ವಿಷಯಕ್ಕೆ ಹೋಗಿ

‘ಡಿಗ್ರೇಡ್‌’: ಒಂದು ಅದ್ಭುತ ರಾಜಕೀಯ ಲೇವಡಿ

ಚಿತ್ರ: ಡಿಗ್ರೇಡ್‌
Directed by- Arab and Tarzan
ಚಿತ್ರದ ನಿರ್ದೇಶಕರು ಅವಳಿ ಸಹೋದರರು.


ಸಮಾಜ ಅಥವಾ ಸಮುದಾಯಗಳೊಳಗಿನ ಸೊಕ್ಕು, ಸಹಜತೆ ಮತ್ತು ಆಸಕ್ತಿಗಳೇ ದೇಶದ್ದೂ ಆಗಿರುತ್ತದೆ. ಹಾಗೆಯೇ ದೇಶವೊಂದರ ಹಿಂಸೆ, ಅತಿರೇಕಗಳು ಅಲ್ಲಿನ ಸಮಾಜದ ಒಳಗಿನ ಹಿಂಸೆಯ ಲಕ್ಷಣಗಳನ್ನೇ ಹೋಲುತ್ತವೆ. ಇಂಥ ಲಾಕ್ಷಣಿಕ ಚಿತ್ರಣವನ್ನು ಅತ್ಯಂತ ಕಾಮಿಡಿಯಾಗಿ ಕಟ್ಟಿಕೊಡುವ ಚಿತ್ರ ‘ಡಿಗ್ರೇಡ್‌’. ದೇಶ, ಧರ್ಮ ಭಕ್ತಿಗಳ ಅತಿರೇಕ ಮತ್ತು ಪುಂಡುಗಾರಿಕೆಯನ್ನು ಮೆಲುದನಿಯಲ್ಲೇ ಲೇವಡಿಗೊಳಪಡಿಸುತ್ತದೆ.
ನಿರೂಪಣೆ ಚಿತ್ರದ ಹೈಲೈಟ್‌. ಸಹಜ ಚಿತ್ರಣಗಳಿಂದ ತೆರಕೊಳ್ಳುವ ‘ಡಿಗ್ರೇಡ್‌’ ಕ್ರಮೇಣ ಒಂದು ಪ್ರದೇಶದ ಸಮಾಜೋ-ರಾಜಕೀಯ ಕಾರ್ಟೂನ್‌ ಕಟ್ಟಿಕೊಡುತ್ತದೆ.
ಫಲಿಸ್ತಾನದ (ಪೆಲಿಸ್ಟೀನ್‌) ಗಾಝಾ ಪಟ್ಟಿಯಲ್ಲಿ ಅದೊಂದು ಬೇಸಿಗೆ ಕಾಲ, ಬ್ಯೂಟಿ ಪಾರ್ಲರ್‌ನಲ್ಲಿ ಹದಿಮೂರು ಹೆಣ್ಣು ಮಕ್ಕಳು ಸಿಂಗಾರಕ್ಕೆಂದು ಸೇರಿಕೊಂಡ ಸಂದರ್ಭವನ್ನಿಟ್ಟುಕೊಂಡು ಚಿತ್ರ ಶುರುವಾಗುತ್ತದೆ. ಮಧುಮಗಳಿಗೆ ಮೇಕ್‌ಅಪ್‌, ಆಂಟೀಗೆ ಬ್ಯೂಟಿ ಟಚ್‌ ಅಪ್‌, ಮಧ್ಯವಯಸ್ಸಿನ ಹೆಂಗಸಿಗೆ ಫೇಸಿಯಲ್‌.. ಇಲ್ಲಿ ಒಬ್ಬೊಬ್ಬರದು ಒಂದೊಂದು ಬ್ಯೂಟಿ ಕಾನ್ಸಿಯಸ್‌. ಈ ಗಿರಾಕಿಗಳನ್ನು ನಿಭಾಯಿಸಲು ಹೆಣಗುವ ಸಲೂನಿನ ಒಡತಿ ರಷ್ಯನ್‌ ಹೆಂಗಸು ವಿಕ್ಟೋರಿಯಾಗೆ ಬೇಗ ಸಲೂನ್‌ ಮುಚ್ಚಿ ಗಂಡನ ತೆಕ್ಕೆ ಸೇರುವ ಕಾತರ. ಮಂದಗತಿಯ ಅವಳ ಸಹಾಯಕಿ ಕ್ರಿಸ್ಟಿನಾಗೆ ಕೆಲಸದ ಮೇಲೆ ಗಮನವಿಲ್ಲ. ಸದಾ ತನ್ನ ಹುಚ್ಚುತನದ ಪ್ರಿಯಕರ ಏನಾದರೂ ಎಡವಟ್ಟು ಮಾಡಿಕೊಂಡಾನೆಂಬ ಭಯದಲ್ಲಿರುವಾಕೆ. ಅವನೋ ಸಿಂಹದ ಮರಿಯೊಂದನ್ನು ಎಗರಿಸಿ ಪಾರ್ಲರ್‌ ಮುಂದೆಯೇ ಕಟ್ಟಿ ಹಾಕಿದ್ದಾನೆ. ಈ ಸಿಂಹದ ಮರಿಯ ಹುಡುಕಾಟದಲ್ಲಿ ಗಾಝಾ ಸರ್ಕಾರ ಅರ್ಥಾತ್‌ ಹಮಾಸ್‌ (ಒಂದು ತೀವ್ರವಾದಿ ಗುಂಪು) ಇದೆ. ಯಾವುದೇ ಪರಿಸ್ಥಿತಿಯಲ್ಲಿ ಸಿಂಹದ ಮರಿ ಪತ್ತೇ ಹಚ್ಚುವುದು ಅದರ ಉದ್ದೇಶ. ಇದು ಸಿನಿಮಾದ ಅಸಲಿ ಪ್ಲಾಟ್‌.
ಸಿಂಹದ ಮರಿ ಪತ್ತೆಗಾಗಿ ನಡೆವ ಸೇನಾ ಕಾರ್ಯಾಚರಣೆಯಿಂದಾಗಿ ಸೃಷ್ಟಿಯಾಗುವ ಬಿಗುವಿನ ವಾತಾವರಣ, ಭೀಕರ ಗುಂಡಿನ ಕಾಳಗ, ಯುದ್ಧದಂಥ ಪರಿಸ್ಥಿತಿಯಿಂದಾಗಿ ಪಾರ್ಲರ್‌ ಒಳಗಿನ ಹೆಣ್ಣು ಮಕ್ಕಳು ಟ್ರ್ಯಾಪ್‌ ಆಗುತ್ತಾರೆ. ಇದು ಚಿತ್ರದಲ್ಲಿ ಕುತೂಹಲ ಹುಟ್ಟಿಸುವಂಥ ಮಹತ್ವದ ನಾಟಕೀಯ ತಿರುವು.
ಪಾರ್ಲರ್‌ ಅಣತಿ ದೂರದಲ್ಲಿ ಗುಂಡಿನ ಸುರಿಮಳೆ. ಜಟಾಪಟಿ, ಚಕಮಕಿ ನಡೆಯುತ್ತಿದ್ದರೆ ಇತ್ತ ಹೆಂಗಸರಿಗೆ ತಮ್ಮ ಹಣ್ಣಾದ, ಸುಕ್ಕು ಗಟ್ಟಿದ ಮೂತಿಗಳ ರಿಪೇರಿ ಅಥವಾ ಪ್ಯಾಚ್‌ಅಪ್‌ ಮಾಡಿಸಿಕೊಳ್ಳುವ ತವಕ. ಅಲ್ಲೊಬ್ಬ ಬಜಾರಿ. ಹೆಣ್ಣುಗಳ ಅಂತರಂಗದ ವಾಸ್ತವಕ್ಕೆ ಹತ್ತಿರದವಳು. ಮತ್ತೊಬ್ಬಾಕೆ ಮುಸ್ಲಿಂ ಹೆಂಗಸು. ಆಕೆ ತನ್ನೆಲ್ಲ ಸಾಂಸಾರಿಕ ಜಂಜಡ ಮತ್ತು ಸಂಕೀರ್ಣತೆಗಳ ನಡುವೆ ತನ್ನ ಇಸ್ಲಾಮಿಕ್‌ ಬದುಕನ್ನು ಬಿಟ್ಟುಕೊಡದವಳು. ಇಬ್ಬರ ನಡುವೆ ನಿರಂತರ ಮಾತಿನ ಜಟಾಪಟಿ. ಹೊರಗೆ ನಡೆಯುತ್ತಿರುವ ಯುದ್ಧಕ್ಕೂ ಇವರಿಗೂ ಏನೂ ಆಗಬೇಕಾದ್ದಿಲ್ಲವಾದರೂ ತಮ್ಮ ಬದುಕಿಗೆ ಸಂಬಂಧಪಟ್ಟವರು ಅದರಲ್ಲಿ ಸಿಕ್ಕಿ ಹಾಕಿಕೊಂಡಾರು ಎನ್ನುವ ಭಯ ಅವರನ್ನಾವರಿಸಿರುತ್ತದೆ. ಮುಸ್ಲಿಂ ಹೆಂಗಸಿಗೆ ಅಲ್ಲಾಹುವಿನ ಮೇಲಷ್ಟೇ ನಂಬಿಕೆ. ಪಾರ್ಲರ್‌ನ ಹೊರಗೆ ಪರಿಸ್ಥಿತಿ ತುಂಬ ನಾಜೂಕಾಗುತ್ತ ಅದು ಪಾರ್ಲರ್‌ ಒಳಗೂ ಆತಂಕ ಹೆಚ್ಚಿಸುವಾಗಲೂ ಅವಳು ಹೊತ್ತು ಹೊತ್ತಿನ ನಮಾಜು ಮಾತ್ರ ತಪ್ಪಿಸುವವಳಲ್ಲ. ಬಜಾರಿ ಹೆಂಗಸು ಎತ್ತುವ ಪ್ರಶ್ನೆಗಳಿಗೆ ಲೈಂಗಿಕಾಸಕ್ತಿಯ ಮಾತುಗಳಿಗೆ ಉಲ್ಲಸಿತಗೊಳ್ಳುವಳಾದರೂ ಅವೆಲ್ಲಕ್ಕೂ ಇಸ್ಲಾಮಿನಲ್ಲಿ ಉತ್ತರ ಹುಡುಕುವ ಯತ್ನ ಮಾಡುವಾಕೆ. ಇಬ್ಬರ ನಡುವಿನ ಸಂಭಾಷಣೆ ಮತ್ತು ಸಂವಾದದ ದೃಶ್ಯಗಳು ಕಚಗುಳಿ ಇಡುವಂಥವು. ಗಂಡನ ಜತೆ ಕಳೆದ ರಾತ್ರಿಗಳ ರಸ ನಿಮಿಷ ನೆನೆದು ತಮಾಷೆ ಮಾಡುವ, ಅನ್ಯ ಹೆಂಗಸರ ಗಂಡಂದಿರನ್ನು ಕಂಡು ಅವನು ನನಗೂ ಒಂದ್ಸಾರಿ ಸಿಗಬೇಕಿತ್ತು ಎನ್ನುವವರೆಗಿನ ಆ ಹೆಣ್ಣುಗಳ ಹಾದರದ ಹಂಬಲ ಇಲ್ಲಿ ಕಾಮಿಡಿಯಾಗಿದೆ! ಮಧ್ಯಪ್ರಾಚ್ಯ ರಾಷ್ಟ್ರಗಳ ಧಾರ್ಮಿಕ ಹಿಂಸಾ ವಿದ್ಯಮಾನಗಳನ್ನು, ಅಲ್ಲಿನ ಸರ್ಕಾರ ತನ್ನ ಪ್ರಜೆಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯ ಮನೋಧರ್ಮವನ್ನು ಮತ್ತು ಆ ಮೂಲಕ ಸೃಷ್ಟಿಯಾಗಿರುವ ಇಡೀ ವಿಷಮ ಸ್ಥಿತಿಯನ್ನು ಪಾರ್ಲ್‌ರ್‌ ಒಳಗಿನ ಘಟನೆಗಳಿಗೆ ಸಮೀಕರಿಸುವ ಒಂದು ಸೆಟೈರಿಕ್‌ ವಿಧಾನ ಈ ಚಿತ್ರವನ್ನು ಭಿನ್ನವಾಗಿಸಿದೆ. ನಿರ್ದೇಶಕರು ಇಡೀ ಚಿತ್ರವನ್ನು ಕಾಮಿಡಿಯಾಗಿಸುತ್ತಲೇ ಗಾಢ ವಿಷಾದತೆಯನ್ನೂ ಕಟ್ಟಿಕೊಡುತ್ತಾರೆ. ಚಿತ್ರ ಆ್ಯಕ್ಷನ್‌ ಪ್ಯಾಕ್‌ ಆಗುತ್ತಿದ್ದಂತೆ ಹೆಂಗಸರ ನಡುವಿನ ಮಾತಿನ ಚಕಮಕಿ ತುಂಬ ಆಸಕ್ತಿ ಮೂಡಿಸುತ್ತ ತನ್ನ ಸಟೈರಿಕ್‌ ಉದ್ದೇಶವನ್ನು ಸುಲಭವಾಗಿ ಈಡೇರಿಸಿಕೊಳ್ಳುತ್ತದೆ.
ತುಂಬ ಮೆಲು ದನಿಯ ಇಂಥ ಸಟೈರಿಕ್‌ ವಿಧಾನ, ಗಾಝಾ ಪೆಟ್ಟಿಯಲ್ಲಿ ಹೆಂಗಸರನ್ನು ಒಳಗೇ ಉಸಿರುಗಟ್ಟಿಸುವಂತೆ ಮಾಡಿರುವ ಸಮಾಜೋ-ಧಾರ್ಮಿಕ ಪರಿಸ್ಥಿತಿಯನ್ನು ಛೇಡಿಸುತ್ತದೆ. ಅನ್ಯ ಧರ್ಮಿಯರ ಸಹಜ ಬದುಕು, ಸ್ತ್ರೀಯರ ಸೌಂದರ್ಯ ಪ್ರಜ್ಞೆ ಕೂಡ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಗಂಡು-ಹೆಣ್ಣಿನ ಸಂಬಂಧಗಳ ವಿಷಯದಲ್ಲೇ ತುಂಬ ಹೇರಿಕೆಗಳಿವೆ. ಸ್ತ್ರೀಯರಿಗೆ ಲೈಂಗಿಕ ಅಭಿಲಾಷೆಗಳನ್ನು ನೇರವಾಗಿ ವ್ಯಕ್ತಪಡಿಸುವುದಾಗಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಲಿ ಇಲ್ಲಿ ಅಷ್ಟು ಸುಲಭ ಸಾಧ್ಯವಿಲ್ಲ. ತಮ್ಮ ಪಾಲಿಗೆ ಬಂದ ಗಂಡಸರನ್ನು ಅವರ ಅಗಾಧ ಮಿತಿಗಳೊಳಗೂ ಒಪ್ಪಿಕೊಂಡು ‘ಆದರ್ಶ‘ ಬದುಕು ಮುನ್ನಡೆಸಲೇಬೇಕಾದ ಅನಿವಾರ್ಯತೆಯಲ್ಲಿ ಇಲ್ಲಿನ ಹೆಂಗಸರಿದ್ದಾರೆ. ಕರ್ಮಠಿಗಳ ಇಂಥ ಹಲವು ಹುಸಿ ಆದರ್ಶಗಳನ್ನು ಗೇಲಿ ಮಾಡುವಲ್ಲಿ ಚಿತ್ರ ಅತ್ಯಂತ ಧೈರ್ಯ ಪ್ರದರ್ಶಿಸಿದೆ.
ಡೀಗ್ರೇಡ್‌ ಎನ್ನುವುದರರ್ಥ ಪಾರ್ಲರ್‌ ಅಥವಾ ಸಲೂನಿಗೆ ಸಂಬಂಧಿಸಿ ಹೇಳುವುದಾದರೆ ದಟ್ಟವಾದ ಕೂದಲುಗಳನ್ನು ಹಗುರಾಗಿಸುವುದು. ಕೂದಲು ಕಗ್ಗಂಟಾಗಿದ್ದನ್ನು ಸಡಿಸಲಗೊಳಿಸಿ ಒಪ್ಪವಾಗಿ ಕಾಣುವಂತೆ ಮಾಡುವುದು. ಇದನ್ನೇ ಮೆಟಾಫರ್‌ ಆಗಿಟ್ಟುಕೊಂಡು ಗಾಝಾದಲ್ಲಿ ನಡೆಯುತ್ತಿರುವ ಹಿಂಸೆ, ಅಂತಃಕಲಹ ಮತ್ತು ಯುದ್ಧಕ್ಕೆ ಸಣ್ಣ ಪರಿಹಾರ ಸೂಚಿಸಲು ‘ಡಿಗ್ರೇಡ್‌’ ಚಿತ್ರ ಯತ್ನಿಸುತ್ತದೆ.
ಚಿತ್ರದ ಕೊನೆಯಲ್ಲಿ ಗಿರಾಕಿಗಳ ಪೈಕಿ ಓರ್ವ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರೆ ಅದೇ ಸಮಯಕ್ಕೆ ಪಾರ್ಲರ್‌ನಿಂದ ಆಚೆಗಿನ ಹೊರಗಿನ ವಾತಾವರಣ ಸಂಕೀರ್ಣವಾಗತೊಡಗುತ್ತದೆ. ಒಂದಡೆ ಹೊಸ ಜೀವ ಹುಟ್ಟಿಗೆ ಚಡಪಡಿಸುತ್ತಿದ್ದರೆ ಮತ್ತೊಂದೆಡೆ ಈಗಾಗಲೇ ಹುಟ್ಟಿ ಬೆಳೆದವರು ವಿನಾಶಕ್ಕಾಗಿ ನಿರ್ಣಾಯಕ ಕಚ್ಚಾಟದಲ್ಲಿರುತ್ತಾರೆ. ಒಂದೆಡೆ ಮನುಷ್ಯ ಸಹಜ ಸೌಂದರ್ಯ ಪ್ರಜ್ಞೆ ತನ್ನ ಓರೆಕೋರೆಗಳನ್ನು ತಿದ್ದಿಕೊಂಡು ಒಪ್ಪವಾಗಲು ಹೆಣಗುತ್ತಿದ್ದರೆ ಮತ್ತೊಂದೆಡೆ ಧರ್ಮ ಮತ್ತು ಪ್ರತಿಷ್ಠೆಗಳು ಜನರ ಇರುವ ನೆಮ್ಮದಿಯನ್ನು ಕಡೆಗಣಿಸಿ ಪರಸ್ಪರ ಕಚ್ಚಾಟಕ್ಕೆಳೆಯುತ್ತಿವೆ. ಈ ಅಸಂಗತ ಸ್ಥಿತಿಯನ್ನು ಬಿಚ್ಚಿಡುವ ‘ಡಿಗ್ರೇಡ್‌’ ಚಿತ್ರ ಒಂದು ಅದ್ಭುತ ರಾಜಕೀಯ ಲೇವಡಿಯೂ ಹೌದು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...