ವಿಷಯಕ್ಕೆ ಹೋಗಿ

ಭಾವನೆಗಳ ಅಲೆಯಲ್ಲಿ ದಡ ಸೇರುವ ಹೊತ್ತು...


ಪರದೇಶದಲ್ಲಿ ಕಂಡ ಪಾಕಿ... ಒಸ್ಲೊ ವಿಮಾನ ನಿಲ್ದಾಣದಿಂದ ನಮ್ಮನ್ನು ನಗರಕ್ಕೆ ತಲುಪಿಸಿದ ಟ್ಯಾಕ್ಸಿ ಚಾಲಕ ಪಾಕಿಸ್ತಾನದವ! ಆರಂಭದಲ್ಲಿ ಆತ ನಾರ್ಗಿ ಭಾಷೆಯಲ್ಲೇ ಮಾತನಾಡಿದ. ನನ್ನ ತಂಗಿಯ ಗಂಡ ಖಾನ್ ಗೂ ಆ ಭಾಷೆ ಕೊಂಚ ಗೊತ್ತು. ಇಬ್ಬರೂ ಮಾತನಾಡುವುದನ್ನು ಕಂಡಾಗ ಈತ ಪಾಕಿ ಅನ್ನೋದು ಗೆಸ್ ಮಾಡಲೂ ಸಾಧ್ಯವಾಗಿರಲಿಲ್ಲ. ನನ್ನವ್ವ, |ಭಾವ, ಅವರ ತಾಯಿ ಹಿಂದಿನ ಸೀಟಿನಲ್ಲಿ ಕುಳಿತರೆ, ನಾನು ಚಾಲಕನ ಪಕ್ಕದ ಸೀಟಿನಲ್ಲಿ ಕೂತೆ.
ಟ್ಯಾಕ್ಸಿ ಸ್ವಲ್ಪ ದೂರ ಸಾಗುತ್ತಿದ್ದಂತೆ, ಆಪ್ ಪಂಜಾಬ್ ಸೆ ಹೋ... ಎಂದನಾತ. ಅರೇ! ಆಪ್ ಹಿಂದೂಸ್ತಾನೀ ಅಂದೆ. ಹ್ಞಾ ... ಬಗಲ್ ಮೈ ಹೈ ನಾ ಪಾಕಿಸ್ತಾನ್ ವಹಾ ಕಾ ಹ್ಞೂ ಅಂದ. ತೋ ಯಾರ್ ಏ ಹೋ ಗಯೀ ನಾ ಬಾತ್... ಜಿಂದಗೀ ಮೇ ಪೆಹಲೀ ಬಾರ್ ಕೊಯಿ ಪಾಕಿಸ್ತಾನಿ ಸೇ ಮಿಲ್ ರಹಾ ಹ್ಞೂ... ಪಡೋಸಿ... ಎಂದು ನಕ್ಕೆ. ಆತನೂ ಯುರೋಪ್ ಸ್ಟೈಲಿನಲ್ಲಿ ದೊಡ್ಡದಾಗಿ ನಕ್ಕ. ಕಿತನೇ ಸಾಲ್ ಸೇ ಯಹಾ ಹೋ... ಎಂದೆ. ವೈಸೆ ಭಿ ಮೈ ಅಪನೀ ಆಧೀ ಜಿಂದಗೀ ಯುರೋಪ್ ಮೆ ಹೀ ಕಾಟಾ... ಪೆಹಲೆ ಹಾಲಂಡ್ ಮೆ ಥಾ, ಫಿರ್ ಲಂಡನ್, ಪ್ಯಾರಿಸ್ ಫಿರ್ ಯಹ್ಞಾ ಅಂದ... ಅರೇ ಲಂಡನ್ ಛೋಡ್ ಕೆ ಇಧರ್ ಕ್ಯುಂವ್ ಭಾಯ್...  ಅಂದೆ ನಾನು. ಅರೇ ಯಾರ್ ವಹ್ಞಾ ಇತನಾ ಶೋರ್ ಶರಾಬಾ ಹೈ, ಲೋಗ್ ಹಯ್ಯಾಶೀ ಕರತೆ ಹೈ, ಬಹುತ್ ಮಸ್ತಿ ಕರತೇ ಹೈ... ಮುಝೆ ಪಸಂದ್ ನಹೀ ಆಯಾ, ಇಸಿಲಿಯೇ ಇಧರ್ ಆಯಾ. ಯಹ್ಞಾ ಬಹುತ್ ಡೀಸೆನ್ಸಿ ಹೈ, ಪೀಸ್ ಹೈ... ಹ್ಞಾ ಲೋಗ್ ಜಿಯಾದಾ ಡಿಪ್ಲೊಮ್ಯಾಟಿಕ್ ಲಗತೇ ತೋ ಹೈ, ಲೇಕಿನ್ ತಂಗ್ ನಹೀ ಕರತೆ ಕಿಸೀಕೋ... ಎಂದೆಲ್ಲ ನಾರ್ವೆ ಬಣ್ಣಿಸಿದ.
ಟ್ಯಾಕ್ಸಿ ಟನಲ್ ನೊಳಕ್ಕೆ ನುಗ್ಗಿತು. ಶರವೇಗದಲ್ಲಿ ಸಾಗುತ್ತಲೇ ಇತ್ತು. ಅರೇ ಇದೇನು ಇಷ್ಟು ಉದ್ದನೆಯ ಟನೆಲ್ ಎಂದು ದಂಗಾದೆ. ಸಾಬ್ ಹಮ್ ಅಭಿ ಸಮುಂದರ್ ಸೆ 60 ಮೀಟರ್ ನೀಛೆ ಸೆ ಗುಜರ್ ರಹೇ ಹೈ ಅಂದ.... ವಾವ್ ಸಮುದ್ರದ ಕೆಳಕ್ಕೆ 60 ಮೀಟರ್ ಆಳದಲ್ಲಿ! ಹೌದು. ಸಮುದ್ರದ ಕೆಳಕ್ಕೆ 60 ಮೀಟರ್ ಆಳ ಕೊರೆದು ಈ ಟನಲ್ ರೂಪಿಸಿದ್ದಾರೆ. ಇದು ಕಮ್ಮಿ ಎಂದರೂ ಒಂದಷ್ಟು ಕಿಲೋಮೀಟರ್ ಇರಬಹುದು. ಇದೇ ಮೊದಲ ಸಲ ಇಂಥ ಟನೆಲ್ ಒಳಕ್ಕೆ ಸಾಗಿದ ಅನುಭವ ನನ್ನದಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಮತ್ತೆ ನೆಲದ ರಸ್ತೆ ಕಾಣಿಸಿತು, ಒಂದಷ್ಟು ಕಟ್ಟಡಗಳು ಬೆಟ್ಟಗಳು ಕಾಣಿಸಿಕೊಂಡವು... ತುಂಬ ದಟ್ಟ ಮಂಜು ಕವಿದಿತ್ತು. ತುಂಬ ದೂರ ಸಾಗಿದ ನಂತರ ಮತ್ತೆ ಟ್ಯಾಕ್ಸಿ ಟನೆಲ್ ಸೇರಿಕೊಂಡಿತು. ಮತ್ತೆ ಸಮುದ್ರದ ಕೆಳಗಾ... ಅಂದೆ. ಇಲ್ಲ ಇದು ನಗರದ ಮಧ್ಯಭಾಗದಿಂದ ಯಾವ ಕಟ್ಟಡಗಳಿಗೂ ಧಕ್ಕೆ ಮಾಡದೇ ಕೊರೆದು ರೂಪಿಸಿದ ಟನೆಲ್ ಎಂದು ಟ್ಯಾಕ್ಸಿ ಚಾಲಕ ವಿವರಿಸಿದ.
ಪಾಕಿಸ್ತಾನ ಅಲ್ಲಿನ ಪಂಜಾಬ್ ಪ್ರಾಂತದ ಬಗ್ಗೆ, ಅಲ್ಲಿನ ಜನಜೀವನದ ಬಗ್ಗೆ, ಒಕ್ಕಲುತನ, ವ್ಯಾಪಾರ ಎಲ್ಲ ಬಿಟ್ಟು ಹೊಸ ಜಗತ್ತು, ಬದುಕನ್ನರಸಿ ಇಲ್ಲಿಗೆ ಬಂದ ಪರಿಯನ್ನು ಆತ ವಿವರಿಸಿದ. ತಿನ್ನುವ ಅನ್ನ, ನೀರು, ಸೇವಿಸುವ ಗಾಳಿ, ತುಳಿವ ಮಣ್ಣು ಎಲ್ಲ ಒಂದೇ ರೀತಿಯದು. ಉಡುವ, ತೊಡುವ ಉಡುಗೆ, ಉಲಿವ ಮಾತು ಎಲ್ಲ ಎಷ್ಟು ಸಾಮ್ಯತೆ! ಯಾವ ಪಾಕಿಸ್ತಾನ, ಯಾವ ಹಿಂದೂಸ್ತಾನ! ಎಲ್ಲ ಒಂದು ಕಲ್ಪಿತ ಇಬ್ಭಾಗ... ಭಾವನೆಗಳಿಗೆಲ್ಲಿ ಇಬ್ಭಾಗದ ಹಂಗು...  ಈ ಕೊರೆವ ಚಳಿಯಲ್ಲಿ, ಇಬ್ಬನಿ ತುಂಬಿದ ಹಾದಿಯಲ್ಲಿ ಮನುಷ್ಯ ಪ್ರೀತಿ ನೆನೆದಾಗ ಮತ್ತೆ ಕಣ್ಣಿಗೆರಗುವ ಮಂಜು! ಹೇಳಿ ಯಾರು ಪರಕೀಯರು ನಮ್ಮಿಬ್ಬರಲ್ಲಿ... ಅಲ್ಲಾಹನೇ ಧರ್ತಿ ಬನಾಯಾ, ಸೀಮಾ ತೋ ಹಮ್ ನೇ ಹೀ ಡಾಲಾ ನಾ!... ಅಬ್ ತುಮ್ಹಾರೆ ಔರ್ ಹಮ್ಹಾರೆ ಬೀಚ್ ಕಾ ಫಾಸಲಾ ಕಿತನಾ ಹೈ... ಇಸ್ ಸೀಟ್ ಮೇ ಮೈ, ಉಸ್ ಸೀಟ್ ಮೇ ಆಪ್... ನಯ್ಯಾ ತೋ ಏಕ್ ಹೀ ಹೈ, ಹಮದೋನೋ ಕೋ ಉಸ್ ಪಾರ್ ಲೇ ಜಾರಹೀ ಹೈ... ಅಬ್ ಹಮ್ ಲೋಗೋಂಕೀ ಜಿಂದಗೀ ಭೀ ಐಸೇ ಹೀ ಸೋಚೋ ನಾ ಭಯ್ಯಾ!... ನಿಜ ಪಾಕಿ. ನಾವಿಷ್ಟು ಹತ್ತಿರವಿದ್ದರೂ ನಮ್ಮ ನಡುವೆ ನಾವೇ ರೂಪಿಸಿಕೊಂಡ ಅದೆಷ್ಟು ಕಂದರಗಳು ಹೀಗೆ...!
ಅಂತೂ ಹಿಂದೂಸ್ತಾನ ಪಾಕಿಸ್ತಾನದ ಮಾತು, ಭಾವನೆಗಳು, ಅಭಿಮಾನ ಎಲ್ಲ ಅನುಮಾನಗಳ ಕಂದರ ದಾಟಿ ದಡ ಸೇರಿಕೊಂಡೆವು. ದಡದಲ್ಲೋ! ನಗರದ ಪ್ರತಿ ಇಂಚು ತಿದ್ದಿ ತೀಡಿ ಮಾಡಿದಂತಿದ್ದ ಇನಫ್ರಾಸ್ಟ್ರಕ್ಚರ್, ಆ ಮಂಜಲ್ಲೂ ಹೊಳೆವ ರಸ್ತೆ, ಬೆಳಗುವ ದೀಪಗಳು,  ಹಾರ್ನ್ ಗಳ ಸದ್ದೇ ಇಲ್ಲದೇ ಸ್ತಬ್ಧ ಮಲಗಿದ್ದಂಥ ನಗರಕ್ಕೆ ಹೊಸ ಹಕ್ಕಿಗಳ ಪ್ರವೇಶವಾಗಿದ್ದು ಯಾರಿಗೂ ಸೆನ್ಸ್ ಆಗಲಿಲ್ಲವೇನೋ! ತೊಂದರೆಯೂ ಅನಿಸಲಿಲ್ಲ. ಅಲ್ಲಲ್ಲಿ ರಸ್ತೆಗುಂಟ ಸಾಗುತ್ತಿದ್ದ ಮನುಷ್ಯರು ಮತ್ತವರ ಜತೆಗಿನ ನಾಯಿಗಳು ಚಳಿ ಹೊತ್ತುಕೊಂಡೇ ಸಾಗಿದ್ದರು. ನೋಡ ನೋಡುತ್ತಿದ್ದಂತೆ ಟ್ಯಾಕ್ಸಿ ನಿಂತೇಬಿಟ್ಟಿತು. ಪಾಕಿಯ ಕೈಕುಲುಕಿದೆ. ಆತ ಭಾವ ಕೊಟ್ಟ ಕಾರ್ಡ್ ಗೀಚಿಕೊಂಡು ತನ್ನ ದುಡಿಮೆ ತಾನು ಪಡೆದು ಖುದಾ ಹಫೀಜ್ ಎನ್ನುತ್ತ ಸಾಗಿದ. ನಗರದ ಹೃದಯಭಾಗದಲ್ಲೇ ಇರುವ ತಂಗಿಯ ಮನೆ ಬಂದೇಬಿಟ್ಟಿತು. ಗಲ್ಲಿಯೂ ಮಲಗಿದಂತಿತ್ತು. ಯಾವ ನರಪಿಳ್ಳೆಯ ಸದ್ದೂ ಕೇಳಿಸಲಿಲ್ಲ. ಇಲ್ಲಿನ ನಾಯಿಗಳೂ ಬೊಗಳುವುದಿಲ್ಲ ಎಂದೆನಿಸುತ್ತದೆ.
ಅಪಾರ್ಟಮೆಂಟಿನ ಲಿಫ್ಟ್ ನಲ್ಲಿ ಆರನೇ ಮಹಡಿಯ ಗುಂಡಿ ಒತ್ತುತ್ತಿದ್ದಂತೆ ಹಳೆ ಕಾಲದ ಕುದುರೆಗಾಡಿಯಲ್ಲಿ ಟಕ್ಕು ಟಕ್ಕು ಸಾಗಿದಂತೆ ಅನಿಸತೊಡಗಿತು. ಮಹಡಿ ತಲುಪಿದೆವು. ಲಿಫ್ಟ್ ಗೆ ಹೊಂದಿಕೊಂಡಿದ್ದ ಅಂದವಾದ ಕೆಲ ಮೆಟ್ಟಿಲುಗಳ ದಾಟಿ ನಿಂತೆ. ಮುಂದೊಂದು ಬಾಗಿಲು ಕಾಣಿಸಿತು. ಹಾಗೇ ಕಣ್ಣು ಹಾಯಿಸಿದಲ್ಲೆಲ್ಲ ಎಲ್ಲ ಬಾಗಿಲುಗಳು ಒಂದೇ ರೀತಿ! ಅದೇ ಮನೆ. ಆ ಗುಂಡಿ ಒತ್ತಿ ಎನ್ನುವಾಗಲೇ, ಬಾಗಿಲು ಆಗಲೇ ತೆರಕೊಂಡಿತ್ತು, ನನ್ನ ತಂಗಿ ಹೂಗುಚ್ಛ ಹಿಡಿದು ವೆಲ್ ಕಮ್ ಎಂದು ಇಷ್ಟಗಲ ಮುಖಮಾಡಿ ನಿಂತೇ ಇದ್ದಳು. ಅರೇ, ಬಾಗಿಲು ತಟ್ಟಲೇ ಇಲ್ಲ. ಅದು ಹ್ಯಾಗೆ ಗೊತ್ತಾಯ್ತು ನಾವು ಬಂದಿದ್ದು ಎಂದೆ. ಅದು ಹಾಗೇ ಅಂದು ನಕ್ಕು ಪಕ್ಕದಲ್ಲೇ ನಿಂತುಕೊಂಡಿದ್ದ ಅಮ್ಮನನ್ನು ತಬ್ಬಿ ಕಣ್ಣೊರೆಸಿಕೊಂಡಳು. ಅಷ್ಟು ಗದ್ದಲದ ಸಂತೆಯಲ್ಲೂ ಅಣ್ಣನ ದನಿ ಕೇಳಿಸಿಕೊಳ್ಳುವ ತಂಗಿಯರ ನಾಡಿಂದ ಬಂದವಳಲ್ಲವೇ ಇವಳು... 
ನಿನ್ನ ಮಡಿಲಲ್ಲೊಂದು ನಿನ್ನಷ್ಟೇ ಮುದ್ದಾದ ಮಗು ಮಲಗುವುದನ್ನು ಕಣ್ಣಾರೆ ಕಾಣಲು ನಾನು ಮೊದಲ ಬಾರಿಗೆ ಸಾಗರ ದಾಟಿ ಹಾರಿ ಬರುವೆನೆಂದು ವರ್ಷಗಳ ಹಿಂದೆ ನನ್ನ ತಂಗಿಗೆ ಮಾತು ಕೊಟ್ಟಿದ್ದೆ. ಆ ಮಾತನ್ನು ಉಳಿಸಿಕೊಂಡ ಖುಷಿ ನನ್ನದಾಗಿತ್ತು...

ಕಾಮೆಂಟ್‌ಗಳು

Asian Paradise ಹೇಳಿದ್ದಾರೆ…
ವೆರೀ ಸ್ವೀಟ್ ಆಫ್ ಯೂ ಡಿಲಾವರ್, ಮೈ ರೀಗಾರ್ಡ್ಸ್ ಟೂ ಹರ್, ಶಿ ಈಸ್ ಲುಕಿಂಗ್ ಲೈಕ್ ಏಂಜಲ್. ವೀಣಾ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...