
ಈ ಕಟ್ಟಡ ನಮ್ಮ ಬೆಂಗಳೂರು
ಇಂಟರ್ ನ್ಯಾಷನಲ್ ಏರ್ ಪೋರ್ಟ್... ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ... ಕೇಳಿಸುತ್ತಿತ್ತು...!
ಅದೆಷ್ಟು ಸ್ವಚ್ಚಂದವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳ ಗೂಡುಗಳಿಲ್ಲಿ ಮುರುಟಿಹೋಗಿವೆಯೋ? ನೂರಾರು ಎಕರೆ ಜಮೀನಿನಲ್ಲಿ ಹೀಗೆ ಕಾಂಕ್ರೀಟ್ ಕಾಡೊಂದನ್ನು ಕಟ್ಟಿ ಅಲ್ಲಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಜಾಗ ಮಾಡಿಕೊಡಲು ಅದೆಷ್ಟು ಮರಗಳು ಉರುಳಿದವೋ.. ಅಲ್ಲೆಲ್ಲ ಗೂಡು ಕಟ್ಟಿ ಪ್ರೀತಿ, ಪ್ರಣಯ, ಮೈಥುನ, ಮರಿಗಳ ಆರೈಕೆಯಲ್ಲಿ ತೊಡಗಿದ್ದ ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಕಳಕೊಂಡ ನೆಲೆಯಿಂದ ಅದೆಷ್ಟು ಕಂಗಾಲಾದವೋ...
ಬಹುಶಃ ಈ ಗುಬ್ಬಚ್ಚಿಗಳು ತಾವು ಕಳಕೊಂಡ ಬದುಕನ್ನಿಲ್ಲೇ ಮತ್ತೆ ಹುಡುಕಿಕೊಳ್ಳಲು ಅಲೆಯುತ್ತಿರಬಹುದೇ? ಅಥವಾ ಕಟ್ಟುವ, ಕೆಡವುವ ಪ್ರಕ್ರಿಯೆಯಲ್ಲಿ ಪ್ರಾಣ ಕಳಕೊಂಡ ತಮ್ಮವರ, ಪೂರ್ವಜರ ಮರೆಯಲಾಗದೇ ಇಲ್ಲೇ ಅವರಾತ್ಮಗಳ ಸ್ಮರಣೆಯಲ್ಲೇ ಕಾಲ ಕಳೆಯ ಬಂದಿರಬಹುದೇ... ತಮ್ಮ ಗೂಡುಗಳ ನೆನಪುಗಳಿಂದ ಜೀವ ತಡೆಯಲಾಗದೇ ಇಲ್ಲೇ ಬಿಕ್ಕಳಿಸುತ್ತ ಅಲೆಯುತ್ತಿರಬಹುದೇ.... ನಮ್ಮ ನೆಲೆ, ಅನ್ನದ ಮೂಲವನ್ನೇ ಕಿತ್ತುಕೊಂಡು ನಿಮ್ಮ ಲೋಹದ ಹಕ್ಕಿಗಳ ಹಾರಾಟ ನೋಡುತ್ತ ಮೋಜು ಮಾಡುತ್ತಿರುವ ಮನುಜರೇ ನಿಮ್ಮ ಬದುಕು ಇನ್ನಷ್ಟು ಸುಂದರವಾಗಿರಲಿ ಎಂದು ಉಲಿಯುತ್ತಿವೆಯೋ?... ನಮ್ಮ ಜಾಗೆ ನಮಗೆ ಕೊಟ್ಟುಬಿಡಿ ಎಂದೇನೂ ನಾವು ಕೇಳಲ್ಲ... ನಿಮ್ಮ ಹಾಗೆ ಪರಿಹಾರವನ್ನೂ ಕೇಳಲ್ಲ...? ಕೇಳುವುದಾದರೂ ಯಾರನ್ನ?... ಎಂದು ಚುಚ್ಚುತ್ತಿವೆಯೋ...!
ನಾವೂ ನಿಮ್ಮ ಒಡನಾಡಿಯಾಗೇ ಅನಾದಿ ಕಾಲದಿಂದಲೂ ನಿಮ್ಮ ಜತೆಗೇ ಇದ್ದವರು. ನಾಡಲ್ಲಿ ನೀವು ಮರಗಳನ್ನೆಲ್ಲ ಕಡಿದು ಮನೆ ಕಟ್ಟಿಕೊಂಡಿರಿ... ಕೆಲವು ಪುಣ್ಯವಂತರು ನೆಟ್ಟ ಪುಟ್ಟ ಮರಗಳಲ್ಲೇ ನಾವು ಹ್ಯಾಗೊ ಬದುಕ ಕಟ್ಟಿಕೊಂಡಿದ್ದೆವು. ನಿಮ್ಮ ಕಿವಿಗಳಿಗೆ ಚಿಂವ್ ಚಿಂವ್ ಸುಪ್ರಭಾತ ಹೇಳುತ್ತ ಮುಂಜಾವಿನ ಶುಭ ಸಂದೇಶ ಹೊತ್ತು ನಿಮ್ಮ ದಿನದ ಬದುಕಿಗೆ ಹಾರೈಸುತ್ತ ಇದ್ದೆವು... ಆದರೆ, ಮೆಟ್ರೊ, ರಸ್ತೆ ಅಗಲೀಕರಣ, ಬಹುಮಹಡಿ ಕಟ್ಟಡ, ಶಾಪಿಂಗ್ ಮಾಲ್ ಎಂದೆಲ್ಲ ನಮ್ಮನ್ನು ನಿಮ್ಮ ಬದುಕಿನಿಂದಲೇ ಕಿತ್ತು ಬಿಸಾಕಿದಿರಿ... ಈಗ ಊರಾಚೆ ಇಲ್ಲಾದರೂ ರೈತರ ಜತೆ ಒಡನಾಡಿಯಾಗಿರೋಣ ಎಂದರೆ ಲೋಹದ ಹಕ್ಕಿಗಳ ಸಾಕಿಕೊಂಡ ನೀವುಗಳು ಅವುಗಳ ಹಾರಾಟಕ್ಕೆ ಕೊನೆಗೆ ನಮ್ಮ ಗೂಡುಗಳನ್ನೇ ಕಿತ್ತುಕೊಂಡಿರಿ... ಅಷ್ಟಾದರೂ ನಾವು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲಿಲ್ಲ... ನಿಮ್ಮನ್ನೆಲ್ಲ ಆ ಗ್ಲೋಬಲ್ ವಾರ್ಮಿಂಗ್ ಭೂತ ಎದ್ದಿದೆಯಲ್ಲ ಅದೇ ಬುದ್ಧಿ ಕಲಿಸುತ್ತದೆ...
ಆದರೂ ಸ್ವಾಮೀ... ಇಲ್ಲಿ ರೈತ ಬೆಳೆದ ಕಾಳುಗಳಲ್ಲಿ ನಾವೂ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಸಂತೋಷದಿಂದ ಹಾರಾಡಿಕೊಂಡದ್ದೆವು. ಈಗೆಲ್ಲಿ? ಆ ಭೂಮಿ ಮೇಲೆ ನಿಮ್ಮ ಮಹಲು ನಿಂತಿದೆ. ವಿದೇಶಿಯರು ವಾ ವಾ ಎನ್ನುವಂಥ ಮಹಲು ಕಟ್ಟಿಕೊಂಡವರು ನೀವು.... ನಿಮ್ಮಲ್ಲೊಂದೇ ಮನವಿ. ನಿಮ್ಮ ಹಲ್ಲುಗಳ ಸಂದಿಯಷ್ಟೇ ಅಗಲವಾಗಿರುವ ನಮ್ಮ ಹೊಟ್ಟೆಗೆ ನೀವು ತಿಂದು ಎಸೆದ ಒಂದಗುಳ ಅನ್ನವಾದರೂ ಕೊಡಿ ಸ್ವಾಮಿ.. ಎಂದು ಗುಬ್ಬಚ್ಚಿಗಳು ಚಿಂವ್ ಚಿಂವ್ ಗುಟ್ಟುತ್ತಿವೆಯೋ... ಅಷ್ಟಕ್ಕೂ ಮನುಷ್ಯರ ಹಾಗೆ ಅವರದೂ ಒಂದು ಬದುಕಿದೆಯಲ್ಲವೇ..?
ಕಾಮೆಂಟ್‌ಗಳು