ವಿಷಯಕ್ಕೆ ಹೋಗಿ

ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ: ಜವಾರಿ ಜನರ ದಿಲ್ ದಾರಿ ನಾಡಿಗೆ ಖುಶ್ ಆಮದೀದ್...


ಮನುಷ್ಯ ರೂಪಿಸುವ ಸಾಮ್ರಾಜ್ಯ, ಅಧಿಕಾರ, ಕ್ರೌರ್ಯ, ಹಿಂಸೆ... ಕಡೆಗೆ ಕಾಣುವ ಅಂತ್ಯ ಬರಿಯ ಮಣ್ಣು. 
ಅದೇ ಪ್ರೀತಿ, ಮಾನವೀಯ ಅಂತಃಕರಣದ  ಗೋಲಗುಂಬಜ್ ಕಲೆಯಾಗಿ, ಸಂವೇದನೆಯಾಗರಳುವುದು
ತೆರೆದಂತೆ ಒಳಗಣ್ಣು...

ಖುಷ್ ಆಮದೀದ್/ಸ್ವಾಗತ.

ಜವಾರಿ ಸೀಮೆಯ ಜನ ಬದುಕು ಅಂದ್ರ ಸ್ವಚ್ಛ ಆಕಾಶ, ಮಳೆ ತರುವ ಮೋಡಗಳ ಅರ್ಬಾಟು, ಸಿಡಿಲು ಮಿಂಚಿನ ಲಕ ಲಕ ಹೊಳಪು, ಸೂರ್ಯನ ಬೆಳಕಿನಂಥ ಹರವು, ನೆಲದೊಡಲಿಂದ ಕುಡಿಯೊಡೆದು ಮುಗಿಲಕಡೆ ಮಾರಿ ಮಾಡಿ ನಿಲ್ಲುವ ಸೂರ್ಯನಿಗೇ ನಿಷ್ಠ ಸೂರೆಪಾನ! ಮಾತು ಮನಂಗಳಲ್ಲಿ ಚಂದಪ್ಪನ ಬೆಳ್ಳಂಬೆಳದಿಂಗಳ ತಂಪು, ಮಲ್ಲಿಗೆಯ ಕಂಪು…
ಮನಸು ಅನ್ನೋದು ಮಳೆ ಬರಲಿ, ಬಿರುಗಾಳಿ ಬರಲಿ ಅರಳಬೇಕೆಂದರೆ ಅರಳೇ ಬಿಡುವ ಕಾಡುಮಲ್ಲಿಗೆ! ಮೃದುವಾದರೂ ಅದರ ಅರಳುವ ಸೊಕ್ಕು ಅಬ್ಬಾ!… ಅಂಥ ಸೊಕ್ಕಿನ ಮನೋಧರ್ಮ ಮತ್ತು ಮೃದು ಮನದ ಜನಸಂಸ್ಕೃತಿ ವಿಜಾಪುರಿಗಳದು.
* * *
ಖ್ವಾಜಾ ಬಂದಾನವಾಜ್ ರಂಥ ಸೂಫಿಗಳು,  ಬಸವನಂಥ, ಹರಳಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ನಂಥ ಶರಣರು, ಪುರಂದರ, ಸರ್ವಜ್ಞನಂಥ ದಾಸರು, ಇಬ್ರಾಹಿಂ, ಆದಿಲ್ ಶಾಹಿಯಂಥ ದೊರೆಗಳು ನಡದಾಡಿದ ನೆಲದ ಮಣ್ಣ ತುಂಬ ಜೀವಪ್ರೀತಿ ಉಕ್ಕಿಸುವ ಮನುಷ್ಯ ಅಂತಃಕರಣ. ಕತ್ತಿ, ಗುರಾಣಿ ಹಿಡಕೊಂಡು ಈ ನೆಲದ ಮ್ಯಾಲ ಸಾಮ್ರಾಜ್ಯ ಕಟ್ಟ ಬಂದ ಬಹಮನಿ ಸುಲ್ತಾನರು, ಆದಿಲ್ ಶಾಹಿಗಳು ಇಲ್ಲಿನ ನೆಲದ ಮಣ್ಣಿಗೆ ಕರಗಿಹೋಗಿ ನಿಷ್ಠರಾಗಿಬಿಟ್ರು. ಜಗತ್ತೇ ಬೆರಗುಗೊಳ್ಳುವಂಥ ನಾಡ್ ಕಟ್ಟಿದ್ರು. ಇದೆಲ್ಲ ಸುಮ್ನ ಶೌಕಿ ಅಲ್ರಿ ಬಾಬಾ.
ಇಲ್ಲಿನ ಜನಮನಾನ ಹಾಂಗರೀ. ಎಂಥವರ ಎದೆಯೊಳಗಿನ ಕಲ್ಲು ಕರಗಿಸಿಬಿಡತೈತಿ.
* * *
 ಲೋ ಮೂಢ… ಮನದೊಳಗಿನ ಕಲ್ಲು ಹೊರಕ್ಕ ತೆಗಿಯೋ, ಅದಕ್ಕ ಸಂಗಮನ ಹೆಸರಿಟ್ಬಿಡು. ಅದ ದೇವರೂಪವಾಗಿ ಸದಾ ನಿನ್ನ ಕೈಯಾಗ ಇಷ್ಟಲಿಂಗಾಗಿ ಪ್ರತಿಷ್ಠಾಪಿತಗೊಂಡ ಬಿಡತೈತಿ…
 ದೈವತ್ವದ ಕಲ್ಪನಾ ಇಷ್ಟು ಸರಳಗೊಂಡಿದ್ದು ಬಸವಾದಿ ಶರಣತ್ವದ ಹಾದಿಯೊಳಗನ. ಮತ್ ಅದು ಇಲ್ಲಿಂದಲೇ ವಿಶ್ವಪಥಕ್ಕೆ ಚಾಚಿಕೊಂಡಿದ್ದು.
ಶರಣು/ಸಲಾಂ ಅಂತಂದ್ರ ಸೋತು ಕೈಚೆಲ್ಲಿ ನಿಲ್ಲೂದಲ್ಲ... ಮನದೊಳಗಿನ ಎಲ್ಲಾ ಅಹಮಿಕೆ ಹೊರಚೆಲ್ಲಿ ಹುಟ್ಟಿಸಿದವನ ಮುಂದ ತಲೆಬಾಗಿ ವಿನಮ್ರತೆ ಸೂಚಿಸುವುದು. ಸುಂದರ, ಅರ್ಥಪೂರ್ಣ ಬದುಕು ಕಟ್ಟುವ ಶಕ್ತಿ ಕೊಡೋ ಮಾರಾಯಾ ಅಂತ ಪ್ರಾರ್ಥನೆ ಸಲ್ಲಿಸುವುದು. ಇದೇ ಧರ್ಮ. ಬದುಕಿನ ಮಾರ್ಗ. ಇದ ಅಲ್ಲೇನ್ರಿ  ಸೂಫಿ/ಬಸವನ ಮನೋಧರ್ಮ. ಸೂಫಿಗಳು, ಅನುಭಾವಿಗಳು ಹೇಳೂದೂ ಇಷ್ಟ - ಅಲ್ಲಾಹು ಅಂದ್ರ ದೇವ್ರು ಒಬ್ಬನ. ಅಡಿಗಡಿಗೆ ಅನ್ನವನಿಕ್ಕುವ ಅವನದು ನಿರಾಕಾರ.
* * *
 ಪ್ರಾರ್ಥನೆಗಳ ಜತೆ ನಿತ್ಯ ಕರ್ಮಾ ಮಾಡು. ನಿನ್ನ ಜೀವಶಕ್ತಿ ಎರಡಕ್ಕೂ ವ್ಯಯಿಸು. ಕಾಯಕದಿಂದ ಹೊಟ್ಟೆಗೆ ನಿಯತ್ತಿನ ಗಂಜಿ ಕಾಣು. ನ್ಯಾಯ, ನೀತಿ ಮತ್ತು ಧರ್ಮ... ಬೆನ್ನಿಗಿಟಗೊಂಡ ದುನಿಯಾದ ಸುಖಾ ಸೂರೆಗೊಳ್ಳಬೇಕೊ ತಮ್ಮಾ. ಎಂಥಾ ಕಷ್ಟ ಬೇಕಾರ ಬರ್ಲಿ ನೀ ಅಂಜಬ್ಯಾಡಾ. ದರ್ಗಾದ ಕಟ್ಟೀ ಮ್ಯಾಲ ಕಷ್ಟಾ ಚೆಲ್ಲಿ ನಿಶ್ಚಿಂತನಾಗಿರು. ಅಲ್ಲಾಹುವಿನ ಹತ್ರ ನಿನ್ನ ಪರವಾಗಿ ನಾ ಬೇಡಿಕೋತೀನಿ. ಕಷ್ಟಾ ದೂರಮಾಡಿ ಖುಷಿಯ ಭರವಸೆ ಮೂಡಿಸೋ ಏ ಅಲ್ಲಾಹು ಅಂತ ಅವಗ ಕೇಳ್ತಿನಿ. ಈಗ ಮಾಡಿದಟೂ ತಪ್ಪು ಮರತಬಿಡು, ಮುಂದಿನ ಹಾದಿಯೊಳಗ ನೀಯತ್ತು ಇಟಗೊಂಡ ಮುಂದುವರಿ. ತಪ್ಪುಗಳ ಪುನರಾವರ್ತನಾ ಮಾಡಬ್ಯಾಡಾ. ಇದ ಇಹ ಬದುಕು ಮತ್ ಪರಲೋಕದ ಬದುಕಿನ ಸರಳ ಮತ್ತು ಸುಲಭದ ಹಾದಿಯೋ ಬೆವಕೂಫಾ... ಅಂತ ದೊಡ್ಡ ದೊಡ್ಡ ಸೂಫಿಗಳು ಇಲ್ಲಿನ ದರ್ಗಾ, ಮಸೀದಿಗಳ ಮುಂದ ಯಾವತ್ತೋ ದುವಾ ಮಾಡಿಬಿಟ್ಟಾವ್ರೀ.
 ವಿಜಾಪುರದ ಯಾವ ಸ್ಮಾರಕವೇ ಇರಲಿ, ಪುರಾತನ ದರ್ಗಾ, ಮಸೀದಿಯೇ ಇರಲಿ ಅಥವಾ ಊರಿನ ಗಲ್ಲಿ ಗಲ್ಲಿಗಳಲ್ಲಿನ ದಿಲ್ ದಾರಿ ಜನಸಂಸ್ಕೃತಿಯೇ ಇರಲಿ ಅಲ್ಲೆಲ್ಲ ಧ್ವನಿಸುವ ಈ ಮನೋಧರ್ಮವೇ ಇಲ್ಲಿನವರ ಮಾನವೀಯತೆ ಮತ್ತು ಧರ್ಮಕ್ಕೆ ತಳಹದಿ.
ಮಾಡಿದ ತಪ್ಪೆಲ್ಲವನ್ನೂ ಮನ್ನಿಸಿಬಿಡುವ ನಂಬಿಕೆಗಳ ದೈವವೇ ಇಲ್ಲಿನ ಧರ್ಮ. ಇಲ್ಲಿ ಬಸವನ ಹಾದಿ, ಸೂಫಿಗಳ ದಾರಿ, ದಾಸರ ವಾಣಿ ಎಲ್ಲಾ ಒಂದ. ಅಲ್ಲಾ-ದೇವರು ಎಲ್ವೂ ಒಂದ. ಸಾಮರಸ್ಯದ ಸಾಥ್ ಇಲ್ಲಿಯವರ ನೆಮ್ಮದಿ ಕಾಪಾಡಿಕೊಂತನ ಬಂದೈತ್ರಿ. -ಇದೆಲ್ಲ ಸ್ಥಳೀಯರ ಸ್ಪಷ್ಟ ಮನೋಧರ್ಮ.
* * *
ಇಂಥ ಸಹಬಾಳ್ವೆ ಸಂಕಲ್ಪದ ಇಲ್ಲಿನ ಸ್ಮಾರಕಗಳು ನಂಬಿಕೆ ಮತ್ತು ಪ್ರೀತಿಯ ಬಹುದೊಡ್ಡ ಸಾಕ್ಷಿಪ್ರಜ್ಞೆಗಳು. ಇವು ಕಟ್ಟಿಕೊಡುವ ಸೌಹಾರ್ದದ ಭಾಷೆ ಅದ್ಭುತವೇ ಸರಿ.
* * *
ಮುಖ್ಯವಾಗಿ ಬಹಮನಿ, ಆದಿಲ್ ಶಾಹೀ ಅರಸರು ಬಹುಕಾಲ ಹಿಡಿದಿಟ್ಟುಕೊಂಡ ಈ ನೆಲದ ಮೇಲೆ ಅವರ ಮನುಷ್ಯ ಪ್ರೀತಿ ಇಮಾರತ್ತುಗಳ ಕುಸುರಿ ಕಲೆಯಲ್ಲಿ ಅಭಿವ್ಯಕ್ತಗೊಂಡಿದೆ. ವಾಸ್ತುಶಿಲ್ಪ ಒಂದು ಅದ್ಭುತ ಭಾಷೆಯಾಗಿ ನಿರಂತರ ಸಂವಹನಕ್ಕಿಳಿದಿದೆ. ಆದಿಲ್ ಶಾಹೀಗಳು ತಾವು ನಂಬಿಕೊಂಡ ಜೀವಮೌಲ್ಯದ ಧರ್ಮ, ಪ್ರೀತಿಸಿದ, ಜತೆಯಲ್ಲಿ ಬಾಳಿದವರ ನೆನಪುಗಳಿಗೆಲ್ಲ ಅವರು ಕೊಟ್ಟ ಗೌರವದ ರೂಪಗಳೇ ಇಂದು ಗೋಲ್ ಗುಂಬಜ್, ಇಬ್ರಾಹಿಂಪೂರ್ ರೋಜಾ, ತಾಸ್ ಬಾವಡಿ, ಉಪಲೀಬುರೂಜ್, ನವರಸಪುರ… ಹೀಗಾಗಿ ಇವೆಲ್ಲ ದೌಲತ್ತು, ದರ್ಬಾರಿನ ಪ್ರತೀಕಗಳಾಗಿ ಇಂದು ನಮ್ಮ ನಡುವಿಲ್ಲ. ಪ್ರೀತಿ, ಪ್ರೇಮ, ಧರ್ಮ ಕಲ್ಪನೆ ಮತ್ತು ಒಟ್ಟಾರೆ ಮನುಷ್ಯ ಬದುಕಿನ ಮುಖ್ಯ ಕಾಳಜಿಗಳನ್ನು ಸೂಸುವ ಸಂವೇದನೆಗಳಾಗಿವೆ.
 ಅಧಿಕಾರ, ಸಾಮ್ರಾಜ್ಯ ರಕ್ಷಣೆಗೆಂದು ಕಟ್ಟಿದ ಕೋಟೆಗಳೆಲ್ಲ ಅಲ್ಲಲ್ಲಿ ನೆಲಕ್ಕೆ ಕುಸಿದುಹೋಗಿವೆ.  ಅವರಾಗೇ ಅರಸೊತ್ತಿಗೆಯಿಂದ ನಿರ್ಗಮಿಸಿದ ರೀತಿಗೆ ಇವು ಸಾಕ್ಷಿಯಂತಿವೆ. ಕೋಟೆ ಕುಸಿಯಲೇಬೇಕು. ಆದರೆ ಬಾಳಿದ ಬದುಕು, ಜೀವಪ್ರೀತಿ ಸದಾ ಉಳಿಯಲೇಬೇಕು ಎನ್ನುವುದು ಬಹಮನಿಗಳ ಮನೋಧರ್ಮವೂ ಆಗಿತ್ತು. ಹೀಗಾಗಿ ಉಳಿದಿದ್ದು ಜೀವಪರ ಮನೋಧರ್ಮ ಹೇಳುವ ಸ್ಮಾರಕಗಳಷ್ಟೇ. ಕಟ್ಟಿದ ಒಂದೊಂದು ಇಮಾರತ್ ಗಳಲ್ಲಿ ಎಲ್ಲೂ ಯಾವುದೂ ಅತೀರೇಕವಿಲ್ಲ. ನಜರ್ ಅಂದಾಜ್ ಕೂಡ ಆಗಿಲ್ಲ. ಆಳುವವರಿಗೆ ನಾಡು ಕಟ್ಟುವುದು ಹೇಗೆಂದು ಹೇಳಿಕೊಡುವಂತಿವೆ.  ಈ ಅರ್ಥದಲ್ಲಿ ಇವೆಲ್ಲ ಮೂಕ ಸಾಕ್ಷಿಗಳಲ್ಲ. ನಿಜವಾದ ಸಾಕ್ಷಿಪ್ರಜ್ಞೆಗಳು.
* * * 
 ಸಮಕಾಲೀನ ಸಂದರ್ಭದ ವಿಜಾಪುರ ಕೊಂಚ ಭಿನ್ನವಾಗಿರಲೂಬಹುದು. ಸಹಜ ಕೂಡ. ಇಲ್ಲಿನ ಕೃಷ್ಣೆ, ಡೋಣಿ…. ಪಂಚ ನದಿಗಳೆಲ್ಲ ವಿಜಾಪುರದ ಸುತ್ತ ಉಲಿದಾಡಿವೆ. ಬರದ ಬಡತಕ್ಕೆ ನದಿ ನೆಲದ ಮೇಲೂ ನೋವಿನ ಧೂಳು ನರ್ತಿಸಿದ್ದಿದೆ. ಆ ನಂತರದ ನೆರೆಯಿಂದ ಉಕ್ಕಿ ಹರಿದ ನದಿಗಳಿಗೆ ಜನಜೀವನ ತತ್ತರಿಸಿದ್ದೂ ಇದೆ. 'ಅಭಿವೃದ್ಧಿ' ಸುನಾಮಿಗೆ ಸುತ್ತಲಿನ ನೂರೆಂಟು ಊರುಗಳು ಮುಳುಗಿದ್ದಿದೆ. ಬದುಕು ತೇಲುತ್ತ ಜೀವ ಹಿಡಕೊಂಡು ಮತ್ತೆ ನೆಲವನ್ನೇ ನಂಬುವಂತೆ ಮಾಡಿದೆ. ಬರದ ಬರೆಗೆ, ನೆರೆಯ ತಾಂಡವಕ್ಕೆ, ಅಭಿವೃದ್ಧಿ ಎನ್ನುವ ರೌರವಕ್ಕೆ, ರಾಜಕೀಯದ ನಿರ್ಲಕ್ಷ್ಯಕ್ಕೆ ಎದೆಗುಂದದೆ, ತಮ್ಮತನದಿಂದ ಜೀವಬಂಡಿ ಎಳೆಯುವ ತಾಕತ್ತು ಮಾತ್ರ ಇಲ್ಲಿನವರ ಬದುಕಿನಿಂದ ಮಾಯವಾಗಿಲ್ಲ. ಆಗೋದೂ ಇಲ್ಲ. ಒಂದೊಂದು ಮಹಾಕಾವ್ಯ, ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾಮರಸ್ಯದ ಪ್ರತೀಕಗಳಂತಿರುವ ಗೋಲಗುಂಬಜ್, ಉಪಲಿಬುರೂಜ್ ನೋಡಿ ಕಟ್ಟುವಿಕೆಯನ್ನು ಕಲ್ಪಿಸಿಕೊಳ್ಳುವ ಜನ, ಬರಿಯ ತಮ್ಮ ಕಟ್ಟಡವನ್ನಲ್ಲ, ಬದುಕನ್ನೇ ಸದೃಢವಾಗಿ ಕಟ್ಟಿಕೊಳ್ಳಬಲ್ಲರು. ಮನಸುಗಳ ಅರಳಿಸಿಕೊಳ್ಳಬಲ್ಲರು. ಅಂಥದೊಂದು ಪರಂಪರೆ ಆದಿಲ್ ಶಾಹೀ ಕಾಲದಿಂದ ಉಳಿದು, ಬೆಳೆದು ಬಂದಿದ್ದು ತಮಾಷೆಯಲ್ಲ.
* * *
 ಕೃಷ್ಣೆಯ ಒಡಲಿಗೆ ಕಟ್ಟಿದ ಅಣೆಕಟ್ಟೆ ಸುತ್ತಲಿನ ರೈತರ ಮುಗ್ಧ ನಗೆಗಳಿಗೆ ಹೊಸ ಹುರುಪು ತುಂಬಿದೆ. ಜತೆಗೆ ಬ್ಯಾಕ್ ವಾಟರ್ ಪ್ರತಾಪ ಕೆಲವರ ಬದುಕನ್ನೇ ದೈನೇಸಿ ಸ್ಥಿತಿಗೆ ತಂದಿದ್ದು  ಸುಳ್ಳಲ್ಲ. ಅಂತೂ ಬದಲಾವಣೆಯ ಕಾಲುವೆಗಳು ತೀರದ ಜನರ ಜೀವ ಪೈರಿಗೆ ಕಸು ತುಂಬತೊಡಗಿವೆ. ಈ 'ಜೀವಜಲ' ತನ್ನ ಸೀಮಿತ ವ್ಯಾಪ್ತಿ ಮೀರಿ, ಭೇದರಹಿತವಾಗಿ ಸರ್ವ ಜನಾಂಗದ ಭೂಮಿಗಳಿಗೂ ಹಬ್ಬಬೇಕಿದೆ. ಆಗ ಮತ್ತೆ ಬಹಮನಿಗಳ ಕಾಲದ ವೈಭವ ಕಳೆಕಟ್ಟತೊಡಗುವುದು ನಿಸ್ಸಂಧೇಹ. ಕಾಲದ ಒರತೆಯಲ್ಲಿ ಕಾಪಿಟ್ಟ  ದಿಲ್ ದಾರಿ ಜನಸಂಸ್ಕೃತಿ ಕೊಚ್ಚಿಹೋಗದಂತೆ ನವರಸಪುರ ದಲ್ಲಿ ಕವ್ವಾಲಿ, ವಚನ, ಶೇರೋ ಶಾಯರಿ, ಕಾವ್ಯ ಮೊಳಗಬೇಕಿದೆ. ಆದಿಲ್ ಶಾಹೀ  ಕಾಲದ ನೆನಪುಗಳ ಅಂಗಳದಲ್ಲಿ ಈ ಸಮಯದ ಝಣತ್ ಆ ಸಾಮರಸ್ಯವನ್ನು ಮಾರ್ದನಿಸಲೇಬೇಕಿದೆ.
* * *
 ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಸಮಕಾಲೀನ ಸಾಹಿತ್ಯ ಆದಿಲ್ ಶಾಹೀ ಕಾಲದ ಕಲೆ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯದಷ್ಟು ಸಮೃದ್ಧ, ಸಾಮರಸ್ಯಪೂರ್ಣ ಅಥವಾ ಜೀವಪರವಾಗಿದೆಯೇ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? ಕಾದು ನೋಡೋಣ. ಈ ನೆಪದಲ್ಲಿ ಮೂರು ದಿನಗಳ ಕಾಲ (2013ರ ಫೆಬ್ರುವರಿ 9,10 ಮತ್ತು 11) ಈ ದಿಲ್ ದಾರಿ ನಾಡಲ್ಲಿ ಜತೆಯಾಗಿ ಒಂದಷ್ಟು ಹೆಜ್ಜೆಹಾಕೋಣ. 
This writeup was Posted in my blog navraspur.wordpress.com on December 15, 2009.
Now I've revised this writeup in the context of upcoming Sahithya sammelana event and uploaded on my regular blog DILSE. I wel come you all to Bijapur.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...