ವಿಷಯಕ್ಕೆ ಹೋಗಿ

ಬನ್ಸಾಲಿಯ ಬದ್‌ಬೂ ಗುಜರಾತ್ ಕೀ...

ಚಿತ್ರ: ಗೋಲಿಯೋಂಕಾ ರಾಸಲೀಲಾ: ರಾಮ್-ಲೀಲಾ
ನಿರ್ದೇಶನ: ಸಂಜಯಲೀಲಾ ಬನ್ಸಾಲಿ.


ಶೇಕ್ಸ್‌ಪಿಯರ್‌ನ ರೋಮಿಯೋ ಜ್ಯೂಲಿಯಟ್ ನಾಟಕದ ಅಡಾಪ್ಟೇಷನ್ ಸಿನಿಮಾ ಇತಿಹಾಸದಲ್ಲಿ  ಮುಗಿಯದ ಅಧ್ಯಾಯ. ರಾಮಲೀಲಾ ಎನ್ನುವ ನಾಟಕ ನಾರ್ತ್ ಇಂಡಿಯಾದಲ್ಲಿ ಜನಜನಿತ. ಇದು ಪಶ್ಚಿಮೀ ಕ್ಲಾಸಿಕ್ ಪ್ರಜ್ಞೆ ಮತ್ತು ರಾಮಾಯಣ ’ಮಹಾಕಾವ್ಯ’ವನ್ನು ಜನಮಾನಸದಲ್ಲಿ ಶಾಶ್ವತ ಬೀಜವಾಗಿ ಬಿತ್ತುವ ವ್ಯವಸ್ಥಿತ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗ.
ಸಂಜಯಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೊಂಕಾ ರಾಸಲೀಲಾ: ರಾಮಲೀಲಾ‘ ಸಿನಿಮಾ ಈ ಎರಡೂ ರಾಜಕೀಯ ನಾಟಕಗಳ ಸಮ್ಮಿಶ್ರಣವನ್ನು ಬೇರೆಯದೇ ನೆಲೆಯಲ್ಲಿ ಕಾಣಲೆತ್ನಿಸಿದೆ. ನನ್ನ ಅಭಿಪ್ರಾಯದಲ್ಲಿ ಇದು ಇಂಡಿಯಾದ ಸಮಾಜೋ-ರಾಜಕೀಯ ಸಂದರ್ಭದಲ್ಲಿ ಬಹುಮುಖ್ಯವಾದ ಪ್ರತಿಕ್ರಿಯಾತ್ಮಕ ಧೋರಣೆಯ  ಸಿನಿಮಾ.  ಅಭಿನಂದನೆಗಳು ಬನ್ಸಾಲಿ.
 ಗುಜರಾತ್ ನೆಲಸಂಸ್ಕೃತಿಯೊಳಗಿನ ಅಸಹಿಷ್ಣುತೆ, ವೈಷಮ್ಯ ಮತ್ತು  ಮನುಷ್ಯ ಮತ್ಸರದ ಭಯಾನಕ ಚಿತ್ರಣದೊಂದಿಗೆ ಆರಂಭಗೊಳ್ಳುವ ಸಿನಿಮಾ ಕುತೂಹಲಕಾರಿ. ಗುಜರಾತಿನ ಕೆಲ ಪ್ರದೇಶ, ಮುಖ್ಯವಾಗಿ ಅಲ್ಲಿನ ಕರಾವಳಿಯ ವೈಬ್ರೆನ್ಸಿ ಅಸಹಿಷ್ಣುತೆಯಿಂದ ಕೂಡಿರುವುದರ ಸಂಕೇತದಂತೆ ಚಿತ್ರದಲ್ಲಿ ಧ್ವನಿಸಿದೆ. ಬಂದೂಕು, ಬುಲ್ಲೆಟ್‌ ಎನ್ನುವ ಕೊಲ್ಲುವ ವಸ್ತುಗಳ ವ್ಯಾಪಾರ ನಡೆಸುವ ಅಲ್ಲಿನ ಮಾರುಕಟ್ಟೆ ಸಂಸ್ಕೃತಿ ಮತ್ತು ರಾಜಕೀಯ ಚಿಂತನೆ ಚಿತ್ರದ ವಸ್ತುವಿಗೆ ವಿಶಾಲ ತಳಹದಿಯ ಸಮಾಜೋ-ಆರ್ಥಿಕ ಅಡಿಪಾಯವನ್ನೂ ಒದಗಿಸಿದೆ. ಈ ಅಡಿಪಾಯದ ಮೇಲೆ ನಿರ್ದೇಶಕ ಬನ್ಸಾಲಿ ತಮ್ಮ ಪ್ರಚಲಿತ ರಾಜಕೀಯ ಮತ್ತು ಒಟ್ಟು ಮಾನವೀಯ ಚಿಂತನೆಯನ್ನು ಇಟ್ಟು ನೋಡಲೆತ್ನಿಸಿದ್ದಾರೆ. ಎರಡು ಗುಂಪುಗಳ ಹಿಂಸಾತ್ಮಕ ಸಂಘರ್ಷದ ಚಿತ್ರಣವನ್ನು ಮನುಷ್ಯ ಮತ್ಸರದ ಮುಖ್ಯ ನೆಲೆಗಳನ್ನಾಗಿಸಿಕೊಂಡಿದ್ದಾರೆ. ಅದರ ನಡುವೆ ಅರಳುವ ಮಾನವ ಪ್ರೇಮ ಕಾಣುವ ಅವಸ್ಥೆಯನ್ನು ವಿಶ್ಲೇಷಿಸಿದ್ದಾರೆ.
 ಒಂದು ದೃಶ್ಯ ಹೀಗಿದೆ- ಪ್ರತಿ ಮನೆಯ ಅಂಗಳ, ನೆಲಮಾಳಿಗೆ, ವಿಶಾಲ ಹಜಾರಗಳ ತುಂಬ ಒಣಹಾಕಿದ ಕೆಂಪು ಮೆಣಸಿನಕಾಯಿ ರಾಶಿ ಇದೆ. ಮತ್ತಲ್ಲಿ ಕೆಲಸ ಮಾಡುವ ಮಹಿಳೆಯರಿದ್ದಾರೆ. ಅವರ ನಡುವೆ ಸಾಗಿ ಬರುವ ಲೇಡಿ ನೆಗೆಟಿವ್ ಕ್ಯಾರೆಕ್ಟರ್ (ವಿಧವೆ) ಮೆಣಸಿನಕಾಯಿ ಮೂಸುತ್ತಾಳೆ. ಜತೆಯಲ್ಲಿದ್ದವನೊಬ್ಬ ಸೀನುತ್ತಾನೆ. ಆಕೆ ಆ ಖಾಟು ವಾಸನೆಯನ್ನೇ ಅದ್ಭುತ ಪರಿಮಳದಂತೆ ಆಘ್ರಾನಿಸುತ್ತಾಳೆ.
ಮೆಣಸಿನಕಾಯಿಯ ದಟ್ಟವಾದ ಖಾಟು ವಾಸನೆ ಹೀರುವುದು ನಾಗರಿಕತೆಯೊಂದರ ಮಾನಸಿಕ ರೌರವ ಸ್ಥಿತಿಯನ್ನು ಸಾಂಕೇತಿಸುತ್ತ ಹಲವು ಅರ್ಥಛಾಯೆಗಳನ್ನು ಮೂಡಿಸುತ್ತದೆ. ಇದರ ಮುಂದುವರಿಕೆಯ ದೃಶ್ಯಗಳಲ್ಲಿ ಅಡುಗೆ ಮನೆಗಳಲ್ಲೂ ಬುಲ್ಲೆಟ್‌ಗಳನ್ನು ಉಪ್ಪಿನಕಾಯಿಯಂತೆ ಡಬ್ಬದಲ್ಲಿ ಕೂಡಿಡುವ ಹೆಂಗಸರ ಮನಸ್ಥಿತಿ, ಹಿಂಸೆಯ ಒಡಲನ್ನೇ ಸಾಂಕೇತಿಸುತ್ತದೆ. ಹೆಣ್ಣು  ಹೃದಯಗಳು, ಅವರ ಎದೆಯೊಳಗಿನ ಸೆಕ್ಸ್ ಹಪ ಹಪಿ, ಗಂಡಸರಲ್ಲಿನ ಕಾಮದ ಹಸಿ ಹಸಿ ಆಕರ್ಷಣೆ ತಣಿಸುವ ಬ್ಲೂ ಫಿಲಂ ವೀಕ್ಷಿಸುವ ಚಟ, ಪರಸ್ಪರ ವೈಷಮ್ಯ, ವೈರತ್ವಗಳು, ಹೆಣ್ಣನ್ನು ಸಾಮೂಹಿಕವಾಗಿ ಉಂಡು ಬಾಯೊರೆಸಿಕೊಳ್ಳುವ ದೃಶ್ಯಗಳು ಅತ್ಯಾಚಾರ ಪ್ರವೃತ್ತಿಯನ್ನು ಸಾರುತ್ತವೆ. ಬಂದೂಕು, ಇನ್ನಿತರ ಆಧುನಿಕ, ಅತ್ಯಾಧುನಿಕ ಅಸ್ತ್ರ-ಶಸ್ತ್ರಗಳು, ಮಾದಕ ವಸ್ತುಗಳಂಥ ಕಳ್ಳ ಮಾಲುಗಳ ಸಾಗಾಟಕ್ಕೆ ಸಮುದ್ರ ತೀರಗಳನ್ನು ಬಳಸಿಕೊಳ್ಳುವ ಗುಜರಾತ್ ಕಡಲ ಕಿನಾರೆಯ ’ತಲೆ’ಸಾಮ್ರಾಜ್ಯ ಹೇಸಿಗೆ ಹುಟ್ಟಿಸುತ್ತದೆ. ಇಲ್ಲಿನ ಜನಾಂಗಿಕ ಸಂಘರ್ಷ, ರಾಜಕೀಯ ಅಧಿಕಾರ, ವ್ಯಾಪಾರದ ಲಾಲಸೆಗೆ ನಡೆಯುವ ರಕ್ತಪಾತ, ಕೊಲೆ ಸುಲಿಗೆಗಳು  ಪಾಳೆಗಾರಿಕೆಯ (ಸಮುದಾಯ) ಖಾನ್‌ದಾನಿ ಉದ್ಯಮವಾಗಿ ಬೆಳೆದು ನಿಂತ ಭಯಾನಕ ವಾಸ್ತವವನ್ನು ಸೂಚಿಸುತ್ತದೆ, ಪೊಲೀಸ್ ಕೂಡ ಇಂಥವರ ಆಜ್ಞಾಪಾಲನೆಯಲ್ಲಿ ನಿಷ್ಠರಾಗುವುದು ಪ್ರಸ್ತುತ ವ್ಯವಸ್ಥೆಯ ಸ್ಪಷ್ಟ ಚಿತ್ರಣದಂತಿದೆ. ಹಿಂಸೆಯೇ ಇಲ್ಲಿನ ಜನಸಂಸ್ಕೃತಿ. ಒಂದು ಸಮುದಾಯವನ್ನು ನಿರ್ನಾಮ ಮಾಡಿ ಅದರ ಸಮಾಧಿ ಮೇಲೆ ತನ್ನ ಅಧಿಕಾರದ ಸಾಮ್ರಾಜ್ಯ ಕಟ್ಟಬಯಸುವ ವಿರೋಧಿ ಸಮುದಾಯದ ವಿಕ್ಷಿಪ್ತ ರಾಜಕೀಯ ಕನಸುಗಾರಿಕೆ ಸಿನಿಮಾದ ತುಂಬ ವೈಬ್ರೆಂಟ್ ಆಗಿದೆ. ದೂರದಲ್ಲೇ ನಿಂತು ಇಷ್ಟೆಲ್ಲ ಹಿಂಸಾ ಪರಿಸ್ಥಿತಿಗೆ ಸಹಕರಿಸುವ ಗುಜರಾತ್ ಪೊಲೀಸ್ ವ್ಯವಸ್ಥೆ ಬೆಚ್ಚಿ ಬೀಳಿಸುವುದು ವಾಸ್ತವದ ಚಿತ್ರಣವೇ ಸರಿ.
 ಇಂಥ ಹಿಂಸಾಪ್ರಿಯ ನಾಗರಿಕತೆ ನಡುವೆ ಪರಸ್ಪರ ವೈಷಮ್ಯದ ಸಮುದಾಯಗಳ ಹುಡುಗ, ಹುಡುಗಿ ಪ್ರೀತಿ ಬದುಕಿಗೆ ಬೀಳುತ್ತಾರೆ.  ರಾಮ್ ಮತ್ತು ಲೀಲಾ (ಲೀಡ್ ಪಾತ್ರಗಳು)  ಅಪಾಯದ ಅರಿವಿದ್ದೂ, ವೈರುಧ್ಯಗಳ ನಡುವೆ ಸಾಹಸಿ ಯತ್ನವೊಂದನ್ನು ಮೈಮೇಲೆದುಕೊಳ್ಳುತ್ತಾರೆ. ಪ್ರೀತಿಯ ಹಣತೆ ದಿವ್ಯ ಬೆಳಕು ಕಾಣುವುದು ಇಂಥ ಸಾಹಸದಿಂದಲೇ ಎನ್ನುವ ನಂಬಿಕೆ ಇಬ್ಬರಲ್ಲೂ ನೆಲೆಗೊಳ್ಳುತ್ತದೆ. ಈ ಹಂಬಲ ಹರವು ಪಡಕೊಳ್ಳುವ ಮುನ್ನ ಹರೆಯದ ಹಸಿ ಕಾಮನೆಗಳೇ ಇವರನ್ನಾವರಿಸಿಕೊಂಡಿರುತ್ತವೆ. ಅಸೀಮ ಸಂವಹನ ಜಗತ್ತಿನ ಮೊಬೈಲ್, ಪೋರ್ನೋ ಇಬ್ಬರಲ್ಲಿ ಅಪೋಸಿಟ್ ಸೆಕ್ಸ್ ಆಕರ್ಷಣೆಯನ್ನು ಹೈಪರ್ ಆ್ಯಕ್ಟಿವ್ ಮೋಡಿಗಿಳಿಸಿಬಿಟ್ಟಿರುತ್ತದೆ.  ಪ್ರೇಮಿಗಳ ಆರಂಭದ ರೋಮಾನ್ಸ್, ಪ್ರೇಮನಿವೇದನೆಯ ಚಿತ್ರಣ ಕೊಂಚ ವಲ್ಗರ್ ಅನ್ನಿಸುವ ಸಾಧ್ಯತೆಯೇ ಹೆಚ್ಚು. ಆದರೆ ವಾಸ್ತವ ಜಗತ್ತಿಗೆ ಇದು ತುಂಬ ಹತ್ತಿರದಲ್ಲಿದೆ. ರಾಮಲೀಲಾ ನಾಟಕ ನೋಡಿ ಬೆಳೆದ ’ರಾಮ-ಸೀತಾ’ ನಾಗರಿಕತೆಯೊಂದರ ಸದ್ಯದ ಸ್ಥಿತಿಯನ್ನು ಕಟ್ಟಿಕೊಟ್ಟಂತೆಯೂ ಅನಿಸುತ್ತದೆ.
 ರಾಮ್ ತನ್ನ ಸಮುದಾಯದ ಚಿಕನಾ ಲಾಡ್ಲಾ.  ಹುಂಬನೂ ಹೌದು. ಹೀರೀಕರೆಲ್ಲ ಪಾಳೆಗಾರಿಕೆಯಲ್ಲಿ ಮುಳುಗಿ ಹೋದವರು. ಅಧಿಕಾರ, ಯಜಮಾನಿಕೆ ಎಂಬ ಪ್ರತಿಷ್ಠೆ ಅವರಿಗೆ ಎಲ್ಲಕ್ಕಿಂತ ಮುಖ್ಯ. ಗದ್ದುಗೆ, ಯಜಮಾನಿಕೆ ಮತ್ತು ಪೌರೋಹಿತ್ಯದ ಪಗಡಿ ಮನುಷ್ಯ ಜೀವಕ್ಕಿಂತ ದೊಡ್ಡದು ಮತ್ತು ಮೌಲಿಕ ಎಂದು ನಂಬಿದವರು. ಲೀಲಾ ಕೂಡ ಇಂಥದೇ ಮೌಲ್ಯಗಳನ್ನು ಬದುಕುವ ಮತ್ತೊಂದು ಸಮುದಾಯದ ಹುಡುಗಿ. ಇಬ್ಬರ ನಡುವಿನ ಪ್ರೇಮಾಂಕುರಕ್ಕೆ ಮಾಮೂಲಿಯಂತೆ ಮೊದಲ ನೋಟವೇ ಪೀಠಿಕೆ. ಹೋಳಿ ಹಬ್ಬದ ರಂಗಿನಲ್ಲಿ ಇವರಿಬ್ಬರ ಮನದೊಳಗಿನ ಖುಲ್ಲಂ ಖುಲ್ಲಾ ರಂಗಿನಾಟಕ್ಕೆ  ದೊಡ್ಡ ರೆಕ್ಕೆ ಮೂಡಿಬಿಡುತ್ತದೆ. ಬನ್ಸಾಲಿ ಇಂಥದನ್ನು ಭವ್ಯ ಫ್ರೇಮಿನಲ್ಲಿ ಹಿಡಿದುಕೊಡಲು ಹಂಬಲಿಸುವಂಥ ನಿರ್ದೇಶಕ. ಪಾತ್ರ ಪೋಷಣೆಯ ಜತೆಗೆ ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಭವ್ಯ/ಕಲಾತ್ಮಕ ಸೆಟ್ ಮೊರೆ ಹೋಗುವುದು ಕೊಂಚ ಅದ್ದೂರಿತನ ಅನ್ನಿಸಿದರೂ, ಒಟ್ಟಂದದಲ್ಲಿ ಕ್ಲಾಸಿಕ್ ಚಿತ್ರವಾಗಿಸುವ  ಅವರ ಯತ್ನ ಮೆಚ್ಚುಗೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬನ್ಸಾಲಿ ರೀಲ್ ಪ್ರೇಮ ಬದುಕು ದುಬಾರಿ. ಹಮ್ ದಿಲ್ ದೇ ಚುಕೇ ಸನಮ್, ದೇವದಾಸ್ ಇತ್ಯಾದಿ ಚಿತ್ರಗಳಲ್ಲೂ ಅವರ ಈ ಕಲಾತ್ಮಕ ಕುಸುರಿಯನ್ನು ಗಮನಿಸಬಹುದು.


 ಲೀಲಾ ಮನೆ ಅರಮನೆಯಂತಿದೆ. ಪ್ರೇಮದ ಮಹಲಿನಂತೆನಿಸುವ ಅದ್ದೂರಿ ಸೆಟ್ ಕಲಾತ್ಮಕವಾಗಿದೆ. ಶೇಕ್ಸ್‌ಪಿಯರ್ ನಾಟಕಗಳಲ್ಲಿ ಬರುವ ಲಂಡನ್ ರಾಜರ ಕಾಲದ ಅರಮನೆಗಳನ್ನು ನೆನಪಿಸುವಂತಿದೆ. ಆರಂಭದ ಲವ್ ಫ್ಯಾಂಟಸಿಯಲ್ಲೇ ಸಾಗುವುದಲ್ಲವೇ? ಲೀಲಾ ಬಂಗಲೆಯೊಳಗೊಂದು ಪುಟ್ಟ ರಮಣೀಯ ಕಾಡಿದೆ.  ಅವಳು ಮಲುಗುವ ಕೋಣೆಯವರೆಗೆ ಹಬ್ಬಿನಿಂತ ಬೃಹತ್ ಮರವಿದೆ. ಮರದ ಟೊಂಗೆ ಮೇಲೆ, ಬಾಲ್ಕನಿಯ ಕಿಟಕಿಯಲ್ಲಿ ವಯ್ಯಾರ ಮಾಡುವ ನವಿಲುಗಳಿವೆ. ಕೆಳಕ್ಕೆ ಇಣುಕಿದರೆ ನಿರ್ಮಲ ಕೊಳವಿದೆ. ಕದ್ದು ಮುಚ್ಚಿ ಭೇಟಿ ಮಾಡಲು, ರೋಮಾನ್ಸ್ ಮಾಡಲು ಪ್ರೇಮಿಗಳಿಗೆ ಇದಕ್ಕಿಂತ ಸೂಕ್ತ ವ್ಯವಸ್ಥೆ ಬೇಕೆ...
 ರಾಮ, ಹುಂಬ ಮತ್ತು ಪೋಲಿ. ಉಳ್ಳವರ ಮನೆಯ ಹುಡುಗ. ಬ್ಲೂ ಫಿಲಂ ಪಾರ್ಲರ್ ಇಟ್ಟುಕೊಂಡವ. ಸದಾ ತರ್ಲೆ, ಫಟಿಂಗ ಪಟಾಲಂ ಸಂಗದಲ್ಲಿರುವಂಥವ. ಹೆಸರು ರಾಮ, ಬದುಕೋದೆಲ್ಲ ’ಶಾಮ’ನಂತೆ. ಇವನ ಹಿಂಸೆ ಮತ್ತು ಲೀಲೆಗಳಿಗೆ ಮನೆಯ ಹಿರೀಕರಿಂದ ಅಭ್ಯಂತರಗಳೇನೂ ಇಲ್ಲ. ಸ್ವಚ್ಛಂಧತೆಗೆ ಯಾವ ಅಡ್ಡಿಗಳೇ ಇಲ್ಲ. ಪ್ರೀತಿ, ಪ್ರೇಮ ಮತ್ತು ಸಾಮರಸ್ಯದ ಮಾತು ಬಂದಾಗ ಮಾತ್ರ ಎಲ್ಲೆಡೆಯಿಂದ ವಿರೋಧ!
 ಒಂದೆಡೆ ಪ್ರೇಮಿಗಳ ಕಣ್ಣಾ ಮುಚ್ಚಾಲೆ. ಮತ್ತೊಂದೆಡೆ ಪರಸ್ಪರ ವೈಷಮ್ಯಕ್ಕೆಂದೇ ಹುಟ್ಟಿದವರಂತೆ ವರ್ತಿಸುವ ಎರಡು ಸಮುದಾಯಗಳ ನಡುವಿನ ಘರ್ಷಣೆ. ಬಂದೂಕು, ಬುಲ್ಲೆಟ್‌ಗಳಿಲ್ಲಿ ಆಟಿಗೆಯ ಸಾಮಾನಿನಂತೆ. ಮಕ್ಕಳು, ಹೆಂಗಸರಾದಿಯಾಗಿ ಬುಲ್ಲೆಟ್‌, ಬಂದೂಕಿಗೆ ಹೆದರಿಕೊಳ್ಳುವವರಲ್ಲ.  ಇಲ್ಲಿ ತಮಾಷೆಗೂ, ಸಂಚಿಗೂ, ಕೆಣಕಾಟಕ್ಕೂ ಗುಂಡಿನಾಟ! ಇಂಡಿಯಾ-ಪಾಕ್ ಗಡಿಯಲ್ಲಿ ನಡೆಯುವ ಚಕಮಕಿಯಂತೆ. ಇಂಥದೊಂದು ಚಕಮಕಿ ತಮಾಷೆಯ ಸಂದರ್ಭದಲ್ಲೇ ರಾಮ್ ಸಹೋದರ ಪ್ರತಿಸ್ಪರ್ಧಿ ಗುಂಪಿನ ಬುಲೆಟ್‌ಗೆ ಬಲಿಯಾಗುತ್ತಾನೆ. ಆಡಾಡ್ತ ಅಡವಿ ಸೇರಿದಂತೆ. ಲೀಲಾ ಸಹೋದರನ ಬಂದೂಕಿನಿಂದ ಹೊಮ್ಮಿದ ಬುಲ್ಲೆಟ್ ರಾಮನ ಸಹೋದರನನ್ನು ಹೆಣವಾಗಿಸುತ್ತದೆ. ಪ್ರತೀಕಾರದಲ್ಲಿ ಲೀಲಾ ಸಹೋದರನೂ ಹತನಾಗುತ್ತಾನೆ. ಅಲ್ಲಿಗಲ್ಲಿಗೆ ಲೆಕ್ಕ ಚುಕ್ತಾ ಆಗುವುದಿಲ್ಲ. ಹೆಣಕ್ಕೆ ಪ್ರತಿ ಹೆಣಗಳು ಬೀಳತೊಡಗುತ್ತವೆ. ಕಡೆಗೆ ಒಂದಿಡೀ ಸಮುದಾಯ, ಖಾನ್‌ದಾನ್ ಅನ್ನೇ ಮುಗಿಸುವ ರಣಕಹಳೆ ಮೊಳಗತೊಡಗುತ್ತದೆ. ರಾಮನ ತಲೆಗೆ ಹಿಂಸೆಯ ಕಿರೀಟ ತೊಡಿಸಿ ಎದುರಾಳಿ ಸಂಹಾರಕ್ಕೆಂದೇ ಪಟ್ಟಾಭಿಷೇಕವೂ ನಡೆಯುತ್ತದೆ. ಸಮುದಾಯಗಳ ನಡುವಿನ ಕಿತ್ತಾಟ ನಿರ್ಣಾಯಕ ಹಂತಕ್ಕೆ ಬಂದಾಗ ಗುಜರಾತಿನಂಗಳದಲ್ಲಿ ಹಿಂಸೆಯೇ ರಾಜಧರ್ಮದ ಸೋಗಿನಲ್ಲಿ ನೆಲೆ ನಿಲ್ಲತೊಡಗುತ್ತದೆ.
 ರಾಮನೊಂದಿಗೆ ಲೀಲಾ ಓಡಿ ಹೋಗುತ್ತಾಳೆ. ಒಂದು ವಸತಿ ಗೃಹದಲ್ಲಿ ಮೊದಲ ರಾತ್ರಿ ಹಂಬಲ ಹೊತ್ತು ತಂಗುತ್ತಾರೆ. ಆದರೀಗ ತನ್ನ ಸಹೋದರನ ಸಾವಿಗೆ ಅವಳ ಮೂಲಕ ಸೇಡು ತೀರಿಸಿಕೊಳ್ಳುವ ಹಿಂಸೆ ರಾಮನಲ್ಲಿ ಗರಿಗೆದರಿಕೊಂಡಿದೆ. ಸಂಘರ್ಷದಲ್ಲಿ ಉರುಳಿದ ಹೆಣಗಳ ಕಾರಣಕ್ಕೆ ರಾಮ ಮತ್ತು ಲೀಲಾ ನಡುವಿನ ಪ್ರೇಮ ಬದುಕಿಗೂ ಹಿಂಸೆಯ ಸೋಂಕು! ಇಬ್ಬರನ್ನು ಹಿಂಬಾಲಿಸಿಕೊಂಡು ಬಂದ ಪಡೆಗಳಿಗೆ ರಾಮ ಮತ್ತು ಲೀಲಾಳನ್ನು ಬೇರ್ಪಡಿಸುವ ಗುರಿಯೇ ಪ್ರಧಾನವಾಗಿರುತ್ತದೆ.  
  ಲೀಲಾಳನ್ನು ಎತ್ತಿಕೊಂಡು ಹೋಗುವಲ್ಲಿ ಅವಳ ಕಡೆಯವರ ’ರಾವಣ’ ಪಡೆ ಯಶಸ್ವಿಯಾಗುತ್ತದೆ. ರಾಮನನ್ನು ತಡೆಯುವ ಅವನ ಗೆಳೆಯರ ಗುಂಪಿನ ಉದ್ದೇಶವೂ ಸಫಲವಾಗುತ್ತದೆ. ರಾಮನಿಗೀಗ ಪ್ರತಿಷ್ಠೆಯ ಪ್ರಶ್ನೆ. ಈ ನಡುವೆ ಲೀಲಾಳ ವಿವಾಹಕ್ಕೆ ಸಿದ್ಧತೆಗಳು ನಡೆಯತೊಡಗುತ್ತವೆ. ಆಕೆ ವಿರೋಧಿಸುತ್ತಾಳೆ. ತಾನೀಗಾಗಲೇ ರಾಮನಿಗೆ ಮನಸು ಕೊಟ್ಟಾಗಿದೆ. ಅವನ ಗುರುತಿನುಂಗುರ ಧರಿಸಿಯಾಗಿದೆ ಎಂದಾಗ ಹಿರೀಕರು ಉಂಗುರದ ಬೆರಳನ್ನೇ ಕತ್ತರಿಸಿಹಾಕಿಬಿಡುತ್ತಾರೆ. ಆದರೂ ಅವಳ ಪ್ರೇಮ ಅಚಲ. ದ್ವೇಷದ ನಡುವೆಯೂ ಪ್ರೇಮದ ಹಂಬಲ ಬಿಟ್ಟುಕೊಡಲಾಗದ ಇಕ್ಕಟ್ಟಿನ ಸ್ಥಿತಿಯಲ್ಲಿ ರಾಮನಿದ್ದಾನೆ.
 ಲೀಲಾಳ ಸಹೋದರನ ತಲೆಯನ್ನು ಹಾರಿಸಿದ್ದು ರಾಮ. ಸತ್ಯ ತಿಳಿದ ಲೀಲಾ ವಿಹ್ವಲಗೊಳ್ಳುತ್ತಾಳೆ.  ಸೇಡು ತೀರಿಸಿಕೊಳ್ಳಲು ಲೀಲಾಳ ಹಿರೀಕರು ರಾಮನನ್ನು ಸಂಧಾನಕ್ಕೆಂದು ಕರೆಯಿಸಿ ಕೊಲೆಯ ಸಂಚು ಹೂಡುತ್ತಾರೆ. ಆ ಸಂಚು ರೂಪಿಸದವರ (ಲೇಡಿ ನೆಗೆಟಿವ್ ಕ್ಯಾರೆಕ್ಟರ್)ಮೇಲೆ ತಿರುಗಿಬೀಳುತ್ತದೆ. ಒಳಗಿನವರ ಅಧಿಕಾರದ ಮಹತ್ವಾಕಾಂಕ್ಷೆ  ಒಳಬಾಣ ಹಿರಿದು ನಿಂತಾಗ ಹಿಂಸೆಗೆ ಪ್ರತಿಹಿಂಸೆಗಳು ಯಾವ್ಯಾವುದೋ ರೂಪು ಪಡಕೊಳ್ಳುತ್ತವೆ. ಮಹಾತ್ವಾಕಾಂಕ್ಷಿಗಳು ನಿಷ್ಠೆಯ ಸೋಗಿನಲ್ಲಿ ಸುರಕ್ಷಿತ ಸಂಚು ರೂಪಿಸಿ ಒಳಗೇ ಹತಾರುಗಳನ್ನು ಎತ್ತಿಕೊಂಡು ನಿಲ್ಲುತ್ತಾರೆ. ಅಧಿಕಾರವನ್ನು ಕಿತಾಪತಿಗೆ ಬಳಸಿಕೊಳ್ಳುವ ಮನುಷ್ಯ ತನ್ನದೇ ಕೋಟೆಯಲ್ಲಿ ಹೆಣವಾಗುವುದು ರಾಜಕೀಯದ ವಿಶೇಷ ಲಕ್ಷಣಗಳಲ್ಲೊಂದು.


 ಅಯೋಧ್ಯಾ ರಥ ಯಾತ್ರೆಯನ್ನು ನೆನಪಿಸುವ ರಾಮನ ರಾಮಲೀಲಾ ಮೆರವಣಿಗೆ ಚಿತ್ರದ ಮತ್ತೊಂದು ಸಾಂಕೇತಿಕ ನಡೆ. ಈ ನಡುವೆ ಸ್ನೇಹ ಸಂಧಾನದ ಯತ್ನಗಳು ನಡೆಯುತ್ತವೆ. ಹೆಣ್ಣುಗಳೂ ಪ್ರೇಮದ ರಾಯಭಾರತ್ವ ನಡೆಸುತ್ತವೆ. ಆದರೆ, ಅವೆಲ್ಲ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿಬಿಡುತ್ತವೆ. ಎರಡೂ ಕಡೆ ಏಟು, ಎದಿರೇಟುಗಳು, ಅತ್ಯಾಚಾರಗಳು, ಜತೆಗಿರುವವರೇ ರೂಪಿಸುವ ಸಂಚುಗಳ ನಡುವೆಯೂ ಪುಟಾಣಿ ಬಾಲಕನೊಬ್ಬನ ಮೂಲಕ ನಡೆವ ಪ್ರೇಮ-ಪ್ರೀತಿಯ ರಾಯಭಾರಿಕೆ ಪರಿಸ್ಥಿತಿಯನ್ನು ತಿಳಿಗೊಳಿಸುವತ್ತ ಬೆಳೆಯುತ್ತದೆ.  ದ್ವೇಷ, ಹಿಂಸೆ ಬಿಟ್ಟು ಸ್ನೇಹಕ್ಕೆ ಮುಂದಾಗುವ ಆಹ್ವಾನ, ಹಿಂಸೆಯ ತಾಂಡವ ಮೂಡಿಸುವ ಭ್ರಮನಿರಸನ ಅಂತೂ ಉಭಯ ಸಮುದಾಯಗಳ ಹಿರೀಕರನ್ನು ಮನಪರಿವರ್ತನೆಯ ಹಾದಿಗೆ ತಂದು ನಿಲ್ಲಿಸುತ್ತವೆ.


ಈ ರಾಮಾಯಣ, ರಾಮ-ಲೀಲೆ ಅಂತಿಮ ಘಟ್ಟಕ್ಕೆ ಬಂದಾಗ ದಸರೆಯ ದಿನ ಸಮೀಪಿಸುತ್ತದೆ.  ಶಾಂತಿ ಸಂಧಾನಗಳು ಮುನ್ನೆಲೆಗೆ ಬಂದು ರಾವಣನ ಪ್ರತಿಕೃತಿ ಸಂಹಾರಕ್ಕೆ ಸಿದ್ಧತೆ ನಡೆಯುತ್ತದೆ. ಸಾಮರಸ್ಯಕ್ಕೆ ಹೊಸ ನಾಂದಿ ಹಾಡಲು ಒಳಗಿನ ಇಗೋ-ಹಿಂಸೆ, ಸಿಟ್ಟು, ಮತ್ಸರ ಸುಟ್ಟು ಹಾಕಲೇಬೇಕಲ್ಲವೇ...
  ಇದೇ ಸಮಯಕ್ಕೆ ರಾಮ ಮತ್ತು ಲೀಲಾ ನಡುವಣ ಪ್ರೇಮ ಪರಾಕಾಷ್ಠೆಗೆ ಬಂದು ನಿಂತಿರುತ್ತದೆ. ನಿರ್ಣಾಯಕ ಹಂತಕ್ಕೆ ಅವರೊಳಗಿನ ಇಗೋ ಬೆಳೆದು ನಿಂತಿರುತ್ತದೆ. ’ಪ್ರೀತಿ ಇಲ್ಲದೇ ದ್ವೇಷವನ್ನೂ ಮಾಡಲಾರೆವು’ ಎನ್ನುವ ಸ್ಥಿತಿಗೆ ಬಂದು ನಿಂತಿರುತ್ತಾರೆ. ಖಾನ್‌ದಾನಿ ಪ್ರತಿಷ್ಠೆಗಳು ಅವರಲ್ಲಿ ರಕ್ತಗತವಲ್ಲವೇ? ಪರಸ್ಪರ ಕೊಂದುಕೊಳ್ಳುವ ಮೂಲಕ ತಾವು ಹಾಡಿಕೊಂಡಿದ್ದ ಪ್ರೇಮಗೀತೆಯನ್ನು ಶೋಕಗೀತೆಯನ್ನಾಗಿಸಿಕೊಳ್ಳುತ್ತಾರೆ.
* * *
ಬನ್ಸಾಲಿ ನಿರ್ದೇಶನದ ಈ ಸೂಕ್ಷ್ಮ ಚಿತ್ರಕ್ಕೆ ರಾಜಕೀಯ ಪರಿಕಲ್ಪನೆ ಇದೆ. ಹಿಂಸೆಯ ಜತೆಗೇ ಮಲಗಿಕೊಂಡು ಬಂದ ಗುಜರಾತಿನ ಒಳಜಗತ್ತು ಇಂಡಿಯಾ ಚರಿತ್ರೆಯಲ್ಲಿ ಈತನಕ ಎಲ್ಲೂ ಹೀಗೆ ಅನಾವರಣಗೊಂಡಿರಲಿಲ್ಲ. ಅನಾದಿ ಕಾಲದಿಂದ ಅಲ್ಲಿ ಹೂಂಕರಿಸುತ್ತಲೇ ಇದ್ದ  ಭೀಭತ್ಸ್ಯ ಲೋಕವೊಂದು ಗಮನಕ್ಕೇ ಬಂದಿಲ್ಲ. ನಾವೀತನಕ ಕೇಳಿದ್ದು ಗುಜರಾತಿನ ಗಾಂಧಿಯ ಶಾಂತಿ ಜಪ, ಸರ್ದಾರ್ ಪಟೇಲ್ ಒಳಗಿನ ಕುದಿತ,...
 ಉಪಖಂಡದ ಇತಿಹಾಸದಲ್ಲಿ ಗುಜರಾತಿನದ್ದೇ ಆದೊಂದು ದೊಡ್ಡ ಅಧ್ಯಾಯವಿದೆ. ಫಾದರ್ ಆಫ್ ಇಂಡಿಯಾ ಗಾಂಧಿ ಮತ್ತು ಫಾದರ್ ಆಫ್ ಪಾಕಿಸ್ತಾನ ಮೊಹಮ್ಮದ್ ಅಲೀ ಜಿನ್ನಾ ಎನ್ನುವುದು ಇತಿಹಾಸ. ಈ ಇಬ್ಬರನ್ನು ನೀಡಿದ ನಾಡು ಗುಜರಾತ್. ಸ್ವಾತಂತ್ರ್ಯದ ಸಂದರ್ಭದಲ್ಲಿ  ಒಂದು ವಿಶಾಲ ಪ್ರದೇಶ ಇಬ್ಭಾಗಗೊಂಡಿದ್ದು ಉಪಖಂಡಕ್ಕಾದ ಶಾಶ್ವತ ಗಾಯ.  ವಿಭಜನೆಗೆ ಯಾರು ವಿರೋಧಿಸಿದರು? ಯಾರು ಪರ ವಹಿಸಿದರು?  ಎನ್ನುವುದು ಪ್ರಾಂಜಲ ಮನಸ್ಸಿನ ವಸ್ತುನಿಷ್ಠ ಇತಿಹಾಸ ಓದಿಗೆ ನಿಲುಕುವಂಥ ಗ್ರಹಿಕೆ. ಪರ ಮತ್ತು ವಿರೋಧಕ್ಕೆ ಬಲವಾದ ಕಾರಣಗಳಿದ್ದವು. ರಾಜಕೀಯವಾದ ಅಸಹಾಯಕತೆ, ಅನಿವಾರ್ಯತೆಗಳೂ ಇದ್ದವು. ಅದೆಲ್ಲ ಗತ ಇತಿಹಾಸ. ದೇಶ ವಿಭಜನೆ ಗಾಯದ ಬೀಜ ಅಂತೂ ಗುಜರಾತಿನಿಂದಲೇ ಮೊಳಕೆಯೊಡೆದಿತ್ತು.
 ದೇಶವನ್ನು ಕೈಗಾರಿಕಾ ರಂಗದತ್ತ ಕೊಂಡೊಯ್ದ ಪಾರ್ಸಿ ಸಮುದಾಯದ ಉದ್ಯಮಿ ಜೆಆರ್‌ಡಿ ಟಾಟಾ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಸರು ನಮೂದಿಸಿಕೊಂಡ ಜೈನ ಸಮುದಾಯದ ವಿಕ್ರಂ ಸಾರಾಭಾಯ್, ಕಮ್ಯುನಿಕೇಷನ್ ಮತ್ತು ಪೆಟ್ರೋಲಿಯಂ ಉದ್ಯಮದ ರಿಲಯನ್ಸ್ ಕಂಪೆನಿ ಮಾಲೀಕ ಧೀರೂಬಾಯ್ ಅಂಬಾನಿ, ಐಟಿ ಜಗತ್ತಿನ ವಿಪ್ರೊ ಮಾಲೀಕ ಅಜೀಂ ಪ್ರೇಮ್‌ಜೀ... ಎಲ್ಲರೂ ಗುಜರಾತಿಗಳು. ಮನುಷ್ಯ ಕುಲಕ್ಕೆ ಐಹಿಕ ಉಪಭೋಗಿ ಅಗತ್ಯಗಳನ್ನು ಪೂರೈಸುವ ಇವರ ಕೈಂಕರ್ಯ ಮೆಚ್ಚುವಂಥದೇ. ದೇಶದುದ್ದಕ್ಕೂ ವ್ಯಾಪಾರದ ಪೈಪೋಟಿಗೆ, ತಮ್ಮ ಉದ್ಯಮ ರಂಗಾಧಿಪತ್ಯವನ್ನು ಬರ್‌ಕರಾರುಗೊಳಿಸುವುದಕ್ಕೆ ಸಂಘರ್ಷದ ವಾತಾವರಣ ಬೆಚ್ಚಗಿಡುವಲ್ಲಿ ಉದ್ಯಮಿಗಳ ಪರೋಕ್ಷ, ಅಪರೋಕ್ಷ ಕೊಡುಗೆ ಕಮ್ಮಿ ಏನಿಲ್ಲ.
 ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ  ಗುಜರಾತ್, ಸಮುದ್ರ ಬಂದರು ನಗರವಾಗಿ ಗ್ರೀಕ್ ನಾಗರಿಕತೆಗೂ ಪರಿಚಿತ. ಪುರಾತನ ಗ್ರೀಕ್ ಮತ್ತು ಪರ್ಷಿಯಾದ ದೊರೆಗಳು, ರೋಮನ್ ಕ್ಯಾಥೊಲಿಕ್ ಸಾಮ್ರಾಜ್ಯಗಳಿಗೂ ಇದೇ ವ್ಯಾಪಾರದ ಬಹುದೊಡ್ಡ ಮಾರ್ಗವಾಗಿತ್ತು. ಮೊಘಲ್, ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲೂ ಗುಜರಾತಿಗೆ ದೊಡ್ಡ ಹೆಸರಿತ್ತು. ಮೊಘಲ್ ದೊರೆ ಔರಂಗಜೇಬ್ ಹುಟ್ಟಿದ್ದು ಇಲ್ಲೇ. ದೊಡ್ಡ ರಕ್ತ ಚರಿತ್ರೆ ಇಲ್ಲಿನ ನಾಗರಿಕತೆಯಲ್ಲಿ ತನ್ನ ಕಬಂಧಬಾಹು ಚಾಚಿಕೊಂಡಂತಿದೆ..
 ಸಮಕಾಲೀನ ಸಂದರ್ಭದಲ್ಲಿ ಗೋಧ್ರಾ, ಗೋಧ್ರೋತ್ತರ ಹಿಂಸಾತ್ಮಕ ವಿದ್ಯಮಾನಗಳಿಂದ ’ಗುಜರಾತ್ ಮಾದರಿ’ ಎಂದೇ ಜನಜನಿತವಾದ ರಾಜಕೀಯ ರಕ್ತಚೆಲ್ಲಾಟವೊಂದು ದೇಶವ್ಯಾಪಿಗೋಸ್ಕರ ಹೂಂಕರಿಸುತ್ತಿದೆ. ಬನ್ಸಾಲಿ ಚಿತ್ರದಲ್ಲಿ ಹಿರೀಕರು ರಾಮನ ಪೊಗರು, ಎನರ್ಜಿ, ಶೌರ್ಯ ಮತ್ತು ವೈಬ್ರೆನ್ಸಿಯನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳಲು ಅವನ ತಲೆಗೆ  ಹಿಂಸೆಯ ಕಿರೀಟ ತೊಡಿಸುತ್ತಾರೆ. ಈ ನೆಲೆಯಲ್ಲಿ ಯೋಚಿಸಬಹುದಾದ ಪ್ರಶ್ನೆ- ಪ್ರಸ್ತುತ ಇಂಡಿಯಾ ರಾಜಕಾರಣದ ಸ್ಥಿತಿಯಲ್ಲಿ ಹಿಂಸೆಯ ಕಿರೀಟ ಯಾರ ತಲೆಯ ಮೇಲೆ ಕಂಗೊಳಿಸುತ್ತಿದೆ? 
 ಚಿತ್ರದಲ್ಲಿನ ಹಿಂಸಾದೃಷ್ಟಿ, ಹೆಣ್ಣುಗಳನ್ನು ಅಟ್ಟಾಡಿಸಿಕೊಂಡು ಲೈಂಗಿಕವಾಗಿ ಹಿಂಸಿಸುವ ಮತ್ತು ಕೊಲ್ಲುವ ಚಿತ್ರಣಗಳು ಗೋಧ್ರೋತ್ತರ ಗುಜರಾತಿನ ಸ್ಥಿತಿಯನ್ನು ನೆನಪಿಸುತ್ತವೆ. ಈ ದೃಶ್ಯಗಳನ್ನು ನೋಡುವಾಗ ಗೋಧ್ರೋತ್ತರ ಗುಜರಾತಿನ ಸಾಮೂಹಿಕ ಅತ್ಯಾಚಾರ, ಕೊಲೆ, ಹಿಂಸೆ ಕಣ್ಮುಂದೆ ಬಂದ ಹಾಗಾಗುತ್ತದೆ. ಸದ್ಯಕ್ಕೆ ಹೂಂಕರಿಸುತ್ತಿರುವ ಈ ಹಿಂಸಾ ಪ್ರವೃತ್ತಿ ದೇಶದ ಸಾಮರಸ್ಯ ಬದುಕಿನ ಅಂತಿಮ ಯಾತ್ರೆಯನ್ನೇ ಬಯಸಿದಂತಿದೆ. ಒಂದು ಉಳಿಯಬೇಕಾದರೆ ಮತ್ತೊಂದು ಎಲಿಮಿನೇಟ್ ಆಗಲೇಬೇಕೆನ್ನುವ ಸಿದ್ಧಾಂತವನ್ನು ಅದು ಅಪ್ಪಿಕೊಂಡಿದೆ. ’ಮೌತ್ ಕಾ ಸೌದಾಗರ್’ ಎನ್ನುವುದು ಈ ಅರ್ಥದಲ್ಲಿ.
  ರಾಮ್ ಮತ್ತು ಲೀಲಾ ಎರಡು ಪ್ರೇಮ ಜೀವಗಳು. ಇದನ್ನು ಎರಡು ಕೋಮು, ಸಮುದಾಯ, ಧರ್ಮ ಮತ್ತು ರಾಷ್ಟ್ರವೆಂದು ಸಾಂಕೇತಿಸಿಕೊಂಡು ಯೋಚಿಸಿದರೆ, ಆಶಯ ಪ್ರೀತಿ ಮತ್ತು ಮಧುರ ಸಹಬಾಳ್ವೆಯ ಅಗತ್ಯವನ್ನು ಧ್ವನಿಸುತ್ತದೆ. ಬನ್ಸಾಲಿ ಪರಿಕಲ್ಪನೆಯ ಭೀಭತ್ಸ್ಯ ಗುಜರಾತಿನ ಚರಿತ್ರೆಯಲ್ಲಿ ಮನುಷ್ಯ ಪ್ರೇಮವೆನ್ನುವುದು ಹತ್ಯೆಗೊಳಗಾಗುತ್ತದೆ. ಬಲಿಯಾಗುತ್ತದೆ.  ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಬನ್ಸಾಲಿ ಸಿನಿಮಾ ಅತ್ಯಂತ ನೋವಿನಿಂದ ಹೇಳಿದ್ದು ಈ ಕರಾಳ ಚರಿತ್ರೆ ಮರುಕಳಿಸಬಾರದು ಎನ್ನುವ ಕಾಳಜಿಯನ್ನೇ. ಹೀಗಾಗಿ ಚಿತ್ರದ ಎಂಡಿಂಗ್ ಟ್ರ್ಯಾಜಿಡಿ. ಗೋಧ್ರಾ, ಗೋಧ್ರೋತ್ತರ ’ಗುಜರಾತ್ ಮಾದರಿ’ ರಾಜಕೀಯ ದೇಶದಲ್ಲಿ ಟ್ರ್ಯಾಜಿಡಿಯನ್ನು ಮಾತ್ರ ನೀಡಬಲ್ಲುದು ಎನ್ನುವುದು ಚಿತ್ರದ ಪರೋಕ್ಷ ಸಂದೇಶ. ಈ ಸಿನಿಮಾ ಪ್ರಸಕ್ತ ರಾಜಕೀಯ ಸಂದರ್ಭಕ್ಕೆ ಹಿಡಿದ ಕನ್ನಡಿಯಂತೆನಿಸಿತು. ಅಮಿತಾಭ್ ಹೇಳುವ ಖುಷಬೂ (ಪರಿಮಳ) ಗುಜರಾತ್ ಕೀ ಜಾಹೀರಾತು ಕೇಳಿಸಿಕೊಂಡವರಿಗೆ ಬನ್ಸಾಲಿ ಚಿತ್ರ  ಗುಜರಾತ್ ಕೀ ಬದ್‌ಬೂ (ದುರ್ನಾತ) ದರ್ಶನ ಮಾಡಿಸುತ್ತದೆ.



ಕರ್ಟನ್ ಕಾಲ್:  ಸಂಜಯಲೀಲಾ ಬನ್ಸಾಲಿಯ ನಿರ್ದೇಶನ, SLB ಫಿಲಂಸ್ ಮತ್ತು ಇರೋಸ್ ಇಂಟರನ್ಯಾಷನಲ್ ಸ್ಟುಡಿಯೋ ಸೆಟ್ ವರ್ಕ್ ಅದ್ಭುತ. ಮೋಂತಿ ಶರ್ಮಾ ಜತೆ ಬನ್ಸಾಲಿ ಸೇರಿ ರೂಪಿಸಿದ ಸಂಗೀತ ಈ ಹಿಂದಿನ ಬನ್ಸಾಲಿ ಚಿತ್ರಗಳ ಸಂಗೀತದಷ್ಟು ಸ್ವೀಟ್ ಅನಿಸಲಿಲ್ಲ. ಕೆಲ ದೃಶ್ಯಗಳಲ್ಲಿ ಬಿಜಿಎಂ ಪರಿಣಾಮಕಾರಿಯಾಗಿದೆ. ರಾಗಸಂಯೋಜನೆ ದೃಷ್ಟಿಯಿಂದ ’ಢೋಲ್ ಭಾಜೆ..’ ಹಾಡಿನ ಢೋಲು ಗುಂಗಿನಿಂದ ಬನ್ಸಾಲಿ ಹೊರಬಂದಂತಿಲ್ಲ. ಇಸ್ಮಾಯಿಲ್ ದರ್ಬಾರ ಸಂಗೀತವನ್ನು ಬನ್ಸಾಲಿ ಮತ್ತೆ ಬಳಸಿಕೊಳ್ಳಬಹುದಿತ್ತು. ರವಿ ವರ್ಮನ್ ಸಿನೆಮಾಟೊಗ್ರಾಫಿ, ಲೈಟಿಂಗ್ ಅತ್ಯಂತ ಪ್ರೊಫೆಷನಲ್ ಅಂಡ್ ನೀಟ್. ರಾಜೇಶ್ ಪಾಂಡೇ ಮುಲಾಜಿಲ್ಲದೇ ಮತ್ತಷ್ಟು ಶಾರ್ಪ್ ಎಡಿಟ್ ಮಾಡಿ ಚಿತ್ರದ ದೀರ್ಘಾವಧಿಯನ್ನು ಎರಡು ಗಂಟೆಗಿಳಿಸಿದ್ದರೆ ಚೆನ್ನಿತ್ತು.  ಬಜೆಟ್ ದೃಷ್ಟಿಯಿಂದಲೂ (85 ಕೋಟಿ) ಇದು ಅದ್ದೂರಿ ಚಿತ್ರ. ನಿರ್ಮಾಣದಲ್ಲೂ ಬನ್ಸಾಲಿ ಸಾಥ್ ಇದೆ. ಓವರ್ ಆಲ್ ಸಿನಿಮಾ ಸಿನೆಮಿಕ್ ಆಗಿದೆ. ಹಾಲಿವುಡ್ ಸಿನಿಮಾಗಳ ಹಾಗೆ ಪರಿಣಾಮಕಾರಿಯೂ ಆಗಿದೆ. ನಟ ರಣ್ವೀರ್ ಸಿಂಗ್ ತುಂಬ ಎನೆರ್ಜೆಟಿಕ್ ಅನಿಸುತ್ತಾರೆ. ನಟಿ ದೀಪಿಕಾ ಸ್ಟನ್ನಿಂಗ್. ಪಾಠಕ್ ಎಕ್ಸಲೆಂಟ್. ವೆಲ್ ಡನ್ ಬನ್ಸಾಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...