ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...- ಭಾಗ 3

ಅಬ್ಬಾಗೆ ಒಂದು ಕಡೆ ತಾನು ಹುಟ್ಟಿ ಬೆಳೆದ ನಾಡು ಮತ್ತು ಬಂಧು ಬಳಗವನ್ನೆಲ್ಲ ತೊರೆದು ಬಂದ ಹಳವಂಡ. ಮತ್ತೊಂದೆಡೆ ಅಂದುಕೊಂಡಂತೆ ಮುಂಬೈ ಎಂಬ ಮಾಯಾನಗರಿಗೆ ಬಂದ ಖುಷಿ. ಮುಂಬೈ ಒಂಥರ ತುಂಬ ಕುತೂಹಲಕರವಾದ ನಗರ. ಅಬ್ಬಾ ಮತ್ತು ಹಮೀದ್ ಭಾಯ್ ಗೆ ಹೊಸ ವಾತಾವರಣಕ್ಕೆ ತೆರಕೊಳ್ಳುವ ಮತ್ತು ಇರುವುದಕ್ಕೊಂದು ಸೂರು ಹುಡುಕಿಕೊಳ್ಳುವ ಧಾವಂತ. ಅದರಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವ ಅನಿವಾರ್ಯತೆ. ಅಬ್ಬಾಗೆ ಅದೃಷ್ಭದ ಮೇಲೆ ನಂಬಿಕೆ ಇತ್ತು. ಏನಾದರೊಂದು ವ್ಯವಸ್ಥೆ ಆದೀತೆಂಬ ವಿಶ್ವಾಸ ಬಲವಾಗಿತ್ತು. ಅಂತೂ ಮೊಹಮ್ಮದ್ ಅಲಿ ರಸ್ತೆಯ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಇರುವುದಕ್ಕೆ ಒಂದು ನೆಲೆ ದಕ್ಕಿತು. ಸಿರಾಜುದ್ದೀನ್ ಅಹಮದ್ ಬಾರಿ ಎನ್ನುವವರು ಈ ಬಿಲ್ಡಿಂಗ್ ಒಡೆಯ. ಮೇಲ್ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅಬ್ಬಾ ಅಂದುಕೊಂಡಂತೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಯ ಕೋಣೆಯ ವ್ಯವಸ್ಥೆ ಆಯ್ತು.
 ರಫೀ ಎದುರಿಸುತ್ತಿದ್ದ ಬಲು ಕಷ್ಟದ ಸಮಯ ಇದಾಗಿತ್ತು. ಅಪರಿಚಿತ ನಗರ, ಮೇಲೆ ಜೇಬಿನಲ್ಲಿ ಕಿಲುಬು ಕಾಸಿಲ್ಲ.. ಸ್ಟುಡಿಯೋ ಮತ್ತು ಮನೆಗೆ ಮೈಲುಗಟ್ಟಲೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ. ರೆಕಾರ್ಡಿಂಗ್, ಪೈಲಟ್ ಸಿಂಗಿಂಗ್, ರಿಹರ್ಸಲ್ ಹೀಗೆ ಎಲ್ಲದಕ್ಕೂ ದೂರದ ಸ್ಟೂಡಿಯೋಗೆ ನಡೆದುಕೊಂಡೇ ಹೋಗಬೇಕಿತ್ತು. ವಾಪಸ್ ನಡೆದೇ ಮನೆ ಸೇರಬೇಕಿತ್ತು. ಎಷ್ಟೋ ಸಾರಿ ನಡೆದು ಸುಸ್ತಾಗಿ ಸ್ಟುಡಿಯೋ ತಲುಪಿ, ಒಳಕ್ಕೆ ಕಾಲಿಡುತ್ತಿದ್ದಂತೆ ’ನಾಳೆ ಬನ್ನಿ’ ಎಂದು ಸಾಗಹಾಕಲಾಗುತ್ತಿತ್ತು.  ಇಂಥ ಸಂದರ್ಭದಲ್ಲೆಲ್ಲಾ ಮನೆಗೆ ವಾಪಸ್ ಬರಲು ಕಾಸಿಲ್ಲದೇ ಹತ್ತಿರದ ರೈಲ್ವೆ ಸ್ಟೇಷನ್ ನಲ್ಲಿ ಮಲಗಿ ರಾತ್ರಿ ಕಳೆದಿದ್ದಿದೆ. ಹೀಗೆ ಅದೆಷ್ಟೊ ಬಾರಿ ಆಗಿದ್ದಿದೆ. ನಿರ್ದೇಶಕ ಶ್ಯಾಂ ಸುಂದರ್ ಅವರು ತಮ್ಮ 'ಗಾಂವ್ ಕೀ ಗೋರಿ' ಚಿತ್ರದಲ್ಲಿ ಹಾಡುವ ಅವಕಾಶ ನೀಡುವವರೆಗೆ ರಫೀ ಸಾಹೇಬರಿಗೆ ಇದೇ ಸ್ಥಿತಿ ಇತ್ತು. 'ಅಜೀ ದಿಲ್ ಹೋ ಕಾಬು ಮೇ ತೊ ದಿಲ್ ದಾರ್ ಕೀ ಐಸಿ ತೈಸಿ'... ಇದು ಮೊಹಮ್ಮದ್ ರಫೀ ಹಾಡಿದ ಮೊತ್ತ ಮೊದಲ ಹಿಂದಿ ಚಿತ್ರಗೀತೆ. ಅದೂ ಜಿ.ಎಂ. ದುರಾನಿ ಮತ್ತಿತರರ ಜತೆ ಹಾಡಿದ್ದು.
ಒಂದಷ್ಟು ಕಾಲ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಅಬ್ಬಾ ಬದುಕು ಹೀಗೇ ಸಾಗಿತ್ತು. ಹಮೀದ್ ಭಾಯ್ ಬಿಲ್ಡಿಂಗ್ ಒಡೆಯ ಸಿರಾಜುದ್ದೀನ್ ಹಿರಿಯ ಮಗನೊಟ್ಟಿಗೆ ಉತ್ತಮ ಸ್ನೇಹ ಸಂಪಾದಿಸಿದ್ದರು. ಒಮ್ಮೆ ಕುಶಲೋಪರಿಯಲ್ಲಿ ತೊಡಗಿದ್ದಾಗ ಮಾತು ಅಬ್ಬಾ ವಿಷಯದತ್ತ ವಾಲಿತು. ಆ ಕುಶಲೋಪರಿ ಒಂದು ಉತ್ತಮ ಕಾಂಟ್ರ್ಯಾಕ್ಟ್ ಗೆ ದಾರಿ ಮಾಡಿಕೊಟ್ಟಿತು. ಅಬ್ಬಾ ಬದುಕಿನಲ್ಲಿ ಅತ್ಯಂತ ಮಹತ್ವದ ತಿರುವಿಗೆ ಅದು ಕಾರಣವಾಯ್ತು.
 * * *
 ಸಿರಾಜುದ್ದೀನ್ ತಮ್ಮ ಮೊದಲ ಪತ್ನಿಯ ಮಗಳು ಖಮಾರ್ ಳನ್ನು ಲಖನೌ ನಗರದ ಅಹ್ಮದ್ ಹಸನ್ ಸಾಹೇಬ್ ಎನ್ನುವವರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ಹಸನ್ ಸಾಹೇಬ್ ಕುಟುಂಬಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ನೌಶಾದ್ ತಂದೆ ವಾಹಿದ್ ಅಲೀ ಆಪ್ತ ನೆರೆಹೊರೆ. ಗಳಸ್ಯ ಕಂಠಸ್ಯ ಎನ್ನುವಂಥ ಸ್ನೇಹ ಸಲುಗೆ ಎರಡೂ ಕುಟುಂಬಗಳ ನಡುವಿತ್ತು. ರಫೀ ಸಾಹೇಬರಿಗೆ ಇದೊಂದು ಒಲಿದು ಬಂದ ಭಾಗ್ಯ. ಇದೇ ಮುಂದೆ ನೌಶಾದ್ ಅವರನ್ನು ತಲುಪುವುದಕ್ಕೆ ಸೇತು ಬಂಧವೊಂದರ ವ್ಯವಸ್ಥೆಗೆ ದಾರಿಯಾಯ್ತು.

 ವಾಹೀದ್ ಅಲೀ ಅವರು ತಮ್ಮ ಪುತ್ರ ನೌಶಾದ್ ಅಲೀಯವರಿಗೆ ಒಂದು ಪತ್ರ ಬರೆದು, ರಫೀ ಸಾಹೇಬರಿಗೆ ನೆರವಾಗುವಂತೆ ಶಿಫಾರಸ್ಸು ಮಾಡಿದರು. ’ಈ ಹುಡುಗನ ಹಾಡು ಕೇಳಿದ್ದೇನೆ. ಅದ್ಭುತವಾಗಿ ಹಾಡುತ್ತಾನೆ. ನಿನ್ನ ಚಿತ್ರಕ್ಕೆ ಹಾಡಬಲ್ಲ ಸಾಮರ್ಥ್ಯ  ಈತನಲ್ಲಿದೆ’ ಎಂದು ಪತ್ರದಲ್ಲಿ ರಫೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅದಾಗಲೇ ನೌಶಾದ್ ಅಲೀ ಚಿತ್ರಜಗತ್ತಿನಲ್ಲಿ ತುಂಬ ಹೆಸರು ಮಾಡಿದ ಸಂಗೀತ ನಿರ್ದೇಶಕರಾಗಿದ್ದರು. ಪತ್ರ ಹಿಡಿದುಕೊಂಡು ಅಬ್ಬಾ ಮತ್ತು ಹಮೀದ್ ಭಾಯ್ ಸಂಗೀತ ನಿರ್ದೇಶಕ ನೌಶಾದ್ ರನ್ನು ಕಾಣಲು ಕಿರ್ದಾರ್ ಸ್ಟುಡಿಯೋ ಮುಂದೆ ಹಾಜರಾದರು. ಶಿಫಾರಸು ಪತ್ರ ನೀಡಿದ್ದು ತಮ್ಮ ತಂದೆಯಾದ್ದರಿಂದ ನೌಶಾದ್ ಅಲೀ ಅವರು ಸಂದರ್ಶನಕ್ಕೆ ಅನುಮತಿ ನೀಡಿದರು. ಅಂತೂ ಭೇಟಿಯ ಏರ್ಪಾಡಾಯಿತು. ಭೇಟಿಯ ಸಂದರ್ಭದಲ್ಲಿ ರಫೀ ಸಾಹೇಬರು ಒಂದು ಗಜಲ್ ಹಾಡಿದರು. ಗಾಯನಕ್ಕೆ ತಲೆದೂಗಿದ ನೌಶಾದ್,  ಕೋರಸ್ ನಲ್ಲಿ ಹಾಡುವ ಅವಕಾಶವೊಂದನ್ನು ನೀಡಿದರು. 'ಪಹಲೆ ಆಪ್' ಚಿತ್ರದ 'ಹಿಂದೂಸ್ತಾನ್ ಕೇ ಹಮ್ ಹೈ, ಹಿಂದೂಸ್ತಾನ್ ಹಮ್ಹಾರಾ' ಎನ್ನುವ ಆ ಹಾಡಿನ ಕೋರಸ್ ನಲ್ಲಿ ಅಬ್ಬಾ ದನಿಯೂ ಸೇರಿತ್ತು. ನೌಶಾದ್ ನೀಡಿದ ಮೊದಲ ಅವಕಾಶ ರಫೀ ಸಾಹೇಬರಿಗೆ ಮುಂದೆ ದೊಡ್ಡ ರಹದಾರಿಯನ್ನೇ ಸೃಷ್ಟಿಸಿತು.
 ಇದು ಅಬ್ಬಾಗೆ ದಕ್ಕಿದ ಮಹತ್ವದ ಮೊದಲ ಬ್ರೇಕ್. ಕ್ರಮೇಣ ಚಿತ್ರೋದ್ಯಮ ರಫೀ ಸಾಹೇಬರನ್ನು ಹಿನ್ನೆಲೆಗಾಯಕ ಎಂದು ಪರಿಗಣಿಸಲಾರಂಭಿಸಿತು. ಇನ್ನಿತರ ಸಂಗೀತ ನಿರ್ದೇಶಕರಿಂದ ಆಹ್ವಾನಗಳು ಬರತೊಡಗಿದ್ದವು.  ಆದರೂ ಅಬ್ಬಾಗೆ ಸಮಾಧಾನವಿರಲಿಲ್ಲ. ಅಂದುಕೊಂಡ ಗುರಿ ಮುಟ್ಟುವೆನೋ ಇಲ್ಲವೋ ಎನ್ನುವ ಭೀತಿ ಅವರನ್ನು ಆವರಿಸಿಕೊಳ್ಳತೊಡಗಿತ್ತು.

(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ  ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ