ಸಂಬಂಧಗಳಲ್ಲಿ ಮೂಲಭೂತ ಕ್ರಾಂತಿಯುಂಟಾದಾಗ ಎಲ್ಲೂ ಯುದ್ಧವಿರದು. ಮೊದಲು ನಮ್ಮೊಳಗೆ ನಾವೇ ರೂಪಿಸಿಕೊಂಡ ಬಿಂಬಗಳನ್ನು ಒಡೆದು ಹಾಕಬೇಕು. ನಾನು ಮುಸ್ಲಿಂ, ನಾನು ಹಿಂದೂ, ನಾನು ಕ್ರೈಸ್ತ, ನಾನು ಸಿಖ್, ನಾನು ಬೌದ್ಧ... ಎನ್ನುವ ನಮ್ಮ ಬಗ್ಗೆ ನಾವೇ ನಮ್ಮೊಳಗೆ ರೂಪಿಸಿಕೊಂಡ ಈ ಬಿಂಬಗಳನ್ನು ನಾಶಮಾಡಿಕೊಳ್ಳದೇ ನಮಗೆ ಶಾಂತಿ ಇಲ್ಲ... ಹೀಗೆ ಹೆಸರಾಂತ ಬುದ್ಧಿಜೀವಿ ಜೆ. ಕೃಷ್ಣಮೂರ್ತಿ ವಿಚಾರ ಲಹರಿ ಸಾಗುತ್ತದೆ. ಸಂಬಂಧವೆಂದರೇನು? ಸಂಬಂಧವಿರುವುದು ಎಂದರೇನು? ಸಂಬಂಧವೆಂದರೆ ಮತ್ತೊಬ್ಬ ಮನುಷ್ಯ ಜೀವಿಯೊಡನೆ ಸಂಪರ್ಕ. ಒಟ್ಟಾಗಿ ಇರುವುದು, ಅವನ ಎಲ್ಲ ಕಷ್ಟ, ಸಮಸ್ಯೆ, ಕಾರ್ಪಣ್ಯ, ಕಳವಳಗಳೊಡನೆ ಅವು ನಿಮ್ಮವೇ ಎಂಬಂತೆ ತತ್ ಕ್ಷಣ ಸಂಪರ್ಕ ಕಲ್ಪಿಸಿಕೊಳ್ಳೋದು. ಕೃಷ್ಣಮೂರ್ತಿ ಅವರಂತೆ ಅನೇಕರು ಇಂಥ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನನಗೆ ಅನಿಸೋದು ಇಷ್ಟು. ಮನುಷ್ಯ ಇಂಡಿಪೆಂಡೆಂಟ್ ಅಲ್ಲವೇ ಅಲ್ಲ. ಆತ ಇಂಟರ್ ಡಿಪೆಂಡೆಂಟ್ ಎಂದು ಹೇಳಬಹುದು. ಹೌದು, ಆತನಿಗೆ ಇತರರ ಜತೆಗಿನ ಸಾಂಗತ್ಯ, ಒಡನಾಟ ಇಲ್ಲದಿದ್ದರೆ ಬದುಕೇ ಕಷ್ಟ. ಏಕಾಂಗಿಯಾಗಿರಲು ಸಾಧ್ಯವೇ ಇಲ್ಲ. ಕಡೆಪಕ್ಷ ತನ್ನ ಜತೆಗೆ ತಾನಾದರೂ ಮಾತಾಡಬೇಕು. ಅಂದರೆ ತನ್ನೊಳಗಿನ ಅವನು ಮತ್ತು ಅವನಿಂದ ಕಳಚಿಕೊಂಡು ಎಲ್ಲೊ ಅಲೆದಾಡುತ್ತಿರುವ ಇವನು ಪರಸ್ಪರ ಸ್ಪಂದಿಸಲೇಬೇಕು. ಮಾತಾಡಿಕೊಳ್ಳಲೇಬೇಕು. ಕಲ್ಪಿಸಿಕೊಂಡ ವ್ಯಕ್ತಿತ್ವ ಮತ್ತು ಒಳಗೇ ಇರುವ ಬೈ ಡಿಫಾಲ್ಟ್ ವ್ಯಕ್ತಿತ್ವಗಳೆರಡರ ನಡುವಿನ ತಿ...