ವಿಷಯಕ್ಕೆ ಹೋಗಿ

ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!


ಅಮೆರಿಕದ ಬೂಟು, ಬಂದೂಕು ಬಂದ ಹಾಗೆ ಬ್ರೆಡ್, ಬಿಸ್ಕತ್ ಕೂಡ ಇಲ್ಲಿ ಬಂದಾಗಿದೆ. ಶ್ರೀಮಂತ ರಾಷ್ಟ್ರ, ಸೂಪರ್ ಪಾವರ್ ಧಿಮಾಕಿನಿಂದ ಕೊಂಚ ಕೆಳಕ್ಕಿಳಿಯುವಂಥ ಆರ್ಥಿಕ ಹೊಡೆತವನ್ನೂ ಅದು ಎದುರಿಸುತ್ತಿದೆ. ಇನ್ನದು ರಸ್ತೆ ವ್ಯಾಪಾರಕ್ಕೂ ಇಳಿಯುವ ದಿನಗಳು ದೂರವಿಲ್ಲ. ಆದರೂ ವ್ಯಾಪಾರದಲ್ಲಿ ನಮ್ಮ ಮಾರ್ವಾಡಿಗಳ ಮಾವನಂತಿರುವ ಅಮೆರಿಕನ್ನರು ಕಷ್ಟ ಬಂದಾಗ ಕತ್ತೆ ಕಾಲೂ ಹಿಡಿಯುವುದಕ್ಕೆ ಹೇಸುವುದಿಲ್ಲ. ಆ ಮಾತು ಹಾಗಿರಲಿ.
 ನಮ್ಮ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸ್ಪೆನ್ಸರ್ ಸೂಪರ್ ಮಾರ್ಕೆಟ್ ನಲ್ಲಿ ಅಮೆರಿಕ ಕಂಪೆನಿಯೊಂದು ಹೊಟೆಲ್ ಆರಂಭಿಸಿದೆ. ಔ ಬಾನ್ ಪೇನ್ ಎನ್ನುವುದು ಹೊಟೇಲ್ ಹೆಸರು. ಇದೊಂದು ಥರ 'ಅಮ್ಯಾರಿಕನ್ ದರ್ಶಿನಿ'!  ಕಾಫಿ, ಟೀ, ಬ್ರೆಡ್ ಜತೆ ಒಂದು ಸಿಂಪಲ್ ಊಟ ಕೂಡ ಅದರ ಮೆನುವಿನಲ್ಲಿದೆ. ಪಾಶ್  ಎನಿಸುವ ಗಾಜಿನ  ಮನೆಯಲ್ಲಿ  ನಮ್ಮ ನ್ನು  ಕೂರಿಸುವ  ನೈಸ್  ಆಗಿ ಬೆಣ್ಣೆ ಹಚ್ಚಿದ ಬ್ರೆಡ್ ಟೇಬಲ್ಲಿಗಿಟ್ಟು ಅಷ್ಟೇ ನೈಸ್ ಆಗಿ ಜೇಬಿಗೆ ಕೈ ಹಾಕುವ ಈ ಹೊಟೇಲು ಅಷ್ಟು ದುಬಾರಿ ಏನಲ್ಲ.  ಆದರೆ,  ಇದರ ಡೌನ್ ಟು ಅರ್ತ್ ಮನೋಧರ್ಮ ನೋಡಿದರೆ ಇನ್ನಿದು ಬೆಂಗಳೂರಿನ ಎಲ್ಲೆಡೆ ದರ್ಶಿನಿಗಳಂತೆ ತನ್ನ ಬ್ರಾಂಚ್ ತೆರೆಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಕಾ ಅಮೆರಿಕ, ಇಟ್ಯಾಲಿಯನ್, ಫ್ರೆಂಚ್ ಕುವರಿಯಂತೆ ಕಂಗೊಳಿಸುವ ಇದರ ವಿನ್ಯಾಸ, ಟೇಬಲ್ಲಿಗಿಡುವ ಕಾಫಿ ಕಪ್ ಗೆ  ಟೀನೇಜ್ ಹುಡುಗಿಯ ವೈಯ್ಯಾರವಿದೆ. ಇದೆಲ್ಲ  ನೋಡಿದರೆ ನಮ್ಮೂರ  ಹೊಟೇಲುಗಳಿಗೆ  ಗತಿ ಕಾದಿದೆ ಅನಿಸುತ್ತದೆ.  ಇದರ ಬಿಸಿ ಬಿಸಿ ಕಾಫಿ ನಮ್ಮ ಕೆಫೆ ಕಾಫೀ ಡೇ ಕಾಫಿಯನ್ನು ಮೀರಿಸುವಂಥದಿದ್ದೆ (ಸದ್ಯಕ್ಕೆ). ರೇಟು ಕೂಡ ಅಂಥ ದುಬಾರಿ ಏನಲ್ಲ (ಅದೂ ಸದ್ಯಕ್ಕೆ)... ಇದಿಷ್ಟು ಸಾಕಲ್ಲ ನಮ್ಮ ಉಡುಪಿ ದರ್ಶಿನಿಗಳ ಇಡ್ಲಿ, ವಡೆ, ದೋಸೆ... ಮತ್ತದೇ ಕುಂಬಳಕಾಯಿ, ತುರಿದ ಕೊಬ್ಬರಿ, ಒಂದಷ್ಟು ಎಂಟಿಆರ್ ಮಸಾಲೆ ಹಾಕಿ ಮಾಡುವ ಸಾಂಬಾರಿನ ರುಚಿಗೆ ಸಖತ್ ಪೈಪೋಟಿ ನೀಡಲು?
 ಯಾವಾಗ ಅಮೆರಿಕದ ಪೆಪ್ಸಿ, ಕೋಲಾ ಭಾರತಕ್ಕೆ ಬಂತೊ ಆಗಿನಿಂದ ನಮ್ಮ ಪಾನೀಯಗಳು, ಎಳೆನೀರು ಚಮಕ್ ಕಳಕೊಂಡವು. ಅಮೆರಿಕದ ಬಿಸ್ಕತ್ತುಗಳು ಬಂದ ಮೇಲೆ ನಮ್ಮ ಪಾರ್ಲೆ ಜಿ ರುಚಿ ಕಳಕೊಂಡಿತು. ಹೀಗೆ ಒಂದೊಂದಾಗಿ ಕಳಕೊಳ್ಳುತ್ತಾ ಇಡ್ಲಿ, ವಡೆ, ಲೋಟ ಕಾಫಿಯನ್ನೂ ಕಳಕೊಳ್ಳುತ್ತೇವೋ ಏನೋ?....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...