ವಿಷಯಕ್ಕೆ ಹೋಗಿ

ಡ್ರಾಮಾಕ್ರಸಿ-2

ಎಡ್ಡ: ನೋಡ್ತಾ ಇರೀ ನಾ ಏನೇನ್.... ಅಂತೆಲ್ಲ ಕೊಚ್ಕೋತಾ ಇದ್ದಿ. ಈಗ ಹೇಳ್.
ಗಿಡ್ಡ: ಹೇಳೂದೇನೂ ಇಲ್ರಿ ಬರೀ ಕೇಳೂದು.
ಎಡ್ಡ: ಎಲ್ಲಾ ನಮ್ಮ ದೊಡ್ಡ ಸಾಹೇಬ್ರ ಹೇಳ್ತಿರೋವಾಗ ನಾವೇನ್‌ ಹೇಳೂದೈತಿ ಅಂತೀ ಹೌದಿಲ್ಲೋ.
ಗಿಡ್ಡ: ಅವರು ಎಲ್ಲಾ ತಿಳಕೊಂಡಾರಿ. ಪರ್‌ದಾನಿ (ಪ್ರಧಾನಿ) ಅಷ್ಟ ಅಲ್ರಿ ಅವ್ರು ಜ್ಞಾನಿ.
ಎಡ್ಡ: ಹೌದೌದು... ಹಿಮಾಲಯ ಕಂಡ ಬಂದಾವ್ರ ಬ್ಯಾರೆ. ಅವ್ರು ಪ್ರವಚನ ಹೇಳ್ತಾರು ನೀವು ಕೇಳ್ಕೊತ ಹೊಂಟ್ರಿ. ಕಾಯಕಾ ಯಾರ್ ಮಾಡಬೇಕು?
ಗಿಡ್ಡ: ಅದನ್ನರೀ ನಾ ಹೇಳೂದು ಪರ್ ಪರ್ ಅಂತ.
ಎಡ್ಡ: ಪರ್ ಪರ್ ಅಂದ್ರ ಏನಲೇ ಅದ.
ಗಿಡ್ಡ: ಪರ್‌ವಚನ ಪರ್‌ದಾನಿ.
ಎಡ್ಡ: ಹೌದ್ ಅನ್ನಿ ನೋಡ್ ಮಗನಾ.
ಗಿಡ್ಡ: ಹೋಗ್ಲಿ ಬಿಡ್ರಿ. ಅಲ್ರೀ ಚೀನಾದವರು ಮುಂದ ಬಂದಿದ್ದು ಕಾಯಕಾ ನಂಬಕೊಂಡಿದ್ದರ ಫಲಾ ಅಂತ ಮನ್ನೇರ ಹೇಳಿದ್ರಿ. ನಾವೇನ್ ಕಮ್ಮಿ ಕಾಣ್ತೀವೆನ್ ನಿಮಗ...
ಎಡ್ಡ: ನಾವೂ ಏನ್ ಕಮ್ಮಿ ಇಲ್ಲ. ಅವರಿಗಿಂತ ಒಂದ್ ಕೈ ಮುಂದ ಅದೀವಿ. ಇಂದಿರಾಗಾಂಧಿ ಎರಡು ಬೇಕು ಮೂರು ಸಾಕು ಅಂತ ಜರ ಕಡತಾ ಹೇಳಿರಲಿಲ್ಲ ಅಂದ್ರ ನೋಡ್ತಿದ್ದಿ, ಚೀನಾ ಮೀರಸತಿದ್ವಿ. ಪುತು ಪುತು ಅಂತ ಜಗತ್ ತುಂಬ ನಾವ ಕಾಣಿಸ್ತಿದ್ವಿ ಹುಳದಗತ್ಲೆ.
ಗಿಡ್ಡ: ಅದನ್ನರೀ ನಾ ಹೇಳೂದು. ಅಲ್ರೀ, ಸವ್ವಾ ಸೌ ಕರೋಡ್ ಅದೀವಲ್ರಿ. ಕಮ್ಮಿ ಆತೇನ್ ನಿಮಗ. ಅದ್ರಾಗ ನಮ್ಮ ಮುಸಲ್ಮಾನ್ರ ಏರಿಯಾದೊಳಗ ಹ್ವಾದ್ರ ಮುಗೀತ್. ಮಂದೀನ ಮಂದಿ.ಮುಸಲ್ಮಾನರು ಹಿಂಗ ಬೆಳಕೋತ ಹೋದ್ರು ಅತಂದ್ರ, ಸ್ವಲ್ಪ ಸಮಯದೊಳಗ ಇಡೀ ದೇಶನ ಅವ್ರದ ಆಕ್ಕೈತಿ. ಅದೇನೋ ಹೇಳ್ತಾರಲ್ರೀ, ಲೌ ಜಿಹಾದ್.
ಎಡ್ಡ: ಅಲ್ಲಲೇ ಸವ್ವಾ ಸೌ ಕರೋಡಿನ್ಯಾಗ ಮುಸಲ್ಮಾನ್ರು ಮ್ಯಾಲಿನ ಇಪ್ಪತ್ತೈದ ಕರೋಡಿನ್ಯಾಗಿನ ಮುಕ್ಕಾಲ ಭಾಗಾನೂ ಇಲ್ಲ. ಅವ್ರು ಬರೇ ಮಕ್ಕಳ್ನ ಹಡೀತಾರು ಅಂತ ಹೀಯಾಳಸ್ತಿರಿ. ಬಾಕಿ ಸೌ ಕರೋಡ್ ಏನ್ ಪುತು ಪುತು ಅಂತ ಹಂಗ ಬಂದ್ವೇನ್ಲೆ. ಜನಸಂಖ್ಯಾ ಹೆಚ್ಚಾದ್ರೂ ಅವ್ರನ ಬೈತೀರಿ. ಎಲೆಕ್ಷನ್ ಬಂದ್ವು ಅತಂದ್ರ ಅಪೀಸಮೆಂಟ್, ಓಲೈಕೆ ರಾಜಕಾರಣ ಮಾಡ್ತಾರು ಅಂತ ಸೆಕ್ಯುಲರ್ ಪಾರ್ಟಿ ಮ್ಯಾಲ ಹಾಡ್ ಕಟ್ಟತೀರಿ. ಅದನ್ನ ಹಾಡಿಕೊಂತ ಅಳತೀರಿ. ಹರೇದ್ ಹುಡುಗ್ರು ಹುಡುಗ್ಯಾರು ಲವ್ ಡವ್ ಅಂತ ಕೈ ಕೈ ಹಿಡಕೊಂಡ ಅಡ್ಯಾಡವ್ರ. ಪ್ರೀತಿ ಮತ್ ಹರೇಕ್ಕ ಏನ್ ಧರ್ಮ, ಜಾತಿ ಗೊತ್ತಿರತೈತೇನಲೇ.  ಹರೇದ್ದ ಒತ್ತಡಕ್ಕ ಓಡಿ ಹೋಗ್ತಾವು. ಎಲ್ಲದಕ್ಕೂ ಲವ್ ಜಿಹಾದ್ ಅಂತೀರಿ. ಎಲ್ಲೆರೆ ಬಾಂಬ್ ಸಿಡದ್ರೂ ಅವ್ರನ ಸಂಶೆ ಮಾಡ್ತಿರಿ.
ಗಿಡ್ಡ: ಅವ್ರು ಅಂದ್ರ ಮುಗೀತ್. ಹೆಣ್ಮಕ್ಳ ತಲೀ ಸವರಿ ಮಸಲತ್ ಮಾಡುವ ಲವ್ ಜಿಹಾದಿಗಳು, ಮತಾಂತರಿಗಳು, ಕೊಲೆಗಡುಕರು ಮತ್ ಭಯೋತ್ಪಾದಕರು ಅಂತನ ಲೆಕ್ಕಾ. ಹಂಗ್ ನಂಬಸೂ ಯತ್ನ ಅಂತೂ ನಡದೈತ್ರಿ.
ಎಡ್ಡ: ಯಾರಲೇ ಕೊಲೆಗಡುಕರು. ಮಹಾತ್ಮಾ ಗಾಂಧೀ ಅಂತ ನೀವೇನ್ ಅಂತಿದ್ರೆಲಾ ಅವ್ರನ್ನ ಕೊಂದವ್ರ ಯಾರು? ಗರೀಬಿ ಹಟಾವೋ ಅಂದ ಇಂದಿರಾ ಗಾಂಧಿ, ವಿಜ್ಞಾನ ತಂತ್ರಜ್ಞಾನ ಅಂದ ರಾಜೀವಗಾಂಧಿ.... ಇವ್ರನೆಲ್ಲಾ ಕೊಂದವ್ರು ಯಾರು?... ಇವ್ರನೆಲ್ಲಾ ಕೊಂದವ್ರು ಕೊಲೆಗಡುಕರಲ್ಲ ಹಂಗಾರ. ಅವ್ರು ದೇಶ ಭಕ್ತರು ಅಂದ್ಹಂಗಾತಲ್ಲ. ದೊಡ್ಡ ಕತೀರೆಪಾ ಇದ...
ಗಿಡ್ಡ: ಹೇ ರಾಮ್... ಎಂಥಾ ಮಾತಾಡ್ತೀರಿ. ನಮ್ ಧರ್ಮಜ್ಞಾನಿ ಒಬ್ರ ಅದಾರಿ. ಬೋಸ್ ಡಿ ಕೆ ಅಂತ. ಅವ್ರಿಗೆ ಜೇರಕಡತ ಈ ವಿಷ್ಯ ಗೊತ್ತಾತು ಅತಂದ್ರ ದೊಡ್ಡ ರಂಪನ ಮಾಡಿಬಿಡ್ತಾರ್ರಿ.
ಎಡ್ಡ: ಯಾರ್ ಲೇ ಅಂವಾ ಬೋಸ್‌.ಡಿ.ಕೆ.
ಗಿಡ್ಡ: ನಮ್ಮೂರ್ ಕತ್ರಿ ಹಂತ್ಯಾಕ ಐತಲ್ರಿ ದರ್ಶನಿ. ಉಡುಪಿ ಕೃಷ್ಣಾ ಅಂತ. ಅವರೂರ್‌ ಕಡೆಯವ್ರಿ. ಈ ಬೋಸ್‌.ಡಿ.ಕೆ ಅದಾರಲ್ರಿ ಮಸಾಲಿ ದ್ವಾಸಿ, ಇಡ್ಲಿ ಸಾಂಬಾರ್ ಗತ್ಲೆ ಅಗದಿ ರುಚಿ ರುಚಿಯಾಗಿ ದೇಶ, ಮಣ್ಣು, ಮಾತೃಭೂಮಿ, ವಸುದೈವ ಕುಟುಂಬಕಂ ಅಂತ ಏನೇನೋ ಭಾಳ ಛಂದ ಮಾತಾಡ್ತಾರ್ರಿ. ಬರೀತಾರ್ರಿ. ಏನ್ ಜ್ಞಾನಾರೀ ಅವ್ರದು. ಛಲೋ ಕಂಠಾ. ಬೆಳ್ಳಗ ಮಖಾ, ಹಣಿ ಮ್ಯಾಲ ಎಂಥದೋ ಗೆರಿ... ಎಂಥ ಮೋಹಕ ನಗೀ, ಭಾಷಾಶುದ್ಧಿ, ಮಾತುಗಾರಿಕೆ... ಅಬಬ... ಅಗದಿ ಪಾಸ್ ಮಾಡೀನ್ನೋಡ್ರಿ. ಆಕಳಂಥ ಮನಷ್ಯಾರ್ರಿ. ಅವ್ರ ಮಾತಿನ ಅರ್ಥ ಅಷ್ಟ ತಲೀಗೆ ಹೋಗಲಿಲ್ಲಾ ಖರೆ, ಆದ್ರೂ ಒಂದು ಕ್ವೆಶ್ಚನ್‌ ಐತ್ರಿ. ಅಲ್ರೀ ಈ ರಾಷ್ಟ್ರಭಕ್ತಿ ಅಂತ ಅವ್ರೆಲ್ಲಾ ಭಾಳ ಮಾತಾಡ್ತಾರ್ರಿ. ಹಂಗಂದ್ರ ಏನ್ರಿ?
ಎಡ್ಡ: ಭಜನೀ ಮಾಡೂದು. ಪಾರಾಯಣ ಮಾಡೂದು. ಮುಕಳಿ ತುಂಬ ಭಕ್ತಿ ಭಕ್ತಿ ಅಂತ ಮಾತಾಡೂದು. ಯುದ್ಧ ನಡದಾಗ ಗಡಿ ಮುಂದ ಹೋಗಿ ನಿಂದ್ರನ್ನ ಈ ಬೋಸ್‌.ಡಿ.ಕೆ ಗ ನೋಡೂನು. ಗೊತ್ತಾಕ್ಕೈತಿ ರಾಷ್ಟ್ರಭಕ್ತಿ ಅಂದ್ರ ಏನೂಂತ... ಅಲ್ಲಿ ಗುಂಡ ಹೊಡಸ್ಕೊಂಡು ಸಾಯಾಕ ಸಿಖ್ ಜವಾನರು ಬೇಕು. ಲಿಂಗಾಯತ, ಶೂದ್ರ, ಮುಸ್ಲಿಂ, ದಲಿತ ಯೋಧರು ಬೇಕು. ಕೀರ್ತಿ, ಮೆಡಲ್ಲು, ರೆಕಾರ್ಡ್‌ ಮಾತ್ರ ಇಂಥ ಬೋಸ್‌.ಡಿ.ಕೆಗಳಿಗೆ. ಮ್ಯಾಲ ಪಾಠ, ಪ್ರವಚನ ಬ್ಯಾರೆ. ಆಟಾ ಹಚ್ಚಿರೇನಲೇ. ನಮಗೇನ್ ತಿಳ್ಯಾಂಗಿಲ್ಲ ಅನಕೊಂಡ್ರಿ...
ಗಿಡ್ಡ: ನಮಗೂ ಜರಾ ಅರ್ಥ ಆಗಾಕಹತ್ತೈತ್ರಿ. ದೇಶಪ್ರೇಮ ನಮಗೂ ಐತರಿ. ರಾಷ್ಟ್ರಭಕ್ತಿ ಅಂದಕೂಡ್ಲೇ ತಿಳ್ಯಾಂಗಿಲ್ಲ ಬಿಡ್ರಿ ಹ್ವಾರೆ. ಅಂದ್ಹಂಗ ಮನ್ಯೆಮನ್ನೆರ ನಮ್ಮ ಮೂಲಿಮನಿ ಬಸು... ಅದರೀ ಪಂಚಮಸಾಲೀ ಹುಡುಗಾ... ಅಂವಾ ಬಾರ್ಡರ್ ಹಂತೇಲೆ ಸತ್ರಿ. ಅವನ ಹೆಣಾ ಧ್ವಜದಾಗ ಸುತ್ಕೊಂಡ ಬಂದ ಕೊಟ್ಟ ಹ್ವಾದ್ರಿ. ಅವತ್ ಮಣ್ಣ ಮಾಡು ದಿನಾ ಗೋರ್ಯಾಳದಾಗ ಬೋಸ್‌.ಡಿ.ಕೆ ಏನ್ ಮಾತಾಡಿದ್ರ ಅಂದ್ರಿ. ರಾಷ್ಟ್ರಭಕ್ತಿ, ತಾಯ್ನಾಡು, ಮಣ್ಣು, ಭಯೋತ್ಪಾದನೆ, ಚೀನಾ, ಪಾಕಿಸ್ತಾನ ... ಅಂತೆಲ್ಲಾ ಮಾತಾಡಿದ್ರು. ಗಂಡ ಗಬರು  ಅಗದಿ ನಂಬರ್ ಒಂದ್ ಅನ್ರೆಲಾ.
ಎಡ್ಡ: ಅವ್ರು ಮಾತಾಡ್ತಾರಲೇ. ಅವ್ರದು ಮಾತಾಡೂದ ಕೆಲಸಾ. ಮಂದಿ ಮಕ್ಳನ್ನ ನೀರಿಗಿಳಿಸಿ ಗಾಳಾ ನೋಡವ್ರು. ಅವ್ರು ಮಾತಾಡ್ತಾರ. ಕಳಸನ್ನ ನೋಡೂನು ಅವ್ರ ಮಕ್ಕಳ್ನ ಬಾರ್ಡರ್ ಕಾಯಾಕ. ಗೊತ್ತಾಕ್ಕೈತಿ ಬಾಂಬು, ಬಂದೂಕು, ಶೌರ್ಯ ಅಂದ್ರ ಏನು ಅಂತ. ಇವ್ರ ಪೈಕಿ ಎಷ್ಟ ಜನ ಸೈನಿಕರಾಗಿ ಭರ್ತಿ ಆಗ್ಯಾರ, ಎಷ್ಟ ಜನಾ ದೇಶಕ್ಕಂತನ ಜೀವಾ ಕಳಕೊಂಡಾರಲೇ? ಸ್ವಲ್ಪ ಲೆಕ್ಕಾ ತಗಸೂ. ಆರ್‌ಟಿಐ ಒಳಗ ಒಂದು ಅಪ್ಲಿಕೇಷನ್ ಹಾಕ್ ನೋಡೂನು. ರಾಷ್ಟ್ರಭಕ್ತಿ ಯಾರ್ಯಾರ್ದ ಎಷ್ಟ ಐತಿ ಚೆಕ್ ಮಾಡೇ ಬಿಡೂನು.
ಗಿಡ್ಡ: ಬಾರ್ಡರ್ ಅಂದಕೂಡ್ಲೆ ನೆನಪಾತ ನೋಡ್ರಿ. ಮನ್ನೆ ನಮ್ಮ ಪರ್‌ದಾನಿ ಗಡಿ ಹಂತ್ಯಾಕ ಹೋಗಿ ಸೈನಿಕರನ್ನ ಹುರದುಂಬಿಸಿ ಬಂದ್ರ ನೋಡ್ರಿ. ಈತಕ ಯಾರರೇ ಹಂಗ ಮಾಡಿರೇನ್ರಿ. ನೀವೂ ಹೇಳ್ತಿರಿ.
ಎಡ್ಡ: ರಕ್ಷಣಾ ಮಂತ್ರಿಗಳು ಆ ಕೆಲಸಾ ಹಿಂದಿನಿಂದ ಮಾಡಿಕೋತ ಬಂದಾರು. ಪ್ರಚಾರ ಸಿಕ್ಕಿರಲಿಲ್ಲಾ ಅಷ್ಟ. ಅವರವರ ಖಾತೆ ಕೆಲಸ ಅವರವರ ಮಾಡಬೇಕು. ಯುದ್ಧದ ಬಗ್ಗೆನೂ ನಾನ ಮಾತಾಡತೀನಿ, ಶಿಸ್ತು, ಕಸಾ, ಕಾರ್ಯದಕ್ಷತೆ, ಮಿಲಿಟರಿ, ಪೊಲೀಸ್ ಎಲ್ಲಾದರ ಬಗ್ಗೆ ನಾನ ಹೇಳ್ತಿನಿ, ಮಾಡ್ತಿನಿ... ಹಿಂಗ್ ಎಲ್ಲಾ ನಾನ ಮಾಡ್ತನಿ ಮತ್ ನಾ ಹೇಳಿದ್ಹಾಂಗನ ಎಲ್ಲಾ ನಡೀಬೇಕು ಅತಂದ್ರ ಸರ್ವಾಧಿಕಾರಿ ಮನೋಧರ್ಮ ಆಕ್ಕೈತಲೇ ಅದು. ಸದ್ಯಕ್ಕಂತೂ ನಿಮ್ಮ ಪರ್‌ದಾನಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನ್ಹಂಗ ಅನಸ್ತಾರ.
ಗಿಡ್ಡ: ನಾ ಹೊಂಡತೀನರೀ. ಭಜನಿ ಟೈಂ ಆತ್ರಿ.
ಎಡ್ಡ: ನೀವು ಭಜನೀ ಮಾಡಾಕ ಹುಟ್ಟೀರಿ. ಮಾಡಿಕೋತನ ಇರಿ ...
ಗಿಡ್ಡ: ಹ ಹ... ಮೊದಲು ಅರಿ, ಆಮೇಲೆ ಇರಿ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...