ವಿಷಯಕ್ಕೆ ಹೋಗಿ

ಪರ್ಯಾಯ: ಗೌಡರತ್ತ ಎಲ್ಲರ ಚಿತ್ತ!

ಹಣ ಮತ್ತು ಜಾತಿ, ಇವೆರಡಕ್ಕೇ ರಾಜ್ಯದ ಹಣೆಬರಹ ಬರೆಯುವ ಶಕ್ತಿ ಇದೆ! ಎಂಥಾ ದುರವಸ್ಥೆ ಪ್ರಜಾತಂತ್ರದ್ದು? ಹಣ ಬಲದಿಂದ ಗಣಿಧಣಿಗಳು ಏನು ಬೇಕಾದರೂ ಮಾಡಬಲ್ಲ ತಾಕತ್ತು ಹೊಂದಿದ್ದಾರೆ। ಜಾತಿ ಬಲ ಒಂದರಿಂದಲೇ ರಾಜ್ಯ ನಿಯಂತ್ರಿಸಬಲ್ಲೆ ಎಂದು ಯಡಿಯೂರಪ್ಪ ಕೂತಂತಿದೆ। ಎರಡೂ ಅತಿರೇಕಕ್ಕೆ ಏನು ಹೇಳುವುದು?

ಪಕ್ಷಗಳಲ್ಲಿ ಅಥವಾ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸಹಜವೇ। ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಚನಾತ್ಮಕ ಕಾರ್ಯಕ್ಕೆ ಸಂಘಟಿತರಾಗುವುದು ಯಾವುದೇ ಸಂಘಟನೆಗೆ ಅನಿವಾರ್ಯದ ಸೌಹಾರ್ದತೆ। ಕನಿಷ್ಠ ಮಟ್ಟದ ಸೌಹಾರ್ದತೆ ಸಾಧ್ಯವಾಗದಂಥ ಸ್ಥಿತಿಗೆ ಬಂದಾಗ ಸಂಧಾನ, ರಾಜಿ ಮಾರ್ಗ ಹಿಡಿಯುವುದು ಹಾಸ್ಯಾಸ್ಪದವಾಗುತ್ತದೆ। ಪರಸ್ಪರ ಆತಂಕ ಮತ್ತು ಅಭದ್ರತೆಯ ನಡುವೆ ಕೂಡಿ ಬಾಳೋದು ದುಸ್ತರವೇ। ಹಾಗೆ ಅಸಮಾಧಾನಗಳ ನಿಗಿ ನಿಗಿ ಕೆಂಡಗಳನ್ನು ಸೆರಗಿನಲ್ಲಿಟ್ಟಕೊಂಡು ಬಹುದೂರ ಸಾಗಲು ಸಾಧ್ಯವೇ ಆಗುವುದಿಲ್ಲ।

ಎಲ್ಲಿ ಲಾಭವಿದೆಯೋ ಅಲ್ಲಿ ಸಂಘರ್ಷ ಇದ್ದದ್ದೇ। ಆರಂಭದಿಂದಲೂ ಕೇವಲ ವಸೀಲಿಬಾಜಿ, ಸಂಖ್ಯೆ ಹೊಂದಾಣಿಕೆಗೆ ಖರೀದಿ ತಂತ್ರ ಬಳಕೆ, ಕಡೆಗೆ ಸ್ಥಾನ ಭದ್ರ ಮಾಡಿಕೊಳ್ಳಲು ಆಪರೇಷನ್ ಕಮಲ್ ಎನ್ನುವ ಕೆಟ್ಟ ರಾಜಕೀಯ ಸಂಪ್ರದಾಯಕ್ಕೆ ಶರಣು... ಇಂಥ ಅತಿರೇಕದ ವರ್ತನೆಯಿಂದ ಸುದ್ದಿಯಲ್ಲೇ ಇದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಲ್ಲ ನಿರೀಕ್ಷಿತ ಬೆಳವಣಿಗೆಯೇ।

ಆಪರೇಷನ್ ಕಮಲ್ ಯಶಸ್ಸಿನ ಅಮಲಿನಲ್ಲಿ ಯಡಿಯೂರಪ್ಪ ಪಾವರ್ ಫುಲ್ ನಾಯಕರಾಗಲು ಯತ್ನಿಸಿದರು। ಬರ ಬರುತ್ತಾ ಅಧಿಕಾರದ ಮೇಲೆ ಭಾರಿ ಹಿಡಿತ ಸಾಧಿಸಲು ಸರ್ವಾಧಿಕಾರಿ ಮನೋಭಾವನೆ ತಾಳಿದರೆನ್ನುವುದು ಅವರದೇ ಪಕ್ಷದ ಸದಸ್ಯರ ಆರೋಪ। ಜನಾರ್ಧನ ರೆಡ್ಡಿಯವರಂತೂ ಓಪನ್ ಜಂಗಿ ನಿಕಾಲಿ ಕುಸ್ತಿ ಕಣಕ್ಕಿಳಿಯುವಂತೆ ಯಡಿಯೂರಪ್ಪನವರಿಗೆ ಪಂಥಾಹ್ವಾನವನ್ನೇ ನೀಡಿದ್ದಾರೆ। ರೆಡ್ಡಿಯವರದು ಹಟಮಾರಿ ನಿಲುವು, ದುಡ್ಡಿನ ದರ್ಪ ಎಂದೆಲ್ಲ ಟೀಕೆಗಳು ಹರಿದಾಡುತ್ತಿವೆ। ಆದರೆ, ಇದೇ ರೆಡ್ಡಿ ನಿಲುವು ಹಿಂದೆ ಬಿಜೆಪಿಗೆ ಅದೆಷ್ಟು ನೆರವಾಗಿತ್ತು ಎನ್ನುವುದನ್ನು ಸ್ವತಃ ಯಡಿಯೂರಪ್ಪ ಅವರೇ ಚೆನ್ನಾಗಿ ಬಲ್ಲರು।

ಜನಾರ್ಧನ ರೆಡ್ಡಿ, ರಾಮುಲು ಮತ್ತಿತರರ ಉತ್ಸಾಹ, ಹುಂಬುತನ ಮತ್ತು ದುಡ್ಡಿನ ದರ್ಪ ಕೆಲಸ ಮಾಡದೇ ಹೋಗಿದ್ದರೆ ಬಿಜೆಪಿ ಇವತ್ತು ಅಧಿಕಾರ ಅನುಭವಿಸುವ ಮಟ್ಟಕ್ಕೆ ಬರ್ತಾನೇ ಇರಲಿಲ್ಲ। ಅಂದರೆ ಯಡಿಯೂರಪ್ಪ ಕುರ್ಚಿ ಕಾಲು ಗಟ್ಟಿಯಾಗುಳಿಯಲು ರೆಡ್ಡಿ, ರಾಮುಲು ಗಣಿ ದುಡ್ಡು ನೀರಿನಂತೆ ಖರ್ಚಾಗಿತ್ತು. ಇದರ ಋಣದಲ್ಲೆ ಬಿಜೆಪಿ ಸರ್ಕಾರ ಕೆಲವು ಕಾಲ ಬಾಳಿತು। ಇದು ಅತ್ಯಂತ ಕೆಟ್ಟ ಸತ್ಯ... ಎಂದೆಲ್ಲ ಪ್ರತಿಪಕ್ಷಗಳು ಟೀಕಿಸುತ್ತಿರುವುದು ಸಹಜವೇ।

ಈ ಒಟ್ಟಾರೆ ಹೈ ಡ್ರಾಮಾದಲ್ಲಿ ಎಲ್ಲರೂ ಬಹುಮುಖ್ಯ ಪಾತ್ರಧಾರಿಗಳೇ ಆಗಿದ್ದಾರೆ। ನಾಟಕದ ಮಹತ್ವದ ತಿರುವಿಗೆ ಕೆಲವರ ಸ್ಪೇಶಲ್ ಅಪೀಯರನ್ಸ್ ಆಗಬೇಕಿದೆ। ದೇವೇಗೌಡರು ಎಲ್ಲಾ ರೀತಿಯಲ್ಲಿ ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ। ಇಂಥ ಸಂದಿಗ್ಧ ಸ್ಥಿತಿಯಲ್ಲಿ ಏನಾದರೊಂದು ಮಾಸ್ಟರ್ ಪ್ಲ್ಯಾನ್ ಮಾಡಬಲ್ಲ ರಾಜಕೀಯ ತಾಕತ್ತು ಇರೋದು ಸದ್ಯ ಅವರಿಗೆ ಮಾತ್ರ।

ದೇವೇಗೌಡರು ಏನು ಮಾಡಬಹುದು?

ಒಂದೆಡೆ ಯಡಿಯೂರಪ್ಪ ತಮ್ಮ ಮತ್ತು ಮಕ್ಕಳ ಪರಮ ವೈರಿ। २०+२० ಲೆಕ್ಕಾಚಾರದ ಹೊಂದಾಣಿಕೆ ರಾಜಕೀಯದಲ್ಲಿ ದೇವೇಗೌಡರು ಯಡಿಯೂರಪ್ಪ ಅವರಿಗೆ ಕೈಕೊಟ್ಟಿದ್ದರು। ಅದನ್ನೇ ಮುಂದುಮಾಡಿ, ಗೌಡರ ವಚನ ಭ್ರಷ್ಟ ನೀತಿ ಮತ್ತು ಕುತಂತ್ರದ ರಾಜಕಾರಣ, ಅಪ್ಪ ಮಕ್ಕಳ ಪಾರ್ಟಿ ಎಂದೆಲ್ಲ ಜೆಡಿ ಎಸ್ ಅನ್ನು ಹಿಗ್ಗಾ ಮುಗ್ಗಾ ಜರಿದು, ತಮ್ಮ ಅಧಿಕಾರಕ್ಕೆ ಅಡ್ಡಲಾದವರನ್ನು ಚುನಾವಣೆಯಲ್ಲಿ ಅಡ್ಡ ಮಲಗಿಸಿ ಎಂದು ಜನರ ಸಿಂಪತಿ ಗಳಿಸುವ ಮೂಲಕವೇ ಯಡಿಯೂರಪ್ಪ ಮುಖ್ಯಮಂತ್ರಿ ಆದರು। ದೇವೇಗೌಡರು ಇದನ್ನೆಲ್ಲ ಈತನಕ ಒಳಗೇ ನುಂಗಿ ಕುಳಿತುಕೊಂಡಿದ್ದರು। ಆಪರೇಷನ್ ಕಮಲ್ ಮೂಲಕ ಕುರ್ಚಿ ಗಟ್ಟಿ ಮಾಡಿಕೊಳ್ಳುವ ಮೂಲಕ ಪಾವರ್ ಫುಲ್ ಮುಖ್ಯಮಂತ್ರಿ ಅನಿಸಿಕೊಳ್ಳುವ ಸನ್ನಾಹದಲ್ಲಿದ್ದ ಯಡಿಯೂರಪ್ಪ ಚತುರತೆಗೆ ಅವರೂ ಮೂಕ ವಿಸ್ಮಿತರಾದಂತಿದ್ದರು, ಸೇಡು ತೀರಿಸಿಕೊಳ್ಳಲು ಹವಣಿಸುತ್ತಲೇ ಇದ್ದರು।

ಈಗ ಬೇಟೆ ತಾನಾಗೇ ಖೇಡ್ಡಾಕ್ಕೆ ಜಾರಿದೆ।- ಯಡಿಯೂರಪ್ಪ ಇಟ್ಟುಕೊಂಡು ರಾಜಕೀಯ ಮಾಡಲು ಇದು ಗೌಡರಿಗೆ ಸೂಕ್ತ ಸಂದರ್ಭದಂತೇ ಗೋಚರಿಸುತ್ತಿದೆ।

ಮತ್ತೊಂದೆಡೆ ತಮ್ಮ ಪುತ್ರ ಕುಮಾರಸ್ವಾಮಿಗೆ ಭಾರಿ ಸವಾಲಾಗಿರುವ ಜನಾರ್ಧನ ರೆಡ್ಡಿ ಮೇಲೆ ಗೌಡರದೊಂದು ನಜರ್ ಯಾವತ್ತೂ ಇತ್ತು। ಈಗಂತೂ ರೆಡ್ಡಿ ಭಾರಿ ಗುಡುಗುತ್ತಿದ್ದಾರೆ। ಹೀಗೇ ಬಿಟ್ಟರೆ ನಾಳೆ ಇವರೆಲ್ಲ ನುಂಗಲಾರದ ತುತ್ತಾಗುತ್ತಾರೆ ಎನ್ನುವ ಭೀತಿಯೂ ಗೌಡರಿಗಿದೆ। ಹೇಗಾದರೂ ಮಾಡಿ ರೆಡ್ಡಿ ಗ್ಯಾಂಗ್ ವಾರ್ ತಡೆಯಲು ತಂತ್ರ ಹೊಸೆಯಬೇಕಾದ ಅನಿವಾರ್ಯತೆಯನ್ನು ಬಹುಶಃ ಅವರೂ ಮನಗಾಣುತ್ತಿದ್ದಾರೆ।

ಒಂದೊಮ್ಮೆ ಗೌಡರು ಯಡಿಯೂರಪ್ಪ ಅವರನ್ನು ಮಾಫ್ ಮಾಡಬಹುದು, ಆದರೆ, ರೆಡ್ಡಿ ಅವರನ್ನು ಸಹಿಸಿಕೊಳ್ಳಲು ಗೌಡರಿಗೆ ಕಷ್ಟವಾಗುತ್ತದೆ। ನಾಳೆ ಇವರೆಲ್ಲ ಕುಮಾರಸ್ವಾಮಿ ಮತ್ತು ರೇವಣ್ಣ ರಾಜಕೀಯ ಭವಿಷ್ಯಕ್ಕೆ ಪ್ರಬಲ ಪೈಪೋಟಿಗಳಾಗುತ್ತಾರೆ ಎನ್ನುವ ಆತಂಕವೂ ಗೌಡರಿಗೆ ಇರುವ ಸಾಧ್ಯತೆ ಇದೆ।
ಬಿಸಿರಕ್ತದ ಮತ್ತು ದುಡ್ಡು, ಜನಪ್ರಿಯತೆಯಲ್ಲಿ ಭಾರಿ ಕುಳಗಳೇ ಆಗಿರುವ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಇವರಿಗೆಲ್ಲ ರಾಜಕೀಯ ಭವಿಷ್ಯವಿದೆ. ತಂತ್ರಗಾರಿಕೆಯಲ್ಲಿ ತಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂಥ ರಾಜಕೀಯ ಧೈರ್ಯವನ್ನು ಅವರೀಗಾಗಲೇ ಪ್ರದರ್ಶಿಸಿದ್ದಾರೆ. ಅವರು ಎಸೆದ ಹಟಾತ್ ಬಾಂಬ್ ಗೆ ಇಡೀ ರಾಜ್ಯ ರಾಜಕೀಯ ತತ್ತರಿಸಿ ಹೋಗಿದೆ. ಇದೇ ಗೌಡರ ನಿದ್ದೆಗೆಡಿಸಿರಬಹುದು.

ರೆಡ್ಡಿಗಳದ್ದು ಲಿಂಗಾಯತ್ ವಿರೋಧಿ ಧೋರಣೆ ಅಲ್ಲ. ಶೆಟ್ಟರ್ ಅವರನ್ನು ನಾಯಕ ಎಂದು ಹೇಳುವ ಮೂಲಕ ಅದನ್ನು ರುಜುವಾತು ಪಡಿಸುವುದು ಅವರ ಸದ್ಯದ ತಂತ್ರ. ಆ ಮೂಲಕ ಪ್ರಬಲ ಕೋಮಿನ ದೃಷ್ಟಿಯಲ್ಲಿ ಅವರದು ರಾಜಕೀಯವಾಗಿ ಸೂಕ್ತ ಕ್ರಮ. ಶೆಟ್ಟರ್ ಅವರನ್ನು ಮುಂದಿಡುವ ಮೂಲಕ ಉತ್ತರ ಕರ್ನಾಟಕದ ಗಮನವನ್ನೂ ಸೆಳೆಯಬಹುದು ಎನ್ನುವುದು ರೆಡ್ಡಿಗಳ ತರ್ಕ.

ಮತ್ತೆ ರೆಡ್ಡಿಗಳದ್ದು ಹಿಂದುಳಿದ ವರ್ಗಗಳ ಪರ ದನಿ। ಶ್ರೀರಾಮುಲು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ। ಅವರು ನಿಜವಾದ ಹುಲಿ ಎಂದೆಲ್ಲ ಹೇಳುವ ಮೂಲಕ ಹಿಂದುಳಿದವರ ಮನಗೆಲ್ಲುವುದು ತಂತ್ರಗಾರಿಕೆಯ ಮತ್ತೊಂದು ಭಾಗ। ಹೀಗೆ ಅತ್ಯಂತ ಚಾಣಾಕ್ಷ ರಾಜಕೀಯ ಚತುರತೆಯನ್ನು ಗಣಿಧಣಿಗಳು ಪ್ರದರ್ಶಿಸಿದ್ದಾರೆ। ಇದೇ ಅಂಶ ಗೌಡರನ್ನು ಕಂಗೆಡಿಸಲು ಸಾಧ್ಯವಿದೆ। ರೆಡ್ಡಿಗಳ ಕಾರ್ಯತಂತ್ರ ವಿಫಲಗೊಳಿಸಲು ದೇವೇಗೌಡರು ಈಗ ಯಡಿಯೂರಪ್ಪ ಅವರ ಕೈ ಹಿಡಿಯಬೇಕಾಗುತ್ತದೆ। ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಹೊರಕ್ಕೆಳೆದು ಪ್ರತ್ಯೇಕ ಗುಂಪು ರೂಪಿಸಿ ಹೊರಗಿನಿಂದ ಬೆಂಬಲ ನೀಡುವುದು ಒಂದು ತಂತ್ರ। ಅಥವಾ ಯಡಿಯೂರಪ್ಪ ಮತ್ತು ರೆಡ್ಡಿ ವಿರೋಧಿ ಬಣವನ್ನು ಗುರುತಿಸಿ ಸೂಕ್ತ ಸಂಖ್ಯೆಯ ಸದಸ್ಯರನ್ನು ಬಿಜೆಪಿಯಿಂದ ಹೊರಕ್ಕೆಳೆದು ಪ್ರತ್ಯೇಕ ಗುಂಪು ರೂಪಿಸಿ ಕಾಂಗ್ರೆಸ್ ಅನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರ್ಯಾಯ ವ್ಯವಸ್ಥೆ ಮಾಡುವುದು ಮತ್ತೊಂದು ತಂತ್ರ। ರೇವಣ್ಣಗೆ ಉಪ ಮುಖ್ಯಮಂತ್ರಿ ಸ್ಥಾನ ಮಾತ್ರ ಮಸ್ಟ್ ಷರತ್ತು ಆಗಬಹುದು.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಜೆಡಿಎಸ್ ಮತ್ತು ದೇವೇಗೌಡ ಬಳಗ ಒಂದಾಗುವಂಥ ಸ್ಥಿತಿ ರೂಪಿಸುವುದು ಕೂಡ ಒಂದು ತಂತ್ರಗಾರಿಕೆ ಆಗಬಹುದು। ಆದರೆ, ಈಚೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ತುಂಬ ಉತ್ಸಾಹದಲ್ಲಿದೆ। ಮತ್ತೆ ಚುನಾವಣೆ ಎದುರಿಸುವುದಕ್ಕೆ ಅದಕ್ಕೆ ಯಾವುದೇ ಅಳುಕು ಇರಲಿಕ್ಕಿಲ್ಲ। ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಾಥ್ ಮಿಲಾವ್ ಸಾಧ್ಯತೆ ಕಡಿಮೆ। ಹಾಗಿದ್ದಾಗ ದೇವೇಗೌಡರು ಯಡಿಯೂರಪ್ಪ ಅವರನ್ನು ಹಿಡಿದುಕೊಂಡೇ ಬಿಜೆಪಿ, ಕಾಂಗ್ರೆಸ್ ಮತ್ತು ರೆಡ್ಡಿ ಮೇಲಿನ ದ್ವೇಷವನ್ನು ಏಕಕಾಲಕ್ಕೆ ನಿಭಾಯಿಸುವ ನಿರ್ಧಾರಕ್ಕೆ ಬರಬಹುದು। ಕೇಂದ್ರದಲ್ಲಿ ತಾವು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಮತ್ತು ಬಿಜೆಪಿ ನಡೆದುಕೊಂಡ ರೀತಿ ಮತ್ತು ಸರ್ಕಾರ ಕೆಡವಲು ಕಾಂಗ್ರೆಸ್ ಅನುಸರಿಸಿದ ತಂತ್ರದ ಆಘಾತದಿಂದ ಗೌಡರು ಇನ್ನೂ ಹೊರಬಂದಿಲ್ಲ। ಆ ಸೇಡು ಹಾಗೇ ಉಳಿದುಕೊಂಡಿದೆ। ಇಂಥ ಸಮಯ ಬಂದಾಗೆಲ್ಲ ದೇವೇಗೌಡರು ಕಾಂಗ್ರೆಸ್ ಹಣಿಯುವುದಕ್ಕೆ ಮುಂದಾಗಲು ಯಾವುದೇ ಮುಲಾಜು ತೋರಲಾರರು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ರಾಜಕೀಯ ಅನುಭವ।

ಯಡಿಯೂರಪ್ಪ ಬಗ್ಗೆ ತುಂಬ ಅನುಕಂಪ ತೋರುವವರಂತೆ ಹೇಳಿಕೆ ನೀಡಿರುವ ದೇವೇಗೌಡರು ಒಂದು ಹಂತದ ರಾಜಕೀಯ ಸುಳಿವು ನೀಡಿದ್ದಾರೆ। ಹೀಗಾಗಿ ಯಡಿಯೂರಪ್ಪ ಅವರನ್ನೇ ಇಟ್ಟುಕೊಂಡು ಪರ್ಯಾಯಕ್ಕಾಗಿ ವ್ಯವಸ್ಥೆ ಮಾಡುವುದು ದೇವೇಗೌಡರ ಕಾರ್ಯತಂತ್ರವಾಗುವ ಸಾಧ್ಯತೆ ಇದೆ। ಈ ಮೂಲಕ ಲಿಂಗಾಯತರ ಮನಗೆಲ್ಲುವ ಅವಕಾಶವೂ ಗೌಡರಿಗಿದೆ। ರಾಜಕೀಯವಾಗಿ ತುಂಬ ಚತುರ ಎನಿಸಿಕೊಂಡಿರುವ ಗೌಡರತ್ತ ಈಗ ಎಲ್ಲರ ಚಿತ್ತ ಕೇಂದ್ರೀಕೃತಗೊಂಡಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...