ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 27, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ-2

ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ  ಉಸಿರೇ ಆಗಿ ಹೋಗಿತ್ತು.  ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು. 'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.  ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು. ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತು.