ವಿಷಯಕ್ಕೆ ಹೋಗಿ

ಪಾವಿತ್ರ್ಯ ಮತ್ತು ನಿಷೇಧ

ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು.

ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು  ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು.

ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು.

ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು!
ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್ ಜಗದೀಶಚಂದ್ರ ಭೋಸ್ ಹೇಳಿದ್ದಾರೆ. . ಗಿಡ, ಮರಗಳೂ ಪವಿತ್ರ. ಅವುಗಳ ಫಲ ಕಿತ್ತುಕೊಳ್ಳಬಾರದು. ಅದು ಜೀವದ ಹೊಸ ಜೀವ ತೆಗೆದ ಹಾಗೆ. ಕುಡುಗೋಲಿನಿಂದ, ಯಂತ್ರದಿಂದ ಜೋಳ, ಗೋಧಿ, ರಾಗಿಯ ತೆನೆ ಕತ್ತು ಕತ್ತರಿಸಿ ನೆಲಕ್ಕುರುಳಿಸಿ ಅದರ ಮೇಲೆ ದೊಡ್ಡ ಕಲ್ಲಿನ ರೋಲರ್ ಉರುಳಿಸಿ ಅಥವಾ ಯಂತ್ರದ ಚಕ್ರಕ್ಕೆ ಸಿಕ್ಕಿಸಿ ಕಾಳು ತುರಿಯಬಾರದು. ಗೋವಿನ ಮಾಂಸ ತೆಗೆಯಲು ಚರ್ಮ ಸುಲಿಯುವ ಹಾಗೆ, ಗಾಳಿಗೆ ಕಾಳುಗಳ ಮೇಲ್ಹೊದಿಕೆ (ತ್ವಾಟೆ) ತೂರಬಾರದು. ಅದೂ ಹಿಂಸೆಯೇ. ರಾಶಿಯನ್ನೂ ನಿಷೇಧಿಸಬೇಕು!


ಈ ನೆಲ ಭಾರತಮಾತೆಯಾದರೆ ಅದರೊಡಲ ಬಗೆಯುವುದನ್ನು ಮೊದಲು ನಿಲ್ಲಿಸಲೇಬೇಕು. ಮೆಟ್ರೋ ರೈಲು, ಹೈ ಸ್ಪೀಡ್ ರೈಲು, ಬಹುಮಹಡಿ ಕಟ್ಟಡಕ್ಕೆ, 'ಬಳ್ಳಾರಿ' ಅದಿರಿಗೆ ನೆಲ ಅಗೆಯುವುದನ್ನಂತೂ ನಿಲ್ಲಿಸಿಬಿಡಬೇಕು. ಒಟ್ಟಾರೆ ನೆಲ ಅಗೆಯುವುದನ್ನೇ ನಿಷೇಧಿಸಬೇಕು!

ಮಣ್ಣು ಪವಿತ್ರ. ಅದರ ಮೇಲೆ ಹೇಸಿಗೆ ಮಾಡಬಾರದು. ನೀರು ಪವಿತ್ರ. ಅದರಿಂದ ತಿಕ ತೊಳೆಯಬಾರದು. ಕಲ್ಲೂ ಪೂಜನೀಯ. ಕಲ್ಲಿನಿಂದ ಹೇಲು (ಈ ಪದ ನಿಷೇಧಕ್ಕೊಳಪಟ್ಟಂತಿದೆ. ಬಳಸಿದ್ದಕ್ಕೆ ಕ್ಷಮೆ ಇರಲಿ) ಒರೆಯಿಸಿಕೊಳ್ಳಬಾರದು. ಹೀಗಾಗಿ ಹೇಲುವುದನ್ನೂ  ನಿಷೇಧಿಸಬೇಕು!

ಎಷ್ಟೆಲ್ಲ ನಿಷೇಧಿಸಲಿಕ್ಕಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...