ವಿಷಯಕ್ಕೆ ಹೋಗಿ

ದೃಶ್ಯಮಾಧ್ಯಮಕ್ಕೊಂದು ಅರ್ಥಪೂರ್ಣ ಮಾದರಿ ‘ಪೂರ್ವೋತ್ತರ ರಂಗೋತ್ಸವ’

ರಿಯ ಸಾಹಿತ್ಯಕ ಶಬ್ದ ಸೊಕ್ಕಿನ ಸಂಭಾಷಣೆಗಳಿಂದ ಸೊರಗುತ್ತಿರುವ ಕನ್ನಡ ರಂಗಭೂಮಿ ಮುಟ್ಟಿ ನೋಡಿಕೊಳ್ಳುವಂತೆ ‘ಪೂರ್ವೋತ್ತರ’ ರಂಗೋತ್ಸವದ ನಾಟಕಗಳ ಪ್ರಸ್ತುತಿ ಇತ್ತು. ರಂಗಭೂಮಿ ಅದ್ಭುತ ದೃಶ್ಯ ಮಾಧ್ಯಮ. ಮಾತುಗಳಿಗಿಂತ ದೃಶ್ಯಗಳ ಮೂಲಕ ವಸ್ತುವಿನ ಸಂವೇದನೆಗಳನ್ನು ರಂಗದ ಮೇಲೆ ಅಭಿವ್ಯಕ್ತಿಸುವ ವಿಶಿಷ್ಠ ಕಲಾಪ್ರಕಾರ. ಬಳಸಿದ ಪರಿಕರಗಳು, ಕಲಾತ್ಮಕ ಅಭಿವ್ಯಕ್ತಿಯ ಕಸಬುದಾರಿಕೆ ಏನೇ ಇರಲಿ. ನಾಟಕವೊಂದು ರಂಗಮುಖೇನ ಹೇಳಬೇಕಾದ್ದನ್ನು ದೃಶ್ಯಗಳಲ್ಲಿಯೇ ಹೇಳುವ ಸಾಧ್ಯತೆಗಳನ್ನು ರಂಗೋತ್ಸವ ಸ್ಪಷ್ಟಪಡಿಸಿತು. ಬರಿಯ ಸಂಭಾಷಣೆಗಳು, ಅದದೇ ರಂಗ ಸಂಗೀತದ ಸೋಗಲಾಡಿತನಗಳನ್ನು ನೋಡಿ, ಕೇಳಿ ಬೇಸತ್ತಿದ್ದ ಪ್ರೇಕ್ಷಕರಿಗೆ ದೃಶ್ಯದ ಅನನ್ಯ ಸ್ಪರ್ಶಾನುಭವ ನೀಡಿತು.



 ‘ಲೈಫ್‌ ಕ್ಯಾನ್ವಾಸ್‌’
ರಚನೆ ಮತ್ತು ನಿರ್ದೇಶನ: ಅಸೀಮ ಕುಮಾರ್‌ ನಾಥ್‌
ತಂಡ: ಸರ್ಸಾ. ಅಸ್ಸಾಂ
ಭಾಷೆ: ಅಸ್ಸಾಮಿ
ಉತ್ಸವದಲ್ಲಿ ನನ್ನ ತುಂಬ ಸೆಳೆದ ನಾಟಕ ‘ಲೈಫ್‌ ಕ್ಯಾನ್ವಾಸ್‌’. ಮನುಷ್ಯನ ಅಂತರಂಗದಲ್ಲಿರುವ ಒಂದು ಸ್ಮಶಾನ ಕುರುಕ್ಷೇತ್ರದ ಚಿತ್ರಣ ಇಡೀ ನಾಟಕದ ಜೀವಾಳ. ಪ್ರೀತಿ, ಪ್ರೇಮ, ಕಾಮ ಮತ್ತಿತರ ಅಭಿಲಾಷೆಗಳಿಂದ ಒಳಗೇ ನಡೆಯುವ ಅಂತಃಯುದ್ಧದ ಚಿತ್ರಣ ಕಟ್ಟಿಕೊಟ್ಟ ಬಗೆಯಲ್ಲಿ ಹಲವು ಹೊಸ ಸಾಧ್ಯತೆಗಳಿದ್ದವು. ಭಿನ್ನ ಲೈಟಿಂಗ್‌ವಿನ್ಯಾಸ, ಪರಿಕರಗಳ ಜತೆ ವಾಸ್ತವಿಕತೆಯನ್ನು ಅದೆಷ್ಟು ಸಾಧ್ಯವೊ ಅಷ್ಟು ಸಾಕಾರಗೊಳಿಸಿ ನಾಟಕ ಕಟ್ಟಿಕೊಟ್ಟ ಬಗೆ ನಿಬ್ಬೆರಗುಗೊಳಿಸುವಂತಿತ್ತು. ನನ್ನ ಮಟ್ಟಿಗೆ ಮೊದಲ ಇಂಥ ವಿಶೇಷ ಅನುಭವ.
ಜಿಬಿನ್‌, ಕೌಶಿಕ್‌, ಐಶ್ವರ್ಯ ಮತ್ತು ಅನಾಮಿಕ ಎನ್ನುವ ಗೆಳೆಯರ ನಡುವಿನ ಅಂತಃಸಂಬಂಧ, ಅಂತಃಬದುಕಿನ ಸುತ್ತ ಈ ನಾಟಕ ಬೆಳೆಯುತ್ತದೆ. ಜಿಬಿನ್‌ ಸಹಜತೆಗೆ ತುಡಿಯುತ್ತ ಇರುವಂತೆಯೇ ಅವನ ಸುತ್ತಲಿನದ್ದೆಲ್ಲವೂ ಸಂಕೀರ್ಣಗೊಳ್ಳುತ್ತಲೇ ಸಾಗುತ್ತದೆ. ಅವನೊಳಗಿನ ಹಿಂಸೆಯೆಲ್ಲ ರಂಗದ ಮೇಲೆ ಅನಾವರಣಗೊಳ್ಳುತ್ತ ಸಾಗುತ್ತದೆ. ಸುತ್ತಲಿನ ಎಲ್ಲ ವಿದ್ಯಮಾನಗಳಲ್ಲಿ ತಾನೇ ಇರುವ ಮತ್ತು ತನ್ನದೇ ಎಲ್ಲವೂ ನಡೆಯುತ್ತಿರುವುದಕ್ಕೆ ಪ್ರೇಕ್ಷಕನಾಗುತ್ತಾನೆ. ಸಮಾಜ ಬದುಕಿನ ವ್ಯವಸ್ಥೆಗಳೇ ಸಂಕೀರ್ಣ. ಸೈದ್ಧಾಂತಿಕ ಸಂಘರ್ಷಗಳು, ಫಿಲಾಸಫಿ ಎಲ್ಲವೂ ಮನುಷ್ಯ ಸೃಷ್ಟಿ ಮತ್ತು ಅದನ್ನು ಬದುಕುತ್ತಿರುವುದು ಅವನೇ. ಎಲ್ಲದರೊಳಕ್ಕೆ ಮನುಷ್ಯನೇ ಪ್ರವೇಶ ಮಾಡುವಂಥದು. ತನ್ನದೇ ಸೃಷ್ಟಿಗಳೊಂದಿಗೆ ಸಂವಾದ ಅಥವಾ ಅನುಸಂಧಾನ ನಡೆಸುವಂಥದು. ಅದು ಸಾಧ್ಯವಾಗದೇ ಹೋದರೆ ಮನುಷ್ಯ ಅಸಾಧ್ಯ ಒಳಸುಳಿಗಳು ಮತ್ತು ಒಳಸಂಕಟಗಳಿಗೆ ಬಲಿಯಾಗಿ ನರಳುತ್ತಾನೆ. ಇದು ಸಮಕಾಲೀನ ಸಮಾಜದ ಪ್ರತಿ ಮನುಷ್ಯನ ಚಿತ್ತಭಿತ್ತಿ.
ಬದುಕಿನ ರಹಸ್ಯಗಳು ಮತ್ತು ನಿಸರ್ಗದ ರಹಸ್ಯಗಳು ಬೇರೇನಲ್ಲ. ಅವು ಅಂತಃಸಂಬಂಧಿ. ಅಷ್ಟು ಸುಲಭಕ್ಕೆ ಅವುಗಳನ್ನು ಭೇದಿಸಲಾಗದು. ಅದೊಂದು ನಿರಂತರ ಪಯಣ. ಅಲ್ಲಿ ಕಂಡಿದ್ದು, ಸಿಕ್ಕಿದ್ದು ಎಲ್ಲವೂ ಒಂದು ಅನುಭವ ಅಷ್ಟೇ. ಅದರಾಚೆಗೂ ಬದುಕಿನ ಹರವಿದೆ, ವಿಸ್ತಾರವಿದೆ. ಇನ್ನೂ ಅದೆಷ್ಟೊ ಅನುಭವಗಳಿಂದ ಮನುಷ್ಯ ದೂರವೇ ಇದ್ದಾನೆ. ತನ್ನ ಮಿತಿಯಲ್ಲಿ ಅವನಿಗೆ ಸದ್ಯಕ್ಕೆ ದಕ್ಕಿದ್ದಿಷ್ಟೇ ಇರಬಹುದು. ಅಷ್ಟಕ್ಕೇ ಅವನ ನರಳಾಟ, ಒದ್ದಾಟ...
ಜಿಬಿನ್‌ ತನ್ನ ಸುತ್ತಲಿನ ಕೌಶಿಕ್‌, ಐಶ್ವರ್ಯ ಮತ್ತು ಅನಾಮಿಕ ನಡುವಿನ ಸಂಬಂಧಗಳನ್ನು ತನ್ನ ಆತ್ಮದ ಕಣ್ಣುಗಳಿಂದ ನೋಡುತ್ತಿರುವವನಂತೆ ಹೊರಗೇ ನಿಂತು ಅವರ ಅಂತರಂಗವನ್ನು ಹೊಕ್ಕು ಶೋಧ ಮಾಡುತ್ತಾನೆ. ಕೌಶಿಕ್‌ ಅಪಾರ ಮಟಿರಿಯಲಿಸ್ಟಿಕ್‌ ಜಿಂದಗೀಯ ವ್ಯಾಮೋಹಿ, ಐಶ್ವರ್ಯ ಸಿರಿ ಸಂಪತ್ತಿದ್ದರೂ ಸುಂದರ ಬದುಕನ್ನು ಹೊಂದುವ ಹಂಬಲದವಳು. ಆದರೆ ಅನಾಮಿಕಾಗೆ ತನ್ನ ದೇಹದ ಅಗತ್ಯಗಳನ್ನು ಹೊಂದುವುದರಲ್ಲೇ ಬದುಕಿನ ಆನಂದವನ್ನು ಕಾಣುವ ಆಸೆ! ಕೌಶಿಕ್‌ ಪ್ರೇಮ, ಕಾಮಗಳಿಗೆ ಐಶ್ವರ್ಯಳನ್ನು ಮತ್ತು ನಂತರದಲ್ಲಿ ಅನಾಮಿಕ ಜೊತೆ ಹೊಸ ಅನುಭವ ಹೊಂದಲು ಹವಣಿಸುವವನು. ಅದಕ್ಕಾಗಿ ಜಿಬಿನ್‌ ಕೊಲೆಗೂ ಯೋಚಿಸುವವನು. ಇವರೆಲ್ಲರು ತಮ್ಮ ಯತ್ನಗಳಲ್ಲಿ ಕಾಣುವ ಬದುಕಿನ ವಾಸ್ತವಗಳಿಗೆ ಜಿಬಿನ್‌ ಪ್ರೇಕ್ಷಕನಾಗುವ ಪರಿಯಲ್ಲಿ ಮನುಷ್ಯನ ಅಂತರಂಗದ ಶೋಧ ಯತ್ನವಿದೆ.
ತಾನು ಪ್ರೀತಿಸಿದ ಅಥವಾ ತೀವ್ರವಾಗಿ ಹಚ್ಚಿಕೊಂಡ ನೆನಪುಗಳು, ಅನುಭವಗಳು ಒಳಗೇ ತಿಂದು ಹಾಕುವಷ್ಟು ಹಿಂಸೆಗಿಳಿಯುವಾಗ ಮನುಷ್ಯನೊಬ್ಬನ ಅಂತರಂಗದ ಕ್ಷೋಭೆ ಎಂಥದು ಎನ್ನುವ ಕುತೂಹಲಕ್ಕೆ ದೃಶ್ಯ ಸಾಧ್ಯತೆ ತೋರಿಸಿಕೊಟ್ಟ ‘ಲೈಫ್‌ ಕ್ಯಾನ್ವಾಸ್‌’ ನಮ್ಮೊಳಗಿನ ಅರಿವಿನ ಹರವನ್ನು ಹಬ್ಬಿಸಿತು. ‘ಎನಿಥಿಂಗ್‌ ಯು ಇಮ್ಯಾಜಿನ್‌ ಈಸ್‌ ರಿಯಲ್‌’ ಎನ್ನುವ ಪಿಕಾಸೊ ಮಾತಿಗೆ ಸಾಕ್ಷಿಯಂತೆ ಇಲ್ಲಿನ ದೃಶ್ಯ ರೂಪಕಗಳು ಮಾತನಾಡಿದವು. ‘ಲೈಫ್‌ ಕ್ಯಾನ್ವಾಸ್‌’ನ ಇಂಥ ಫಿಲಾಸಫಿಕಲ್‌ ಅಥವಾ ಆಧ್ಯಾತ್ಮಿಕ ಅನುಸಂಧಾನದ ಒಟ್ಟಾರೆ ಯತ್ನಗಳು ನಮ್ಮನ್ನು ಒಂದು ವಿಭಿನ್ನ ಅನುಭವಕ್ಕೆ ಕೊಂಡೊಯ್ದವು.

ನವೋರ್‌
ರಚನೆ: ಮನೋಜ ಕುಮಾರ್‌ ದೀರೋಜ
ನಿರ್ದೇಶನ: ಶಹಿಮಲ್ಲಾ ಹಖೀ
ತಂಡ: ತಿವಾ ಧಖ್ಖ–ಸಂಸ್ಕೃತಿ ಚರ್ಚಾ ಸಮಿತಿ ಅಸ್ಸಾಂ
ಭಾಷೆ: ತಿವಾ
 ತಿವಾ ರಾಜಕುಮಾರ ನಾವೋರ್‌ ಮತ್ತು ಅತಿ ಬಡವನ ಮಗಳು ಸುಂದರಿ ಜಾಲಾಸ್ ನಡುವಣ ಪ್ರೇಮ ಪ್ರಕರಣ ಇದರ ಮೂಲ ವಸ್ತು. ಪ್ರೇಮ–ಪ್ರೀತಿಯ ದುರಂತ ಕಥನ. ವರ್ಗ ಸಂಘರ್ಷದ ಸಣ್ಣ ಕುತೂಹಲವನ್ನಿಟ್ಟುಕೊಂಡು ಈಶಾನ್ಯ ರಾಜ್ಯವೊಂದರ ಸ್ಥಳೀಯ ಸಮಾಜೋ–ರಾಜಕೀಯ ಸ್ಥಿತಿಯಲ್ಲಿ ಮನುಷ್ಯ ಪ್ರೀತಿ ಬದುಕನ್ನು ಇಟ್ಟು ನೋಡುವ ಯತ್ನವಿದು. ಮನೋಜ್ಞ ಕಥನ ಶೈಲಿಯಿಂದ ಮತ್ತು ಪಾತ್ರಗಳು ಸೂಸುವ ನವಿರು ಭಾವನೆಗಳು ಮತ್ತು ಪಾತ್ರಗಳ ನಡುವಿನ ಅಂತಃಸಂಬಂಧ ತುಂಬ ನಾಜೂಕಾಗಿ ಹೆಣೆದುಕೊಂಡಿದ್ದರಿಂದ ಪ್ರಯೋಗ ಅತ್ಯಂತ ಭಾವನಾತ್ಮಕವಾಗಿ ಹಿಡಿದಿಟ್ಟಿತು. ತುಂಬ ಸಹಜ ಮತ್ತು ಸರಾಗವೆನಿಸುವ ನಿರೂಪಣೆಗೆ ಸೂಕ್ತವಾದ ರಂಗವಿನ್ಯಾಸ ಕಲಾತ್ಮಕವಾಗಿತ್ತು. ದೃಶ್ಯಾಂತರಕ್ಕೆ ಅತ್ಯಂತ ಸುಲಭ ಎನ್ನುವಂಥ ವಿನ್ಯಾಸವದು. ಕಥೆ ಸಾಗುವ ಪರಿಸರವನ್ನು ಅದು ತುಂಬ ಸಹಜವೆಂಬಂತೆ ಕಟ್ಟಿಕೊಟ್ಟಿತು. ಹುಲುಮಾನವರು ಮತ್ತು ರಾಜವಂಶದ ನಡುವಿನ ವರ್ಗ ಸಂಘರ್ಷಕ್ಕೆ ಬ್ಯಾಕ್‌ಡ್ರಾಪ್‌ನಂತೆ ಇಡೀ ರಂಗವಿನ್ಯಾಸ ಕೆಲಸ ಮಾಡಿತು. ರಂಗದ ಎಡದಲ್ಲಿ ಹುಲುಮಾನವರನ್ನು ಸೂಚಿಸುವ ಬೆಳೆದು ನಿಂತ ಒಣ ಹುಲ್ಲು ಕಡ್ಡಿಗಳು ಮತ್ತು ಬಲಭಾಗದಲ್ಲಿ ರಾಜವಂಶದ ಲಾಂಛನ. ಅವುಗಳ ಮೇಲೆ ಆಗಾಗ ತೂರಿಬರುವ ಕೆಂಪು ಬೆಳಕು ಸಂಘರ್ಷದ ಕಿಡಿಗಳನ್ನು ಸೂಸುತ್ತಿತ್ತು. ಬೆಳಕಿನ ವಿನ್ಯಾಸ ಕೂಡ ಪ್ರಯೋಗವನ್ನು ದೃಶ್ಯ ಕಾವ್ಯವನ್ನಾಗಿಸುವಲ್ಲಿ ದೊಡ್ಡ ಕೊಡುಗೆ ನೀಡಿತೆದಂರೆ ಅತಿಶಯೋಕ್ತಿ ಅನಿಸುವುದಿಲ್ಲ.
ಪ್ರೇಮಿಗಳು ತಾವು ಕಲ್ಪಿಸಿಕೊಂಡ ಅಥವಾ ಹೊಂದಿದ ಗುರಿ ಮುಟ್ಟಲು ಸೃಷ್ಟಸಿಕೊಂಡ ಪ್ರೇಮದೋಣಿಯ ಚಿತ್ರಣ ಅತ್ಯಂತ ರೋಮ್ಯಾಂಟಿಕ್‌. ರಾಜಕುಮಾರನ ಪ್ರೇಮ ಬದುಕನ್ನು ಒಪ್ಪದ ರಾಜ ಕಡೆಗೆ, ಆ ಬಡವಿಯನ್ನು ಮದುವೆ ಆಗುವುದೇ ಆದರೆ ಒಂದು ರಾತ್ರಿಯೊಳಗೆ ದೊಡ್ಡ ದೋಣಿ ರೂಪಿಸುವಂತೆ ಕಠಿಣ ಷರತ್ತು ವಿಧಿಸುತ್ತಾನೆ. ಈ ಸವಾಲನ್ನು ಸ್ವೀಕರಿಸುವ ರಾಜಕುಮಾರ ರಾತ್ರಿಯಿಡಿ ಕಷ್ಟಪಟ್ಟು ಕಾಡು ಬೆಟ್ಟಗಳ ಅಲೆದು ಕಟ್ಟಿಗೆ ಕೂಡಿಸಿ ದೋಣಿ ರೂಪಿಸಲು ಅಣಿಯಾಗುತ್ತಾನೆ. ಅರ್ಧ ಕೆಲಸ ಮಗಿಯುವಷ್ಟೊತ್ತಿಗೆ ಬೆಳಕಾಗುತ್ತದೆ. ಸವಾಲು ಸಾಧಿಸುವಲ್ಲಿ ವಿಫಲನಾದೆನೆಂದುಕೊಂಡ ರಾಜಕುಮಾರ ನೈತಿಕವಾಗಿ ಸೋಲೊಪ್ಪಿಕೊಂಡು ರಾಜ್ಯವನ್ನೇ ತೊರೆದು ಕಣ್ಮರೆಯಾಗುತ್ತಾನೆ. ಇಷ್ಟು ಕಥನವನ್ನು ಮನೋಜ್ಞ ಎನ್ನುವಂತೆ ರೂಪಿಸಿದ ನಿರ್ದೇಶಕ ವರ್ಗ ಸಂಘರ್ಷವನ್ನು ಮನದಟ್ಟಾಗುವಂತೆ ಕಟ್ಟಿಕೊಡುತ್ತಾರೆ. ಪ್ರೇಮ ದುರಂತದ ಭಾವನಾತ್ಮಕ ಚಿತ್ರಣದಾಚೆಗೂ ವರ್ಗ ಸಂಘರ್ಷದ ಕಿಡಿ ರಾಜಕಾರಣದ ದರ್ಪವನ್ನೇ ಛೇಡಿಸುತ್ತದೆ. ರಾಣಿ ಮಗನಿಗಾಗಿ ಪರಿತಪಿಸುವಲ್ಲಿ ರಾಜನ ದರ್ಪದ ಸೋಲನ್ನು ಮತ್ತು ಅಧಿಕಾರದ ಅಹಂಕಾರ ಸೋಲುವ ಪರಿಯನ್ನು ತುಂಬ ಅರ್ಥಪೂರ್ಣವಾಗಿ ನಿರ್ದೇಶಕರು ಕಟ್ಟಿಕೊಡುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...