ವಿಷಯಕ್ಕೆ ಹೋಗಿ

ಹೊಸ ಬೆಳಕು ಹಬ್ಬಿಸಲು ಕಾದು ಕೂತ ದೀಪಗಳು...

ಈ ಜೀವಜಗತ್ತಿನ ಬಂಡಿ ಸಾಗಿಸುವ ಭಾರವೆಲ್ಲ ಹೆಣ್ಣಿಗೇ ಏಕೆ? ಹಟಕ್ಕೆ ಹೆಸರಾದ ಹೆಣ್ಣು ತಾಯಿಯಾಗುವಾಗ ನಮ್ಮನ್ನೆಲ್ಲ ಸಣ್ಣಗೆ ಅಲುಗಾಡಿಸಿಬಿಡುತ್ತಾಳೆ. ಅದಕ್ಕೇ ಜನಪದ ಮತ್ತು ಎಲ್ಲ ಧರ್ಮ ಗ್ರಂಥಗಳಲ್ಲೂ ತಾಯಿಗೆ ದೊಡ್ಡ ಸ್ಥಾನವಿದೆ. ಖುರಾನ್ ನಲ್ಲೂ. ಒಂದು ಉರ್ದು ಕವಿತೆ ಹೀಗೆ ಬಣ್ಣಿಸಿದೆ.

ಈ ಜಗವ ರೂಪಿಸಿದವ ತಾಯಿಗೆಂಥಾ ಶ್ರೇಷ್ಠ ದರ್ಜೆ ಕೊಟ್ಟ
ಅವಳ ಒಂದು ಪ್ರಾರ್ಥನೆಯಲ್ಲಿ ಎರಗಿದ ಕಂಟಕ ಪರಿಹರಿಸುವ ಶಕ್ತಿಯನಿತ್ತ!
ಖುರಾನ್ ಇವಳ ಮಮತೆಯ ಹೀಗೆ ಬಣ್ಣಿಸಿದೆಯಲ್ಲಾ
ದೇವರು ಸ್ವರ್ಗವನ್ನೇ ತಾಯ ಪಾದಕ್ಕೆಸೆದುಬಿಟ್ಟ! 


ಅದೆಷ್ಟು ಬರಹಗಾರರು ಹೆಣ್ಣಿನ ತಾಯಿಗುಣ ಬಣ್ಣಿಸಿದ್ದು ಸುಮ್ಮನೇ ಅಲ್ಲ. ಈ ಉಪಖಂಡ ಕಂಡ ಅದ್ಭುತ ಕವಿ ಅಲ್ಲಾಮಾ ಇಕ್ಬಾಲ್ ತಮ್ಮ "ಮಾ ಕಾ ಖ್ವಾಬ್" ಕವಿತೆಯಲ್ಲಿ ತಾಯಿಯ ಕನಸು ಜೀವದ ಒಂದಿಡೀ ಪಯಣವನ್ನೇ ಬಿಚ್ಚಿಡುತ್ತದೆ. ಅಲ್ಲಿ ಜನ್ಮಭೂಮಿ, ದೇಶ, ಜಗತ್ತು ತಾಯಿಪಾದದ ಧೂಳಿನ ಕಣದಂತೆನಿಸಿಬಿಡುತ್ತದೆ. ಇದೇ ಜಾಡಿನಲ್ಲಿ ನಮ್ಮ ಲಂಕೇಶ್ ಕೂಡ... "ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ..." ಎಂದರಲ್ಲವೇ. ನೆಲವೆಂದರೆ ತಾಯ್ನೆಲವೂ ಹೌದು, ಜಗತ್ತೂ ಹೌದು. ಕೆಲವರಿಗದು ಭಾರತಮಾತೆ, ಕರ್ನಾಟಕಮಾತೆ....  ತಾಯಿ ಒಂದು ಸೀಮಿತ ವ್ಯಾಪ್ತಿಯಲ್ಲ. ಎಲ್ಲದರ ಮೂಲ. ಅದರ ಹರವು ಕ್ಷಿತಿಜದಾಚೆಗೂ....
 ಆರ್ಕಿಮಿಡಿಸ್ ಹೇಳುತ್ತಿದ್ದನಂತೆ, ನಿಲ್ಲಲು ಜಾಗ ಮತ್ತು ಸೂಕ್ತ ಹಾರೆ ಸಿಕ್ಕರೆ ಜಗವನ್ನೇ ಅಲುಗಾಡಿಸಬಲ್ಲೆ!.. ನಿಸರ್ಗ ಗಂಡಸಿಗೆ ಇಂಥ ಭಂಡತನದಲ್ಲೇ ದೊಡ್ಡ ನೆಮ್ಮದಿ ಇಟ್ಟಂತಿದೆ. ಎಂಥ ಬಂಡೆಗೂ ತೊಡೆತಟ್ಟಿ ನಿಲ್ಲಬಲ್ಲ ಗಂಡಸಿಗೆ ತನ್ನೊಡಲಲ್ಲೊಂದು ಜೀವ ಬೆಳೆಸಬಲ್ಲ ಭಾಗ್ಯವಿದೆಯೇ? ನಿಸರ್ಗದ ನ್ಯಾಯವನ್ನು ಎಲ್ಲಿ ಪ್ರಶ್ನಿಸುವುದು?  
 ನಾನು ಸಮುದ್ರ ಹಾರಿ ಇಲ್ಲಿ ನಾರ್ವೆ ಬಂದಿದ್ದು ಈ ನ್ಯಾಯ ಪ್ರಶ್ನಿಸುವುದಕ್ಕಲ್ಲ. ನಿಸರ್ಗದ ಸಹಜ ನಿರ್ಣಯ, ಸೌಂದರ್ಯ ಮತ್ತದು ನೀಡುವ ಖುಷಿಯನ್ನು ನನ್ನದೇ ಮಿತಿಯಲ್ಲಿ ಕಂಡು ನನ್ನೊಳಗಿನ ಮನುಷ್ಯನನ್ನು ಮತ್ತಷ್ಟು ಮನುಷ್ಯನನ್ನಾಗಿಸಿಕೊಂಡು ನನ್ನ ಗೂಡು ಸೇರಿಕೊಳ್ಳಲು.
ನಾರ್ವೆಯಲ್ಲಿ ನೆಲೆಸಿರುವ ನನ್ನ ತಂಗಿ ಅಮೀರ್ ಮತ್ತು ನಾಡಲ್ಲೇ ಇರುವ ಷಹನಾಜ್ ನಮ್ಮ ಕುಟುಂಬದ ಅತ್ಯಂತ ಪ್ರೀತಿಯ ಕುಡಿಗಳು. ಅಮೀರ್ ಎಲ್ಲರಿಗಿಂತ ಹೆಚ್ಚು ಪ್ರೀತಿ ಉಂಡವಳು. ನಮ್ಮ ಮನೆ ಬೆಳಗಿಸಿಬಂದ ಈ ಕುಡಿಗಳೀಗ ಆ ಬೆಳಕನ್ನು ತಮ್ಮ ಗಂಡನ ಮನೆ/ಮನದಂಗಳ ತುಂಬ ಹರಡಿ ಕೂತಿವೆ. ಅಷ್ಟರಮಟ್ಟಿಗೆ ನಮ್ಮ ಮನೆಯ ಬೆಳಕು ಕೊಂಚ ಫೇಡ್. ಈ ಮನುಷ್ಯ ಪ್ರೀತಿ ಬೆಳಕು ಬೆಳೆಯಲಿ ಎಂದು ನಾವೆಲ್ಲ ಸಹೋದರರು, ಗೆಳೆಯರು ಹರಸಿ ಕಳುಹಿಸಿದ್ದು ಹುಸಿಯಾಗಲಿಲ್ಲ. ನಮ್ಮ ಮನೆಯ ಮಕ್ಕಳು ಹೀಗೆ ಬೆಳಕು ಬೆಳೆಸುವ ಪರಿಯನ್ನು ಕಂಡರೆ ಕಣ್ತುಂಬಿ ಬರುತ್ತವೆ. ನನಗೀ ಭಾವನೆಗಳು ಮೊದಲಿಗಿಂತ ಈಗ ಹೆಚ್ಚು ಅರ್ಥಪೂರ್ಣ ಎನಿಸತೊಡಗಿವೆ.
ಚೊಚ್ಚಲು ಬಸುರಿ ಪಡುವ ವೇದನೆ ಅವಳಿಗಷ್ಟೇ ಗೊತ್ತೇನೋ? ಆದರೆ, ಹೆಣ್ಣು ಜೀವಕ್ಕೆ ಇದೇನು ಹೊಸದೇ? ಏಳು ಜೀವಕುಡಿಗಳನ್ನು ಜಗತ್ತಿಗೆ ಕೊಟ್ಟ ನನ್ನವ್ವ ತುಂಬ ಸಮಾಧಾನದಿಂದಲೇ ಇದನ್ನೆಲ್ಲ ತಂಗಿಗೆ ಹೇಳುತ್ತಿದ್ದುದು ನನಗೆ ಅಪ್ಯಾಯಮಾನವೆನಿಸಿತು. ನೋಡು ಮಗಳೆ ಹೆರುವ ಭಾಗ್ಯ ಅಲ್ಲಾಹು ನಮಗಷ್ಟೇ ಕೊಟ್ಟ ಭಾಗ್ಯ. ಅವನು ಕೊಡುವ ಜವಾಬ್ದಾರಿ ನಿಭಾಯಿಸದಿದ್ದರೆ ನಿಸರ್ಗವನ್ನೇ ಅವಮಾನಿಸಿದಂತೆ. ಹೆರಿಗೆಯ ನೋವುಗಳಲ್ಲೂ ಒಂದು ಸುಖವಿದೆ. ಅದನ್ನು ಅನುಭವಿಸು. ನೀನೊಂದು ಹೊಸ ಕುಡಿಗೆ ಜನ್ಮ ಕೊಡುತ್ತಿದ್ದೀಯಾ ಅನ್ನುವುದು ನೆನಪಿರಲಿ. ಅದು ನಮಗೂ ಹೊಸ ಜನ್ಮ. ಅದ್ಯಾರೋ ಹೇಳಿದ್ದಾರಲ್ಲಾ, ಮಗುವಿನ ಜನ್ಮದಿನ ತಾಯಿಯ ಜನ್ಮದಿನವೂ ಹೌದಂತೆ. ನಿಜ ಅಲ್ಲವೇನು? ನೀವು ನಮಗಿಂತ ಓದಿದವರು. ಹೆರಿಗೆಯ ನೋವುಗಳಿಗೆಲ್ಲ ಹೆದರಬಾರದು. ಸಹಿಸಿಕೊಳ್ಳು ಮಗಳೇ. ಇಷ್ಟು ದಿನ ಸಹಿಸಿಕೊಂಡ ನೋವಲ್ಲಿ ನಾಳಿನ ಸುಖದ ಬೆಳಕಿದೆ. ನಾನು ದುವಾ ಮಾಡುತ್ತೇನೆ ನೀನು ಧೈರ್ಯವಾಗಿ ಹೆರಿಗೆಗೆ ಸನ್ನದ್ಧಳಾಗು ಎಂದು ಸಂತೈಸುತ್ತಿದ್ದ ಪರಿಯನ್ನು ಕಣ್ಣಾರೆ ಕಂಡೆ. ಅವಳ ಅತ್ತೆ ಕೂಡ, ಕೂಸ ಹಡದ ಮ್ಯಾಲ ಎಲ್ಲಿ ನೋವ, ಬ್ಯಾನಿ.... ದೇಸಿ ಸೊಗಡಿನಲ್ಲಿ ಧೈರ್ಯ ಹೇಳಿದರು. 
ಊರಿನಿಂದ ಅಪ್ಪ, ಸಹೋದರರು, ಸಹೋದರಿ, ಬಂಧುಗಳು, ಬೆಂಗಳೂರು, ಧಾರವಾಡ (ಮ್ಯಾಡ್ಸ್), ತಿಪಟೂರಿನ ನನ್ನ ಗೆಳೆಯರು, ನಾರ್ವೆಯಲ್ಲಿ ನೆಲೆಸಿರುವ ಅವಳ ಸ್ನೇಹಿತೆಯರು (ಸುಜಾತಾ, ಚೈತ್ರಾ ಮತ್ತಿತರರು)  ಫೋನ್, ಮೇಲ್, ಮೆಸೇಜ್ ಮೂಲಕ ಧೈರ್ಯ ಹೇಳಿದ್ದು ಅಮೀರ್ ವಿಶ್ವಾಸ ಹೆಚ್ಚಿಸಿದ್ದು ಸುಳ್ಳಲ್ಲ.

 ಹೆರಿಗೆ ನೋವು ಬಂದರೆ ತಕ್ಷಣ ಆಸ್ಪತ್ರೆಗೆ ಹೊರಡುವಂತೆ ಅಮೀರ್ ನೋಡಿಕೊಳ್ಳುತ್ತಿದ್ದ ವೈದ್ಯರು ಸಲಹೆ ನೀಡಿದ್ದರು. ಆ ಸಮಯ ಅಂತೂ ಬಂದೇಬಿಟ್ಟಿತು. ಅವಳ ಗಂಡ ಖಾನ್ ಸಾಹೇಬರು ಟೆನ್ಷನ್ ನಲ್ಲಿದ್ದರು. ಆಸ್ಪತ್ರೆಗೆ, ಟ್ಯಾಕ್ಸಿಗೆ ಫೋನಾಯಿಸುವುದರಲ್ಲಿ ಬ್ಯುಸಿಯಾಗಿದ್ದರು. ರಾತ್ರಿ 8 (ಬುಧವಾರ) ಗಂಟೆಗೆ ಆಸ್ಪತ್ರೆ ಹೊರಡುವುದು ಫಿಕ್ಸ್ ಆಯ್ತು. ಹೊರಡುವಾಗ ಹೊಟ್ಟೆ ತುಂಬ ನೆಮ್ಮದಿಯಿಂದ ಊಟ ಮಾಡಿ, ಖುಷಿಯಾಗಿ, ಧೈರ್ಯವಾಗಿ ಆಸ್ಪತ್ರೆಗೆ ಹೊರಟು ಬರುವಂತೆ ವೈದ್ಯರು ತಾಕೀತು ಕೂಡ ಮಾಡಿದ್ದರಂತೆ. ಇಲ್ಲಿ ಜನ್ಮ ಕೊಡುವ ತಾಯಿಗೆ ಇಲ್ಲೂ ಅದೆಷ್ಟು ಗೌರವ, ಮರ್ಯಾದೆ ಮತ್ತು ರಕ್ಷಣೆ ಇದೆ! ಇವರ ಜತೆ ನಾನೂ ಒಮ್ಮೆ ಆಸ್ಪತ್ರೆ ಮಿಡ್ ವೈಫ್ ಬಳಿಗೆ ಹೋಗಿದ್ದೆ. ಅವರ ಕರ್ತವ್ಯ ಪ್ರಜ್ಞೆ ನನ್ನ ಸೆಳೆಯಿತು. ಗರ್ಭಿಣಿಯರಿಗೆ ಸಲಹೆ, ದೈರ್ಯ ನೀಡುವ ಅವರ ಕೆಲಸವೇ ಅನನ್ಯವಾದುದು.
ಗಂಡ/ಹೆಂಡತಿ ಇಬ್ಬರಲ್ಲೂ ಹೇಳಿಕೊಳ್ಳಲಾಗದ, ವ್ಯಕ್ತಪಡಿಸಲಾಗದ ಟೆನ್ಷನ್. ಬಿಕ್ಕುತ್ತಲೇ, ನೋವ ನುಂಗುತ್ತಲೇ ಒಂದೊಂದು ತುತ್ತನ್ನು ಬಲುಕಷ್ಟದಿಂದಲೇ ಬಾಯಿಗಿಡುತ್ತಿದ್ದರು.


 ಊಟದ ನಂತರ ಅಮೀರ್ ನೋವಿನಿಂದ ಚಡಪಡಿಸುತ್ತಿದ್ದಳು. ಗೋಡೆಗೊರಗಿ ನೋವ ನುಂಗಲೆತ್ನಿಸುತ್ತಿದ್ದಳು. ಇವರ ಹೆತ್ತ ಕರುಳುಗಳು ಸಂಕಟಪಡುತ್ತಿದ್ದವು. ಇದಕ್ಕೆಲ್ಲ ನಾನು ಮೂಕಸಾಕ್ಷಿ. ಕೈಯಲ್ಲಿದ್ದ ಪುಟ್ಟ ಕ್ಯಾಮರಾ ಕಣ್ಣು ಕೂಡ ತುಂಬಿಬಂದಿದ್ದವು. ಈ ಕ್ಷಣಗಳ ಹಿಡಿಯುತ್ತಲೇ ನನ್ನೊಳಗೂ ಸಣ್ಣಗೆ ನಡುಕ...
ಅಂತೂ ಸಾವರಿಸಿಕೊಂಡು ಆಸ್ಪತ್ರೆಗೆ ಹೊರಡಲನುವಾದರು. ದಂಪತಿ ಮುಖದಲ್ಲಿ ಆತಂಕ, ದುಗುಡದ ನಡುವೆ ಹೆಮ್ಮೆಯ ನಗುವರಳತೊಡಗಿತ್ತು. ಹೆರುವ ಸುಖದ ನೋವನ್ನುಂಡ ಆ ಎರಡು ಹಿರಿಯ ಜೀವಗಳು ಮನದಲ್ಲೇ ದುವಾ ಮಾಡಿಕೊಳ್ಳುತ್ತಿದ್ದವು. ಒಳಗೊಳಗೇ ಸಂಭ್ರಮದ ಕ್ಷಣವನ್ನು ಎದುರು ನೋಡುತ್ತಿದ್ದವು. ಆ ಕಾತರ ಅವರ ಹಸಿಗೊಂಡ ಕಣ್ಣುಗಳಲ್ಲಿ ಲಾಸ್ಯವಾಡುತ್ತಿತ್ತು.
ಟ್ಯಾಕ್ಸಿ ಮನೆಬಾಗಿಲ ಮುಂದೆ ನಿಂತುಬಿಟ್ಟಿತು. ಜಗ್ಗನೇ ಹೊಳೆದ ಹೆಡ್ ಲೈಟ್ ಬೆಳಕು ಹೊಸ ಬೆಳಕಿನ ಕನಸು ಬಿತ್ತಬಂದಂತೆನಿಸಿತು. ಅಮೀರ್ ಬೆಳಕನ್ನರಸಿ ಹೊರಟುಬಿಡು. ನಿನ್ನ ಒಡಲಿಂದ ನಿನ್ನಷ್ಟೇ ಮುದ್ದಾದ ಹೊಸ ಬೆಳಕೊಂದು ಈ ಭೂಮಿ ಬೆಳಗಲಿ ಎಂದು ದಿಲ್ ಪೂರ್ವಕ ಹಾರೈಸಿ ಕಳುಹಿಸಿಕೊಟ್ಟೆವು. ದೂರದವರೆಗೆ ರಿವರ್ಸ್ ಹೊರಟ ಟ್ಯಾಕ್ಸಿ ಹೆಡ್ ಲೈಟ್ ಬೆಳಕಿಗೆ ನಮ್ಮ ಕಣ್ಣುಗಳು ಹೊಳೆದಿದ್ದು ಅವಳಿಗೂ ಕಂಡಿತೇನೋ!
ಈ ಕತ್ತಲಲ್ಲಿ ಏನು ಆಟ ನಡೆವುದೋ, ನಾಳಿನ ಸೂರ್ಯನಲ್ಲಿ ಯಾವ ಸತ್ಯ ಹೊಳೆವುದೋ... ನಮ್ಮ ಮನದ ತುಂಬ ಈಗ ನಂಬುಗೆಯ ದೀಪಗಳು, ಹೊಸ ಬೆಳಕು ಹಬ್ಬಿಸಲು ಕಾದು ಕೂತಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ