ವಿಷಯಕ್ಕೆ ಹೋಗಿ

ಮಹಿಳೆ, ಮಕ್ಕಳು ಮತ್ತು ನಾಡ ಕಾಳಜಿ

ತುಂಬ ವರ್ಷಗಳ ಹಿಂದಿನ ದುರಂತವಿದು. ನಾನಾಗ ಕಾಲೇಜು ಸೇರುವ ವಯಸ್ಸಿನ ಹುಡುಗ. ಅವತ್ತೊಂದಿನ ಸರಿ ರಾತ್ರಿಯಲ್ಲಿ ಹೆಣ್ಣುಮಗಳ ನರಳಾಟ. ಅಳು. ನೋಡಿದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಪರಿಸ್ಥಿತಿ ಗಂಭೀರವಾಗಿತ್ತು. ದವಾಖಾನೆಗೆ ಸಾಗಿಸಲು ಪರದಾಟ ನಡೆದಿತ್ತು.
 ಅಂಬ್ಯುಲೆನ್ಸ್‌! ಅಯ್ಯೋ.. ಬಿಡಿ. ಆಟೊ, ಟ್ಯಾಕ್ಸಿಗಳು ಅಲ್ಲಿನ್ನೂ ಬಂದೇ ಇರಲಿಲ್ಲ. ಆ ಸರಿಹೊತ್ತಿನಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಹಮಾಲರ ಎತ್ತಿನ ಗಾಡಿಯಲ್ಲಿ ಗರ್ಭಿಣಿಯನ್ನು ಹಾಕಿಕೊಂಡು ನಾವೇ ಎತ್ತುಗಳಂತೆ ದರ ದರನೆ ಎಳೆದು ಆಸ್ಪತ್ರೆ ತಲುಪಿಸಿದ್ದೆವು. ಅದು ಸರ್ಕಾರಿ ದವಾಖಾನೆ! ಊರಿಗದೊಂದೇ ದೊಡ್ಡ ದವಾಖಾನೆ.
 ತಗ್ಗು, ದಿಣ್ಣೆಯ ಅದ್ವಾನ ರಸ್ತೆ, ಪವರ್ ಬೇರೆ ಕಟ್‌ ಆಗಿತ್ತು. ಮಂದ ಬೆಳಕಿನಲ್ಲಿ ಸಾಗಿ ಆಸ್ಪತ್ರೆ ತಲುಪಿದರೆ ಅಲ್ಲಿ ಇದ್ದದ್ದು ನರ್ಸ್, ಕಂಪೌಂಡರ್. ವಿಚಾರಿಸಿದರೆ ಹೆರಿಗೆ ಹಾಸಿಗೆಗಳು ಖಾಲಿ ಇಲ್ಲ ಎನ್ನುವ ಜವಾಬು. ಎಮರ್ಜೆನ್ಸಿಗೆ ಅಂತ ಒಂದು ಬೆಡ್‌ ಇರುತ್ತಲ್ಲ ಅದು ಖಾಲಿ ಇತ್ತು. ಆದರೆ ಅದಕ್ಕೆ ‘ದೊಡ್ಡ ಬಾಯಾರ’ ಪರ್ಮಿಶನ್‌ ಬೇಕು. ದೊಡ್ಡ ಬಾಯಾರು ಅಂದರೆ ಡಾಕ್ಟರಮ್ಮ.
 ಆಸ್ಪತ್ರೆಯ ಆವರಣದಲ್ಲೇ ಆಕೆಗೊಂದು ಸರ್ಕಾರಿ ಮನೆ. ಬಾಗಿಲು ಬಡಿದರೆ ಸದ್ದೇ ಇಲ್ಲ! ಒಂದೇ ಸಮ ಜೋರಾಗಿ ಕೂಗಿದಾಗ ಗಡಸು ದನಿಯೊಂದು ಕಿಟಕಿ ಬಳಿ ಬಂದು ‘ಯಾಕೆ ದನಕ್ಕೆ ಬಡಿದಹಾಗೆ ಬಾಗಿಲು ಬಡೀತಿದೀರಿ ದೊಡ್ಡ ಬಾಯಾರು ಊರಲ್ಲಿಲ್ಲ’ ಎನ್ನುವುದು ಕೇಳಿಸಿತು. ಮತ್ತೆ ಬಾಗಿಲಿಗೆ ಜೋರು ಏಟುಗಳು ಬೀಳಲಾರಂಭಿಸಿದಾಗ, ‘ನೀವು ಮನುಷ್ಯರಾ ಪಶುಗಳಾ. ಡಾಕ್ಟರಿಗೂ ನಿದ್ದೆ, ಸುಸ್ತು ಅನ್ನೋದು ಇರತ್ತೆ. ಅವರೂ ಮನುಷ್ಯರೇ. ಹೀಗೆ ಯಾವಾಗ ಬೇಕೊ ಆಗೆಲ್ಲ ಬಂದು ತೊಂದರೆ ಕೊಡಬಾರದು’ ಎಂದಿತು ಹೆಣ್ದನಿ. ಅದು ಡಾಕ್ಟರಮ್ಮ!
  ‘ಬಾಯಾರ ನಮ್ಮ ಹುಡುಗಿ ಹೊಟ್ಲೆ ಅದಾಳರಿ. ಒಂದ ಸವನ ಭಾಳ ತ್ರಾಸ ಮಾಡ್ಕೊಳಾಕಹತ್ಯಾಳ್ರಿ. ಅದಕ್ಕ ತಗೊಂಡು ಬಂದೀವ್ರಿ. ಜರಾ ನೋಡ್ರಿ ಬಾಯಾರ ನಿಮ್ಮಕಾಲ್‌ ಮುಗಿತೀನಿ’ ಎಂದು ಗರ್ಭಿಣಿ ಮಹಿಳೆಯ ಮನೆಯವರು ಅಂಗಲಾಚಿ ಬೇಡಿಕೊಂಡರು. ‘ಅದೇನೇ ಇರಲಿ ಬೆಳಿಗ್ಗೆ ಬರ್ರಿ. ಈಕೆಗಷ್ಟೇ ಅಲ್ಲ. ಎಲ್ಲ ಗರ್ಭಿಣಿಯರಿಗೂ ತ್ರಾಸ ಆಗ್ತದ. ಇದೆಲ್ಲ ಕಾಮನ್‌. ಏನಾಗಲ್ಲ ಮುಂಜಾನೆ ಬರ್ರಿ. ನನಗ  ದಣಿವಾಗೇದ. ನಾ ಮಲಕೋಬೇಕು, ಸುಮ್ನ ಡಿಸ್ಟರ್ಬ್‌ ಮಾಡಬೇಡಿ. ಹೋಗಿ’ ಎಂದು ಆಕಳಿಸುತ್ತ ನಡೆದೇ ಬಿಟ್ಟಳು. ಮತ್ತೆ ಮತ್ತೆ ಬಾಗಿಲು ಜೋರು ಬಡಿದರೂ ಪ್ರಯೋಜನವಾಗಲಿಲ್ಲ. ಗರ್ಭಿಣಿ ಚೀರಾಟ, ನರಳಾಟ ಎತ್ತಿನ ಬಂಡಿಯಲ್ಲಿ ನಡೆದೇ ಇತ್ತು. ‘ಬಾಯಾರ ಕಾಲ್‌ ಬೀಳ್ತನ್ರಿ ಬರ್ರಿ. ಏನಾರ ಒಂದೀಟ ನೋಡ್ರಿ. ಡಾಕ್ಟರ್‌ ಬಾಯಾರ ನೀವು ದೇವರಿದ್ಹಂಗ. ಕೈಮುಗಿತೀನಿ. ಅಕೀ ತ್ರಾಸು ನೋಡಾಕ ಆಗವಲ್ದು. ಪ್ಲೀಸ್ ಬರ್ರಿ...’ ಸುಮಾರು ಹೊತ್ತಿನ ತನಕ ಹಲವರು ಹಲವು ರೀತಿ ಅಂಗಲಾಚಿದ್ದಾಯ್ತು. ಆ ಡಾಕ್ಟರಮ್ಮನ ಕನಿಷ್ಠ ಕರ್ತವ್ಯ ಪ್ರಜ್ಞೆ ಜಾಗೃತವಾಗಲೇ ಇಲ್ಲ. ಒಬ್ಬ ತುಂಬು ಗರ್ಭಿಣಿಯ ನೋವಿನ ಆಕ್ರಂದನ ಲೇಡಿ ಡಾಕ್ಟರ್‌ಗೆ ತಾಕಲೇ ಇಲ್ಲ. ಅದೇ ಗಾಡಿಯಲ್ಲಿ ಮನೆಗೆ ವಾಪಸ್‌. ದಾರಿಯುದ್ದಕ್ಕೂ ಗರ್ಭಿಣಿಯ ನರಳಾಟ, ಚೀರಾಟ, ಒದ್ದಾಟ... ಅತ್ತು, ಗೋಗರೆದು, ಒದ್ದಾಡಿ, ನರಳಾಡಿ ಸುಸ್ತಾದಂತಿದ್ದ ಆ ಗರ್ಭಿಣಿ ಮನೆಗೆ ಬಂದೊಡನೆ ಕ್ಷಣ ಹೊತ್ತು ಸುಮ್ಮನಾದಳು. ಮತ್ತೆ ಇದ್ದಕ್ಕಿದ್ದಂತೆ ಒದ್ದಾಡಿದಳು. ಏನಾಯಿತು ಎಂದು ನೋಡುತ್ತಿದ್ದಂತೆ ರಕ್ತ, ನೀರಿನಂಥ ಹಸಿ, ಹಸಿ... ಮಾಂಸದ ಮುದ್ದೆಯಲ್ಲಿ ಸುತ್ತಿಕೊಂಡಂತಿದ್ದ ಮಗು ಹೊರ ಬರಲು ಒದ್ದಾಡಿರಬೇಕು. ಆಕೆಯ ತಾಯಿ ಮತ್ತಿತರ ಹೆಂಗಸರು ಏನೋ ಕಸರತ್ತು ಮಾಡಿ ಮಗುವನ್ನು ಹೊರತೆಗೆದರು. ಮೇಲು, ಕೆಳಗೆ ಮಾಡಿದರು. ಕಿವಿಯೂದಿದರು. ಬಾಯಿಗೆ ಬಾಯಿ ಹಾಕಿ ಊದಿದರು. ಕಿವಿ ಹಿಂಡಿದರು. ಹ್ಞೂಂ ಹ್ಞೂಂ ಮಿಸುಕಾಡಲಿಲ್ಲ...
 ಆ ಮುದ್ದಾದ ನವಜಾತ ಶಿಶುವಿನ ಕಳೆಬರವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಫಜರ್‌ ನಮಾಜಿನ ನಂತರ ದಫನ್‌ ಮಾಡಲು ಖಬರಸ್ಥಾನಿಗೆ ಹೊರಟರು. ಖಬರಸ್ಥಾನ್‌ ನೋಡಿದ್ದು ಅದೇ ಮೊದಲು. ಬಟ್ಟೆಯಲ್ಲಿ ಸುತ್ತಿಟ್ಟ ಬೊಗಸೆ ತುಂಬುವಷ್ಟಿದ್ದ ಎಳೆಗೂಸಿನ ಕಳೆಬರ ಈಗಲೂ ನೆನಪಿದೆ. ಹೇಗೆ ದಫನ್ ಮಾಡಲಿ ... ಕೆಲವೇ ವರ್ಷಗಳ ನಂತರ ಆ ತಾಯಿ ಗರ್ಭಕೋಶ ಸಂಬಂಧಿ ಸಮಸ್ಯೆಯಿಂದಲೇ ಸತ್ತು ಹೋದಳು.
#
ಒಸ್ಕೊ: ನನ್ನ ತಂಗಿ ಮಗ ಆಹಿಲ್‌ ಖಾನ್ ಒಂದಿನ  (Jan 20, 2017) ರಾತ್ರಿ ಒಂದು ಗಂಟೆಗೆ ಕಿವಿ ನೋವಿನಿಂದ ತುಂಬ ಹೊತ್ತು ಒದ್ದಾಡಿದ. ಏನು ಮಾಡಿದರು ಅವನಿಗೆ ಆ ನೋವು ತಡೆದುಕೊಳ್ಳಲಾಗಲಿಲ್ಲ. ಅವನ ತಂದೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಸಮಯ ರಾತ್ರಿ ಎರಡೂವರೆ ಆಗಿತ್ತು. ಟ್ಯಾಕ್ಸಿಗೆ ಕರೆ ಮಾಡಿದರು. ಕ್ಷಣಾರ್ಧದಲ್ಲೇ ಹಾಜರ್. ಹೊರಗೆ ದಟ್ಟ ಮಂಜು. ಮೈಕೊರೆವ ನಾರ್ವೆ ಚಳಿ. ಮೈನಸ್‌ ಡಿಗ್ರಿ! ಕಾರಲ್ಲಿ ನಾನೂ ಹೊರಟೆ. ಆ ಸಮಯದಲ್ಲಿ ನಾರ್ವೆ ಆಸ್ಪತ್ರೆ ಹೇಗೆ ವರ್ತಿಸಬಹುದು ಎನ್ನುವ ಕುತೂಹಲ ನನ್ನೊಳಗೆ! ಅದೇ ಸಮಯಕ್ಕೆ ನನ್ನ ನಾಡಿನ ಆಸ್ಪತ್ರೆಗಳ ಅವಸ್ಥೆ ತಟ್ಟನೆ ನೆನಪಾಯಿತು. ಕೊರೆವ ಚಳಿಯಲ್ಲಿ ಇನ್ನೂ ಮೈ ನಡುಗಿತು. ಆಗ ತೀವ್ರ ಕಾಡಿದ್ದು ಈ ದಿಲ್ ಫೈಲ್ ಸ್ಟೋರಿ. ಯಾರು, ಎಲ್ಲಿ, ಎತ್ತ, ಏನು, ಯಾವಾಗ,,, ಇದರಾಚೆಗೂ ಯಾವ ಡೇಟ್‌ಲೈನ್‌ನಲ್ಲೂ ವರ್ತಮಾನದ ವರದಿಯಂತೆ ನನ್ನೊಳಗಿದು ಕಾಡುತ್ತಲೇ ಇರುತ್ತದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ