ವಿಷಯಕ್ಕೆ ಹೋಗಿ

ನೊಬೆಲ್ ಅಂಗಳದಲ್ಲಿ ನಾನು ಹಾಕಿ ಬಂದ ಕಪ್ಪು ರಂಗೋಲಿ...

ನಾರ್ವೆ ದೇಶದ ಒಸ್ಲೊ ಶಹರಿನಲ್ಲಿರುವ ನನ್ನ ತಂಗಿ ಮತ್ತು ಭಾವನ ಮನೆಗೆ ಸಮೀಪದಲ್ಲೇ ಇಬ್ಸನ್ ನ್ಯಾಷನಲ್ ಥಿಯೇಟರ್ ಇದೆ. ಸಮೀಪದಲ್ಲೇ ಅಕೇರ್ ಬ್ರಿಗೇ ಎನ್ನುವ ದೋಣಿಗಳ ತಂಗುದಾಣ. ಅದಕ್ಕೆ ಹೊಂದಿಕೊಂಡೇ ನೊಬೆಲ್ ಶಾಂತಿ ಧಾಮವಿದೆ. ‘ನೊಬೆಲ್ ಶಾಂತಿ’ ಪುರಸ್ಕೃತರ ದರ್ಶನ ಮಾಡಿಸುವ ಈ ಶಾಂತಿ ಧಾಮದಲ್ಲಿ ವಿಶ್ವಮಹಾಮಹಿಮರ ಬಗ್ಗೆ ಸಮಗ್ರ ವಿವರಗಳಿವೆ. ಅವರ ಪುಸ್ತಕಗಳಿವೆ. ಅವರ ಸಾಧನೆಯ ಹಾದಿ, ಹೆಜ್ಜೆಗಳು ಇಲ್ಲಿ ಸ್ಪಷ್ಟವಾಗೇ ಮೂಡಿವೆ. ಅದಕ್ಕೆ ಕೂಗಳತೆ ದೂರದಲ್ಲಿ ಸಿಟಿ ಹಾಲ್ ಇದೆ. ಇಲ್ಲಿಯೇ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ.








 
ನಿತ್ಯದ ನನ್ನ ಸುತ್ತಾಟ ಮುಗಿಯುತ್ತಿದ್ದುದೇ ನೊಬೆಲ್ ಶಾಂತಿಧಾಮದ ಭೇಟಿಯೊಂದಿಗೆ. ಪ್ರಶಸ್ತಿ ಪ್ರದಾನ ಮಾಡುವ ಸಿಟಿ ಹಾಲ್ ಸಭಾಂಗಣಕ್ಕೂ ಭೇಟಿ ಇದ್ದೇ ಇರುತ್ತಿತ್ತು. ಸಭಾಂಗಣದ ಕಟ್ಟೆ ಮತ್ತು ವಿಶ್ವ ಗಣ್ಯರು ಆಸೀನರಾಗುವ ಜಾಗದಲ್ಲಿ ಸುಮ್ಮನೇ ಕೂತು ಬರುವುದು ನನಗೆ ತುಂಬ ಖುಷಿ ಮೂಡಿಸುತ್ತಿತ್ತು.
 ನೊಬೆಲ್ ಶಾಂತಿಧಾಮಕ್ಕೆ ಭೇಟಿ ಕೊಟ್ಟವರೆಲ್ಲ ತಮ್ಮ ದೇಶದ ಮಹಾನ್ ವ್ಯಕ್ತಿಗಳನ್ನು ವೇದಿಕೆಯ ಮೇಲೆ ಕಲ್ಪಿಸಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಇಲ್ಲಿ ಬಂದಾಗೆಲ್ಲ. ’ದಿಲ್ ಸೇ’ ಹೇಳುತ್ತೇನೆ. ನೊಬೆಲ್ ಶಾಂತಿ ಪ್ರಶಸ್ತಿ ನೆನಪಿಸಿಕೊಂಡಾಗೆಲ್ಲ ನನಗೆ ನೆನಪಾಗುತ್ತಿದ್ದ ಒಂದೇ ಒಂದು ಹೆಸರು. ಮಹಾದೇವ.
 ಪ್ರಶಸ್ತಿಗೆ ನಿಮ್ಮ ನೆಚ್ಚಿನ ಹೆಸರು ಎನ್ನುವ ಫಲಕದ ಮೇಲೆ ನಾನು ’ದೇವನೂರು ಮಹಾದೇವ’ ಅವರ ಹೆಸರನ್ನು ಅದೆಷ್ಟು ಸಾರಿ ಬರೆದಿದ್ದೇನೆ... ’ಸಂಬಂಜ ಅನ್ನೋದು ದೊಡ್ಡದು ಕಣಾ...’ ಎಂದು ಕನ್ನಡದಲ್ಲಿ ಬರೆದು, Human relations are above all...ಎಂದು ಪೆದ್ದು ಪೆದ್ದಾದ ಇಂಗ್ಲೀಷಿನಲ್ಲಿ ಅನುವಾದ ಬರೆದು ಕೆಳಗೆ ದೇವನೂರು ಮಹಾದೇವ, ಇಂಡಿಯಾ. ಎಂದು ಗೀಚಿದ ಹಲವು ಬಣ್ಣದ ಚೀಟಿಗಳನ್ನು ಫಲಕಕ್ಕೆ ಅಂಟಿಸಿ ಸಂಭ್ರಮಿಸಿದ್ದೇನೆ. 


‘ಎದೆಗೆ ಬಿದ್ದ ಅಕ್ಷರ‘ ಪುಸ್ತಕದ ಬಗ್ಗೆ ಎರಡು ಮಾತು...

ದೇವನೂರು ಮಹಾದೇವ ಅವರ ಪುಸ್ತಕದ ಒಂದೊಂದು ಅಕ್ಷರ ಹೂವಿನಷ್ಟು ಕೋಮಲ. ಪದ ಪದಗಳ ನಡುವೆ ಭಾವನೆಗಳ ಪಸೆ. ಓದಿದಷ್ಟು ದಕ್ಕುತ್ತಲೇ ಹೋಗುವ ಕಸುವಿನ ವಿಶಾಲ ಬಯಲು... ಇಲ್ಲಿನ ಭಾಷೆ ಸಾಹಿತ್ಯದ ಚಮತ್ಕಾರಿ ಭಾಷೆ ಅಲ್ಲ. ಕಲಾತ್ಮಕ. ಮಹಾದೇವನ ಮನದೊಳಗಿನ ಶಾಂತಿ ಮಾತಾಡಿದಂತಿದೆ. ಹಾಡಿದಂತಿದೆ. ಜೀವಸಂಗೀತದಂತಿದೆ. ಅವರ ಬರವಣಿಗೆ ಮತ್ತವರ ನಿಷ್ಕಲ್ಮಶ ನಗುವಿಗೆ ಎಂಥ ಅಶಾಂತ ಮನಸುಗಳೂ ಪ್ರಶಾಂತವಾಗಿಬಿಡುತ್ತವೆ. ಇದು ಸಂತನ ಹಾಗೊಂದು ತೋರಿಕೆಯ ಸಣ್ಣಗಿನ ನಗುವಲ್ಲ ಅಂತ ನನಗೆ ಮತ್ತೆ ಮತ್ತೆ ಅನಿಸುತ್ತದೆ. ಮನುಷ್ಯ ಅಂತಃಕರಣದ ಅಪ್ಪಟ ಜೀವಸೆಲೆ. ಭರವಸೆಯ ಮಿಂಚು... ಇಡೀ ಸಂಕಲನದ ಒಟ್ಟು ಜೀವದ್ರವ್ಯವೇ ಇಂಥ ಮನೋಧರ್ಮ.


ಈ ಬರಹಗಳಿಗೆ ಕಾಲದ ಹಂಗಿಲ್ಲ. ಕಣ್ಮುಂದೆ ನಡೆದ ವಿದ್ಯಮಾನಗಳ ಬಗ್ಗೆ ನೀಡಿದ ತಕ್ಷಣದ ಪ್ರತಿಕ್ರಿಯೆಗಳಂತೆ ಕೆಲವು ಅನಿಸಿದರೂ, ಕಾವ್ಯಗುಣದಿಂದಾಗಿ ಸೀಮಿತ ಪರಿಧಿಯಾಚೆಗೂ ಸಾಗಿ ಯಾವ ಕಾಲದಲ್ಲೂ ಅನುರಣಿಸಬಲ್ಲ ಶಕ್ತಿ ಇಲ್ಲಿನ ಚಿಂತನೆಗಳಿಗಿದೆ.
ಮಾತುಗಳೆಲ್ಲ ಸೋಲುತ್ತಿರುವ ಈ ಸಂದರ್ಭದಲ್ಲಿ ಮಾತಿನ ತೂಕದ ಅಗತ್ಯವೊಂದನ್ನು ಸೂಚ್ಯವಾಗೇ ಅವರು ಪುಟ್ಟ ಭಾಷಣಗಳ ಮೂಲಕ ಹೇಳುತ್ತಾರೆ.  ಅದು ಅವರದೇ ಆದೊಂದು ವಿಶೇಷತೆ. ಹೇಳಬೇಕಾದ್ದನ್ನು ಅವರು ಟಿಪ್ಪಣಿ ಮಾಡಿಕೊಂಡಿರುತ್ತಾರೆ. ಅದನ್ನೇ ಕಾವ್ಯದಂತೆ ವಾಚಿಸುತ್ತಾರೆ. ಅದು ಭಾಷಣವಾಗದೇ ವಿಚಾರಧಾರೆಯಂತೆ ಕಾವ್ಯಾತ್ಮಕವಾಗಿ, ಕಲಾತ್ಮಕವಾಗಿ ಮತ್ತು ಸಹಜ ಸುಂದರ ಮಾತಾಗಿ ಕೇಳುಗನ ಎದೆಗಿಳಿಯುತ್ತದೆ.  ನನ್ನೊಳಕ್ಕೂ ಇಳಿದಿದೆ. ಮಾತಿನ ಲಹರಿಗೆ ಬಿದ್ದು ವಾಚಾಳಿ ಆಗುವ ಗುಣ ಅವರದ್ದಲ್ಲ. ಈ ಮನೋಧರ್ಮ ಅವರ ಬರವಣಿಗೆಯಲ್ಲೂ ಸಹಜವಾಗಿಯೇ ಬಂದಿದೆ. ಅವರು ಬಳಸುವ ಭಾಷೆ, ಪದ ಕೂಡ ತೂಕ ಮಾಡಿಟ್ಟಂತಿದೆ. ಅಲ್ಲಿ ಯಾವ ಉತ್ಪ್ರೇಕ್ಷೆಗಳಿಗೆ ಆಸ್ಪದವೇ ಇಲ್ಲ. ಜೀವರಸದಿಂದ ಯಾವ ಸಾಲೂ ವಂಚಿತಗೊಂಡಿಲ್ಲ. ಓದುವ ಖಯಾಲಿ ಬೆಳೆಸುವ ಇಲ್ಲವೇ ಓದನ್ನು ರಂಜನೀಯಗೊಳಿಸುವ ಏಕಮಾತ್ರ ಉದ್ದೇಶದ ಹಿಕ್ಮತ್ತು ಇಲ್ಲಿಲ್ಲ. ಮನಸ್ಸನ್ನು ನಿರ್ಮಲಗೊಳಿಸುವ ಮತ್ತು ಚಿಂತನೆಯ ಕಾಲುವೆಗಳನ್ನು ಹೃನ್ಮನಕ್ಕಿಳಿಸುವ ಕಾಳಜಿ ಇದೆ. ಸಂಕಲನದ ಪ್ರತಿಯೊಂದು ಲೇಖನ ಈಗಾಗಲೇ ನಾವು ಕೇಳಿಸಿಕೊಂಡ ಅವರ ಮಾತುಗಳ, ಚಿಂತನೆಗಳ ಲೇಖನ ರೂಪ.
ಗಾಂಧೀಜಿ ಅವರನ್ನು ತುಸು ಜಾಸ್ತಿಯೇ ಹಚ್ಚಿಕೊಂಡಂತಿರುವ ಮಹಾದೇವ, ಯಾರಿಗೂ ಕೇಡು ಬಗೆಯದ ವ್ಯಕ್ತಿತ್ವವನ್ನು ಗಾಂಧೀಜಿ ಹಟದಂತೆಯೇ ಪಾಲಿಸಿಕೊಂಡು ಬಂದಿದ್ದಾರೆ ಅನ್ನಿಸುತ್ತಿದೆ. ಈ ಮನೋಧರ್ಮ ಅವರ ಬಹುತೇಕ ಲೇಖನಗಳಲ್ಲಿ ನಿಚ್ಚಳವಾಗಿದೆ. ಅವರ ಸಾತ್ವಿಕ ಆಕ್ರೋಶವೂ ಫಿಲಾಸಫಿಕಲ್ ಆಗಿದೆ. ಸ್ಪಿರಿಚ್ಯುವಲ್ ಆಗಿದೆ. ಹೀಗಾಗಿ ಯಾರಲ್ಲೂ ಯಾವ ಕಾರಣಕ್ಕೂ ಬೇಸರ ಮೂಡದು.
 ಗಾಂಧೀಜಿ ಆಗುವುದು ತುಂಬ ಸುಲಭ. ಯಾರಾದರೂ ಮನಸು ಕಠಿಣಗೊಳಿಸಿಕೊಂಡರೆ, ಹಟಕ್ಕೆ ಬಿದ್ದರೆ ಆಗಬಹುದೇನೋ?.. ಆದರೆ, ಅಂಬೇಡ್ಕರ್ ಅವರ ಹಾಗೆ ಖಚಿತ ಮತ್ತು ನಿಷ್ಠುರ ಮನೋಭಾವನೆ ಹೊಂದುವುದು ಕಷ್ಟಕರ. ಈ ದೇಶದಲ್ಲಿ ಗಾಂಧೀಜಿಯಂತೆ ವರ್ತಿಸಿ ಬದುಕಬಹುದು. ಆದರೆ ಅಂಬೇಡ್ಕರ್ ಅವರಂತೆ ನಿಷ್ಠುರ ಮನೋಭಾವನೆ ಹೊಂದಿದಲ್ಲಿ ಲುಕ್ಸಾನೇ ಜಾಸ್ತಿ. ಹೀಗಾಗಿ  to be at safer side ಗಾಂಧಿವಾದಿ ಆಗುವುದು ಅತ್ಯಂತ ಸುಲಭದ ಮಾರ್ಗ.
ಮಹಾದೇವ ಅವರನ್ನು ಇತ್ತೀಚೆಗೆ ಹೊಗಳುವವರೇ ಜಾಸ್ತಿಯಾಗಿದ್ದಾರೆ. ಇದೊಂದು ಹುನ್ನಾರ ಎಂದು ನನಗನ್ನಿಸುತ್ತಿರುತ್ತದೆ. ಹಾಗೆ ಅನಿಸಿದಾಗೆಲ್ಲ ಬಸವನ ವಚನ ನೆನಪಾಗುತ್ತದೆ. ’ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೆ ಏರಿಸದಿರಯ್ಯಾ...’. ಬಸವಣ್ಣ ಹೀಗೆ ಹಲುಬಿದ್ದು ಅರ್ಥಪೂರ್ಣವಾಗಿದೆ. ಮಹಾದೇವ ಪ್ರಶಂಸೆಗೆ ಬಗ್ಗದ ಜೀವ ಅನ್ನೋದು ಗೊತ್ತಿದ್ದರೂ ಅಥವಾ ನಂಬಿಕೆ ಬಲವಾಗಿದ್ದರೂ, ಯಾಕೋ ಅಳುಕು.
ಅವತ್ತು ಒಂದು ದಿನ ಗಾಂಧಿ ಸ್ಮಾರಕ ಭವನದಲ್ಲಿ ಇದೇ (ಎದೆಗೆ ಬಿದ್ದ ಅಕ್ಷರ) ಪುಸ್ತಕದ ಬಿಡುಗಡೆ ಇತ್ತು. ಸಮಾರಂಭದಲ್ಲಿದ್ದ ಗೆಳೆಯರ ಬಳಿ ನಾನು ಮಾತನಾಡಿಕೊಂಡಿದ್ದು ಈ ಕೆಳಗಿನ ಹಾಗಿತ್ತು-
ಕಡುಕಪ್ಪಾದ ಪೊಗದಸ್ತ ಕುದುರೆಯೊಂದು ಗಾಂಧಿ ಸ್ಮಾರಕ ಭವನದ ಆವರಣದಲ್ಲಿ ಮಿರಿ ಮಿರಿ ಮಿಂಚುತ್ತ ಸಾಗಿತ್ತು. ಅದನ್ನು ಕಟ್ಟಿಹಾಕುವ ಯತ್ನದಲ್ಲಿ ಕೆಲವರಿದ್ದರು. ತುಂಬ ದಿನಗಳಿಂದ ಇಂಥದೊಂದು ಕುದುರೆ ನಿರೀಕ್ಷೆಯಲ್ಲಿ ಹಲವರಿದ್ದರು. ಅದರ ಹೊಟ್ಟೆಗೆ ಯಾರೋ ಹೆಂಡ ತುಂಬಿಸಿಬಿಟ್ಟರು. ಮೊದಲೇ ಕಡುಕಪ್ಪು ಕಾಡುಕುದುರೆ. ಇನ್ನು ಹೆಂಡ ಹೊಟ್ಟೆಗಿಳಿಸಿಕೊಂಡರೆ ಕೇಳಬೇಕೆ. ಬುಸುಗುಡುತ್ತಲೇ ಇತ್ತು.
ದೂರದಿಂದ ಕೇಳಿಸುತ್ತಿದ್ದ ತಮಟೆಯ ಸದ್ದು ಹತ್ತಿರಕ್ಕೆ, ಎದೆಯ ಮುಂದೆ ರಿಂಗಣಿಸಿದಂತೆನಿಸತೊಡಗಿತು. ಈ ನಡುವೆ ಕುದುರೆಯಂಥ ಕಪ್ಪು ಮುಖವೊಂದು ಮಿರಿ ಮಿರಿ ಮಿಂಚುತ್ತ ಮೆಲ್ಲ ಮೆಲ್ಲ ಹೆಜ್ಜೆ ಹಾಕುತ್ತ ಸಾಗಿ ಬಂತು. ಜನ ಸಾಲುನಿಂತು ಹಾಡಿ ಹೊಗಳುತ್ತಿದ್ದರು. ಹೊಗಳಿಕೆಗೆ ಅಷ್ಟೇನು ಉಬ್ಬಿಕೊಳ್ಳದ ಮುಖವಿದೆನ್ನುವುದು ದಿಟವೇ. ಆದರೂ ಪ್ರಸನ್ನವದನವಾಗಿದ್ದನ್ನು ಕಂಡೆ. ಸುತ್ತ ನೆರೆದ ಭಕ್ತರ ದಂಡು ನೋಡಿ, ದೇವನೂರಿಗೆ ಈಗ ಅದೆಷ್ಟು ಭಕ್ತರು ಮಹಾದೇವ!. ಕೊಂಚ ಗಾಬರಿಗೊಂಡೆ. ಹಾಗೇ ಅವರನ್ನು ಕಡುಕಪ್ಪು ಕುದುರೆಯ ಬಳಿ ಕರೆತಂದರು. ಮೇಲೆ ಕೂರಿಸಿದರು. ’ಕೀರ್ತಿಶನಿ’ ಯಾರಿಗೂ ಕಾಣದಂತೆ ಕುದುರೆಯ ಕುಂಡೆಗೆ ಗುಂಡು ಸೂಜಿ ಚುಚ್ಚಿದವನೇ ಅದರ ತಿಕದ ಬಳಿಯ ಬಾಲವನ್ನು ಜೋರಾಗಿ ತಿವಿದನೇನೋ... ಕುದುರೆ ಹ್ಞೂಂಕರಿಸಿದ್ದೆ ಮುಂಗಾಲುಗಳನ್ನು ಎತ್ತೆತ್ತಿ ಹಾರಿಸುತ್ತ ಮಿಂಚಿನ ವೇಗದಲ್ಲಿ ಓಡುತ್ತ ಕತ್ತಲದಾರಿಯಲ್ಲಿ ಕರಗಿ ಹೋಯ್ತು... ಕೆಲವರೆದೆಯಿಂದ ಕೇಳಿಬಂದ ದನಿಯೊಂದೇ ಮಹಾದೇವ.. ಮಹಾದೇವ... 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...