ವಿಷಯಕ್ಕೆ ಹೋಗಿ

ಯಡಿಯೂರಪ್ಪ ಮತ್ತು 'ಮ್ಯಾಕ್ ಬೆತ್'

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ ...
ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ:

ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ।

ಮ್ಯಾಕ್ ಬೆತ್ ಕಥೆ ಇಟ್ಟುಕೊಂಡು ಒಮ್ಮೆ ರಾಜ್ಯ ರಾಜಕಾರಣದತ್ತ ನೋಡೋಣ..

ಒಂದು ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಸ್ಪಷ್ಟ ಜನಾದೇಶ ನೀಡುವುದಿಲ್ಲ। ಅಂಥ ಸ್ಥಿತಿಯಲ್ಲಿ ಹಗಲುಗನಸು ಕಾಣುವವರೆಲ್ಲ ರಾಜನಾಗುವ ಕನಸು ಕಾಣುತ್ತಾರೆ। ಯಾರೋ ಒಬ್ಬರಿಗೆ ಅದೃಷ್ಟ ಒಲಿದು ಬಿಡುತ್ತೆ ಅಥವಾ ಅದೃಷ್ಟವನ್ನು ಹೇಗಾದರೂ ಒಲಿಸಿಕೊಳ್ಳುವವರೂ ಇರುತ್ತಾರೆ। ಹಾಗೊಂದು ಸ್ಥಿತಿಯಲ್ಲಿ ಕುಮಾರಸ್ವಾಮಿ ತಮ್ಮ ಕೆಲ ಶಾಸಕ ಮಿತ್ರರ ಮನವೊಲಿಸಿ ರೆಸಾರ್ಟ್ ಸೇರಿಕೊಂಡು ರಾಜ್ಯಭಾರದ ಕಿರೀಟ ಹೊತ್ತುಕೊಂಡೇ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರೆ। ಅಧಿಕಾರ ಹಂಚಿಕೊಳ್ಳುವ ಪೂರ್ವ ಷರತ್ತಿನಂತೆ ನಡೆದುಕೊಳ್ಳದೇ ಅನೈತಿಕ ರಾಜಕೀಯ ಯಕ್ಷಿಣಿಯ ಚೆಲ್ಲಾಟಕ್ಕೆ ಬಲಿಯಾಗುತ್ತಾರೆ।

ಮುಂದೆ ಹಸಿದ ಹೆಬ್ಬುಲಿಯಂತಿದ್ದ ಯಡಿಯೂರಪ್ಪ ಆ ಅನ್ಯಾಯವನ್ನೇ ಎಲ್ಲೆಡೆ ಮಠಾಧೀಶರು/ಜಾತಿವಾದಿಗಳ ಮೂಲಕ ಘರ್ಜಿಸುತ್ತ ಅಧಿಕಾರದ ಗದ್ದುಗೆ ತಲುಪಿದರು। ಹಾಗೆ ಪಡಕೊಂಡ ಕುರ್ಚಿ ಭದ್ರಪಡಿಸಲು ಬೇಕಾದ ಸಂಖ್ಯೆಗಾಗಿ ರಾಜಕೀಯ ಕೊಲೆಗೆ ನಿಂತರು (ಪಕ್ಷಾಂತರ ಎಂದರೆ ಅದೊಂದು ನೈಜ ರಾಜಕಾರಣದ ಕೊಲೆಯೇ ಆಗುತ್ತದೆ)। ಒಂದನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಹಾಗೇ ಒಂದಷ್ಟು ರಾಜಕೀಯ ಕೊಲೆಗಳು ನಡೆದವು। ಅನೈತಿಕ ರಾಜಕೀಯ/ಮಠಾಧೀಶರು/ಜಾತಿವಾದಿ ಎನ್ನುವ ಯಕ್ಷಿಣಿಗಳು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮವರಿಗೇ (ಮಂತ್ರಿವರ್ಯರು, ಕಾರ್ಯಕರ್ತರು) ಸರ್ವಾಧಿಕಾರಿಯಂತಾದರು। ಇದೆಲ್ಲವನ್ನು ಮ್ಯಾಕ್ ಡೆಫ್ ನಂತೆ ಕಾಯುತ್ತಲೇ ಇದ್ದ ಜನಾರ್ಧನ ರೆಡ್ಡಿ (ಶೆಟ್ಟರ್ ಅವರನ್ನಿಟ್ಟುಕೊಂಡು) ಸಮಯ ಸಾಧಿಸಿ ದಂಡಯಾತ್ರೆಗೆ ನಿಂತು ಕೋಟೆಯನ್ನೇ ಹೊಕ್ಕಿಬಿಟ್ಟರು।

ನಿದ್ರೆಯಲ್ಲಿ ಕಾವಲುಗಾರರ ಮುಖ, ಕೈಗಳಿಗೆ ಮತ್ತು ಖಡ್ಗ, ಭರ್ಚಿಗಳಿಗೆ ರಕುತ ಮೆತ್ತಿ ಕೊಲೆ ಕೊಲೆ ಎಂದು ಚೀರಿ ಅವರೆಚ್ಚರಗೊಂಡಾಗ ಅವರನ್ನೂ ಚಚ್ಚಿ ಒಳಗಿನ ರಾಜನನ್ನು ಅಡ್ಡ ಮಲಗಿಸಿ ಅದರ ಕಳಂಕವನ್ನೆಲ್ಲ ಇವರಿಗೆ ಮೆತ್ತಿ ತಾನು ಅಧಿಕಾರ ವಹಿಸಿಕೊಳ್ಳುವ ಕ್ರೂರ ಸೇನಾಧಿಪತಿಯಂತೆ ಯಡಿಯೂರಪ್ಪ ರಾಜ್ಯದಲ್ಲಿ ವರ್ತಿಸತೊಡಗಿದ್ದರು। ಯಾವ್ಯಾವುದೋ ಆಮಿಷ, ಆಶ್ವಾಸನೆಗಳನ್ನು ನೀಡಿ ಯಾವ್ಯಾವುದೋ ಪಾರ್ಟಿಯಿಂದ ಜನರನ್ನು ಜಾತಿ ಹೆಸರಲ್ಲಿ ಸೆಳೆದು ಮಠಾಧೀಶರಿಂದ ಮನವೊಲಿಸಿ ಪಕ್ಷಾಂತರವನ್ನು ಅಧಿಕೃತವಾಗಿ ಮಾಡಿ ಗೆಲುವಿನ ಕೇಕೆಯನ್ನೂ ಹಾಕಿದರು। ರಾಜಕೀಯ ನಾಟಕದ ಮೊದಲ ಅಂಕಗಳಲ್ಲೆಲ್ಲ ಯಡಿಯೂರಪ್ಪ ಇಂಥ ಬೇಟೆಗಳಿಂದ ಗೆಲುವು ದಾಖಲಿಸುತ್ತಲೇ ಸಾಗಿದರು।

'ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕು..' ಎನ್ನುವ ಮಾತು ಕಾರ್ನಾಡರ ಒಂದು ನಾಟಕದಲ್ಲಿ ಬರುತ್ತದೆ। ಹಾಗೆ ಯಡಿಯೂರಪ್ಪ ದರ್ಬಾರಿನ ಕೆಲ ಉನ್ನತ ಅಧಿಕಾರಿಗಳು, ಆಪ್ತ ಸಚಿವೆಯ ಕೆಲ ವರ್ತನೆಗಳು ಇಡೀ ವ್ಯವಸ್ಥೆಯನ್ನು ಕ್ರೂರವನ್ನಾಗಿಸಿದವು। ಇಂಥ ವ್ಯವಸ್ಥೆ ಯಡಿಯೂರಪ್ಪ ಅವರನ್ನು ಸರ್ವಾಧಿಕಾರಿ ಧೋರಣೆಗೆ ಎಳೆದು ತಂದಿತು। ತಮ್ಮ ಒಳಗಿನ ಮತ್ತು ತಮಗೆ ಸಾಕಷ್ಟು ನೆರವಾದವರ ವಿರುದ್ಧ ಯಾವುದೋ ಕಾರಣಕ್ಕೆ ಅಥವಾ ಕೆಲ ಹಿತಾಸಕ್ತಿಗಳನ್ನು ಖುಷಿಪಡಿಸಲು ಸೇಡಿನ ಮನೋಭಾವ ಪ್ರದರ್ಶಿಸಿದರು। ಅದಿರು ಲಾರಿಗಳ ಮೇಲೆ ಭಾರಿ ಸುಂಕ ವಿಧಿಸುವ ಹೆಸರಲ್ಲಿ ಗಣಿ ಧಣಿಗಳ ದೊಡ್ಡ ಹೊಟ್ಟೆಗಳ ಮೇಲೆ ಕಾಲಿಡಲು ನಿರ್ಧರಿಸಿದರು। ಇಲ್ಲೇ ಯಡವಟ್ಟಾಗಿದ್ದು। ಈ ಮೂಲಕ ಅವರು ಭಾರಿ ಪೈಲ್ವಾನ್ ಎನಿಸಿಕೊಳ್ಳಲೆತ್ನಿಸಿದ್ದರು। ಆದರೆ ಅದೆಲ್ಲ ಉಲ್ಟಾ ಆಯಿತು। ರೆಡ್ಡಿಗಳು ತಿರುಗಿಬಿದ್ದರು।

ರೆಡ್ಡಿಗಳು ತುಂಬ ದಿಟ್ಟವಾದ ಮತ್ತು ವ್ಯವಸ್ಥಿತವಾದ ಆಕ್ರಮಣಕ್ಕಿಳಿದಿದ್ದಾರೆ। ಹೀಗಾಗಿ ಥೇಟು ಅಂತಿಮ ಯುದ್ಧದ ವಾತಾವರಣ ಸೃಷ್ಟಿಯಾಗಿದೆ। ಇದರ ಅಂತ್ಯ ಬಹುಶಃ ಮ್ಯಾಕ್ ಬೆತ್ ನಾಟಕದ ಕೊನೆಯ ದೃಶ್ಯದಂತೆ ಆಗಬಹುದೇ?

ಮ್ಯಾಕ್ ಬೆತ್ ನಾಟಕದ ಕಡೆಯ ದೃಶ್ಯ ಹೀಗಿದೆ:

ಮ್ಯಾಕ್ ಬೆತ್: ನಾನ್ಯಾಕೆ ನಿಮ್ಮ ಜತೆ ವ್ಯರ್ಥವಾಗಿ ಹೋರಾಡಬೇಕು? ನನ್ನದೇ ಕತ್ತಿಯಿಂದ ಇರಿದುಕೊಂಡು ಸಾಯಬೇಕು?

ಮ್ಯಾಕ್ ಡೆಫ್: ನಿಲ್ಲು ನಿಲ್ಲು ದೂರ್ತ।

ಮ್ಯಾಕ್ ಬೆತ್: ನಿನ್ನನ್ನು ಕೊಲ್ಲದೆ ಬೇಕೆಂದೇ ಸುಮ್ಮನೇ ಬಿಟ್ಟಿದ್ದೇನೆ। ನಿನ್ನವರ ರಕ್ತದಿಂದ ಆಗಲೇ ನನ್ನಾತ್ಮ ಕಲೂಷಿತಗೊಂಡಿದೆ। ಸುಮ್ಮನೇ ತೊಲಗಾಚೆ।

ಮ್ಯಾಕ್ ಡೆಫ್: ವಿವರಿಸಲಿಕ್ಕೂ ಆಗದ ನೀಚ ನೀನು। ರಕ್ತಪಿಪಾಸು ಪಾಪಾತ್ಮ ನೀನು। ನನ್ನ ಕತ್ತಿಯಿಂದಲೇ ನಿನಗೆ ಉತ್ತರ ನೀಡುತ್ತೇನೆ।

ಮ್ಯಾಕ್ ಬೆತ್: ವ್ಯರ್ಥವಾಗಿ ಹೀಗೇಕೆ ಕತ್ತಿ ಝಳಪಿಸುವೆ। ನನ್ನ ಮುಗಿಸುವ ನಿನ್ನ ಯತ್ನ ಫಲ ನೀಡದು। ನಾನು ಅಮರಜೀವಿ। ನನ್ನ ಹಿಂದೆ ಅಭಯ ಹಸ್ತಗಳಿವೆ। ಯಾರೂ ನನ್ನನೇನೂ ಮಾಡಲಾರರು। ನೀಚ, ನನ್ನ ಕತ್ತಿಗೆ ನಿನ್ನ ರಕ್ತದ ರುಚಿ ಉಣ್ಣಿಸುವೆ।

ಮ್ಯಾಕ್ ಡೆಫ್: ಮೂರ್ಖ ಆ ಗತಿಯನ್ನು ನಿನಗೇ ಕಾಣಿಸಲಿದೆ ನನ್ನೀ ಕತ್ತಿ। ನೀನು ಆರಾಧಿಸುವ ಆ ಯಕ್ಷಿಣಿಗಳಿದಾವಲ್ಲ ಅವೇ ಹೇಳಲಿ ನೀನು ತಾಯಿ ಹೊಟ್ಟೆಯಿಂದ ಬಂದವನಲ್ಲ, ಹೊಟ್ಟೆ ಸೀಳಿ ಹೊರಬಂದವನೆಂದು।

ಮ್ಯಾಕ್ ಬೆತ್: ನನ್ನ ಅಧೀರನನ್ನಾಗಿಸುತ್ತಿರುವ ಮಾತುಗಳನ್ನಾಡುತ್ತಿರುವ ನಿನ್ನ ನಾಲಗೆ ಸೇದಿ ಹೋಗಲಿ। ನಾ ನಿನ್ನ ಜತೆ ಯುದ್ಧ ಮಾಡಲಾರೆ।

ಮ್ಯಾಕ್ ಡೆಫ್: ಹಾಗಾದರೆ ಶರಣಾಗೋ ಹೇಡಿ।

ಮ್ಯಾಕ್ ಬೆತ್: ನಾನು ನಿನ್ನಂತೆ ಹೊಂಚು ಹಾಕಿ ನುಗ್ಗಿದವನಲ್ಲ। ಪಿತೂರಿಗಳನ್ನಷ್ಟೇ ನಂಬಿದವನಲ್ಲ। ಬಾ ನನ್ನ ಕೆಣಕಿದವನೆ, ಯುದ್ಧಕ್ಕೆ ಅಣಿಯಾಗು।

(ಇಬ್ಬರೂ ಕತ್ತಿ ಝಳಪಿಸುತ್ತಾರೆ। ಕೆಲ ಕಾಲ ಸಂಘರ್ಷ ನಡೆಯುತ್ತದೆ। ಸಮಯ ನೋಡಿ ಮ್ಯಾಕ್ ಬೆತ್ ಓಡಿ ಹೋಗಲು ನೋಡುತ್ತಾನೆ। ಮ್ಯಾಕ್ ಡೆಫ್ ಕತ್ತಿಯಿಂದ ಬಲವಾಗಿ ಮ್ಯಾಕ್ ಬೆತ್ ನನ್ನು ಇರಿಯುತ್ತಾನೆ)

ಕಡೆಗೆ ಮಾಲ್ಕಂ ಗೆ ಪಟ್ಟಾಭಿಷೇಕ ನಡೆಯುತ್ತದೆ.

...... ...... ..... .......

ಮ್ಯಾಕ್ ಬೆತ್ ನಾಟಕದ ಮೊದಲ ಅಂಕಗಳಲ್ಲಿ ಮ್ಯಾಕ್ ಬೆತ್ ಗೆಲ್ಲುತ್ತಾನೆ। ನಂತರದ ಅಂಕಗಳು ಆತನ ಸೋಲಿನೊಂದಿಗೆ ಮುಗಿಯುತ್ತವೆ. ತನ್ನ ಆಲೋಚನೆಗಳಿಗೆ ತಾನೇ ಹೆದರುವ ಮ್ಯಾಕ್ ಬೆತ್ ನ ಸ್ವಗತಗಳಂತೆ ಯಡಿಯೂರಪ್ಪ ಮಾಧ್ಯಮಗಳ ಜತೆ ಮಾತನಾಡಿಕೊಳ್ಳುತ್ತಿದ್ದಾರೆ। ಅವು ತಮಗೆ ತಾವೇ ಹೇಳಿಕೊಳ್ಳುವ ಮತ್ತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವಂತೆ ಅನಿಸುತ್ತಿವೆ।

ಕಡೆಗೆ ಮಾಲ್ಕಂ ಆಗೋರು ಯಾರು? ಆ 'ಜಗದೀಶ'ನೇ ಬಲ್ಲ।

ಕಾಮೆಂಟ್‌ಗಳು

ಚಂದಿನ | Chandrashekar ಹೇಳಿದ್ದಾರೆ…
ಪರಿಣಾಮಕಾರಿ ಲೇಖನ....ಅಭಿನಂದನೆಗಳು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...