ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ! ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ. ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ...