ವಿಷಯಕ್ಕೆ ಹೋಗಿ

ಏಯ್ ಧೀರ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ, ನನ್ನ ಪರವಾಗಿ...


ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು.
ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್  ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ.
ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗೆಯ ಮುಂಚೆ ಆಕೆ ಎದುರಿಸಿದ ಆತಂಕದ ಕ್ಷಣಗಳನ್ನು ಕಂಡವನು ನಾನು. ಹೆರಿಗೆಯ ನಂತರ ಆಕೆ ಅತ್ಯಂತ ಕೇರ್ ಯುನಿಟ್ ನಲ್ಲಿ ನಿರಾಳವಾಗಿ, ಹೊಸ ಜೀವವೊಂದಕ್ಕೆ ಜನ್ಮವಿತ್ತ ಖುಷಿ ಅನುಭವಿಸುತ್ತ, ಹೆಮ್ಮೆಪಡುತ್ತ ಮಲಗಿದ್ದಾಳೆ ಎಂದು ಆಕೆಯ ಗಂಡ ಖಾನ್ ಸಾಹೇಬರು ಹೇಳಿದರು. ಜೀ ಹುಜೂರ್ ಎಂದು ತಲೆಯಲ್ಲಾಡಿಸಿ ನಿಂತುಬಿಟ್ಟೆ. ಅವಳ ಬಳಿಗೆ ನಾವೆಲ್ಲ ಹೋಗುವುದಕ್ಕೆ ಅನುಮತಿಯೇ ಇಲ್ಲ. ಆದರೆ ಆಗಷ್ಟೇ ಕಣ್ತೆರೆದ ಮಗುವನ್ನು ಅದರಪ್ಪ ಟ್ರಾಲಿಯಲ್ಲಿ ತಂದು ನನಗೂ ದರ್ಶನ ಮಾಡಿಸಿದರು. ಕಣ್ಣುಗಳ ಜತೆ ಮನಸೂ ತುಂಬಿಬಂತು. ಅದರಮ್ಮನ ಕಂಡು ಒಂದು ದಿಲ್ ಪೂರ್ವಕ ಸೆಲ್ಯುಟ್, ವಿಶ್ ಮಾಡಬೇಕು, ಒಂದು ಹಗ್ ಮಾಡಬೇಕೆಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಆಕೆ ಇನ್ನು ಮನೆ ಸೇರುವುದು ನಾಲ್ಕು ದಿನಗಳ ನಂತರವೇ.
ನಾನಿಲ್ಲಿಗೆ ಬಂದ ಸಮಯ ಸಾರ್ಥಕವಾಯ್ತು. ಮತ್ತೆ ಮರಳಿ ನಮ್ಮ ನೆಲ ತುಳಿಯುವ ಸಮಯವೂ ಬಂದೇಬಿಟ್ಟಿತು. ದೇಶ ನಮ್ಮಪ್ಪಂದಲ್ಲವಲ್ಲ. ಒಂದು ವಾರ ಮರುಪ್ರಯಾಣದ ಟಿಕೆಟ್ ಪೋಸ್ಟಪೋನ್ ಮಾಡಬಹುದಿತ್ತು. ಆಗಲಿಲ್ಲ. ಇಲ್ಲಿ ಕಂಡ ಮೋಹಕ ಜಗತ್ತು, ಪಡೆದ ಅನುಭವ ಮಹತ್ತದ್ದೇ. ನನಗೆ ಇದನ್ನು ಮಿಸ್ ಮಾಡಿಕೋತಿದಿನಿ ಅನಿಸೋದೇ ಇಲ್ಲ. ಆದರೆ, ತಂಗಿಗೊಂದು ತಾಯ್ತನದ ಸಂಭ್ರಮಕ್ಕೆ ಅಭಿನಂದನೆ ಸಲ್ಲಿಸಿ ಹಗ್ ಮಾಡಲಾಗಲಿಲ್ಲ, ಸೆಲ್ಯೂಟ್, ವಿಶ್ ಮಾಡಲಾಗಲಿಲ್ಲ. ಫೋನಲ್ಲಿ ಅದೆಲ್ಲ ಮಾಡಿದೆ. ಮನಸು ತುಂಬಲಿಲ್ಲ. ಆ ತಾಯಿಯ ಸ್ಪರ್ಶ ನನಗೆ ಈ ಸಂದರ್ಭದಲ್ಲಿ ಸಿಕ್ಕಲಿಲ್ಲ ಆ ನೋವು ನನ್ನ ಕಾಡುತ್ತಲೇ ಇರುತ್ತದೆ. ಹೊಕ್ಕಳುಬಳ್ಳಿ ಕತ್ತರಿಸುವುದಕ್ಕೆ ಮುಂದಾದ ವೈದ್ಯರ ಕತ್ತರಿಯನ್ನೇ ಹಿಡಿದೆಳೆದನಲ್ಲ ಈ ಧೀರ, ಎಂಥ ದೊಡ್ಡ ಸಂದೇಶ ಕೊಟ್ಟುಬಿಟ್ಟ ಈ ಜೀವಜಗತ್ತಿಗೆ! ಇವ ನನ್ನ ದಿಲ್ ಗಿಳಿದುಬಿಟ್ಟ. ಆ ಕೈಗಳನ್ನೊಮ್ಮೆ ಮುಟ್ಟಿದೆ. ಹಣೆಗಿಟ್ಟುಕೊಂಡೆ, ತುಟಿಗಳಿಂದ ಮುದ್ದಿಸಿದೆ. ಅವನ ಕಿವಿಯಲ್ಲಿ ಹೇಳಿದೆ, ಏಯ್ ಧೀರ, ನಾ ಹೋಗಿ ಬರುವೆ, ಈ ಹೆಮ್ಮೆಯ ಕೈಗಳಿಂದ ಒಮ್ಮೆ ನನ್ನ ಪರವಾಗಿ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...