ವಿಷಯಕ್ಕೆ ಹೋಗಿ

ಪ್ರೀತಿ ಎನ್ನುವ ದೊಡ್ಡ ಬಾಂಬ್!

ಸ್ಕೂಲ್ ಮಕ್ಕಳ ಸಮಾರಂಭದಲ್ಲಿ ಏನು ಮಾತಾಡಬೇಕು? ಅದೂ ವಾರ್ಷಿಕೋತ್ಸವದಂಥ, ಉತ್ಸವದಂಥ ಸಂದರ್ಭದಲ್ಲಿ?... ಗುಬ್ಬಚ್ಚಿ ಗೂಡುಗಳ ಸುತ್ತ ಸಂಜೆ ಹೊತ್ತಲ್ಲಿ ಕೊಂಚ ಜೋರಾಗೇ ಚಿಲಿ ಪಿಲಿಗುಟ್ಟುವಂತೆ ಮಕ್ಕಳು ಮಾತಾಡ್ತಾನೇ ಇರ್ತಾರೆ. ಹಾಕಿದ ದಿರಿಸು, ಮೇಕಪ್ ಸಮೇತ ತಮ್ಮ ಡಾನ್ಸ್ ಪಾಳಿ ಯಾವಾಗ ಬರುತ್ತೊ ಎನ್ನುವ ಧಾವಂತದಲ್ಲಿರ್ತಾರೆ. ಮಕ್ಕಳು ಬಣ್ಣ ಹಚ್ಕೊಂಡು, ತಮ್ಮ ಜೇಬುಗಳಿಗೆ, ಪರ್ಸ್ ಗಳಿಗೆಲ್ಲ ಅಷ್ಟು ದೊಡ್ಡ ಕತ್ತರಿ ಹಾಕಿ ಖರೀದಿಸಿದ ದಿರಿಸು ಹಾಕ್ಕೊಂಡು ಸ್ಟೇಜ್ ಮೇಲೆ ಹೇಗೆ ಕಾಣ್ತಾರೆ! ಅಂತ ನೋಡುವ ಏಕಮಾತ್ರ ಕುತೂಹಲದಿಂದ ಬಂದ ಪಾಲಕರು, ಪೋಷಕರು ಭಾಷಣ ಕೇಳುವ ತಾಳ್ಮೆಯನ್ನೆಲ್ಲಿ ಹೊತ್ತು ತಂದಿರ್ತಾರೆ?

 ಉದ್ದುದ್ದ ಬೋರ್ ಹೊಡಿಸುವ ವಿಷಯಗಳನ್ನು ಚಚ್ಚುವ ಬಹುತೇಕ ಭಾಷಣಕಾರರು ಇಂಥ ಸಮಾರಂಭಗಳಲ್ಲಿ ಕಿರಿ ಕಿರಿ ಹುಟ್ಟಿಸಿ ಭಾಷಣಕಾರರ ಬಗ್ಗೆ  ಭಯ ಹುಟ್ಟಿಸಿಟ್ಟಿದ್ದಾರೆ. ಇನ್ನು ಕೆಲವರು ಜೋಕುಗಳ ಮೂಲಕ, ಚಾಣಾಕ್ಷ ಮಾತುಗಳ ಮೂಲಕ ಪ್ರೇಕ್ಷಕರಿಗೆ ಸರ್ಕಸ್ ಜೋಕರ್, ಪ್ರಾಣಿಗಳ ಕೌಶಲ್ಯದಂತೆ ಪ್ರತಿಭೆ ಮೆರೆದು ಟೈಂ ಪಾಸ್, ಎಂಟರ್ಟೇನ್ಮೆಂಟ್ ಮಟ್ಟಕ್ಕೆ ಭಾಷಣಗಳನ್ನು ಇಳಸಿಬಿಟ್ಟಿದ್ದಾರೆ. ಇನ್ನು ಕೆಲವರು ಬಿಟ್ಟಿ ಪ್ರವಚನ ಹೇಳಿ ದೇವಾಂಶ ಸಂಭೂತರಂಥ, ಡಿಪ್ಲೋಮೆಸಿಯಂಥ ಬರಿಯ ಸೋಗು ಮೆರೆದಿದ್ದಾರೆ.

 ಹೀಗಾಗಿ ಇದೆಲ್ಲ ನೆನಪಿಸಿಕೊಂಡು ನನಗೂ ಭಾಷಣ ಎಂದರೆ ಒಂದು ರೀತಿಯ ಭಯ ಹುಟ್ಟಿಕೊಂಡಿದ್ದು ಒಂದು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ. ಇದರಲ್ಲಿ ನನಗೂ ಪಾಲ್ಗೊಳ್ಳುವ ಸಂದರ್ಭವೊಂದು ಒದಗಿ ಬಂದಾಗ.
 ಬೆಂಗಳೂರಿನ ಆರ್.ಪಿ.ಸಿ ಲೇಔಟ್ ನ ಸೇಂಟ್ ಮೈಕಲ್ ಸ್ಕೂಲ್ ವಾರ್ಷಿಕೋತ್ಸವ (23-12-2009) ಸಮಾರಂಭವದು. ನಾನು ವೇದಿಕೆ ಏರುವ ಮುನ್ನವೇ ಕಾರ್ಯಕ್ರಮ ಆರಂಭಗೊಂಡಿತ್ತು. ನನಗಿಂತ ಮುಂಚೆಯೇ ಬಂದಿದ್ದ ಮತ್ತೊಬ್ಬ ಅತಿಥಿ ಕವಿ, ಕಾಲೇಜು ಶಿಕ್ಷಕ ಎಲ್.ಎನ್. ಮುಕುಂದರಾಜ್ ಆಗಲೇ ಭಾಷಣಕ್ಕೆ ಅಣಿಯಾಗಿದ್ದರು. ಅವರು ಕನ್ನಡಪ್ರೇಮ, ಕನ್ನಡ ಸಾಹಿತ್ಯ, ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರ ಹೆಮ್ಮೆಯ ಬಗ್ಗೆ, ಪಂಪನ ಆದಿ ಪುರಾಣದ ಬಗ್ಗೆ, ವಿಜಯನಗರ ಮತ್ತು ಹಂಪಿಯ ನೆನಪಿಗಾಗಿ ಆರ್.ಪಿ.ಸಿ ಲೇಔಟ್ ಗೆ ಹಂಪಿ ನಗರ ಎಂದು ಹೆಸರಿಟ್ಟಿದ್ದರ ಬಗ್ಗೆ.... ಚಚ್ಚಿದರು.

 ನನ್ನ ಸರದಿ ಬಂದಾಗ, ಡಯಾಸ್ ಮೇಲೆ ನಿಂತು ಸಭಿಕರ ಮೇಲೆ ಒಂದಷ್ಟು ಕಣ್ಣಾಡಿಸಿದೆ. ಹೆಂಗಸರ ಮುಖಗಳು ಇಷ್ಟಗಲ ಅರಳಿದ್ದವು. ಮಕ್ಕಳು ವೋ ಎಂದು ಅವಾಜ್ ಮಾಡುತ್ತಿದ್ದರು. ಪುಂಡ ಹುಡುಗರು, ಚಾಲೂ ಹುಡುಗಿಯರು ಶಿಳ್ಳೆ ಹಾಕುತ್ತ ಹಾಯ್ ಬಾಯ್  ಎಂದು ಚೀರುತ್ತಿದ್ದರು. ನನ್ನ ಉದ್ದನೆಯ ಕೂದಲು, ಜಡೆಯಂತೆ ಕೂದಲು ಕಟ್ಟಿಕೊಂಡಿದ್ದನ್ನು ಕಂಡು ಹಾಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಹಾಗೆ ನಾನದನ್ನು ಗ್ರಹಿಸಿದೆ. ಮತ್ತು ಅದು ನಿಜವಾಗಿತ್ತು. ತಲೆ ತೋರಿಸಿ ಸುಮ್ಮನೇ ನಕ್ಕೆ. ಬಹುತೇಕ ಹೆಂಗಸರು  ಮುಖ ಮತ್ತಷ್ಟು ಅರಳಿಸಿದರು. ತಲೆ ಖಾಲಿ ಮಾಡಿಕೊಂಡ ಗಂಡಸರು ಕೈಯಾಡಿಸಿಕೊಂಡು ನನ್ನ ದುರುಗುಟ್ಟಿದರು. ಹುಡುಗಿಯರು ವೋ ಎಂದರು. ನನ್ನ ಕೂದಲನ್ನೇ ಒಂದು ಜೋಕ್ ಮಾಡಿಕೊಂಡು ಸಣ್ಣದಾಗಿ ನಗಿಸುತ್ತಲೇ ಮಾತು ಆರಂಭಿಸಿದೆ.

 ಏನು ಮಾತನಾಡಲಿ? ಜಾತಿ ಜಗಳ, ಧರ್ಮ ನಿಂದನೆ, ದ್ವೇಷಗಳ ಬಗ್ಗೆ? ನಾಳೆ ಇನ್ನಾವ ಚರ್ಚ್, ಮಸೀದಿ, ಮಂದಿರಗಳು ಧ್ವಂಸಗೊಳ್ಳಲಿವೆಯೋ ಹೇಡಿಗಳಿಂದ ಎನ್ನುವ ಆತಂಕದ ಬಗ್ಗೆ ಹೇಳಲೇ?  ಗೋಮಾಂಸ, ಕುರಿ ಮಾಂಸ, ಹಂದಿ ಮಾಂಸ ಎಸೆದು ದಾಂಧಲೆ ಎಬ್ಬಿಸುವ ಬಗ್ಗೆ ಹೇಳಿ ನಿಮ್ಮನ್ನೆಲ್ಲಾ ಕಂಗಾಲಾಗಿಸಲೇ?  ಗ್ಲೋಬಲ್ ವಾರ್ಮಿಂಗ್ ಬಗ್ಗೆ, ಕ್ಲೈಮೇಟ್ ಚೇಂಜ್ ಬಗ್ಗೆ, ಬೆಂಗಳೂರು ಬರಿದಾಗುತ್ತಿರುವ ಬಗ್ಗೆ... ಸಸ್ಪೆನ್ಸ್ ಥ್ರಿಲರ್ ಥರ ಮಜಾ ಕೊಡುವ, ಕುತೂಹಲ ಕೆರಳಿಸುವ, ರಾಷ್ಟ್ರಭಕ್ತಿಯನ್ನು ಉಕ್ಕಿಸುವ, ಉನ್ಮತ್ತಗೊಳಿಸುವ ಮತ್ತು ಒಂದು ಧರ್ಮದ ಬಗ್ಗೆ ಮತ್ತೊಂದು ಧರ್ಮದವರು ವಿಷಕಾರಲು ಸಹಾಯ ಮಾಡಬಲ್ಲ ಭಯೋತ್ಪಾದನೆ, ಟೆರರಿಸಂ ಬಗ್ಗೆ ಮಾತನಾಡಲೇ? ಶೌರ್ಯ, ಪರಾಕ್ರಮಗಳನ್ನು ಕೊಚ್ಚಿಕೊಳ್ಳುವ, ಮನುಷ್ಯರ ಹೆಣಗಳ ರಾಶಿಯ ಮೇಲೆ ಜಯದ ಕೇಕೆ ಹಾಕುವ ಯುದ್ಧಗಳ ಬಗ್ಗೆ ಮಾತನಾಡಲೇ?...

 ಮತ್ತೆ ನನ್ನ ಕೂದಲುಗಳನ್ನೆ ದುರುಗುಟ್ಟುತ್ತಿದ್ದೀರಲ್ಲವೇ? ತಲೆ ಮುಖ್ಯ. ಕೂದಲುಗಳಲ್ಲ... ಅದೆಲ್ಲದಕ್ಕು ಅತ್ಯಂತ ಮುಖ್ಯವಾದ್ದು ಮನುಷ್ಯನಲ್ಲಿರಬೇಕಾದ್ದು ಯಾವುದು ಗೊತ್ತಾ?... ಮನಸು. ಅದರ ತುಂಬ ಪ್ರೀತಿ. ಆ ಪ್ರೀತಿ ನನ್ನ ಬಹುದೊಡ್ಡ ಕಾಳಜಿ.
ನೋಡಿ ಜಗತ್ತು ಇಂದು ಬರಿಯ ವಸ್ತುಗಳಿಂದ ತುಂಬಿ ಹೋಗಿದೆ. ಬಾಂಬ್, ಬಂದೂಕುಗಳ ಗಾಯಗಳಿಂದ ಜಖಂಗೊಂಡಿದೆ. ಭಯೋತ್ಪಾದನೆ ಒಂದು ಕೋಡ್ ವರ್ಡ್. ಅದರ ಮೂಲಕ ಮುಸ್ಲಿಂ ನಂಬಿಕೆಗಳಿಂದ ಜನರನ್ನು ಡಿಟ್ಯಾಚ್ ಮಾಡುವ ಹುನ್ನಾರದ್ದು. ಮತ್ತು ಅಂಥ ಯತ್ನದ ಮೂಲಕ ವ್ಯಾಪಾರದ ಮಾರ್ಗವನ್ನು ಸೃಷ್ಟಿಸುವ, ವಸ್ತುಗಳನ್ನು ಮಾರುವ ಸಾಧ್ಯತೆಗಳನ್ನು ಸೃಷ್ಟಿಸುವುದು ಅದರ ಹಿಂದಿನ ಉದ್ದೇಶ. ಅಭದ್ರತೆ, ಅಸುರಕ್ಷತೆ ಎನ್ನುವ ದೊಡ್ಡ ಭಯ ಹುಟ್ಟಿಸಿ ಇಡೀ ದೇಶಕ್ಕೆ ಭದ್ರತೆ ಒದಗಿಸುವ ಸೆಕ್ಯುರಿಟಿ ಟೆಕ್ನಾಲಜಿ ಮಾರಾಟ ಮಾಡುವ ತಂತ್ರ. ಆ ಮೂಲಕ ಹಣ ಲೂಟಿ ಮಾಡುವ ದಗಾಕೋರುತನ. ವಸ್ತುಗಳು ನಮ್ಮ ಜೀವ ರಕ್ಷಿಸಬಲ್ಲವು. ನಮ್ಮನ್ನು ನಿಶ್ಚಿಂತೆಯಿಂದಿರಸಬಲ್ಲವು. ಒಟ್ಟಾರೆ ರಕ್ಷಣೆ ಒದಗಿಸಬಲ್ಲವು ಎಂದು ನಮ್ಮನ್ನು ನಂಬಿಸೋದು ಭಯೋತ್ಪಾದನೆ ಎನ್ನುವ ಕಾನ್ಸೆಪ್ಟ್ ನಿಂದ ಸಾಧ್ಯವಿದೆ. ಅದನ್ನೇ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಮಾಡುತ್ತಿರುವುದು. ಒಂದು ಬಾಂಬ್ ಸಿಡಿದಾಗ, ಭಯೋತ್ಪಾದನಾ ದಾಳಿಗಳು ನಡೆದಾಗೆಲ್ಲ ಅಮೆರಿಕಕ್ಕೆ ಅವಕಾಶಗಳ ಬುಲಂದ್ ದರವಾಜಾ ತೆರಕೊಳ್ಳುತ್ತದೆ. ಅದು ದೇಶವನ್ನು ಮತ್ತು ನಮ್ಮನ್ನೆಲ್ಲ ಗ್ರಾಹಕರನ್ನಾಗಿಸಿಬಿಡುತ್ತದೆ.

 ವಸ್ತುಗಳನ್ನು ಕೊಳ್ಳಲೆಂದೇ ನಾವೆಲ್ಲ ಹೆಚ್ಚು ಹೆಚ್ಚು ಸಂಪಾದನೆಗಿಳಿಯುತ್ತಿರುವುದು. ಯುದ್ಧ ಕೂಡ ಇಂಥದೇ ವ್ಯಾಪಾರದ ಸರಕು. ಇಡೀ ರಾಷ್ಟ್ರ ಕೇವಲ ಬಾಂಬ್, ಬಂದೂಕು ಖರೀದಿಯಲ್ಲೇ ಮುಳುಗಿ ಹೋಗುವಂತೆ ಮಾಡುವುದು ಈ ಯುದ್ಧ ಎನ್ನುವ ತಂತ್ರಕ್ಕೆ ಸಾಧ್ಯವಿದೆ. ಅದಕ್ಕೇ ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಾಗ ಕಿಡಿ ಹೊತ್ತಿಸಲಾಗುತ್ತದೆ.
 ನಾವೆಲ್ಲ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಸಂಘರ್ಷಕ್ಕಿಳಿದು, ಯುದ್ಧದಂಥ ಸ್ಥಿತಿಗೆ ಬಂದು ನಿಂತು, ಅವರ ಬಾಂಬ್, ಬಂದೂಕು ಕೊಂಡು ಪರಸ್ಪರ ಹೆಣಗಳ ಉರುಳಿಸುತ್ತ ಕೂರುವುದೇ?

 ಮೊಬೈಲ್ ಕೊಡುವ ಸುಖಗಳಿಗೆ ಹಾತೊರೆಯುತ್ತ, ಹೆಚ್ಚು ಸಂಪಾದನೆಯಿಂದ ಹೆಚ್ಚು ವಸ್ತುಗಳನ್ನು ಕೊಂಡು ಅದರಲ್ಲೇ ಸುಖವನ್ನರಸುತ್ತ, ಮಕ್ಕಳ ಕನಸುಗಳ ಬಗ್ಗೆ, ಅವರ ಬದುಕಿನ ಬಗ್ಗೆ ನಿಷ್ಕಾಳಜಿ ವಹಿಸುತ್ತ ಅವರ ಕೈಗೂ ಒಂದಷ್ಟು ವಸ್ತುಗಳನ್ನು ಕೊಟ್ಟು ಟೈಂ ಪಾಸ್ ಮಾಡಿ ಎಂದು ಹೇಳುತ್ತ,  ಜಾಬ್, ಪ್ರಮೋಷನ್, ಗಳಿಕೆ, ಮೈಥುನ, ಎಕ್ಸ್ಟ್ರಾ ಮ್ಯಾರಿಟಲ್ ಅಫೇರ್ ಗಳಲ್ಲಿ ಮುಳುಗಿ ಹೋಗುವ ಪಾಲಕರು ಅದೆಷ್ಟು ಕ್ವಾಲಿಟಿ ಟೈಂ ಮಕ್ಕಳಿಗೆ ಕೊಡುತ್ತಿದ್ದೀರಿ?

 ಹೆಗಲಿಗೆ ಹಾಕುವ ಬ್ಯಾಗ್, ಒಂದಷ್ಟು ಪುಸ್ತಕಗಳ ರಾಶಿ, ಮೊಬೈಲ್, ಕಂಪ್ಯೂಟರ್ ಇವನ್ನಷ್ಟೇ ಮಕ್ಕಳಿಗೆ ಒದಗಿಸಲು ಸಾಧ್ಯವಾಗಿದೆ ನಿಮಗೆ ಮತ್ತು ನಿಮ್ಮ ಗಳಿಕೆಗೆ. ಮಕ್ಕಳಿಗೆ ನೀವು ಕೊಡಬೇಕಾದ್ದನ್ನೇ ಕೊಡುತ್ತಿಲ್ಲ. ಅದೆಷ್ಟು ತಾಯಂದಿರು ಬೆಳೆದ ನಿಮ್ಮ ಮಗ ಅಥವಾ ಮಗಳನ್ನು ಬಿಗಿದಪ್ಪಿ, ಚುಂಬಿಸಿ ಅಕ್ಕರೆ ತೋರಿಸುತ್ತೀರಿ ದಿನ ನಿತ್ಯ? ಅವರ ಕನಸು, ಗುರಿ, ಆಶಯ, ಟೇಸ್ಟ್, ತುಡಿತಗಳ ಬಗ್ಗೆ ಅದೆಷ್ಟು ಅಪ್ಪಂದಿರು ಮಕ್ಕಳ ಕೈ ಹಿಡಿದು ಭರವಸೆ, ಧೈರ್ಯ ಮೂಡಿಸಿದ್ದೀರಿ. ದಣಿದ ಮನಸುಗಳಿಗೆ ಸಮಾಧಾನ , ಸಾಂತ್ವನ ಹೇಳುತ್ತೀರಿ... ಪ್ರೀತಿಯಿಂದ?

ಈ ಪ್ರೀತಿ ಕೊರತೆಯಿಂದಲೇ ಇಂದು ವಿಶ್ವ ಬಡವಾಗುತ್ತಿರುವುದು. ಯಾರಿಗೋ ಏನನ್ನೋ ಕಳಕೊಳ್ಳುವ ಮತ್ತು ವಂಚಿತರಾಗುತ್ತಿರುವ ಅಸಮಾಧಾನ. ಈ ದೊಡ್ಡ ಅಸಮಾಧಾನ, ಕೊರತೆ ಅಸಹನೀಯ ಎನಿಸಿದಾಗ? ಹುಟ್ಟೋದೇ ಸೈಕ್, ಸ್ಯಾಡಿಸಂ... ಅದೇ ಯುದ್ಧ, ಭಯೋತ್ಪಾದನೆಯಂಥ ಕಾನ್ಸೆಪ್ಟ್ ಗಳು. ಇಂಥ ರಾಕ್ಷಸಿ ಅಪಾಯಗಳಿಂದ ಒಂದಿಡೀ ಜನರೇಶನ್ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಪಾಲಕರೇ.

 ಅಸಮಾನತೆಯಿಂದ ನರಳುತ್ತಿರುವ ಮತ್ತು ಹತಾಶೆಯಿಂದ ಕಂಗೆಟ್ಟಿರುವ ಇಡೀ ವಿಶ್ವ ತಾಪದಿಂದ ಕುದಿಯುತ್ತಿದೆ. ಭಯೋತ್ಪಾದನೆ, ಯುದ್ಧದ ಕಾನ್ಸೆಪ್ಟ್ ಗಳು ನಮ್ಮನ್ನೆಲ್ಲ ಹಿಂಡುತ್ತಿವೆ.  ಹೇಗೆ ಶಮನಗೊಳಿಸುವುದು? ಹೇಗೆ ಇದರಿಂದ ಬಚಾವಾಗೋದು? ಇದಕ್ಕೊಂದೇ ಪರಿಹಾರ. ಪ್ರೀತಿ.

 ನಮ್ಮ ನಡುವಿನ ಜಾತಿ, ಧರ್ಮಗಳ ತಪ್ಪು ಗ್ರಹಿಕೆಗಳಿಂದ ಹುಟ್ಟಿದ ಸಂಶಯದ ಗೋಡೆಗಳ ಕಿತ್ತೊಗೆಯುವ ಮೂಲಕ ಇದು ಸಾಧ್ಯವಿದೆ. ನಾಳೆ ನಿಮ್ಮ ಮಕ್ಕಳಿಗೆ ಬ್ಯಾಗಿನಲ್ಲಿ ಪುಸ್ತಕಗಳ ಜತೆ ಇಡುವ ಊಟ, ತಿಂಡಿಯ ಡಬ್ಬಿಗಳಲ್ಲಿ ನೀವೂ ಬಾಂಬ್ ಇಟ್ಟು ಕಳಿಸಿ. ಯಾವ ಬಾಂಬ್? ಪ್ರೀತಿಯ ಬಾಂಬ್!

ಈ ಪ್ರೀತಿ ಎನ್ನುವ ಬಾಂಬಿನ ಮುಂದೆ ಬೇರೆ ಯಾವ ಬಾಂಬಿನ ಕರಾಮತ್ತು ನಡೆಯೋದಿಲ್ಲ. ಇಡೀ ದೇಶ, ರಾಜ್ಯ, ವಿಶ್ವ ಸುರಕ್ಷಿತವಾಗಿರಲು ಈ ಪ್ರೀತಿ ಬಾಂಬ್ ಹೊಂದಬೇಕಾಗಿದೆ. ನಿಮ್ಮ ಮಗುವನ್ನು ಹೆಚ್ಚು ಪ್ರೀತಿಸಿ, ಇತರ ಮಾನವರ ಬಗ್ಗೆ ಮನುಷ್ಯ ಪ್ರೀತಿ ಮೂಡುವಂತೆ ಅವರನ್ನು ಬೆಳೆಸಿ. ಈ ಜಗದ ತುಂಬ ಪ್ರೀತಿ ಉಳಿಯಲಿ. ಮನುಷ್ಯನೂ, ಮನುಷ್ಯ ಪ್ರೀತಿಯೂ ಉಳಿಯಲಿ.

 ನಮಸ್ಕಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...