ವಿಷಯಕ್ಕೆ ಹೋಗಿ

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!


ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ. ಇದೆಲ್ಲ ಮಾಧ್ಯಮಗಳಲ್ಲಿ ಬರುವ ಮತ್ತು ಅಲ್ಲಿನ ಮಾನವ ಹಕ್ಕುಗಳ ಹೋರಾಟಗಾರರು ಅಲ್ಲಿ ಇಲ್ಲಿ ಹಂಚಿಕೊಂಡ ವರದಿಗಳಲ್ಲಿ, ಜನರ ಭಾವನೆಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಇದು ಯಾವುದೇ ಸಮಾಜದಲ್ಲಿ ನಡೆಯುವಂಥದೇ. ಬಲಪಂಥೀಯವೋ ಸೆಕ್ಯುಲರ್‌ ಅಥವಾ ಸಾಮರಸ್ಯವೋ ಅಂತೂ ಒಂದು ಬದುಕಿನ ಕಲ್ಪನೆ ಅಲ್ಲಿಯೂ ಇದೆ. ನಮ್ಮಲ್ಲಿಯೂ, ಮತ್ತಿನ್ನೆಲ್ಲಿಯೂ ಇರುವ ಹಾಗೆ. ಆದರೆ ನಾವು ನಮ್ಮ ಮೂಗಿನ ನೇರಕ್ಕೆ ನೋಡುವುದರಿಂದ ಅವರು ತಮ್ಮ ಮೂಗಿನ ನೇರಕ್ಕೆ ರಾಜಕೀಯವಾಗಿ ಯೋಚಿಸಿದ್ದರಿಂದ ಉಪಖಂಡದ ಸಾಮಾಜಿಕ ಬದುಕಿನ ಮೇಲೆ ಅದರ ನೇರ ಪರಿಣಾಮ ಉಂಟಾಗಿದೆ. ಅಲ್ಲಿ ಮತೀಯವಾದದ ಕಲ್ಪನೆಗಳು ಭಯ ಹುಟ್ಟಿಸಿದಂತೆ ಇಲ್ಲಿ ಕೂಡ ಹೆಚ್ಚು ಕಮ್ಮಿ ಅದೇ ನಡೆಯುತ್ತಿದೆ! ವಾಸ್ತವದಲ್ಲಿ ಜಗದ ಎಲ್ಲೆಡೆ ಫ್ಯಾಸಿಸಂ ಹ್ಞೂಂಕರಿಸುವುದು ನಡೆದೇ ಇದೆ. ಇದೆಲ್ಲದರ ಹೊರತಾಗಿ ಪ್ರಜಾಸತ್ತಾತ್ಮಕವಾದ ಬದಲಾವಣೆ, ಸುಧಾರಣೆಗಳು ಎಲ್ಲಿಯಾದರೂ ನಡೆಯಲಿ ಅಂಥ ಯತ್ನಗಳನ್ನು ಆಶಾವಾದದಿಂದ ನೋಡಬೇಕಾಗುತ್ತದೆ. ಯಾವುದೇ ರಾಜಕೀಯ ವ್ಯವಸ್ಥೆಯ ನಿಜವಾದ ಶಕ್ತಿ ಪ್ರಜಾಸತ್ತಾತ್ಮಕ ಮೌಲ್ಯವೇ ಆಗುತ್ತದೆ. ಇಂಡಿಯಾದಂಥ ದೊಡ್ಡ ಪ್ರಜಾಪ್ರಭುತ್ವ ದೇಶ ಇಂಥ ಮೌಲ್ಯಗಳ ಬಗ್ಗೆ ತುಂಬ ಆಶಾ ಭಾವನೆಯಿಂದ ಕಾಣುವುದು ಅಗತ್ಯ. ಕಾಣಬೇಕು ಕೂಡ. ಪಾಕಿಸ್ತಾನದಲ್ಲಿ ಇಮ್ರಾನ್‌ಖಾನ್‌ ನೇತೃತ್ವದ ಪ್ರಜಾಪ್ರಭುತ್ವವಾದಿ ಸರ್ಕಾರ ನೆಲೆಗೊಳ್ಳುತ್ತಿರುವುದರಿಂದ ಇಂಡಿಯಾದ ಮೇಲೆ ಅದರ ನೇರ ಪರಿಣಾಮ ಇಲ್ಲದಿಲ್ಲ. ವಾಸ್ತವದಲ್ಲಿ ಇತರೆಲ್ಲೆಡೆ ಆಗುತ್ತಿರುವ ಹಾಗೆ ಉಪಖಂಡ ಕೂಡ ತೀವ್ರವಾದದ ಶಿಕಾರ್‌ ಆಗುತ್ತಿದೆ. ಸಾಮರಸ್ಯ ಮಾರ್ಗಕ್ಕೆ ಮರಳುವಂತೆ ಕಾಣಿಸುತ್ತಿರುವ ಪಾಕಿಸ್ತಾನದಲ್ಲಿನ ರಾಜಕೀಯ ಬೆಳವಣಿಗೆ ಅಲ್ಲಿನವರಂತೆ ಇಡೀ ಉಪಖಂಡಕ್ಕೆ ಹೊಸ ಆಶಾಕಿರಣ. ಜಗತ್ತಿನ ಯಾವ ರಾಜಕಾರಣವೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಜಗದ ಯಾವ ಜನಜೀವನ, ಜೀವನಶೈಲಿಗೂ ಧರ್ಮಾಂಧತೆ, ಕಟ್ಟರ್‌ವಾದಿಗಳ ಕಪಿಮುಷ್ಠಿಯಿಂದ ಪಾರಾಗಲು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಾಗುತ್ತಿಲ್ಲ. ಇದು ವಾಸ್ತವ. ಇವೆಲ್ಲದರಿಂದ ಹೊರಬಂದು ಸಭ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ಕೂಡಿದ ಒಂದು ರಾಜಕೀಯ ಆಡಳಿತ ನೆಲೆಗೊಳಿಸುವ ತುರ್ತು ಪಾಕಿಸ್ತಾನಕ್ಕಿತ್ತು. ಜಗತ್ತಿಗೂ ಇದೆ. ಬಹುತೇಕ ಜನ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಪಾಕಿಸ್ತಾನದ ಜನತೆ ಇಂಥ ನಂಬಿಕೆ, ಆಶಾಭಾವನೆಯನ್ನು ಹಿಂದೆಂದಿಗಿಂತ ಇಂದು ತುಂಬ ನೆಚ್ಚಿಕೊಂಡಂತಿದೆ. ಇಮ್ರಾನ್‌ ಖಾನ್‌ ಬಹುದೊಡ್ಡ ನಿರೀಕ್ಷೆಯಾಗಿ ಪಾಕಿಗಳಿಗೆ ಕಂಡಿದ್ದಾರೆ. ಜನಬೆಂಬಲದಿಂದಾಗಿ ಅವರ ದಾರಿಯೂ ಈಗ ಹೆಚ್ಚು ಸುಗಮವಾಗಿದೆ. ಮಿಲಿಟರಿ, ಐಎಸ್‌ಐ ನೆರವು ಇತ್ಯಾದಿ.. ನಾವು ಅನುಮಾನಿಸಬಹುದಾದ, ಆರೋಪಿಸಬಹುದಾದ ಅಂಶಗಳು. ಅದೆಲ್ಲ ಇದ್ದಿದ್ದೇ. ಅದನ್ನು ವಿಶ್ವ ಸಮುದಾಯವೂ ಗಮನಿಸುತ್ತದೆ. ಸಮಯ ಬಂದರೆ ನಿಗ್ರಹಕ್ಕೆ ಮಾಡಬೇಕಾದ್ದನ್ನು ಮಾಡೇ ಮಾಡುತ್ತದೆ. ಹೀಗಾಗಿ ನೆಗೆಟಿವಿಟಿಯನ್ನೇ ಮುಂದು ಮಾಡಿ ಈಗ ಆದ ಬೆಳವಣಿಗೆಯನ್ನು ತೀವ್ರ ಟೀಕೆಗೊಳಪಡಿಸುವುದು ಅನಗತ್ಯ. ಪಶ್ಚಿಮೀ ಶಕ್ತಿಗಳು ಅದರಲ್ಲೂ ಅಲ್ಲಿನ ಮಾಧ್ಯಮಗಳು ಇಮ್ರಾನ್‌ಗೆ ಬೆಂಬಲವಾಗಿ ನಿಂತಿದ್ದರ ಪರಿಯನ್ನು ನೋಡಿದರೆ  ಈ ಬೆಳವಣಿಗೆಯ ಬಗ್ಗೆ ಗುಮಾನಿ ಇದ್ದೇ ಇದೆ. ಮುಖ್ಯವಾಗಿ ಗಮನಿಸುವುದಾದರೆ ನವಾಜ್‌ ಷರೀಫ್‌ ಪನಾಮಾ ಕಾಗದ ಬಹಿರಂಗಗೊಂಡ ನಂತರ ಬದನಾಮ್‌ ಆದರು. ಲಂಡನ್‌ನಲ್ಲಿ ಅವರು ಅಕ್ರಮ ಆಸ್ತಿ ಹೊಂದಿದ್ದ  ಆರೋಪ ಸಾಬೀತಾಗಿ ಪಾಕ್‌ ಸುಪ್ರೀಂಕೋರ್ಟ್‌ ಅವರನ್ನು ಚುನಾವಣೆಯಿಂದ ದೂರ ಇರುವಂತೆ ಆಜ್ಞೆ ಮಾಡಿದ್ದರಿಂದ ಜೈಲು ಸೇರಿದರು. ಆಸೀಫ್‌ ಜರ್ದಾರಿ ಪುತ್ರ ಬಿಲಾವಲ್‌ ಇನ್ನೂ ಎಳಸು.. ಇತ್ಯಾದಿ ಅಂಶಗಳು ಇಮ್ರಾನ್‌ಖಾನ್‌ಗೆ ವ್ಯವಸ್ಥಿತ ಅನುಕೂಲದಂತೆಯೇ.
ಬೆನಜಿರ್‌ ಭುಟ್ಟೊ ಸಾವಿನ ನಂತರ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಫೀಕಾ ಆಗಿದೆ. ಜನರಲ್‌ ಮುಷರಫ್‌ ಅವರ ಮಿಲಿಟರಿ ದರ್ಪ ಮುಗಿದ ಮೇಲೆ ಅದಕ್ಕೆ ಸೂಕ್ತ ಪರ್ಯಾಯ ಮಿಲಿಟರಿ ರಂಗದಿಂದ ಸಾಧ್ಯವಾಗಲಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆ  ವಾಪಸ್‌ ನೆಲೆಗೊಂಡು ನವಾಜ್‌ ಷರೀಫ್‌ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹ್ಞೂಂಕರಿಸಿತು.  ಹೀಗೆ ಪಾಕ್‌ ರಾಜಕೀಯ ರಂಗದಲ್ಲಿ ನಾಯಕತ್ವ ಮತ್ತು ಗವರ್ನನ್ಸ್‌ಗೆ ಸಂಬಂಧಿಸಿದಂತೆ ಒಂದು ನಿರ್ವಾತ ಸ್ಥಿತಿ ಸೃಷ್ಟಿಯಾಗಿತ್ತು ಎನ್ನುವ ಮಾತು ಮಾಧ್ಯಮಗಳಲ್ಲಿ ಹರಿದಾಡಿತ್ತು. ಪರ್ಯಾಯ ಹುಡುಕಾಟದಲ್ಲಿದ್ದ ಪಾಕಿಸ್ತಾನ ಜನತೆಗೆ ಕ್ರಿಕೆಟ್‌ ತಾರೆ ಅಪ್ಯಾಯಮಾನವೆನಿಸಿದಂತಿದೆ. ದೇಶಕ್ಕೆ ವಿಶ್ವಕಪ್‌ ತಂದುಕೊಟ್ಟ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಇಮ್ರಾನ್‌ ಖಾನ್‌  ರಾಜಕೀಯ ಆಟದ ನಾಯಕತ್ವ ವಹಿಸಿಕೊಂಡು ಆಗಲೇ ಎರಡು ದಶಕಗಳಾಗಿದ್ದವು. ಹೆಚ್ಚೂ ಕಮ್ಮಿ 25 ವರ್ಷಗಳ ಕಾಲ ತಮ್ಮ ರಾಜಕೀಯ ಬದುಕನ್ನು ನೆಟ್‌ ಪ್ರ್ಯಾಕ್ಟಿಸ್‌ನಂತೆ ರೂಢಿಸಿಕೊಂಡು ಬಂದಿದ್ದ ಇಮ್ರಾನ್‌ ಅವರ ಬದ್ಧತೆಯನ್ನು ಮತ್ತು ಅವರಲ್ಲಿನ ನಾಯಕತ್ದ ಗುಣ ಪರಿಪಕ್ವಗೊಂಡಿದ್ದನ್ನು ಜನ ಗುರುತಿಸಿದರು. ಪ್ರತಿಯಾಗಿ ಜನರ ಬಯಕೆಯನ್ನು ಗೌರವಿಸಿದ ಇಮ್ರಾನ್‌ ಖಾನ್‌  ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿದರು. ಎಂದಾದರೊಂದು ದಿನ ಪ್ರಧಾನಿ ಪಟ್ಟ ತನ್ನನ್ನು ಹುಡುಕಿಕೊಂಡು ಬರುವುದರ ಅರಿವು ಇಮ್ರಾನ್‌ ಅವರಿಗಿತ್ತು ಅನ್ನಿಸುತ್ತದೆ. ಅವರು ಸದನದಲ್ಲಿ ಪ್ರತಿಪಕ್ಷದ ನಾಯಕನಾಗಿ ಮಾತನಾಡುವ, ರಾಜಕೀಯ ವಿರೋಧಿಗಳ ಮೇಲೆ ಟೀಕೆಗಳ ಮಳೆಗರೆವ ಮತ್ತು ಎಲ್ಲಿಯೂ ಎಲ್ಲೆ ಮೀರಿ ವರ್ತಿಸದ ಸಂಯಮದ ನಡೆಯನ್ನು ರೂಢಿಸಿಕೊಳ್ಳುವ ಮೂಲಕ ಪ್ರಬುದ್ಧ ರಾಜಕಾರಣಿಯಾಗಿ ಬೆಳೆದು ನಿಂತಿದ್ದನ್ನು ಗಮನಿಸಿದರೆ ಆ ತಯಾರಿ ಅವರ ನಡೆಯಲ್ಲಿಯೇ ಸೂಚ್ಯವಾಗಿ ಧ್ವನಿಸುವಂತಿತ್ತು.. ಅವರು ಸದನದಲ್ಲಿ ಮಾತನಾಡಿದ ವಿಡಿಯೊ ತುಣುಕುಗಳನ್ನು ಗಮನಿಸಿದರೆ ಈ ಅಂಶಗಳ ಅರಿವಾಗುತ್ತದೆ. ಆಧುನಿಕ ಕಾರ್ಪೊರೇಟ್‌ ಸಂಸ್ಕೃತಿಯ ರಾಜಕೀಯ ಪಟ್ಟುಗಳನ್ನು ರೂಢಿಸಿಕೊಂಡು ಹೊಸ ಬಗೆಯ ನಾಯಕತ್ವ ಜವಾಬ್ದಾರಿ ನಿಭಾಯಿಸಲು ಅವರೀಗ ಸಜ್ಜಾಗಿ ನಿಂತಿದ್ದಾರೆ.  1995ರಲ್ಲಿ ಅವರು ರಾಜಕೀಯಕ್ಕೆ ಧುಮುಕಿದ ಸಂದರ್ಭ ಅವರದೇ ನಾಯಕತ್ವದಲ್ಲಿ ಪಾಕ್‌ ಕ್ರಿಕೆಟ್‌ನಲ್ಲಿ ವಿಶ್ವಕಪ್‌ ಗೆದ್ದ ಸಂಭ್ರಮದ ಪ್ರಭಾವ ಹಸಿಯಾಗಿತ್ತು. ಅಂಥ ಜೋರು ಹವಾದ ನಡುವೆ ಅವರ ರಾಜಕೀಯ ಎಂಟ್ರಿ ಕುತೂಹಲ ಕೆರಳಿಸಿತ್ತು. ಅಂದಿನ ಅವರ ರಾಜಕೀಯ ಅನುಭವ ಅಷ್ಟಕ್ಕಷ್ಟೇ. 1996ರಲ್ಲಿ ತಹ್ರೀಕ್‌ ಎ ಇನ್ಸಾಫ್‌ ಪಕ್ಷವೊಂದನ್ನು ಅಸ್ತಿತ್ವಕ್ಕೆ ತಂದಾಗ ಒಂದು ಮಟ್ಟಿನ ಪ್ರಬುದ್ಧತೆ ಅವರಲ್ಲಿ ಕಾಣತೊಡಗಿತು. ಭ್ರಷ್ಟಾಚಾರದಿಂದ ತುಂಬ ತೊಂದರೆಗೊಳಗಾಗಿದ್ದ ಪಾಕಿಸ್ತಾನ ಜನತೆಯ ಆಶೋತ್ತರಗಳನ್ನು ಗ್ರಹಿಸಿದ ಇಮ್ರಾನ್‌  ನ್ಯಾಯಕ್ಕಾಗಿ ಹೋರಾಟದ ಅಭಿಯಾನ (ತಹ್ರೀಕ್‌ ಎ ಇನ್ಸಾಫ್‌  ಎನ್ನುವುದರರ್ಥ ಇದೇ ಆಗಿದೆ) ಶುರು ಮಾಡಿದರು. 2002ರಷ್ಟೊತ್ತಿಗೆ ಒಂದು ದೊಡ್ಡ ರಾಜಕೀಯ ತಿರುವು ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿ ಪಟ್ಟದವರೆಗೆ ತಂದು ನಿಲ್ಲಿಸಿತ್ತು. ಆದರೆ ಅದು ಖಾನ್‌ರ ವೈಯಕ್ತಿಕ ಲಾಭವಷ್ಟೇ ಆಗುವ ಸಾಧ್ಯತೆಯಂತಿತ್ತು. ಪರ್ವೇಜ್‌ ಮುಷರಫ್‌ಗೆ ಇವರ ಮೇಲೆ ಒಲವಿತ್ತು. ಪ್ರಧಾನಿ ಅಭ್ಯರ್ಥಿಯಾಗುವಂತೆ ಮುಷರಫ್‌ ಹಾಕಿದ ಒತ್ತಡವನ್ನು ಇಮ್ರಾನ್‌ ನಯವಾಗಿ ತಿರಸ್ಕರಿಸಿದ್ದರು. ಬೆನಜೀರ್‌ ನಂತರ ದೇಶದಲ್ಲಿ ತೆರವಾದ ಒಂದು ಗ್ಲಾಮರಸ್‌ ಆದ  ನಾಯಕತ್ವವಾಗುವ ಹಂಬಲದತ್ತ ಇಮ್ರಾನ್‌ ಹೋರಾಟ ಕೇಂದ್ರೀಕೃತವಾಗಿತ್ತು. ಆ ಹಾದಿಯಲ್ಲಿ ನಿರಂತರ ಪ್ರಯತ್ನ ಸಾಗಿತ್ತು. ಆರಂಭದಲ್ಲಿ ಇಲೆಕ್ಷನ್‌ ಸೋತರು. ಆನಂತರದಲ್ಲಿ ಗೆದ್ದರು. ಹಾಗೆ ನೋಡಿದರೆ ಅವರ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆದರೆ ಇಮ್ರಾನ್‌ ಕಮಾಲ್‌ 2018ರ ಚುನಾವಣೆಯಲ್ಲಿ ಕೆಲಸ ಮಾಡಿತು. ಈ  ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಅಭ್ಯರ್ಥಿಗಳ ದಂಡೇ ಹರಿದು ಬಂದಿತ್ತು. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಅವರು ಹೆಣಗುವಂತಾಗಿತ್ತು. ಪರಿಸ್ಥಿತಿ ಕಳೆದ ಕೆಲವು ವರ್ಷಗಳಿಗಿಂತ ಸಂಪೂರ್ಣ ಬದಲಾಗಿದ್ದರಿಂದ ಇಮ್ರಾನ್‌ ಅತ್ಯಂತ ಸುಲಭವಾಗಿ ಪರ್ಯಾಯ ಶಕ್ತಿಯಾಗಿ ಪ್ರಜ್ಞಲಿಸಿದರು. ಚುನಾವಣಾ ಫಲಿತಾಂಶ ಇಮ್ರಾನ್‌ ಖಾನ್‌ ನಾಯಕತ್ವಕ್ಕೆ ಅಧಿಕೃತ ಮೊಹರು ಹಾಕಿದಂತಿದೆ. ಉಪಖಂಡದ ಸೌಹಾರ್ದತೆಗೆ ಇದು ನೆರವಾಗಲಿದೆ ಎನ್ನುವುದು ನಿರೀಕ್ಷೆ. ಅದು ನಿಜವಾಗಲಿ ಎನ್ನುವುದು ಆಶಯ. ನ್ಯಾಯಕ್ಕಾಗಿ ಹೋರಾಟದ (ತಹರೀಕ್‌–ಎ–ಇನ್ಸಾಫ್‌) ಯತ್ನದಲ್ಲಿ ಗೆಲುವು ದಾಖಲಿಸಿದ ಮೇಲೂ ಇಮ್ರಾನ್‌ ಖಾನ್‌ಗೆ ಅನೇಕ ಸವಾಲುಗಳಿವೆ. ಅಲ್ಲಾಮಾ ಇಕ್ಬಾಲ್‌ ಹೇಳುವ ಹಾಗೆ ‘ಇಷ್ಕ್‌ ಕೆ ಇಮ್ತೆಹಾನ್‌  ಔರ್‌ ಭೀ ಹೈ’.. ಒಳ್ಳೆಯದಾಗಲಿ ಇಮ್ರಾನ್‌ ಖಾನ್‌.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ