ಟರ್ಕಿ ಪರಿಪೂರ್ಣ ಇಸ್ಲಾಮಿಕ್ ರಾಷ್ಟ್ರವಾಗುಳಿದಿಲ್ಲ. ಸಂಪೂರ್ಣ ಆಧುನಿಕವೂ ಅಲ್ಲ. ಅದರ ಒಂದು ಕಾಲು ಪೂರ್ವ ಯುರೋಪ್‌ನಲ್ಲಿದ್ದರೆ ಮತ್ತೊಂದು ಪಶ್ಚಿಮ ಏಷ್ಯದಲ್ಲಿದೆ. ಐತಿಹಾಸಿಕವಾಗಿ ಅತ್ಯಂತ ಭಿನ್ನ ಮತ್ತು ಹಲವು ಸಂಸ್ಕೃತಿಗಳಿಗೆ ತೆರಕೊಂಡುದದರ ಜೊತೆಗೆ ಸಂಘರ್ಷಗಳಿಗೂ, ಆಕ್ರಮಣಗಳಿಗೂ ಒಳಗಾದ ದೇಶ. ಜೂಲಿಯಸ್ ಸೀಜರ್ ಅಮಾಸ್ಯದ ಬಳಿ ಆಕ್ರಮಣ ಮಾಡಿದ. ಬೈಜಂಟೈನ್ ಕ್ರೈಸ್ತರು ಚರ್ಚ್‌ಗಳನ್ನು ಕಟ್ಟಿದರು. ಒಟ್ಟೊಮನ್ ಸುಲ್ತಾನರಂತೂ ಇಸ್ತಾನಬುಲ್‌ನಲ್ಲಿ ಟಾಪ್‌ಕ್ಯಾಪ್ ಅರಮನೆಗಳನ್ನು ಕಟ್ಟಿಸಿ ವೈಭವದ ರಾಜ್ಯಭಾರ ನಡೆಸಿದರು (ಅವರ ಸಾಮ್ರಾಜ್ಯ ಬುಡಾಪೆಸ್ಟ್‌ನಿಂದ ಕಾಬೂಲಿನವರೆಗೂ ವ್ಯಾಪಿಸಿತ್ತು). ರೋಮನ್‌ರ ಅಟ್ಟಹಾಸಕ್ಕೆ ಕಡಿವಾಣ ಬಿದ್ದದ್ದು ಇಲ್ಲಿಯೇ. ಮಧ್ಯಯುಗೀನ ಅರ್ಮೇನಿಯನ್ನರು ಚರ್ಚ್‌ಗಳನ್ನು ಕಟ್ಟಿದ್ದು, ಅನುಭಾವ ಪರಪಂಚದ ಸೂಫಿಗಳು ಬಹುಕಾಲ ನೆಲೆ ಕಂಡುಕೊಂಡಿದ್ದು ಇಲ್ಲೇ. ಪ್ರಾಚೀನ ಗ್ರೀಕ್ ಸಂಸ್ಕೃತಿಯಿಂದ ಹಿಡಿದು, ಪರ್ಷಿಯನ್, ರೋಮ್, ಬೈಜಂಟೈನ್ ಮತ್ತು ಒಟ್ಟೊಮನ್ ಸಾಮ್ರಾಜ್ಯ... ಹೀಗೆ ಒಟ್ಟು ಎಲ್ಲದರಿಂದ ಒಂದೊಂದಷ್ಟು ಪಡಕೊಂಡ ಟರ್ಕಿ ಸಂಸ್ಕೃತಿ ಮಿಸಳ್ ಭಾಜೀಯಂತೆ. ಇಸ್ತಾನಬುಲ್ ಈಗಂತೂ ಅತ್ಯಂತ ಕಾಸ್ಮೊಪಾಲಿಟನ್. ಕ್ರೈಸ್ತರ ಚರ್ಚ್, ಇಸ್ಲಾಂನ ನೀಲಿ ಮಸೀದಿಗಳು ಇಲ್ಲಿನ ಭವ್ಯ ಮತ್ತು ದಿವ್ಯ ತಾಣಗಳು. ‘ಒಂದು ಲೋಟ ಕಾಫೀ ಒಂದರಿಂದ ನಲವತ್ತು ವರ್ಷದ ಸ್ನೇಹಕ್ಕೆ ಅಣಿಗೊಳಿಸಿಬಿಡುತ್ತದೆ’ ಎನ್ನುವುದು ಇಲ್ಲಿನ ...