ಈಗ ಗಡಿಗಳೇ ಇಲ್ಲ. ಭಾವಸಮುದ್ರ ಎಲ್ಲೆಂದರಲ್ಲಿ ಆವರಿಸಿಕೊಂಡುಬಿಡುತ್ತದೆ. ಮಾಹಿತಿ ತಂತ್ರಜ್ಞಾನ ಇಡೀ ಜಗತ್ತನ್ನು ಒಂದು ಹಳ್ಳಿಯಂತಾಗಿಸಿದ್ದು ಹೌದು. ಆದರೆ, ಮನುಷ್ಯನ ಆಳದಲ್ಲೇ ಅಂತಃಕರಣ, ಬಂಧ, ಸಂಬಂಧ, ಸೆಳೆತಗಳ ಅಗಾಧ ಶಕ್ತಿ ಇದೆಯಲ್ಲ ಅದು ಎಂದಿನಿಂದ ಎಲ್ಲ ಮಿತಿ, ಬೇಲಿಗಳನ್ನು ಕಿತ್ತು ಬಿಸಾಕುತ್ತ ಸಾಗುತ್ತಿಲ್ಲವೇನು... ಭಾಷೆ, ಜಾತಿ, ಬಣ್ಣಗಳ ಮಿತಿಯಲ್ಲಿ ಅಷ್ಟು ಸುಲಭಕ್ಕೆ ಕರಗಿ ಹೋಗುವಂಥದಲ್ಲ ಮನುಷ್ಯ ಪ್ರೀತಿ. ಕರಗುವುದಾದರೂ ಯಾಕೆ? ಮಲೆಗಳಲ್ಲಿ, ಮರದ ಕೊಂಬೆಗಳಲ್ಲಿ ಅಲೆದಾಡಿ, ನಲಿದಾಡಿ ಬೆಳೆದುಬಂದ ಮನುಷ್ಯ ಜೀವ ಹೊಸ ಹೊಸ ನಾಗರಿಕತೆಯ ಹೊಳೆಯಲ್ಲಿ ಈಜುತ್ತಲೇ ಇದೆ. ಕಾಡಿಂದ ನೆಲ, ನೆಲದಿಂದ ನೀರು, ಆಕಾಶ, ಬಾಹ್ಯಾಕಾಶ, ಚಂದ್ರ, ಮಂಗಳ... ಮಿತಿಯುಂಟೇ ಈ ನೆಗೆತಕ್ಕೆ! ಸ್ವಿಜರಲ್ಯಾಂಡ್ ನ ಜ್ಯುರಿಚ್ ಗೆ ಪಯಣಿಸುತ್ತಿದ್ದೆ. ಸಹ ಪಯಣಿಗರಾಗಿ ನನ್ನ ಪಕ್ಕದ ಸೀಟ್ ನಲ್ಲಿ ನಾರ್ವೆ ದಂಪತಿ ಇದ್ದರು. ನಾನು ಆಕಾಶ ನೋಡುತ್ತಿದ್ದೆ. ಅಪರೂಪಕ್ಕೆ ಸೂರ್ಯ ಇಣುಕುತ್ತಿದ್ದ. ಕ್ಯಾಮೆರಾ ಕೊರಳಲ್ಲೇ ನೇತಾಡುತ್ತಿತ್ತು. ಎತ್ತಿಕೊಂಡು ಕ್ಲಿಕ್ಕಿಸುತ್ತಲೇ ಇದ್ದೆ. ಚಳಿ ಎನ್ನುವ ಛಿನಾಲಿಯಿಂದ ಬೇಸತ್ತ ದಿಲ್ ಸೂರ್ಯನ ಬಿಸಿಲಿಗೆ ಗುಲ್ ಮೊಹರಿನಂತೆ ಅರಳುತ್ತಿತ್ತು. ಆಕಾಶ ನಮ್ಮ ಮನಸುಗಳಂತೆ ತೆರಕೊಳ್ಳುತ್ತಲಿತ್ತು. ನಾನು ಮೋಡಗಳ ಜತೆ ಮೋಡವಾಗಿದ್ದೆ ಚಣ ಕಾಲ... ಪಕ್ಕದ ಸೀಟ್ ನಲ್ಲಿ ಕುಳಿತ ಮಹಿಳೆ ನನ್ನ ಭುಜದ ಮೇಲೆ ಕೈ ಇಟ...