ವಿಷಯಕ್ಕೆ ಹೋಗಿ

‘ಇಜಾಜತ್‘ ಒಂದು ಅದ್ಭುತ ಪ್ರೇಮ ಕಾವ್ಯ ಗುಲ್ಜಾರ್ ಗೆ ನನ್ನದೊಂದು ದಿಲ್ ಸೇ ಬಧಾಯೀ

ಅವನು ರೈಲಿನಿಂದ ಇಳಿದ. ಮಳೆ ಸುರಿಯುತ್ತಿದ್ದುದರಿಂದ ಸ್ಟೇಷನ್ ನ ವೇಟಿಂಗ್ ರೂಂ ಪ್ರವೇಶಿಸಿದ. ಆಕೆ ಅಲ್ಲಿ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕೂತಿದ್ದಾಳೆ. ಅನಿರೀಕ್ಷಿತ ಭೇಟಿಯಿಂದ ಇಬ್ಬರಿಗೂ ಶಾಕ್. ಅರೇ ನೀನಿಲ್ಲಿ!, ಅಂತೂ ಸಿಕ್ಕೆಯಲ್ಲಾ, ಥ್ಯಾಂಕ್ ಗಾಡ್ ಎಟ್ ಲಾಸ್ಟ್ ವಿ ಆರ್ ಮೀಟಿಂಗ್ ನೌ... ಎನ್ನುವ ಭಾವಗಳು ಪೈಪೋಟಿಯಂತೆ ಮನದೊಳಗೆ ಪುಟಿದೇಳುತ್ತಿವೆ. ಇಬ್ಬರಲ್ಲೂ. ಆಕೆ ಮುಖ ಮುಚ್ಚಿಕೊಳ್ಳಲು ಯತ್ನಿಸಿ ಸೋಲುತ್ತಾಳೆ. ಅವನದು ಮತ್ತದೇ ಬ್ರಾಡ್ ಸೆನ್ಸ್. ಹೊರಗೆ ಮಳೆ, ಮಿಂಚು. ಇಬ್ಬರ ನಡುವೆ ಬಾಳಿ ಬದುಕಿದ ಪ್ರೇಮಕಾವ್ಯವೊಂದು ಬಿಚ್ಚಿಕೊಳ್ಳತೊಡಗುತ್ತದೆ.
* * *
ಇವನಿಗೆ ಫೊಟೊಗ್ರಫಿಯಲ್ಲಿ ಎಂಥದೋ ಒಂದು ಬಿಸಿನೆಸ್. ಅವನ ಪ್ರೀತಿಯ ತಾತ ಒಂದು ಹುಡುಗಿಯನ್ನು ಇವನಿಗೆಂದೇ ಗೊತ್ತು ಮಾಡಿ ಮದುವೆಗೂ ಸಿದ್ಧಗೊಳಿಸುತ್ತಾನೆ. ಇಂದು ನಾಳೆ ಎನ್ನುತ್ತ ಹೇಗೂ ಸಾಗಹಾಕಲೆತ್ನಿಸಿ ಸೋಲುವ ಇವನು ತಾನೊಂದು ಹುಡುಗಿಯನ್ನು ಪ್ರೀತಿಸಿದ ವಿಷಯ ಪ್ರಸ್ತಾಪಿಸಿಬಿಡುತ್ತಾನೆ. ಆಕೆ ಆಧುನಿಕ ಸ್ತ್ರೀ ಸಂವೇದನೆಯ ಹುಡುಗಿ. ಅಂಥದೇ ಹೆಣ್ಣೊಂದರ ಹಂಬಲದಲ್ಲಿದ್ದ ತನಗೆ ಅವಳೇ ತಕ್ಕವಳು ಎಂದೆಲ್ಲ ಹೇಳಿಬಿಡುತ್ತಾನೆ. ಅವಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾನೆ. ಆದರೆ ಅವಳೀಗ ನಾಪತ್ತೆ. ಪ್ರೇಮ ಕಾವ್ಯವೊಂದನ್ನು ಬರೆದಿಟ್ಟು ಮಾಯವಾಗಿದ್ದಾಳೆ.

 ಕಡೆಗೆ ಅವನು ತಾತ ನೋಡಿದ ಹೆಣ್ಣನ್ನೇ ಮದುವೆಯಾಗುತ್ತಾನೆ. ಒಂದು ಸರಳ, ಸಹಜ ಮತ್ತು ಸುಂದರ ಕುಟುಂಬ ಬದುಕು ಶುರುವಾಗುತ್ತದೆ.
  ಮುಂಚಿನ ಆಕೆ ಮತ್ತೆ ಇವನ ಬದುಕಿಗೆ ಬಂದು ನಿಲ್ಲುತ್ತಾಳೆ. ಬಿಟ್ಟರೂ ಬಿಡದೀ ಮಾಯೆ ಎನ್ನುವವಳಂತೆ. ಅವಳ ಉತ್ಕಟತೆಯನ್ನು ಹೇಗೋ ನಿಭಾಯಿಸಲು ನೋಡುತ್ತಾನೆ. ಇದ್ಯಾಕೋ ಹೆಂಡತಿಗೂ ಸರಿ ಹೋಗುವುದಿಲ್ಲ. ದೂರವಾಣಿಯಲ್ಲಿ ಕೂಗಾಡಿದ ಆಕೆಯ ಪ್ರೇಮ ಪರಾಕಾಷ್ಠೆಯಂಥ ನಿಲುವನ್ನು ತಾಳುವ ಮಾತು ಕೇಳಿಸಿಕೊಳ್ಳುವ ಹೆಂಡತಿ ದೂರ ಸರಿದು ನಿಲ್ಲುವ ನಿರ್ಧಾರಕ್ಕೆ ಬರುತ್ತಾಳೆ. ಮಾಯೆಯಂತೆ ಬಂದ ಅವಳು ಮತ್ತು ಇವನ ನಡುವಿನ ಭಾವ ಸಂಘರ್ಷಗಳು ಯಾವುದೇ ತಾರ್ಕಿಕ ಅಂತ್ಯಕ್ಕೆ ಬರುವ ಮುನ್ನವೇ ಆಕೆ ಮತ್ತೆ ಇವನ ತೊರೆದು ನಿಲ್ಲುತ್ತಾಳೆ. ಇವನು ತನ್ನ ಹೆಂಡತಿಯೊಂದಿಗಿನ ಮಧುರ ಸಂಬಂಧವನ್ನು ಕಳಕೊಂಡೆನಲ್ಲ ಎಂದು ಪರಿತಪಿಸುವವನಂತೆ ಅವಳಿಗೆ ಕಾಣಿಸತೊಡಗುತ್ತಾನೆ. ಇಂಥದೊಂದು ಸಣ್ಣ ಕಾರಣ ಸಾಕಲ್ಲವೇ ಉತ್ಕಟ ಪ್ರೇಮಿಗೆ! ವಿಹ್ವಲಗೊಳ್ಳುವ ಆಕೆ ತನ್ನಿಂದಲೇ ಇಷ್ಟೆಲ್ಲ ಆಯ್ತಲ್ಲ ಎಂದುಕೊಂಡು ತನ್ನ ವಾಹನದಲ್ಲಿ ವೇಗವಾಗಿ ಹೊರಟವಳು ಜಗತ್ತಿನಿಂದಲೇ ನಿರ್ಗಮಿಸುತ್ತಾಳೆ. ಅವಳನ್ನು ತಡೆಯುವ ಇವನ ಯತ್ನ ವಿಫಲವಾಗುತ್ತದೆ. ಅಷ್ಟರಲ್ಲಿ ಹೆಂಡತಿ ವಿಚ್ಛೇದನಕ್ಕೆ ನಿರ್ಧರಿಸಿ ತನ್ನಿಂದ ಇವನನ್ನು ಮುಕ್ತಗೊಳಿಸುತ್ತಾಳೆ.

* * *
ಇಷ್ಟೆಲ್ಲ ನಡೆದ ಘಟನೆಗಳು ಇಬ್ಬರ ನಡುವೆ ನೆನಪುಗಳ ಮಳೆಯಂತೆ ಸುರಿಯುತ್ತವೆ. ನೋಡುವ ನಮ್ಮೊಳಗೂ ನೆನಪುಗಳ ಜಡಿ ಮಳೆ... ಆಕೆಯ ಕಣ್ಣಾಲಿಗಳಲ್ಲಿ ನೀರು. ಇವನಿಗೆ ಮತ್ತೆ ಈಕೆ ಸಿಕ್ಕಳೆಂಬ ಸಂಭ್ರಮದಂಥ ನಿರೀಕ್ಷೆ. ಅಷ್ಟರಲ್ಲಿ ಅವಳ ಗಂಡ ತನ್ನಾಕೆಯನ್ನು ಕರೆದೊಯ್ಯಲು ವೇಟಿಂಗ್ ರೂಂಗೆ ಬರುತ್ತಾನೆ. ಅವಳ ಕಣ್ಣಾಲಿಗಳು ಹಸಿಗೊಂಡಿದ್ದನ್ನು ಕಾಣುತ್ತಾನೆ. ಅವಳ ಮುಖದಲ್ಲಿ ಮಡುಗಟ್ಟಿದ ದುಃಖವನ್ನು ಗಮನಿಸುತ್ತಾನೆ. ಓಹ್ ಇವನೇ ಇವಳ ಮೊದಲ ಗಂಡ ಎನ್ನುವ ಸತ್ಯಕ್ಕೆ ಆ ಕಣ್ಣ ಹನಿಗಳೇ ಸಾಕ್ಷಿಯೊದಗಿಸುತ್ತವೆ. ಆಕೆ ಹೊರಡುವಾಗ ಇವನ ಕಾಲಿಗೆರಗಿ ಕಡೆಯ ಸಲ ದೂರವಾಗಲು ಅಪ್ಪಣೆ ಕೊಡು, ಜತೆಗೆ ಕ್ಷಮಿಸಿಬಿಡು ಎನ್ನುವಂಥ ಭಾವದಲ್ಲಿ ಕೋರಿಕೆಯನ್ನಿಡುತ್ತಾಳೆ. ಅದೊಂದು ಗುಡ್ ಬೈ ಕೋರಿಕೆ. ಯಾವುದಕ್ಕೂ ನಿನ್ನ ಅಪ್ಪಣೆ ಇರಲಿ ಎನ್ನುವ ನೋವಿನ ಕೋರಿಕೆ ಅದು.
  ಗಂಡ-ಹೆಂಡತಿ ಸ್ಟೇಷನ್ ಹೊರ ನಡೆಯಲು ಹೆಜ್ಜೆ ಹಾಕುತ್ತಾರೆ. ದೂರಕ್ಕೆ ಸಾಗುತ್ತಲೇ ಆಕೆ ವಾಪಸ್ ನೋಡುತ್ತ ನಿಲ್ಲುತ್ತಾಳೆ. ಚಣ ಕಾಲ. ನಾನು ನಿನ್ನ ಬಿಟ್ಟು ಬದುಕುವ ಶಕ್ತಿಯನ್ನೇ ಹೊಂದಿದ್ದವಳಲ್ಲ. ಆದರೂ ನಿನ್ನ ಕಳಕೊಂಡ ಹಳವಂಡ ನನ್ನ ಜತೆಗೆ ಶಾಶ್ವತ ಎನ್ನುವಂಥ ಅರ್ಥದಲ್ಲಿ. ಈ ಬದಿಯಲ್ಲಿ ಇವನು ನಿಂತಿದ್ದಾನೆ. ಒಳಗಿನ ಒತ್ತಾಸೆಗಳೇ ಬತ್ತಿ ಹೋದವನಂತೆ. ಹಿಂಡನ್ನಗಲಿದ ಕೋಳಿ ಮರಿಯೊಂದು ತಾಯಿಯಿಲ್ಲದೇ ಚಡಪಡಿಸಿ ಚಿಂವ್ ಚಿಂವ್ ಎನ್ನುವಂತೆ.

* * *
ಪ್ರೀತಿ ಯಾರ ಅಪ್ಪಣೆಯನ್ನು ಕೇಳುವುದಿಲ್ಲ. ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಒಮ್ಮೆ ಅದರೊಳಕ್ಕೆ ಬಂದವರು ಅದರ ಅಪ್ಪಣೆಯನ್ನಷ್ಟೇ ಪಾಲಿಸುತ್ತ ನಡೆಯಬೇಕು. ಪ್ರೀತಿಯ ಅಲಿಖಿತ ಸಂವಿಧಾನದಲ್ಲಿ ನಿರಪರಾಧಿಗೆ ಸಾಕ್ಷಿಗಳಿಲ್ಲದೆಯೂ ಶಿಕ್ಷೆ ಜಾರಿಯಾಗಬಹುದು. ಬಾರಾ ಖೂನ್ ಮಾಫ್ ಕೂಡ ಆಗಬಹುದು.

1987ರಲ್ಲಿ ಬಂದ ‘ಇಜಾಜತ್‘ ಚಿತ್ರವನ್ನು ಕವಿ, ಚಿತ್ರ ನಿರ್ದೇಶಕ ಗುಲ್ಜಾರ್ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಗುಲ್ಜಾರ್ ಬರೆದ ಒಂದು ಹಾಡು ಇಡೀ ಚಿತ್ರದ ಮನೋಧರ್ಮವನ್ನೇ ಹೇಳಿಬಿಡುವಂಥದು. ಅದರ ಚಿತ್ರೀಕರಣವೂ ಅಷ್ಟೇ ಟಚೀ.
ಅನುರಾಧ ಪಟೇಲ್ ಡೋವ್ ಐಸ್, ಅದರಂಚಿನಲ್ಲಿ ಜಿನುಗುತ್ತಲೇ ಇರುವ ನೋವಿನ ಹನಿಗಳು... ಬ್ಯಾಕ್ ಆರ್ಕ್ ಲೈಟ್ ನಲ್ಲಿ ಹರವಿಕೊಂಡ ಆಕೆಯ ತಲಲೆಗೂದಲಿನ ಮಿಂಚು, ಡಾರ್ಕ್ ಅಂಡ್ ಲೈಟ್ ಶೇಡ ನಲ್ಲಿ ಒಂದು ಪ್ರೊಫೈಲ್ ...
ಹಿನ್ನೆಲೆಯಲ್ಲಿ-
‘ಮೇರಾ ಕುಛ್ ಸಾಮಾನ್, ತುಮ್ಹಾರೆ ಪಾಸ್ ಪಡಾ ಹೈ, 

ಸಾವನ್ ಕೆ ಕುಛ್ ಭೀಗೇ ಭೀಗೇ ದಿನ್ ರಖಾ ಹೈ 
ಔರ್ ಮೇರಿ ಏಕ್ ಖತ್ ಮೇ ಲಿಪಟೀ ರಾತ್ ಪಡೀ ಹೈ 
ವೋ ರಾತ್ ಭುಜಾ ದೋ, ಮೇರಾ ವೋ ಸಾಮಾನ್ ಲೌಟಾ ದೋ...‘ 
ಎನ್ನುವ ಹಾಡು...
ಹಾಯ್.. ಪ್ರೇಮ ಬದುಕನ್ನು ಕಳಕೊಂಡ ಪರಿಗೆ ಇದೆಂಥ ಹಳವಂಡದ ಭಾಷ್ಯ! ಮಡುಗಟ್ಟುವ ನೋವು ಸಿಟ್ಟಾಗಿ, ನೋವಾಗಿ, ಆಕ್ರೋಶವಾಗಿ ಪ್ರೀತಿಯಿಂದಲೇ ಸುರಿವ ಈ ಪರಿಗೆ ಎಂಥವನ ದಿಲ್ ಕೂಡ ತೊಯ್ದು ಹೋಗದೇನು!

ಏಕ್ ಅಕೇಲಿ ಛತ್ರಿ ಮೇ ಜಬ್ ಆಧೇ ಆಧೇ ಭೀಗ್ ರಹೆ ಥೆ, 

ಆಧೇ ಸುಖೇ ಆಧೇ ಗಿಲೇ, ಸುಖಾ ತೋ ಮೇ ಲೇ ಆಯೀ ಥೀ, 
ಗೀಲಾ ಮನ್ ಶಾಯದ್ ಬಿಸ್ತರ್ ಕೆ ಪಾಸ್ ಪಡಾ ಹೋ, 
ವೋ ಭಿಜವಾದೋ, ಮೇರಾ ವೋ ಸಾಮಾನ್ ಲೌಟಾ ದೋ...

ಒಂದೇ ಕೊಡೆಯಡಿ ಎರಡೂ ದೇಹಗಳು, ಅರ್ಧ ಮಳೆಗೆ ತಪ್ತ ಇನ್ನರ್ಧ ಬೆಚ್ಚಗೆ. ಆ ಬೆಚ್ಚನೆಯ ಭಾವನೆಯನ್ನು ನಾನ್ಹೊತ್ತು ತಂದಿದ್ದೇನೆ. ತಪ್ತ ಹೃದಯ ಮಾತ್ರ ಆ ಹಾಸಿಗೆಯ ದಿಂಬಿನ ಬಳಿ ಬಿದ್ದುಕೊಂಡಿದೆಯೇನೋ ನೋಡು. ಅದನ್ನೂ ಕಳಿಸಿಕೊಟ್ಟುಬಿಡೋ... ಸಾಕು ನಿನ್ನದೊಂದು ಅಪ್ಪಣೆ ಬೇಕಷ್ಟೇ ಕಣೋ... ಇವೆಲ್ಲ ಎಲ್ಲ ಎಲ್ಲ ನೆನಪುಗಳ ಒಮ್ಮೆ ಹೂತುಬಿಡುವೆ ಮತ್ತೆ ನಾನಲ್ಲೇ ಶಾಶ್ವತ ಒರಗಿ ಬಿಡುವೆ...
ಎನ್ನುವ ಅವಳ ಎದೆಯಾಳದಲ್ಲಿ ಪ್ರೇಮ ಅದೆಷ್ಟು ಆಳಕ್ಕೆ ಕೊರೆದುಕೊಂಡಿತ್ತೋ ತಾವಿಗಾಗಿ!

ಅದೆಷ್ಟು ತೊಯ್ದ ರಾತ್ರಿಗಳು ಇಬ್ಬರ ನಡುವೆ! ಆಗೆಲ್ಲ ಅದೆಷ್ಟು ಶರತ್ಕಾಲದ ಎಲೆಗಳು ಉದುರಿಹೋದವೋ... ಒಣಗಿದ ಪ್ರತಿ ಎಲೆಗಳು ಗಾಳಿಗುದುರುವಾಗ ಎದೆಯಲ್ಲಿ ಸರ ಸರನೇ ಹರಿದ ಆ ನೋವಿನ ಝರಿಗಳು ಅದೆಷ್ಟು ಸದ್ದು ಮಾಡಿದವೋ...
ದಿಲ್ ಟೂಟನೇಕಿ ಆವಾಜ್ ನಹೀ ಆತೀ, 

ಲೇಕಿನ ಉಸ್ ಸೇ ಖಯಾಮತ್ ಆ ಜಾತೀ ಹೈ...’ 
ಎನ್ನುವುದು ತಮಾಷೆಗಲ್ಲ. ಅಲ್ಲವೇ?

ಇಡೀ ಚಿತ್ರದ ಈ ಪ್ರೇಮ ಕಾವ್ಯವನ್ನು ಅಕ್ಷರಶಃ ಬದುಕಿದ ನಸೀರುದ್ದೀನ್ ಶಾ, ರೇಖಾ ಮತ್ತು ಅನುರಾಧ ಪಟೇಲ್ ಅಭಿನಯದ ಭಾವೋತ್ಕಟತೆ ಮರೆತೇನಂದರೂ ಮರೆಯಲಿ ಹ್ಯಾಂಗ? ಎಸ್.ಡಿ. ಬರ್ಮನ್ ಸಂಗೀತ, ಗುಲ್ಜಾರ್ ಹೃದಯದ ಪ್ರೇಮ ಕಾವ್ಯ ಹಾಯ್... ನಿಜಕ್ಕೂ ‘ಇಜಾಜತ್‘ ಚಿತ್ರ ಒಂದು ಅದ್ಭುತ ಪ್ರೇಮ ಕಾವ್ಯ. ಮತ್ತೆ ನೋಡಬೇಕೆನಿಸುತ್ತಿದೆ.
ಅಂದ ಹಾಗೆ ಗುಲ್ಜಾರ್ ಗೆ (12 ಏಪ್ರಿಲ್ 2014) ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಒಲಿದು ಬಂದಿದೆ. ದಿಲ್ ಸೇ ಬಧಾಯೀ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...