ವಿಷಯಕ್ಕೆ ಹೋಗಿ

ಪ್ಯಾರಿಸ್ ತಲುಪಿದಾಗ...

ನಮ್ಮ ನೆಲದಿಂದ ಮತ್ತೊಂದು ನೆಲಕ್ಕೆ ನಮ್ಮೆಲ್ಲರನ್ನು ಸುರಕ್ಷಿತವಾಗಿ ತಂದಿಳಿಸಿದ ಏರ್ ಫ್ರಾನ್ಸ್ ವಿಮಾನ ಪ್ಯಾರಿಸ್ ನಿಲ್ದಾಣದಲ್ಲಿ...
ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನನ್ನಮ್ಮನನ್ನು ವ್ಹೀಲ್ ಚೇರಿನಲ್ಲಿ ಕರೆತಂದು, ಅವಳ ಜತೆ ನಮ್ಮನ್ನೂ ಕನೆಕ್ಟಿಂಗ್ ಫ್ಲೈಟಿಗೆ ಸಾಗಿಸುತ್ತಿರುವ ಆಫ್ರಿಕನ್ ಯುವಕ ಮತ್ತು ಕಾರು ಓಡಿಸುತ್ತಿರುವ ಬಿಳಿ ಚೆಲುವೆ. ನನ್ನ ಅವ್ವ ಮತ್ತು ತಂಗಿಯ ಅತ್ತೆ, ಇಲ್ಲಿನ ಹೆಣ್ಣುಮಕ್ಕಳು ಭರ್ರನೇ ಕಾರು ಓಡಿಸುವದ ಕಂಡು ದಂಗಾಗಿದ್ದರು. ಆಕೆ ಭರ್ತಿ ಸ್ಪೀಡಿನಲ್ಲಿ ನಮ್ಮನ್ನು ಮುಂದಿನ ವಿಮಾನವಿರುವ ಟರ್ಮಿನಲ್ ಗೆ ಕರೆತಂದಳು. ಅಲ್ಲಿಗೆ ತಲುಪುತ್ತಿದ್ದಂತೆ ಆಕೆ ಹ್ಯಾಪಿ ಜರ್ನಿ ಎಂದಳು. ನಾನೊಂದು ಹೆಮ್ಮೆಯ ಸೆಲ್ಯುಟ್ ಹೇಳಿದೆ. ಆಕೆ ಸುಂದರ ಸ್ಮೈಲ್ ಕೊಟ್ಟಳು...
ಪ್ಯಾರಿಸ್ ವಿಮಾನ ನಿಲ್ದಾಣದ ಸೊಬಗನ್ನು ಸವಿಯುತ್ತಿರುವ ನನ್ನವ್ವ ಮತ್ತು ತಂಗಿಯ ಅತ್ತೆ...
ನಮ್ಮ ಮೆಜೆಸ್ಟಿಕ್ ನಲ್ಲಿ ಸಿಬಿಟಿ ಬಸ್ ಗಳ ಹಾಗೆ ಸಾಲಂಕೃತವಾಗಿ ನಿಂತ ಡೊಮೆಸ್ಟಿಕ್ ಫ್ಲೈಟ್ ಗಳು.
ಪ್ಯಾರಿಸ್ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಟರ್ಮಿನಲ್ ಗಳಲ್ಲಿ ಒಂದು ಟರ್ಮಿನಲ್ ಇದು. ಇಲ್ಲಿಂದಲೇ ನಾವು ಒಸ್ಲೊ ಗೆ ಪ್ರಯಾಣ ಬೆಳೆಸಿದ್ದು. ಇಲ್ಲೂ ನಾವು ಸರಿ ನಾಲ್ಕು ಗಂಟೆ ಕಾಯಬೇಕಾಗಿ ಬಂತು. ಇಡೀ ಟರ್ಮಿನಲ್ ಸುತ್ತು ಹಾಕಿ ಬಂದೆ. ಕೆಲವೆಡೆ ಫೊಟೊಗ್ರಾಫ್ ತೆಗೆದುಕೊಳ್ಳಲು ಅನುಮತಿ ಇರಲಿಲ್ಲ. ಇಲ್ಲಿನ ಶಾಪ್ ಗಳಲ್ಲೂ ಒಂದು ಸುತ್ತುಹಾಕಿ ಬಂದೆ. ಎಲ್ಲವೂ ತುಂಬಾ ದುಬಾರಿ. ಒಂದು ಬಾಟಲ್ ನೀರು ಖರೀದಿಸಿದ್ದೇ ತಡ, ದುಬಾರಿ ಬೆಲೆ ಬಿಸಿ ತಟ್ಟಿತು. ಒಂದು ಬಾಟಲು ನೀರಿಗೆ 3.5 ಯೂರೋ! ಅಂದರೆ ಹೆಚ್ಚು ಕಮ್ಮಿ 250 ರೂಪಾಯಿ! ಹಾಯ್ ಹಾಯ್... ಬಾಟಲ್ ಪ್ರಿಸರ್ವ್ ಮಾಡಿಡೋಣ ಅನಿಸಿತು. ವಿಮಾನದಲ್ಲಿ ಬಾಟಲ್ ಗೆ ಅವಕಾಶವೇ ಇಲ್ಲ.!
ನೀರಿಗಿಂತ ವೈನ್, ವಿಸ್ಕಿ ಬೆಲೆಯೇ ಎಷ್ಟೋ ವಾಸಿ. ಏರ್ ಪೋರ್ಟಿನಲ್ಲಿ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲೇಬಾರದು ಅಂದುಕೊಂಡೆ. ನಮ್ಮ ಬೆಂಗಳೂರು ಏರ್ ಪೋರ್ಟ್ ನಲ್ಲೂ ಹೀಗೆ ಆಯ್ತು. ನಾಲ್ಕು ಗಂಟೆ ಫ್ಲೈಟ್ ತಡವಾದ್ದರಿಂದ ಕಾದು ಸುಸ್ತಾಗಿತ್ತು. ಮೊದಲೇ ಬೋರು, ಮೇಲೆ ಆ ಬೆಳಗಿನ ಜಾವದ ಕೊರೆವ ಚಳಿ! ಅಬ್ಬಾ.. ಒಂದು ಲೋಟ ಕಾಫಿ-ಟೀ ಅನ್ನಾದರೂ ಕುಡಿಯೋಣ ಅಂದುಕೊಂಡೆ. ಉಡುಪಿ ಕ್ಯಾಂಟಿನ್ ನ ಒಂದು ಸಣ್ಣ ಗೂಡಂಗಡಿಯಂಥ ಚಹದಂಗಡಿ ಕಾಣಿಸಿತು. ಮಾಮೂಲಿ ದರಕ್ಕಿಂತ ಕೊಂಚ ಜಾಸ್ತಿ ಇರಬಹುದು ಅಂದುಕೊಂಡೆ. ಅಲ್ಲೂ ಒಂದು ಕಾಫಿಗೆ 60 ರೂಪಾಯಿ! ಹೋ ಏರ್ ಪೋರ್ಟ್ ಸಹವಾಸ...


 ಪ್ಯಾರಿಸ್ ವಿಮಾನ ನಿಲ್ದಾಣದ ಒಂದು ಡೊಮೆಸ್ಟಿಕ್ ಟರ್ಮಿನಲ್ ನ ಒಳಾಂಗಣ....
ಪ್ಯಾರಿಸ್ ಪತ್ರಿಕೆಗಳು... ಇಲ್ಲಿನ ಭಾಷಾ ಪತ್ರಿಕೆಗಳಿಗೇ ಮೊದಲ ಪ್ರಾಶಸ್ತ್ಯ. ಬಹುಸುಂದರ ವಿನ್ಯಾಸವುಳ್ಳ ಈ ಪತ್ರಿಕೆಗಳ ಸ್ವರೂಪವೇ ಅನನ್ಯವಾದುದು. ಇಷ್ಟದ ಯಾವ ಪತ್ರಿಕೆಗಳನ್ನು ಬೇಕಾದರೂ ಎತ್ತಿಕೊಂಡು ಬೋರ್ಡ್ ಆಗಬಹುದು. ಅತ್ಯಂತ ಆಕರ್ಷಕವಾದ ಇಲ್ಲಿನ ಪತ್ರಿಕೆಗಳು ಓದುಗನನ್ನು ಸೆಳೆಯುವಂಥವು. ನಾನೊಂದು ಇಂಗ್ಲಿಷ್ ಪತ್ರಿಕೆ ಎತ್ತಿಕೊಂಡಿದ್ದೆ. ಅದರಲ್ಲಿ ಕೇಸರಿ ಬಗ್ಗೆ ಒಂದು ವಿಶೇಷ ವರದಿ ಓದಿದೆ. ಕೇಸರಿಯನ್ನು ಎಲ್ಲಿ, ಹೇಗೆ ಬೆಳೆಯುತ್ತಾರೆ, ಅದರ ವಹಿವಾಟು ಹೇಗೆ, ಆರೋಗ್ಯದ ದೃಷ್ಟಿಯಿಂದ ಅದರ ಮಹತ್ವ ಏನು ಎನ್ನುವ ಅಂಶಗಳು ಅವತ್ತಿನ ಪತ್ರಿಕೆಯ ವಿಶೇಷ ಹೈಲೈಟ್ ಆಗಿತ್ತು. ವರದಿಯ ಬರವಣಿಗೆಗಿಂತ ಅದರ ಪ್ರಜೆಂಟೇಷನ್ ಮತ್ತು ವಿವರಗಳು ತುಂಬ ಆಪ್ತವಾಗಿದ್ದವು. ವಿನ್ಯಾಸ ಸಮಗ್ರತೆಯನ್ನು ಕಟ್ಟಿಕೊಟ್ಟಿತ್ತು. ಪ್ಯಾರಿಸ್ ನಿಂದ ಒಸ್ಲೊವರೆಗಿನ ಎರಡು ತಾಸಿನ ಸಮಯದಲ್ಲಿ ಬಹುತೇಕ ಸಮಯವನ್ನು ನಾನು ಆ ಪತ್ರಿಕೆಯ ಒಟ್ಟು ಸ್ವರೂಪ ಗಮನಿಸಲು ಬಳಸಿಕೊಂಡೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...