯ ಪ್ರಚೋದನೆಗಳನ್ನು ದೂಷಿಸಿ ದುಷ್ಕೃತ್ಯ ನಡೆಸಿದವರ ಸಂಹರಿಸುವ ನೆಪದಲ್ಲಿ ಪ್ರತೀಕಾರದ ತೋರುಬೆರಳನ್ನು ಇನ್ನೆತ್ತಲೋ ತಿರುಗಿಸಿದಂತೆನಿಸುತ್ತದೆ. ಹೀಗೆ ಅಂತರಂಗವನ್ನು ಕತ್ತಲಲ್ಲಿಟ್ಟುಕೊಂಡು ಬಾಹ್ಯವನ್ನಷ್ಟೇ ದೂಷಿಸುವ ಪ್ರತೀಕಾರದ ಧ್ವನಿಯೇ ಇಡೀ ಚಿತ್ರದ ಜೀವಾಳವಾಗಿದ್ದು ಅತ್ಯಾಚಾರದಷ್ಟೇ ಅಮಾನುಷ.
 ತುಂಬ ವರ್ಷಗಳ ನಂತರ ನಟನೆಗೆ ಮರಳಿದ ಶ್ರೀದೇವಿ ಅಭಿನಯ ಅತ್ಯಂತ ಪರಿಣಾಮಕಾರಿ. ನವಾಜುದ್ದೀನ್‌ ಸಿದ್ದಿಕಿ ಎಂದಿನಂತೆ ಅದ್ಭುತ.

ಸೋಮವಾರ, ಜೂನ್ 5, 2017

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.

 ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇದನೆಯ ಹಾದಿ ತುಳಿದವರೆಷ್ಟೋ, ವಿಮುಖರಾಗಿ ಜನಪ್ರಿಯ ಧಾಟಿಯಲ್ಲಿ ವ್ಯವಸ್ಥೆ ಪರ ಸೋಗುಡುತ್ತಿರುವವರೆಷ್ಟೊ.. ಆದರೆ ಪ್ರತಿಭೆಗಳನ್ನು ರಂಗದತ್ತ ಸೆಳೆದ ಅವರ ಪರಿಯೇ ಅನನ್ಯವಾಗಿತ್ತು. ಅಂಥ ಮಹಾ ರಂಗಚೇತನದ ಸ್ಮರಣಾರ್ಥ ಅವರದೇ ಹೆಸರಿನಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಅವರಿಗೆ ಸಲ್ಲಿಸಬಹುದಾದ ಅರ್ಥಪೂರ್ಣ ಶ್ರದ್ಧಾಂಜಲಿ. ಅವರ ‘ರಂಗನಿರಂತರ’ ಸಂಸ್ಥೆಯಡಿ ಶಶಿಧರ ಅಡಪ, ಅಪ್ಪಯ್ಯ, ಸರ್ವೇಶ, ಗೋವಿಂದ ಸ್ವಾಮಿ, ರಷ್ಮಿ, ರಾಮಕೃಷ್ಣ ಬೆಳ್ತೂರ್‌, ಜಿಪಿಒ ಚಂದ್ರು, ಎಂ. ರವಿ, ಶಶಿಕಾಂತ ಯಡಹಳ್ಳಿ ಮತ್ತಿತರರು ಸೇರಿ ಪ್ರತಿ ವರ್ಷ ಸಿಜಿಕೆ ಹೆಸರಲ್ಲಿ ರಾಷ್ಟ್ರೀಯ ರಂಗೋತ್ಸವ ನಡೆಸುತ್ತಿದ್ದಾರೆ. ಪರ, ವಿರೋಧದ ಟೀಕೆಗಳ ನಡುವೆ ಸೃಜನಾತ್ಮಕವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
 ಈ ಸಲದ ರಂಗೋತ್ಸವದಲ್ಲಿ (ಡಾ. ವಿಜಯಾ ನಿರ್ದೇಶನದಲ್ಲಿ) ಪ್ರಯೋಗಗೊಂಡ ನಾಟಕಗಳು ಭಿನ್ನ ಎನಿಸಿದರೂ ಕೆಲವು ಮತ್ತದೇ ರಾಮಾಯಣ, ಮಹಾಭಾರತದ ಗುಂಗಿನಿಂದ ಹೊರಬಂದಂತೆನಿಸಲಿಲ್ಲ. ಏಕದಶಾನನ, ವಾಲಿವಧೆ, ಅಶ್ವತ್ಥಾಮ ವಾರ್‌ ಮಷೀನ್‌ ನಾಟಕಗಳ ವಸ್ತು ಹೆಚ್ಚೂ ಕಮ್ಮಿ ಎರಡು ಮಹಾಕಾವ್ಯಗಳನ್ನು ಆಧರಿಸಿದ್ದವು. ಭಾಷಾ ವೈವಿಧ್ಯತೆ ನೆಲೆಯಲ್ಲಿ ಮಲೆಯಾಳಿಯ ‘ಚಿಲ್ಲರೆ ಸಮರಂ’ ಹಿಂದಿ ಭಾಷೆಯ ‘ವೆಲ್‌ಕಂ ಜಿಂದಗೀ’ ಮತ್ತು ‘ದೋಹರಿ ಜಿಂದಗೀ’ ನಾಟಕಗಳು ಮಧ್ಯಮವರ್ಗವನ್ನು ಆವರಿಸಿರುವ ತಲ್ಲಣಗಳನ್ನು ಚರ್ಚಿಸಿ ಗಮನ ಸೆಳೆದವು.
 ಅಶ್ವತ್ಥಾಮ–ವಾರ್‌ ಮಶೀನ್‌ ಹೊಸ ಬಗೆಯ ವಿಶ್ಲೇಷಣೆಯಿಂದ ಮಹಾಭಾರತ ಕಾವ್ಯದಲ್ಲಿನ ಪಾತ್ರಗಳ ಹಿಂಸೆಯನ್ನು ಸಮಕಾಲೀನ ಸಂದರ್ಭಕ್ಕೆ ಸಂವಾದಿಯಾಗಿಸಲು ಯತ್ನಿಸಿತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂಸೆ, ಅದು ಇಂಡಿಯಾಕ್ಕೂ ತಳಕು ಹಾಕಿಕೊಂಡ ಪರಿ, ತಮ್ಮದೇ ಕುಡಿಗಳನ್ನು ಕತ್ತರಿಸಿ ಹಾಕುವ ಭಯೋತ್ಪಾದನಾ ಕೃತ್ಯದ ರಕ್ಕಸೀ ಪ್ರವೃತ್ತಿಯನ್ನು ವಿಶ್ಲೇಷಿಸುತ್ತ ಹಿಂಸೆ ಎನ್ನುವುದು ಯಾವುದೇ ಧರ್ಮ, ಕಾಲ, ದೇಶ ಮತ್ತು ಗಡಿಗಳಿಗೆ ಸೀಮಿತವಲ್ಲ ಎನ್ನುವ ಸೂಕ್ಷ್ಮ ಪ್ರತಿಪಾದಿಸಿತು. ದೃಶ್ಯಸಂಯೋಜನಾ ಕೌಶಲ, ಇಂಟರ್‌ಪ್ರಿಟೇಷನ್‌ನಿಂದ ಬಹುಕಾಲ ನೆನಪಲ್ಲುಳಿಯುವಂತೆ ಪ್ರಯೋಗ ಮೂಡಿಬಂದಿತು.
 ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಧರಿಸಿದ ‘ವಾಲಿವಧೆ’ ಪ್ರಯೋಗ ಕೃತಿಯ ಆಶಯದಿಂದ ಹೊರಕ್ಕೇ ನಿಂತಂತೆನಿಸಿತು. ಪಾಪ್ಯುಲಿಸ್ಟಿಕ್‌ ನೆಲೆಯಲ್ಲಿ ಮಹಾಕಾವ್ಯದ ಎರಡು ವಾನರ ಪಾತ್ರಗಳಾದ ವಾಲಿ ಮತ್ತು ಸುಗ್ರೀವ ಎನ್ನುವ ಅಣ್ಣ–ತಮ್ಮರ ಕಲಹವನ್ನು ಮ್ಯಾಜಿಕಲ್‌ ರಿಯಲಿಸಂ ತಂತ್ರಗಳಲ್ಲಿ ವೈಭವೀಕರಿಸಿ ಕರುಣಾ ರಸ ಉಕ್ಕಿಸುವ ಏಕಮಾತ್ರ ಉದ್ದೇಶ ಹೊಂದಿದಂತಿತ್ತು. ಪರಿಣಾಮದಲ್ಲಿ ರಾಮನ ನ್ಯಾಯದ ಬಾಣ ಅನ್ಯಾಯವಾಗಿ ವಾಲಿಯನ್ನು ಹೆಣವಾಗಿಸಿದ್ದರ ನ್ಯಾಯಪ್ರಶ್ನೆಯನ್ನೇ ನುಂಗಿ ಹಾಕಿತು. ದೃಶ್ಯ ಸಂಯೋಜನೆ, ಬೆಳಕಿನ ಮಾಯಾಲೋಕದಲ್ಲಿ ವಸ್ತುವಿನ ಅಸಲಿ ಬೆಳಕು ಮಾಯವಾಗಿ ಹಿಂಸೆಯೇ ವಿಜೃಂಭಿಸಿ ಬರಿಯ ಆತ್ಮಮರುಕ ಸೃಷ್ಟಿಸಲಷ್ಟೇ ಸಾಧ್ಯವಾಯಿತು.
 ಸಮಕಾಲೀನ ಸಂದರ್ಭದ ತಳಮಳ, ತಲ್ಲಣಗಳ ಮೇಲೆ ಗಮನ ಹರಿಸದ ಇಂಥ ಎರಡು ಮೂರು ನಾಟಕಗಳು ಮಹಾಕಾವ್ಯಗಳ ಆಶ್ರಯ ಹೋಗಿ ಅಭಿಜಾತ ಪ್ರಜ್ಞೆಯನ್ನಷ್ಟೇ ಸೂಸಲು ಸಾಧ್ಯವಾಯಿತು. ಸಿಜಿಕೆ ಸಮಕಾಲೀನ ತವಕ, ತಲ್ಲಣಗಳನ್ನು ರಂಗದ ಮೇಲೆ ತರುವುದನ್ನೇ ತಮ್ಮ ರಂಗಪ್ರಜ್ಞೆಯಾಗಿಸಿಕೊಂಡಿದ್ದು ನೆನಪಾಗಿ ಕಾಡಿತು.
 ‘ಚಿಲ್ಲರೆ ಸಮರಂ’ ಮಲೆಯಾಳಿ ನಾಟಕ ವರ್ತಮಾನದ ಆರ್ಥಿಕ ಚಿಂತನೆಗಳನ್ನು ಮಾನವೀಯ ನೆಲೆಯಲ್ಲಿ ಪ್ರಶ್ನಿಸುತ್ತ ಬಂಡವಾಳಷಾಹಿಗಳ ತರಾಟೆಗೆ ತೆಗೆದುಕೊಂಡು ಚಕಿತಗೊಳಿಸಿತು. ಸರಳ ದೃಶ್ಯ ಸಂಯೋಜನೆಗಳು, ನಟರ ಸಮಯಪ್ರಜ್ಞೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಬಳಸಿಕೊಂಡು ವಸ್ತುವನ್ನು ಅಚ್ಚುಕಟ್ಟಾಗಿ ನಿರೂಪಿಸಿತು.
 ತಂದೆ–ಮಗನ ಅಂತಃಸಂಬಂಧ ಮತ್ತು ಮಧ್ಯಮ ವರ್ಗದ ಕೌಟುಂಬಿಕ ನಾಜೂಕು ನಡೆಗಳ ಬಗ್ಗೆ ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಂಡ ‘ವೆಲ್‌ಕಂ ಜಿಂದಗೀ’ ಹಿಂದೀ ನಾಟಕ ಪ್ರೇಕ್ಷಕರ ಕಣ್ಣಾಲಿಗಳ ಹಸಿಗೊಳಿಸಿತು. ತನ್ನದೇ ಕನಸಿನ ಹಿಂದೆ ಎಡತಾಕುವ ವಯಸ್ಸಿಗೆ ಬಂದ ಮಗ, ಆತನೊಳಿತಿಗೆ ಒಳಗೇ ಸೂಕ್ಷ್ಮವಾಗಿ ತಳಮಳಿಸುವ ತಂದೆ, ಇಬ್ಬರ ನಡುವೆ ಜೀವ ಸೇತುವಾಗಿ ನಿಲ್ಲುವ ತಾಯಿ ಮತ್ತು ಹೆಂಡತಿ ಭೂಮಿಕೆ ನಿಭಾಯಿಸುವ ಹೆಣ್ಣು ಈ ಮೂರೂ ಪಾತ್ರಗಳ ನಡುವಿನ ಅಂತಃಸಂಬಂಧವನ್ನು ನವಿರಾಗಿ ಬಿಚ್ಚಿಟ್ಟ ನಾಟಕ ಆರಂಭದಲ್ಲಿ ಬೋರು ಹೊಡೆಸಿದರೂ ಕೊನೆಯ ದೃಶ್ಯದ ಭಾವನಾತ್ಮಕ ಸ್ಪರ್ಶದಿಂದ ಮನ ಕಲಕಿತು. ಸಂಭಾಷಣೆ ಮತ್ತು ನಟನೆಯ ಕೆಲ ಸೂಕ್ಷ್ಮಗಳನ್ನಷ್ಟೇ ಇಟ್ಟುಕೊಂಡು ಇಂಥ ರಿಯಲಿಸ್ಟಿಕ್‌ ನಾಟಕ ಕಟ್ಟಿಕೊಟ್ಟ ನಿರ್ದೇಶಕನಿಗೊಂದು ಸಲಾಂ.
ಜೊತೆಗೆ ಏಕವ್ಯಕ್ತಿ ಪ್ರದರ್ಶನಗಳು, ಬೀದಿ ನಾಟಕಗಳು, ರಂಗಗೌರವ ಮತ್ತು ಸಂವಾದ ಕಾರ್ಯಕ್ರಮಗಳು ವಿಶೇಷ ರಂಗಾನುಭವ ನೀಡಿದವು.ವಾತಾವರಣ ನಿರ್ಮಾಣದ ಭಾಗವಾಗಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಅಗಲಿದ ರಂಗಕರ್ಮಿಗಳ ಭಾವಚಿತ್ರಗಳ ಮುಂದೆ ದೀಪ ಹಚ್ಚಿ ಯುರೋಪ್‌ನಲ್ಲಿ ಸಮಾಧಿಗಳ ಅಲಂಕಾರ ಮಾಡುವ ಪದ್ಧತಿ ನೆನಪಿಸುವಂಥ ವಿನ್ಯಾಸ ರೂಪಿಸಿದ್ದು ಅಲ್ಲಿ ಸಿಜಿಕೆ ಮತ್ತಿತರರ ಅಣಕದಂಥ ಪ್ರಯೋಗ ನೀಡಿದ್ದು ಕೊಂಚ ಅತಿ ಎನಿಸಿತು.
 ಸಂಸ ಬಯಲು ರಂಗದಲ್ಲಿ ನಡೆದ ಉತ್ಸವದ ಕೊನೆಯ ಪ್ರಯೋಗ ‘ದೋಹರಿ ಜಿಂದಗೀ’ ಹೊಸ ಮತ್ತು ದಿಟ್ಟ ಪ್ರಯತ್ನ. ಇಬ್ಬರು ಹೆಣ್ಣುಗಳ ಸಲಿಂಗ ಸಂಬಂಧದ ವಸ್ತುವನ್ನು ರಾಜಸ್ಥಾನೀ ಜನಪದ ಕಥೆಯನ್ನಾಧರಿಸಿ ನಿರೂಪಿಸಿದ್ದು ಬೋಲ್ಡ್‌ ಎನ್ನಬಹುದಾದ ಪ್ರಯೋಗ. ಅರೆನಗ್ನವಾಗಿ  ಬೆನ್ನು ಮತ್ತು ಮೊಲೆತೊಟ್ಟುಗಳು ಕಾಣುವ ಹಾಗೆ ಬಟ್ಟೆ ಬದಲಾಯಿಸುವ ಮತ್ತು ಗಂಡು–ಹೆಣ್ಣು ಸಂಭೋಗ, ಹಸ್ತಮೈಥುನ ನಡೆಸುವಂಥ ಭ್ರಮೆ ಹುಟ್ಟಿಸುವ ದೃಶ್ಯ ಸಂಯೋಜನೆಗಳು ವಿಕೃತಿ ಎನಿಸದಂತೆ ಕಲಾತ್ಮಕವಾಗಿ ಮೂಡಿಬಂದವು. ನಾಟಕದ ವಸ್ತು ಬಯಸುವ ಈ ದೃಶ್ಯಗಳು ಒಟ್ಟು ನಿರೂಪಣೆಯಲ್ಲಿ ಅಶ್ಲೀಲದಂತೇನಿಸದೇ ವಸ್ತುವಿಗೆ ಪೂರಕ ಮತ್ತು ಅಗತ್ಯದಂತೆ ಧ್ವನಿಸಿದವು. ಬೋಲ್ಡ್‌ ವಸ್ತುವನ್ನು ನಿಭಾಯಿಸಿದ ಎರಡು ಹೆಣ್ಣು ಪಾತ್ರಗಳ ಕಲಾವಿದರ ದಿಟ್ಟತನಕ್ಕೆ ಪ್ರೇಕ್ಷಕರು ಮೂಕವಿಸ್ಮಿತ. ಪ್ರಯೋಗ ತಾರಕಕ್ಕೇರುವ ಹೊತ್ತಲ್ಲಿ ಮಳೆ ಸುರಿದು ಕಡೆಯ ಕೆಲವು ನಿಮಿಷಗಳ ಮುಂಚೆಯೇ ನಾಟಕ  ಮೊಟಕುಗೊಂಡಿದ್ದು ನಿರಾಶೆ ಮೂಡಿಸಿತು. ರಂಗಭೂಮಿಗೆ ಹೊಸದೇ ಎನ್ನಿಸುವ ಲೆಸ್ಬಿಯನಿಸಂ ವಸ್ತು ಮತ್ತು ಅಭಿನೇತ್ರಿಯರ ಬೋಲ್ಡ್‌ ಅಭಿನಯದ ‘ದೋಹರಿ ಜಿಂದಗೀ’ ಮುಂಚೆಯೇ ತೀವ್ರ ಕುತೂಹಲ ಕೆರಳಿಸಿತ್ತು. ವಿಶಿಷ್ಟ ರಂಗವಿನ್ಯಾಸ, ವಿನೂತನ ನಿರೂಪಣಾ ಶೈಲಿಯಿಂದ ಹಾಗೂ ಕೆಲವು ಬೋಲ್ಡ್‌ ಸನ್ನಿವೇಶಗಳಿಂದ  ಬೆರಗುಗೊಳಿಸಿತು. ಇಂಥ ಭಿನ್ನ ರಂಗಾನುಭವ ನೀಡಿದ ರಂಗೋತ್ಸವ ಸಂಘಟನೆಗೊಂದು ಥ್ಯಾಂಕ್ಸ್‌.
 ದೇಶವಷ್ಟೇ ಏಕೆ ಎಲ್ಲೆಡೆ ಭುಗಿಲೆದ್ದ ವಿಪರೀತ ದೇಶಭಕ್ತಿ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಲ್ಬಣಿಸುತ್ತಿರುವ ವಿಪರೀತ ಧರ್ಮ ಮೋಹದಂಥ ವಿದ್ಯಮಾನಗಳಿಂದ ಪ್ರಸಕ್ತ ಸಮಾಜದಲ್ಲಿ ವಿಷಮ ಗಾಳಿಯೇ ಬೀಸುತ್ತಿದೆ. ಅಮೆರಿಕ ಸೇರಿದಂತೆ ಎಲ್ಲೆಲ್ಲೂ ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಒಂದು ದಂಧೆಯಾಗುತ್ತಿರುವ ಕಾಲಘಟ್ಟದಲ್ಲಿ ರಂಗಭೂಮಿ ಸೇರಿದಂತೆ ಎಲ್ಲ ಸಾಂಸ್ಕೃತಿಕ ಚಳವಳಿಗಳು ಎಚ್ಚೆತ್ತುಕೊಳ್ಳಬೇಕಾಗಿರುವ ತುರ್ತು ಇದೆ. ಈ ಹಿನ್ನೆಲೆಯಲ್ಲಿ ಸಿಜಿಕೆಯವರಂಥ ಸಾಮಾಜಿಕ/ರಾಜಕೀಯ ಬದ್ಧತೆಯ ರಂಗ ಚಟುವಟಿಕೆ ಮತ್ತೆ ಕಳೆಕಟ್ಟಬೇಕಿದೆ. ಮುಂದಿನ ರಂಗೋತ್ಸವ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಿಜಿಕೆ ಸ್ಮರಿಸಿಕೊಳ್ಳುವಂತಾಗಲಿ.

Pics: Thai Lokesh