ಹೊಕ್ಕಳುಹುರಿ ಕತ್ತರಿಸ ಹೊರಟ ಡಾಕ್ಟರ್ ಕತ್ತರಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡ ಕೈಗಳಿವು! ಈ ಪೋರ ಜಗತ್ತಿಗೆ ಕಣ್ಬಿಟ್ಟು ಮೂರೇ ಮೂರು ತಾಸಾಗಿತ್ತು. ಆಗಲೇ ಇವನ ದರ್ಶನ ಮಾಡಿದ್ದೆ. ಇದೇ ಕೈಗಳನ್ನು ಅಭಿಮಾನದಿಂದ ಹಿಡಿದಿದ್ದೆ. ಇವು ಅಂತಿಂಥ ಕೈಗಳಲ್ಲ. ಹೊಕ್ಕಳುಹುರಿ ಕತ್ತರಿಸ ಹೊರಟಿದ್ದ ವೈದ್ಯರ ಕತ್ತರಿಯನ್ನೇ ಬಿಗಿಯಾಗಿ ಹಿಡಿದು ತನ್ನ ತಾಯ ಒಡಲಿನ ಪ್ರೀತಿ, ಬೆಚ್ಚಗಿನ ಭಾವಕ್ಕೆ ತನ್ನ ಜೀವನಿಷ್ಠೆಯನ್ನು ಸಾರಿ ಕಣ್ತೆರೆದ ಭೂಪನ ಕೈಗಳಿವು.
ನಾರ್ವೆಯಿಂದ ನಾನು ಮರಳಿ ಬರುವ ದಿನವೇ ಇವನ ಜನನವಾಗಿತ್ತು. ಆಸ್ಪತ್ರೆಯಲ್ಲಿ ಕಾದು ಇವನ ದರ್ಶನ ಮಾಡಿಕೊಂಡು ಬಂದಿದ್ದೆ. ಇವನ ತಾಯಿ ಅಂದರೆ ನನ್ನ ತಂಗಿಯನ್ನು ಭೇಟಿ ಮಾಡಿ ಶುಭಾಶಯ ಹೇಳುವುದಕ್ಕೆ ಅವತ್ತು ಅವಕಾಶವಿರಲಿಲ್ಲ. ರಾತ್ರಿಯಾಗಿತ್ತು. ಬೆಳಿಗಿನ ಜಾವ ನನ್ನ ರಿಟರ್ನ್ ಫ್ಲೈಟ್ ಇತ್ತು. ಅವಳನ್ನು ಭೇಟಿ ಮಾಡದೇ ಹೊರಡುವ ಒಂಚೂರೂ ಇರಾದೆ ನನಗಿರಲಿಲ್ಲ. ಟಿಕೆಟ್ ಕ್ಯಾನ್ಸಲ್ ಮಾಡಿ ಮುಂದಿನ ದಿನಾಂಕಕ್ಕೆ ನಿಗದಿ ಮಾಡಲೆತ್ನಿಸಿದ್ದೆ. ಕೊನೆಯ ಕ್ಷಣದವರೆಗೂ ಟ್ರೈ ಮಾಡಿದ್ದೆ, ಆಗಿರಲಿಲ್ಲ. ಅಲ್ಲಿಯತನಕ ಬಂದು ಒಂದೂವರೆ ತಿಂಗಳು ಜತೆಯಲ್ಲಿದ್ದು ಅವಳು ತಾಯಿಯಾಗುವ ಸಂಭ್ರಮದ ಕ್ಷಣವನ್ನು ಕಣ್ಣಾರೆ ನೋಡಿ ಆನಂದಿಸುವ ಅವಕಾಶವೊಂದು ತಪ್ಪಿದ್ದಕ್ಕೆ ಅದೆಷ್ಟು ಬೇಸರಪಟ್ಟುಕೊಂಡಿದ್ದೆ. ಆದರೆ ಈ ಪೋರನ ಮುಖ ನೋಡಿದ ಮೇಲೆ ನನಗೊಂದು ಸಮಾಧಾನವಾಗಿತ್ತು. ಆಕೆ ಅದೆಷ್ಟು ಸಂಭ್ರಮಪಟ್ಟಿರಬಹುದೆನ್ನುವುದಕ್ಕೆ ಇವನ ಮುಖಕಾಂತಿಯಲ್ಲಿ ಅದೆಷ್ಟು ಸಾಕ್ಷಿಗಳಿದ್ದವು...
ಸಿಜೇರಿಯನ್ ಆದ ಮೇಲೆ ಅವಳಿಗೆ ಪ್ರಜ್ಞೆ ಬರುವಷ್ಟೊತ್ತಿಗೆ ಮಗುವನ್ನು ಇತರ ವೈದ್ಯಕೀಯ ಪರೀಕ್ಷೆಗಳಿಗೆಂದು ನರ್ಸ್ ತಮ್ಮ ತಹಬಂದಿಗೆ ತೆಗೆದುಕೊಂಡುಬಿಟ್ಟಿದ್ದರು. ಹೀಗಾಗಿ ಅವಳು ಇವನನ್ನ ಇನ್ನೂ ನೋಡಿರಲೇ ಇಲ್ಲ. ಅವಳಿಗೂ ಮುನ್ನ ಇವನ ತಂದೆಯೇ ಮೊದಲು ನೋಡಿದ್ದು. ಆನಂತರ ನೋಡಿದ್ದೇ ನಾನು... ನನಗೋಸ್ಕರ ಇವನ ತಂದೆ ದರ್ಶನದ ಏರ್ಪಾಡು ಮಾಡಿದ್ದರು.
ಹೊಸ ತಲೆಮಾರಿಗೊಂದು ಹೊಸ ಬದುಕಿನ ಮಾರ್ಗವೇ ತೆರಕೊಂಡಂತಿದೆ. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಪಾದ ನೆಲದ ಮೇಲೇ ಇಡಬೇಕಾಗಿತ್ತಲ್ಲವೇ? ಅಮ್ಮನ ತೋಳಿನಲ್ಲಿ ಬದುಕಿನ ಮೊದಲ ಜೋಕಾಲಿ ಆಡಬೇಕಿತ್ತಲ್ಲವೇ? ಅವಳ ಬೆನ್ನು ನಮಗದೇ ಬೈಕು, ಅವಳ ಜಡೆ ಹಿಡಿದು ಕುಳಿತರೆ ಅದೇ ಕಾರು... ದೊಡ್ಡವರಾಗುವುದು ಎಂದರೆ ಕತ್ತೆಗಳಾಗುವುದೆಂದೇ ಅರ್ಥವೇನೋ? ನಾವೀಗ ಕತ್ತೆಗಳು... ಹಾಗೆ ನೋಡಿದರೆ ಈಗ ನಮಗವರೇ ಮಕ್ಕಳಾಗಬೇಕಾದ್ದು. ಆದರೆ ತಾಯಿಯಾಗುವ ಅರ್ಹತೆ ನಾವು ಪಡಕೊಳ್ಳಬೇಕಷ್ಟೇ. ಏಯ್ ಪೋರ, ನಾಳೆ ನೀನು ಕತ್ತೆಯಾಗುತ್ತಿಯಲ್ಲಾ! ಎಂದರೆ ಇವ ಮುಖ ದುರುಗುಟ್ಟಿ ನೋಡಿ ಸ್ಮೈಲ್ ಕೊಟ್ಟ. ನಿನಗಿಂತ ಚೆನ್ನಾಗಿ ನಾನು ನನ್ನಮ್ಮನ ನೋಡ್ಕೋತೀನೋ ಎನ್ನುವ ಹಾಗೆ ಪಾ ಪಾ ಮಾ ಮಾ... ಎಂದು ಉಲಿದಾಡುತ್ತಲೇ ಇದ್ದ. ಇವನಮ್ಮ ಮುಂಚೆ ನಮ್ಮನ್ನೆಲ್ಲ ನೋಡಿದರೆ ಮಕ್ಕಳನ್ನು ನೋಡಿ ಖುಷಿಪಡುವ ಅವ್ವನಂತಾಗುತ್ತಿದ್ದ ಜೀವ. ಇನ್ನವಳ ಮಡಿಲು ತುಂಬ ಇವನದೇ ಕಿಲ ಕಿಲ... ಅವಳ ದುನಿಯಾ ತುಂಬ ಈಗ ಇವನದೇ ಜಗತ್ತು.
ಕಾಮೆಂಟ್‌ಗಳು