ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು. ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ! ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ... ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ... ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು ಹ...