ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ-2

ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ  ಉಸಿರೇ ಆಗಿ ಹೋಗಿತ್ತು.  ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು.
'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.

 ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು.
ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತು. ಆದರೂ ಆ ಬಗ್ಗೆ ಯಾರೂ ಯಾರ ಬಳಿಯೂ ಪ್ರಸ್ತಾಪಿಸುತ್ತಿರಲಿಲ್ಲ. ಯಾಕೆಂದರೆ ಅಮ್ಮಾ ಇದನ್ನು ಸಹಿಸುತ್ತಿರಲಿಲ್ಲ.  ಈ ನಿಜ ಸಂಗತಿಯನ್ನು ಹೊರಜಗತ್ತಿನಿಂದ ಆದಷ್ಟು ಮುಚ್ಚಿಡುವುದಕ್ಕೇ ಎಲ್ಲ ಯತ್ನಿಸುತ್ತಿದ್ದರು. ಯಾರಾದರೂ ಅಕಸ್ಮಾತ್ ಈ ಬಗ್ಗೆ ಪ್ರಸ್ತಾಪಿಸಿದರೆ ಅಮ್ಮಾ (ಅತ್ತೆ) ಮತ್ತು ಜಹೀರ್ ಮಾಮು ಮಾತು ಮರೆಸಿ, ಅದೊಂದು ನಿರಾಧಾರವಾದ ಊಹಾಪೋಹ ಅಷ್ಟೇ ಎಂದು ಸಾವರಿಸಲೆತ್ನಿಸುತ್ತಿದ್ದರು.
ಈ ಗೌಪ್ಯವನ್ನು ಕಾಪಾಡುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವೇನಿತ್ತು ಎನ್ನುವುದೇ ನನಗರ್ಥವಾಗದ ಪ್ರಶ್ನೆಯಾಗಿತ್ತು. ಸಯೀದ್ ಭಾಯಿಜಾನ್ ಅವರು ನಾಲ್ಕು ವರ್ಷದವರಿದ್ದಾಗಲೇ ಅವರನ್ನು ಮುಂಬೈಗೆ ಕರೆತರಲಾಗಿತ್ತು. 1961ರಲ್ಲಿ ಅವರನ್ನು ಲಂಡನ್ ಗೆ ಕಳುಹಿಸಿಕೊಡುವವರೆಗೆ ಅಮ್ಮಾ ಮತ್ತು ಅಬ್ಬಾ ಜತೆಗೇ ಅವರು ಬೆಳೆದಿದ್ದರು. ಕೊನೆಗೆ ಲಂಡನ್ ನಲ್ಲೇ ನೆಲೆಯೂರಿದರು.

 ರಫೀ ಹಾಡುಗಳು ರೇಡಿಯೋ ಲಾಹೋರಿನಲ್ಲಿ ಬಿತ್ತರಗೊಳ್ಳತೊಡಗಿದ್ದವು. ಸಮುದಾಯದ ಜನ ಅಭಿಮಾನದಿಂದ ಹಾಡುಗಳನ್ನು ಆಲಿಸಲರಾಂಭಿಸಿದರು. ತುಂಬ ಹೆಮ್ಮೆಯಿಂದ ಗಾಯನ ಸವಿಯುತ್ತಿದ್ದರು. ಆಗಿನ ಹೆಸರಾಂತ ಸಂಗೀತ ನಿರ್ದೇಶಕ ಶ್ಯಾಂ ಸುಂದರ ಕೂಡ ರೇಡಿಯೋ ಲಾಹೋರ್ ಮೂಲಕ ಇವರ ಹಾಡುಗಳನ್ನು ಆಲಿಸುತ್ತಿದ್ದರು. ಪಂಜಾಬಿ ಚಿತ್ರವೊಂದರಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ಪ್ರಥಮ ಬಾರಿಗೆ ಅದರಲ್ಲೂ ಪಂಜಾಬಿ ಚಿತ್ರಕ್ಕೆ (ಚಿತ್ರದ ಹೆಸರು ಗುಲ್ ಬಲೋಚ್) ರಫೀ ದನಿ ನೀಡಿದರು. 1941, ಫೆಬ್ರುವರಿ 28ರಂದು ಈ ಹಾಡಿನ ಧ್ವನಿಮುದ್ರಣ ಕಾರ್ಯ ನಡೆದಿತ್ತು. ’ಸೋನಿಯೇ ನಿ ಹೀರಿಯೇ ನಿ, ತೇರಿ ಯಾದ್ ಸತಾಯಾ’ ಎನ್ನುವುದು ಹಾಡಿನ ಸಾಹಿತ್ಯ. ಹಾಡು ತುಂಬ ಜನಪ್ರಿಯಗೊಂಡಿತು. ರಫೀ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಹಾಡುಗಾರಿಕೆಯ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರತೊಡಗಿದವು. ಹೆಸರಾಂತ ನಟ, ನಿರ್ಮಾಪಕ ನಾಸಿರ್ ಖಾನ್ ಕೂಡ ಈ ಹಾಡನ್ನು ಕೇಳಿ ತುಂಬ ಮೆಚ್ಚಿಕೊಂಡಿದ್ದರು. ತನ್ನೊಂದಿಗೆ ಮುಂಬೈಗೆ ಬರುವಂತೆ ಅಬ್ಬಾಗೆ ಸೂಚಿಸಿದರು.
ಅಬ್ಬಾ ಮುಂಬೈಗೆ ಹೊರಡಲು ನಿರ್ಧರಿಸಿಬಿಟ್ಟರು. ಅವರಿಗೆ ಕುಟುಂಬದ ಅನುಮತಿ ಬೇಕಿತ್ತಷ್ಟೇ. ತುಂಬ ಕಷ್ಟಪಟ್ಟು ಅನುಮತಿ ಗಿಟ್ಟಿಸಿಕೊಂಡರು ಕೂಡ. ಮೊಹಮ್ಮದ್ ದೀನ್ ಅವರಿಗೊಬ್ಬ ಸ್ನೇಹಿತನಿದ್ದ. ಹೆಸರು ಹಮೀದ್. ಅಬ್ಬಾಗಿಂತ ತುಂಬ ಹಿರಿಯ. ಅಬ್ಬಾ ಪ್ರತಿಭೆಯ ಬಗ್ಗೆ ಹಮೀದ್ ಗೆ ತುಂಬ ಗೌರವಾದರ. ಈ ಯುವ ಹಾಡುಗಾರನ ಬಗ್ಗೆ ಹಮೀದ್ ತುಂಬ ಮುತುವರ್ಜಿ ವಹಿಸುತ್ತಿದ್ದರು. ಈಗ ಒಂದೇ ಪ್ರಶ್ನೆ. ಈ ಸಂಭಾವಿತ ಮತ್ತು ಮುಜುಗರದ ಯುವಕನನ್ನು ಒಂಟಿಯಾಗಿ ಮುಂಬೈಗೆ ಹೇಗೆ ಕಳುಹಿಸಿಕೊಡುವುದು? ಹಮೀದ್ ಭಾಯ್ ಬುದ್ಧಿವಂತ ಮತ್ತು ಅಷ್ಟೇ ಚುರುಕಾದ ವ್ಯಕ್ತಿ. ಅವನೊಟ್ಟಿಗೆ ಕಳುಹಿಸುವುದು ಸೂಕ್ತವೆಂದುಕೊಂಡ ಮೊಹಮ್ಮದ್ ದೀನ್, ಹಾಗೇ ಮಾಡಿದರು. ಅಬ್ಬಾನನ್ನು ಹೀಗೆ ಬೀಳ್ಕೊಡುವುದಕ್ಕೆ ಇಷ್ಟವಿರಲಿಲ್ಲವಾದರೂ ಭಾರದ ಮನಸಿನೊಂದಿಗೆ ಅವರ ತಂದೆ ಅಂತೂ ಬೀಳ್ಕೊಡಲು ಲಾಹೋರ್ ರೈಲ್ವೆ ಸ್ಟೇಷನ್ ವರೆಗೂ ಬಂದರು. ಅವರು ಆ ಸಂದರ್ಭದಲ್ಲಿ ಮುಲಾಜೇ ಇಲ್ಲದೆ ಹೇಳಿದ್ದು ಒಂದೇ ಒಂದು ಮಾತು- "ಸಾಧನೆ ಮಾಡದೇ ಹೋದರೆ ಇಲ್ಲಿಗೆ ವಾಪಸ್ ಬರಲೇಬೇಡ. ನನಗೊಬ್ಬ ರಫೀ ಎನ್ನುವ ಮಗನಿದ್ದ ಅನ್ನೋದನ್ನೇ ಮರೆತು ಬಿಡುತ್ತೇನೆ".
 1942ರಲ್ಲಿ ಅಬ್ಬಾ ಮುಂಬೈ ಸೇರಿದರು. ಅವರ ಬದುಕಿನ ಎರಡನೇ ಮಜಲು ಆರಂಭಗೊಂಡಿತು. ತುಂಬ ನಿರೀಕ್ಷೆಗಳನ್ನಿಟ್ಟುಕೊಂಡು ಅವರು ಮುಂಬೈಗೆ ಬಂದಿದ್ದರು. ಅವರ ಸಮಕಾಲೀನರು ಆಗಲೇ ದೊಡ್ಡ ಗಾಯಕರಾಗಿ ಹೆಸರಾಗಿದ್ದರು. ಕೆ.ಎಲ್. ಸೈಗಲ್, ಪಂಕಜ್ ಮಲಿಕ್, ಖಾನ್ ಮಸ್ತಾನಾ ಮತ್ತು ಜಿ.ಎಂ. ದುರಾನಿಯಂಥ ಘಟಾನುಘಟಿಗಳಿದ್ದರು. ಇವರೊಂದಿಗೆ ಮುಖೇಶ್ ಜೀ, ತಲತ್ ಮೆಹಮೂದ್ ಸಾಹೇಬ್, ಮನ್ನಾಡೇ ಮತ್ತು ಕೆಲವೇ ಅವಧಿಯ ನಂತರದಲ್ಲಿ ಕಿಶೋರ್ ಕುಮಾರ್ ಮತ್ತಿತರರು ಕೂಡ ಹಿನ್ನೆಲೆ ಗಾಯನ ರಂಗಕ್ಕೆ ದಾಪುಗಾಲಿಟ್ಟಿದ್ದರು. ಅಬ್ಬಾ ಸಂಗೀತಾಭ್ಯಾಸದ ಹಿನ್ನೆಲೆ ಇರುವವರು. ಗಾಯನದಲ್ಲಿ ಅವರಿಗೆ ತುಂಬ ಹಿಡಿತವಿತ್ತು. ಆದರೂ ಸಿನಿಮಾ ಹಿನ್ನೆಲೆ ಗಾಯನಕ್ಕೆ ಬರುವ ನಿರೀಕ್ಷೆಗಳು ಅವರಿಗಿರಲಿಲ್ಲ. ಉಸ್ತಾದ ರಿಂದ ಕಲಿತ ರಾಗಗಳ ಅಪಾರವಾದ ಜ್ಞಾನ ಅವರಲ್ಲಿತ್ತು. ದರ್ಬಾರಿ, ಮಾಲಕಂಸ, ಪಹಾಡಿ ಮತ್ತಿತರ ರಾಗಗಳ ಬಗ್ಗೆ ಆಳವಾದ ಆಸಕ್ತಿ ಮತ್ತು ಅಧ್ಯಯನ ಹೊಂದಿದ್ದರು. ಠುಮ್ರಿ, ಗಜಲ್ ಮತ್ತು ವೆಸ್ಟರ್ನ್ ಸಂಗೀತದ ಬಗ್ಗೆಯೂ ಪ್ರಾವಿಣ್ಯ ಹೊಂದಿದ್ದರು.
ಕೆ.ಎಲ್. ಸೈಗಲ್ ಅವರಂಥ ದಿಗ್ಗಜರಿರುವ ಗಾಯನಲೋಕದಲ್ಲಿ ತಮ್ಮ ಗುರಿ ಮುಟ್ಟುವುದಕ್ಕೆ ಅಬ್ಬಾಗೆ ದೊಡ್ಡ ಸವಾಲೇ ಎದುರಿಗಿತ್ತು. ಚಿತ್ರರಂಗದಲ್ಲಿ ಆಗ ಸೈಗಲ್ ಅವರ ಗಾಯನ ಶೈಲಿ ತುಂಬ ಪ್ರಭಾವಿಯಾಗಿತ್ತು. ಪ್ರತಿಯೊಬ್ಬ ಹಾಡುಗಾರ ಅವರ ಶೈಲಿಯನ್ನು ಅನುಕರಿಸಲು ಹೆಣಗುತ್ತಿದ್ದ. ಸಂಗೀತ ನಿರ್ದೇಶಕರೂ ಕೂಡ, ಹೊಸಬರು ಸೈಗಲ್ ಶೈಲಿಯನ್ನೇ  ಅನುಸರಿಸಲಿ ಎಂದು ಬಯಸುತ್ತಿದ್ದರು. ಸೈಗಲ್ ದನಿ ಹೊರತುಪಡಿಸಿದ ಯಾವ ಹೊಸ ದನಿಯನ್ನು ಕಲ್ಪಿಸಿಕೊಳ್ಳಲಾರದಷ್ಟು ಅವರ ಅಭಿಮಾನಿಗಳು ಪ್ರಭಾವಿತರಾಗಿದ್ದರು.
* * *
ನನ್ನ ಆ ಬಾಲ್ಯದ ದಿನಗಳ ನೆನಪು ಇನ್ನೂ ಹಚ್ಚ ಹಸಿರಾಗೇ ಇದೆ. ರೆಡಿಯೋ ಸಿಲೋನ್ ಬೆಳಿಗ್ಗೆ 9ರಿಂದ ಬಿತ್ತರಿಸುತ್ತಿದ್ದ ಹಳೆಯ ಹಿಂದಿ ಹಾಡುಗಳು ಜನಪ್ರಿಯವಾಗಿದ್ದ ದಿನಗಳವು. ಬಹುತೇಕ ಹಾಡುಗಳು ಕೆ.ಎಲ್. ಸೈಗಲ್ ಮತ್ತು ಪಂಕಜ್ ಮಲಿಕ್ ಅವರದ್ದೇ ಆಗಿರುತ್ತಿದ್ದವು. 'ಜಬ್ ದಿಲ್ ಹೀ ಟೂಟ್ ಗಯಾ, ಹಮ್ ಜೀಕರ್ ಕ್ಯಾ ಕರೇಂಗೆ... ಎನ್ನುವ ಸೈಗಲ್ ಹಾಡು, 'ಬಾಬುಲ್ ಮೋರಾ...’, 'ದುನಿಯಾ ರಂಗ್ ರಂಗೀಲಿ ಬಾಬಾ', 'ಕರೂ ಕ್ಯಾ ಆಸ್ ನಿರಾಸ್ ಭಾಯಿ' ಮತ್ತು ’ಚಲೇ ಪವನ ಕೀ ಚಾಲ್...' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಶ್ರೋತೃಗಳು ಮತ್ತೆ ಮತ್ತೆ ಕೇಳಬೆಕೆನಿಸುವ ಹಾಡುಗಳು ಇವಾಗಿದ್ದವು. ಆದರೆ ನನಗೆ ಈ ಹಾಡುಗಳಲ್ಲಿ ಅಂಥ ಆಸಕ್ತಿ ಇರಲಿಲ್ಲ. ಈ ಗಾಯಕರ ಧ್ವನಿ ಮತ್ತು ಶೈಲಿ ತುಂಬ ಏಕತಾನತೆಯಿಂದ ಕೂಡಿರುತ್ತಿತ್ತು.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ಕೂಡ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆ ಇರುವುದರಿಂದ ಮತ್ತು ಇದು ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ನಿರೂಪಣಾ ಶೈಲಿಗೊಳಪಡಿಸುವುದು ಬೇಡ ಅನಿಸಿತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...