ವಿಷಯಕ್ಕೆ ಹೋಗಿ

ಮೊದಲ ವಿದೇಶ ಪಯಣ ಆರಂಭದ ಕ್ಷಣಗಳು...

ನಾರ್ವೆ ದೇಶಕ್ಕೆ ಹೊರಡುವ ನನ್ನ ತಯಾರಿ ಏನ್ ಕೇಳ್ತಿರಾ... ಚಂದ್ರಲೋಕಕ್ಕೆ ರಾಕೇಶ್ ಶರ್ಮಾ ಹೊರಡುವಾಗಲೂ ಇಷ್ಟು ಚಡಪಡಿಕೆ, ಹಿಂಜರಿಕೆ ಅನುಭವಿಸಿರಲಿಕ್ಕಿಲ್ಲ! ಜತೆಯಲ್ಲಿ ಅಮ್ಮ ಮತ್ತು ನನ್ನ ತಂಗಿಯ ಅತ್ತೆ ಕೂಡ ಹೊರಡಲಿದ್ದರು. ಚಳಿಗಾಲದಲ್ಲಿ ಯುರೋಪ ಹೊರಟುನಿಂತ ನಮ್ಮ ಸಾಹಸಕ್ಕೆ ಗೆಳೆಯರೂ ಬೆಚ್ಚಿದ್ದರು. ಪಾಸಪೋರ್ಟ್ ತೆಗೆಯಿಸಿಕೊಳ್ಳುವುದಕ್ಕೂ ಹಿಂಜರಿದಿದ್ದ ನಾನು ವಿಸಾ, ಟಿಕೆಟ್ ಅಂತೆಲ್ಲಾ ಹೆಣಗಾಡುವುದನ್ನು ನೆನೆದರೆ ನನಗೇ ನಗು ಬರುತ್ತಿತ್ತು. ವಿಮಾನ ಹತ್ತುವ ಮುಂಚಿನ ಕೆಲ ಕ್ಷಣಗಳಿವು...


ಎಷ್ಟೋ ವರ್ಷಗಳ ನಂತರ ನನ್ನ ಕೇಶರಾಶಿ ಅಂತೂ ಒಂದು ಸಲೂನಿನ ಕತ್ತರಿ ರುಚಿ ಕಂಡಿತು...
ನವದೆಹಲಿಯಲ್ಲಿನ ನಾರ್ವೆ ಕಾನ್ಸುಲೇಟ್ ಆಫೀಸಿನಲ್ಲಿ ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಪಾಸಪೋರ್ಟ್ ಪಡೆದುಕೊಂಡ ಕ್ಷಣ... ಅಯ್ಯೋ ಅದೊಂದು ಅತ್ಯಂತ ಕಠಿಣ ಸಮಯ!
ಯುರೋಪ ಚಳಿಗೆ ಇಲ್ಲಿಂದಲೇ ತಯಾರಿ! ಕನ್ನಡಿ ಮುಂದೆ ನನ್ನ ಮೇಲೆ ನಾನೇ ಜೋಕು ಮಾಡಿಕೊಂಡು ನಕ್ಕಿದ್ದೇ ನಕ್ಕಿದ್ದು.

ವೈಯಕ್ತಿಕವಾಗಿ ನಾನೆಂದೂ ವಿದೇಶದ ಸೊಲ್ಲೆತ್ತಿದವನಲ್ಲ. ಈ ಹಿಂದೆ ಒಂದು ಸಾರಿ ಪ್ಯಾರಿಸ್ ಮತ್ತು ದುಬೈ ಹೋಗುವ ಬಗ್ಗೆ ಆಫೀಸಿನ ಮೇಲಧಿಕಾರಿಯಾಗಿದ್ದ ಆರ್ ಪಿ ಜಗದೀಶ್ ಆಹ್ವಾನ ನೀಡಿದಾಗ ಪಾಸಪೋರ್ಟ್ ಇಲ್ಲ ಎನ್ನುವ ನೆವ ಹೇಳಿ ಬಚಾವಾಗಿದ್ದೆ. ಹಾಗೂ ಬೈಸಿಕೊಂಡಿದ್ದೆ. ಈಗ ನಾನು ವಿದೇಶಕ್ಕೆ ತೆರಳಲೇಬೇಕಾದ ಪ್ರಸಂಗ ಬಂದೇಬಿಟ್ಟಿತು. ಜತೆಯಲ್ಲಿ ಹೋಗೋಣ ಎಂದು ಗೆಳೆಯರು ಕೂಡ ಮನಸು ಮಾಡಿದ್ದರು. ಕಡೆ ಘಳಿಗೆಯಲ್ಲಿ ಕೈಕೊಟ್ಟರು. ಅಂತೂ ಅಮ್ಮ, ತಂಗಿಯ ಅತ್ತೆ ಇಬ್ಬರನ್ನು ಕಟ್ಟಿಕೊಂಡು ವಿದೇಶಕ್ಕೆ ಹೊರಡಲು ಸಿದ್ಧನಾದೆ. ಅದರ ಕೆಲ ಆರಂಭದ ಉತ್ಸಾಹ ಹೀಗಿತ್ತು....

 ನಾರ್ವೆ ಹೊರಡಲು ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲ! ನೆರವಾದ ಗೆಳೆಯ, ಸಹೋದ್ಯೋಗಿ ಬಿ ಎನ್ ಶ್ರೀಧರ್ ನನ್ನ ಪುಟ್ಟ ಮನೆಯವರೆಗೂ ಕುಟುಂಬ ಸಮೇತ ಬಂದು ಹಾರೈಸಿ ಹೋದ. ಥ್ಯಾಂಕ್ಸ್ ಶ್ರೀಧರ್... ಮತ್ತೊಬ್ಬ ಗೆಳೆಯ ವಸೀಂ ಖಾನ್ ನನಗೆ ಚೆನ್ನೈನಲ್ಲಿ ತುಂಬ ಸಹಾಯ ಮಾಡಿದ್ದ. ಅವನಿಗೈ ಥ್ಯಾಂಕ್ಸ್...
 ಜತೆಯಲ್ಲಿ ಹೋಗೋಣ ಎಂದು ಪುಸಲಾಯಿಸಿ ನನ್ನ ಕುದುರೆ ಹತ್ತಿಸಿದವರು... ಶ್ರೀಕಾಂತ, ತಿಪ್ಪಣ್ಣ ಸರ್, ಗಂಗಾಧರಯ್ಯ... ಮನೆವರೆಗೂ ಬಂದು ಹಾರೈಸಿದರು. 25ಕ್ಕೆ ಹೊರಡುವ ನಿರ್ಧಾರವಾಗಿತ್ತು. ಕಡೆ ಕ್ಷಣ ನನ್ನ ಪ್ರೋಗ್ರಾಂ ಚೇಂಜ್ ಆಗಿತ್ತು. ಆದರೂ ಇವರೆಲ್ಲ 24ರ ರಾತ್ರಿ ವಿಶ್ ಮಾಡಲೆಂದು ಮನೆಗೆ ಬಂದೇಬಿಟ್ಟರು. ನಾವೆಲ್ಲ ನಾಲ್ವರು ಶ್ರೀ ಕಾರಿನಲ್ಲಿ ಏರಪೋರ್ಟ್ ಹೋಗಿ ಬಂದೆವು. ಅದೊಂಥರ ರಿಹರ್ಸಲ್ ಅನ್ನಿ. ಏರಪೋರ್ಟಿನಿಂದ ವಾಪಸ್ ಬಂದಾಗ ಸರಿ ರಾತ್ರಿ ಆಗಿತ್ತು. ಅವರೆಲ್ಲ ರಾತ್ರಿ ತಿಪಟೂರಿಗೆ ಪ್ರಯಾಣಿಸಿದರು. ನಾನು ಅಂತೂ 27ರ ರಾತ್ರಿ ನಾರ್ವೆ ಹೊರಟು ನಿಂತೆ.
ನಮ್ಮ ಕುಟುಂಬದ ಎಲ್ಲ ಸದಸ್ಯರು ಏರಪೋರ್ಟ್ ವರೆಗೂ ಬೀಳ್ಕೊಡಲು ಬಂದ ಕ್ಷಣ...


ಏರಪೋರ್ಟ್ ನಲ್ಲಿ ನನ್ನ ಅಣ್ಣ ರಫೀಕ್ ತಮ್ಮಂದಿರಾದ ಶಮ್ಮು, ಝಕೀರ್, ತಂಗಿ ಷಹನಾಜ್, ಭಾವ ರಶೀದ್ ಅವರೆಲ್ಲರ ಮಕ್ಕಳು ಮತ್ತಿತರ ಸಂಬಂಧಿಕರು ಅತ್ಯಂತ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟರು. ನನ್ನ ಕಣ್ಣಲ್ಲೂ ನೀರಿತ್ತು. ಮಕ್ಕಳಂತೂ ನನ್ನ ಅಮ್ಮನ ತಬ್ಬಿಕೊಂಡು ಅಳುತ್ತಿದ್ದವು. ಓಹ್ ಅದೊಂದು ನಿಜಕ್ಕೂ ಹೃದಯಸ್ಪರ್ಶಿ ಕ್ಷಣ...
ಅನಾರೋಗ್ಯ ಕಾರಣದಿಂದ ನನ್ನ ತಂದೆ ಬಂದಿರಲಿಲ್ಲ .
ಚೆಕ್ ಇನ್ ಆಗುವ ಹೊತ್ತಿನಲ್ಲಿ ನನ್ನ ಅಮ್ಮ ಮತ್ತು ತಂಗಿಯ ಅತ್ತೆ...
ಅದೆಷ್ಟು ಹೊತ್ತು ನನ್ನ ತಮ್ಮಂದಿರು, ತಂಗಿ, ಭಾವ ಮತ್ತವರ ಕುಟುಂಬ, ಮಕ್ಕಳು ಅಳುತ್ತ ಕೈಬೀಸುತ್ತಲೇ ಇದ್ದರು...
ಇಮಿಗ್ರೇಷನ್, ಫಾರಂ ಫಿಲಪ್ ಮತ್ತಿತರ ಫಾರ್ಮಾಲಿಟಿ ನಂತರ ನಮ್ಮ ವಿಮಾನ ಪ್ರವೇಶದ ಗೇಟ್ ತಲುಪಿದಾಗ ಮಧ್ಯರಾತ್ರಿ ಕಳೆದಿತ್ತು. ವಿಮಾನ ನಾಲ್ಕು ಗಂಟೆ ತಡ ಎಂದು ಅನೌನ್ಸ್ ಮಾಡಿದರು. ಆ ಕೊರೆವ ಚಳಿಯಲ್ಲಿ ನಾಲ್ಕು ಗಂಟೆ ಹೋ... ನರಕಯಾತನೆ! ನೋಡಬೇಕಿತ್ತು ನನ್ನ ಅಮ್ಮ ಮತ್ತು ನನ್ನ ತಂಗಿ ಅತ್ತೆಯ ಸ್ಥಿತಿ... ಬೆಂಗಳೂರು ವಿಮಾನ ನಿಲ್ದಾಣದ ಚಳಿಗೇ ಹೀಗೆ ಇನ್ನು ಯುರೋಪಿನ ಚಳಿಗೆ ಏನು ಗತಿ ಎಂದು ಬೆಚ್ಚಿದ್ದೆ...
ಅಂತೂ ಬೆಳಗಿನಜಾವ 5 ಗಂಟೆಗೆ ಏರ್ ಫ್ರಾನ್ಸ್ ವಿಮಾನ ಹತ್ತುವ ಕ್ಷಣ ಬಂತು... ನಮ್ಮನ್ನು ಪ್ಯಾರಿಸ್ ತನಕವಷ್ಟೇ ಕೊಂಡೊಯ್ಯುವ ವಿಮಾನ ಹತ್ತಿದೆವು. ಪ್ಯಾರಿಸ್ ನಿಂದ ನಾರ್ವೆ ರಾಜಧಾನಿ ಒಸ್ಲೊಗೆ ಮತ್ತೊಂದು ವಿಮಾನ ಹತ್ತಬೇಕಿತ್ತು... ವಿಮಾನದೊಳಗಿನ ಕೆಲ ಚಿತ್ರಗಳು ಮುಂದಿನ ಪೋಸ್ಟಿನಲ್ಲಿ ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...