ವಿಷಯಕ್ಕೆ ಹೋಗಿ

ಅತ್ಯಾಚಾರವೂ ಒಂದು ಅಸ್ತ್ರ!


ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ.
ಆದರೆ...




 "1998ರಲ್ಲಿ ಪುನರ್ ರೂಪಿಸಿದ ನನ್ನ ಆಸ್ಪತ್ರೆಗೆ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅವಳೇ ಆಸ್ಪತ್ರೆಯ ಮೊತ್ತಮೊದಲ ಹೊರರೋಗಿ. ಅತ್ಯಾಚಾರಿಗಳು ಆ ಹೆಣ್ಣು ದೇಹವನ್ನು ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ..
* * *
 ಈ ಪ್ರದೇಶದಲ್ಲಿ ಆಗಾಗ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳು ನಡೆಯುತ್ತಲೇ ಇದ್ದವು. ಇವುಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಒಂದು ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ಒಂದು ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಕೆಲವೇ ತಿಂಗಳಲ್ಲಿ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು.
* * *
 ಬರೋಬ್ಬರಿ ಮೂರು ತಿಂಗಳು ನಂತರ ಅದಕ್ಕೂ ಬರ್ಬರವಾದ ಪ್ರಕರಣವೊಂದು ನನ್ನ ಕಂಗೆಡಿಸಿತು. ಅದು ಸಾಮೂಹಿಕ ಅತ್ಯಾಚಾರದ ಪ್ರಕರಣ. ಅತ್ಯಾಚಾರಕ್ಕೊಳಗಾದ 45 ಹೆಂಗಸರು ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರೇ ಹೇಳಿದ್ದು ಇಷ್ಟು- 'ನಾವೆಲ್ಲ ಒಂದೇ ಗ್ರಾಮದವರು. ಇಡೀ ಗ್ರಾಮದ ಯಾವ ಹೆಂಗಸು, ಮಗುವನ್ನು ಬಿಡದೆ ಯುದ್ಧಕೋರರು ಅತ್ಯಾಚಾರ ಮಾಡಿದರು'.
* * *
 ಆಘಾತದ ಅಂಶವೆಂದರೆ ಈ ಎಲ್ಲ 45 ಹೆಂಗಸರ ಮರ್ಮಾಂಗಗಳ ಮೇಲೆ ಸುಟ್ಟ ಗಾಯಗಳಿದ್ದವು. ಇದೇನು!? ಎಂದು ನೋಡಿದಾಗ, ಅದು ಸುರಿಯಲ್ಪಟ್ಟ ಕೆಮಿಕಲ್ ನಿಂದ ಆದ ಗಾಯ ಎನ್ನುವುದು ತಿಳಿಯಿತು.  ಅತ್ಯಾಚಾರಿಗಳು ಹೆಣ್ಣುಗಳನ್ನು ಬಲಾತ್ಕಾರ ಮಾಡಿ, ಅವರ ಮರ್ಮಾಂಗಗಳ ಮೇಲೆ ಕೆಮಿಕಲ್ ಸುರಿದುಬಿಟ್ಟಿದ್ದರು!
* * *
 ಈ ಪ್ರಕರಣಗಳು ನನ್ನ ಆತ್ಮಾವಲೋಕನಕ್ಕೆ ಒಳಪಡಿಸಿಬಿಟ್ಟವು. ಇದು ಬರಿಯ ಯುದ್ಧದ ಬರ್ಬರತೆ ಅಷ್ಟೇ ಅಲ್ಲ.  ಒಂದು ಯುದ್ಧದ ಭಯಾನಕ ತಂತ್ರ. ಯುದ್ಧಕೋರರು/ದಾಳಿಕೋರರು ಅತ್ಯಾಚಾರವನ್ನೂ ಒಂದು ಪ್ರಬಲ ಅಸ್ತ್ರವಾಗಿ ಬಳಸುತ್ತಿರುವ ಹೀನ ಪರಿ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿತು.
* * *
 ಇಡೀ ಹಳ್ಳಿಯ ಹೆಣ್ಣುಗಳನ್ನು ಎಲ್ಲರ ಮುಂದೆ ಸಾಮೂಹಿಕ ಅತ್ಯಾಚರಕ್ಕೊಳಪಡಿಸಿ ಜನರಲ್ಲಿ ಭೀತಿ ಹುಟ್ಟಿಸುವ ತಂತ್ರವಿದು. ಈ ಬರ್ಬರತೆಗೆ ಹೆದರಿ ಹಳ್ಳಿಗರೆಲ್ಲ ತಮ್ಮ ಮನೆ, ತೋಟ, ಗದ್ದೆ ಮತ್ತು ಬದುಕಿನ ನೆಲೆಗಳನ್ನೆಲ್ಲ ಬಿಟ್ಟು ಗುಳೆ ಹೋಗುವಂತೆ ಮಾಡುವ ವ್ಯವಸ್ಥಿತ ತಂತ್ರವಿದು ಅನಿಸಿ ತುಂಬ ಹಿಂಸೆಯಾಯಿತು.
 ಆಗಲೇ ನನ್ನ ಒಟ್ಟು ಕಾರ್ಯಾಚರಣೆ ಬೇರೆಯದೇ ದಿಕ್ಕಿನತ್ತ ಸಾಗಬೇಕೆನಿಸಿತು. ಇಂಥದಕ್ಕೊಂದು ಅಂತ್ಯ ಹಾಡುವಂತೆ ವಿಶ್ವಸಮುದಾಯವನ್ನು ಪ್ರೇರೇಪಿಸುವುದು ಮುಖ್ಯ ಗುರಿಯಾಯ್ತು. ನನ್ನ ದೃಷ್ಟಿಕೋನ ಸಮಗ್ರ ಪರಿಹಾರಗಳತ್ತ ನೆಟ್ಟಿತ್ತು.
* * *
 ಹೀಗಾಗೇ ಮೊದಲು ಅತ್ಯಾಚಾರಕ್ಕೊಳಗಾದ ಹೆಣ್ಣುಗಳಲ್ಲಿ ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಪುಟಿದೇಳುವ ಹುಮ್ಮಸ್ಸು ಇದೆಯಾ ಎನ್ನುವುದರ ಮನೋವೈಜ್ಞಾನಿಕ ಪರೀಕ್ಷೆ ನನಗೆ ಮುಖ್ಯವೆನಿಸಿತು. ಮುಂದಿನ ಹಂತದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯತ್ತ ಗಮನ ಹರಿಸುವುದು. ಮೂರನೇಯ ಹಂತವಾಗಿ ಅವರ ಸಮಾಜೋ-ಆರ್ಥಿಕ ಆಯಾಮಗಳ ಮೇಲೆ ಗಮನ ವಹಿಸುವುದು ಮುಖ್ಯವೆನಿಸಿತು. ಏಕೆಂದರೆ ಆಸ್ಪತ್ರೆ ಸೇರುವಾಗ ಎಷ್ಟೋ ಮಹಿಳಾ ರೋಗಿಗಳ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ.! ಅವರನ್ನು ಒಂದಷ್ಟು ಕಾಲ ನೋಡಿಕೊಳ್ಳಬೇಕು. ಅವರಿಗೆ ಅನ್ನ, ಆಹಾರ, ಬಟ್ಟೆ ಒದಗಿಸಬೇಕು. ಇದರ ಜತೆಗೆ ಮುಖ್ಯವಾಗಿ ಚೇತರಿಸಿಕೊಂಡವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡುವಷ್ಟೊತ್ತಿಗೆ ಅವರಲ್ಲಿ  ಬದುಕು/ಸಮಾಜವನ್ನು ಎದುರಿಸುವ ಮಾನಸಿಕ ಸ್ಥೈರ್ಯ ತುಂಬಬೇಕು.
 ನಾಲ್ಕನೆಯ ಹಂತವಾಗಿ ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಗುರುತಿಸಬಲ್ಲವರಾಗಿದ್ದರೆ ಅಂಥ ಆಕ್ರಮಣಕೋರರ ಮೇಲೆ ಕಾನೂನುಬದ್ಧ ಹೋರಾಟ ನಡೆಸುವುದಕ್ಕೆ ಅವರಿಗೆ ಕಾನೂನು ನೆರವು ಒದಗಿಸುವುದು ಕೂಡ ಆಗಬೇಕು...
* * *
 ಹೀಗೆ ನನ್ನ ಆಲೋಚನೆಗಳು ಕಾರ್ಯರೂಪಕ್ಕಿಳಿದು ಯಶಸ್ವಿಯಾದವು. ಅಂತೂ 2011 ರಲ್ಲಿ ಇಂಥ ಅತ್ಯಾಚಾರದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತ ಬಂದಿತು. ಹಲವು ಶಾಂತಿ ಸಂಧಾನಗಳಿಂದ ಇದೆಲ್ಲ ಸಾಧ್ಯವಾಗಿತ್ತು. ಇಡೀ ಪ್ರದೇಶದ ತುಂಬ ನೆಮ್ಮದಿ ನೆಲೆಗೊಳ್ಳತೊಡಗಿದೆ ಎನ್ನುವಾಗಲೇ ಮತ್ತಷ್ಟು ಅತ್ಯಾಚಾರದ ಪ್ರಕರಣಗಳು ಕಳೆದ ವರ್ಷ (2012) ಹೆಡೆಬಿಚ್ಚಿಕೊಂಡವು. ಮತ್ತೆ ಅದನ್ನು ಯುದ್ಧ ಸಂಬಂಧಿ ವಿದ್ಯಮಾನಗಳೆಂದು, ಜನಾಂಗಿಕ ಕಲಹಗಳ ಪರಿಣಾಮವೆಂದು ವ್ಯಾಖ್ಯಾನಿಸುವುದು ನಡೆಯಿತು.  ಈಗಲೂ ಹಾಗೇ ವ್ಯಾಖ್ಯಾನಿಸಲಾಗುತ್ತಿದೆ.
* * *
 ವಾಸ್ತವಾಗಿ ಇದು ದೇಶಗಳ ನಡುವಿನ ಯುದ್ಧವಲ್ಲ. ಧರ್ಮಗಳ ನಡುವಿನ ಸಂಘರ್ಷವಂತೂ ಅಲ್ಲವೇ ಅಲ್ಲ. ಇದು ಆರ್ಥಿಕ ಹಿತಾಸಕ್ತಿಗಳು ಕಲಹ ಸೃಷ್ಟಿಸಿ, ಸಂಘಟಿಸುತ್ತಿರುವ ಯುದ್ಧ! ಹೆಣ್ಣು ದೇಹಗಳ ಮೇಲೆ ಅತ್ಯಾಚಾರದ ಅಸ್ತ್ರಗಳು ನರ್ತಿಸುವಂತೆ ಮಾಡುವ ಮೂಲಕ ನಡೆಸಲ್ಪಡುತ್ತಿರುವ ಆರ್ಥಿಕ ಹಿತಾಸಕ್ತಿಯ ಯುದ್ಧ! ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈಗಲೂ ಇಂಥ ಯುದ್ಧ ಜಾರಿಯಲ್ಲಿದೆ."
* * *
-ಇದು ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಹೆಸರಾಂತ ಗೈನೊಕಾಲಜಿಸ್ಟ್ ಡಾ. ಡೆನಿಸ್ ಮುಕ್ವೇಜ್ ಬಿಚ್ಚಿಟ್ಟ ಕಾಂಗೋದ ಜ್ವಲಂತ ಚಿತ್ರಣ. ಈ ಡಾ. ಡೆನಿಸ್ ಮುಕ್ವೇಜ್ ತಮ್ಮ ತಂಡದೊಂದಿಗೆ ಈತನಕ ಅತ್ಯಾಚಾರಕ್ಕೊಳಗಾದ 30 ಸಾವಿರ ಹೆಣ್ಣುಗಳಿಗೆ ಚಿಕಿತ್ಸೆ ನೀಡಿದವರು. "ಕಳೆದ 16 ವರ್ಷಗಳಿಂದ ಕಾಂಗೋದಲ್ಲಿ ನಡೆಯುತ್ತಿರುವ ಈ ಹಿಂಸೆಗೆ ಮೂಕಪ್ರೇಕ್ಷಕವಾದ ವಿಶ್ವಸಮೂದಾಯಕ್ಕೆ ಏನೆಂದು ಹೇಳಲಿ?" ಎಂದು ವಿಶ್ವಸಂಸ್ಥೆಯ 2012ರ ಸಭೆಯಲ್ಲಿ ಗುಡುಗಿದ್ದೂ ಇದೇ ಡಾ. ಡೆನಿಸ್ ಮುಕ್ವೇಜ್.
* * *
ನಮ್ಮ ದೆಹಲಿಯಲ್ಲಿ, ದೇಶದ ತುಂಬ ಮತ್ತು ಮನೆ ಮನೆಗಳಲ್ಲಿ ಹೆಣ್ಣುಗಳ ಮೇಲೆ, ಅಮಾಯಕ ಬಾಲೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಯಾವ ಮುಖವಿದೆ? ಅದಕ್ಕೆ ಯಾವ ಪ್ರೇರಣೆ? ಆರ್ಥಿಕದ್ದಾ? ಮಾನಸಿಕ ಅಧೋಗತಿಯದಾ?  ಅಹಂಕಾರದ್ದಾ?
ನಮ್ಮಲ್ಲಿ ಇಂಥ ಅಮಾನವೀಯ ಕೃತ್ಯಗಳ ಹಿಂದಿನ ಕಾರಣಗಳ ಹುಡುಕಾಟಗಳಾಗಲಿ, ಅಧ್ಯಯನಗಳಾಗಲಿ ನಡೆಯುತ್ತವಾ? ಹುಡುಕಿದರೂ ಇಂಥದ್ದರ ವಿರುದ್ಧ ಅರ್ಥಪೂರ್ಣ ಮರುಯುದ್ಧ ಸಾರಬಲ್ಲ  ಡಾ. ಡೆನಿಸ್ ಮುಕ್ವೇಜ್ ಅಂಥ ಒಬ್ಬನಾದರೂ ಸಿಕ್ಕುತ್ತಾರಾ?
(ಇದು ಒಂದೆಡೆ ಓದಿದ್ದು. ಅದನ್ನಿಲ್ಲಿ ಹಂಚಿಕೊಂಡೆನಷ್ಟೇ.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...