ವಿಷಯಕ್ಕೆ ಹೋಗಿ

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ


ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.
  ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ ಹರಿಕುಮಾರ್‌ ಸರ್‌ ತಮ್ಮ ಆಪ್ತರ ಜೊತೆ ಚರ್ಚೆಯಲ್ಲಿ ಮಗ್ನರಾಗಿದ್ದರು. ಮಾತನಾಡಿಸುವ ಹಂಬಲ ತುಂಬ ಇತ್ತು. ಹತ್ತಾರು ಸಲ ಅವರ ಹತ್ತಿರಕ್ಕೆ ಹೋದೆನಾದರೂ ಮಾತನಾಡಿಸುವ ಧೈರ್ಯ ಬರಲಿಲ್ಲ. ಅದು ಹೆದರಿಕೆ ಅಲ್ಲ.  ಅಭಿಮಾನ ಪಡುವ, ತುಂಬ ಗೌರವಿಸುವ, ಆದರಿಸುವ ವ್ಯಕ್ತಿಯ ಬಗ್ಗೆ ಒಳಗೇ ಇರುವ ಮತ್ತು ಸದರದಿಂದ ವ್ಯಕ್ತಪಡಿಸಲು ಆಗದ ಬಹುದೊಡ್ಡ ಗೌರವ ಎಂದಷ್ಟೇ ಹೇಳಬಲ್ಲೆ. ಅವರಿಗೆ ಯಾವತ್ತೂ ದಿಲ್‌ ಪೂರ್ವಕ ಸಲಾಂ.
* * *
 ವಧು– ವರರಿಗೆ ಶುಭ ಕೋರಲು ಹೋದಾಗ ಶಾಂತಕುಮಾರ್‌ ಸರ್‌ ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿ ನೂತನ ಜೋಡಿಗೆ ಪರಿಚಯಿಸಿದ ಸಹಜತೆ ತುಂಬ ಖುಷಿ ಕೊಟ್ಟಿತು. ತಮ್ಮ ಎಂದಿನ ಖದರಿನ ನಡುವೆಯೂ ಅತ್ಯಂತ ಸ್ನೇಹಪೂರ್ವಕವಾಗಿ ಆದರಿಸಿದ ಮತ್ತು ಊಟದ ಕೋಣೆಯಲ್ಲಿ ಎಲ್ಲರೊಂದಿಗೆ ಅತ್ಯಂತ ಸಹಜವಾಗಿ ಸಹಭೋಜನದಲ್ಲಿ ಪಾಲ್ಗೊಂಡ ಡೆಕ್ಕನ್‌ ಹೆರಲ್ಡ್‌ ಸಂಪಾದಕ ಕೆ.ಎನ್‌ ತಿಲಕ್‌ಕುಮಾರ್ ಸರ್‌ (ಕೆ.ಎನ್‌. ಶಾಂತಕುಮಾರ್‌ ಅವರ ಅಣ್ಣ) ಎಂದಿನಂತೆ ಗಂಭೀರವದನರಾಗಿರದೇ ತುಂಬ ಖುಷಿಯ ಮತ್ತು ಸಂಭ್ರಮದ ಮೂಡ್‌ನಲ್ಲಿದ್ದರು. ನನ್ನದೂ ಸೇರಿ ಎಲ್ಲರ ವಂದನೆಗಳಿಗೆ ಪ್ರತಿವಂದಿಸಿ ಮುಗುಳುನಗೆ ಬೀರಿದ್ದು ಖುಷಿ ಕೊಟ್ಟಿತು. ಅವರ ಜೊತೆ ಎದುರಿನ ಪಂಕ್ತಿಯಲ್ಲಿ ಕುಳಿತು ಮಾಡಿದ ಊಟ ಮತ್ತಷ್ಟು ರುಚಿಕಟ್ಟೆನಿಸಿತು.

ವೆಡ್ಡಿಂಗ್‌ ಹೆರಲ್ಡ್‌ 

ಒಂದು ಅದ್ಭುತ ಕಲ್ಪನೆ. ಟ್ಯಾಬ್ಲಾಯ್ಡ್‌  ಸೈಜಿನ ಅತ್ಯಂತ ಸೊಗಸಾದ ಪತ್ರಿಕೆ ಸಮಾರಂಭದ ಕಳೆ ಹೆಚ್ಚಿಸಿತು. ಇದರ ಸುಂದರ ಮುದ್ರಣ ಕುಟುಂಬದ ಸಮಗ್ರ ಮಾಹಿತಿ ಗಮನ ಸೆಳೆಯಿತು. ಬಳಸಿದ ಕ್ಯಾರಿಕೇಚರ್‌/ಇಲಸ್ಟ್ರೇಷನ್‌  ಸಾಧಾರಣ. ಅಂಥ ಕಲಾತ್ಮಕ ಅನ್ನಿಸಲಿಲ್ಲ. ಬಳಸುವ ಐಡಿಯಾ ಒಂದು ಉತ್ತಮ ಐಡಿಯಾ. ಒಟ್ಟಾರೆ ಪತ್ರಿಕೆ ಭಿನ್ನ ಮತ್ತು ಅರ್ಥಪೂರ್ಣ. ಇದು ಮುದ್ರಣ ಮಾಧ್ಯಮದ ಹೊಸ ಸಾಧ್ಯತೆ. ಮದುವೆ ಸಮಾರಂಭಕ್ಕೆ ಸುದ್ದಿ ಪತ್ರಿಕೆಯಂಥ ಸ್ಪರ್ಶ ನೀಡಿದ್ದು ಮಜವೆನಿಸಿತು. ಪತ್ರಿಕೆಯ ಸಂಸ್ಥಾಪಕರ ಕುಟುಂಬದ ಸಮಗ್ರ ನೋಟ ಕಟ್ಟಿಕೊಡುವ ಯತ್ನ ನಿಜಕ್ಕೂ ಅದ್ಭುತ. ಮೀಡಿಯಾ ಘರಾನಾದ ಬಗ್ಗೆ ಎಷ್ಟೋ ವಿಷಯ ತಿಳಿದುಕೊಳ್ಳುವ ಅವಕಾಶ ಮಾಧ್ಯಮದಲ್ಲಿ ಸಕ್ರಿಯರಾದವರಿಗೆ ದಕ್ಕಿತು. ಪತ್ರಿಕಾ ಲೋಕದಲ್ಲಿ ಬಹುದೊಡ್ಡ ಖಾನ್‌ದಾನ್‌ ಎಂದೇ ಹೆಸರಾದ ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರ ಕುಟುಂಬದ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಇದರ ಕೊರತೆಯನ್ನು ವೆಡ್ಡಿಂಗ್‌ ಹೆರಲ್ಡ್‌ ನೀಗಿಸಿದೆ. ಕುಟುಂಬವೊಂದರ ಮಾನವೀಯ ಸಂಬಂಧಗಳ ಸಮಗ್ರ ಮಾಹಿತಿಯನ್ನು ವೆಡ್ಡಿಂಗ್‌ ಹೆರಲ್ಡ್‌ ತುಂಬ ಸೊಗಸಾಗಿ ಕಟ್ಟಿಕೊಟ್ಟಿದೆ.
ಮುದ್ರಣ ಸಾಧ್ಯತೆಯ ಇಂಥದೊಂದು ಸಾಹಸವನ್ನು ಇದೇ ಮೊದಲ ಸಲ ನಾನು ನೋಡಿದ್ದು. ಹೆಚ್ಚೂ ಕಮ್ಮಿ ಇದೇ ಅವಧಿಯಲ್ಲಿ  ಮಾಜಿ ಸಚಿವ ಜನಾರ್ಧನ್‌ ರೆಡ್ಡಿ ಅವರ  ಮಗಳ ಅದ್ದೂರಿ ವಿವಾಹ ಸುದ್ದಿ ಮಾಡಿತು. ಅವರ ಡಿಜಿಟಲ್‌ ಮದುವೆ ಆಮಂತ್ರಣ ಪತ್ರಿಕೆ ಚಾನೆಲ್‌ಗಳಲ್ಲಿ ವಿಜೃಂಭಿಸಿತು. ಇದೂ ಒಂದು ಸಂವಹನ ಸಾಧ್ಯತೆ.  ಆದರೆ ‘ವೆಡ್ಡಿಂಗ್‌ ಹೆರಲ್ಡ್‌’  ಪತ್ರಿಕೆಯ ಉದ್ದೇಶ ಮನುಷ್ಯ ಸಂಬಂಧಗಳನ್ನು ಹೇಳುವುದಾಗಿದೆ.  ಗುರುಸ್ವಾಮಿ, ನೆಟ್ಟಕಲ್ಲಪ್ಪ ಅವರುಗಳಿಂದ ಮೊದಲುಗೊಂಡು ಒಟ್ಟಾರೆ ಕುಟುಂಬ ಆರಂಭದಿಂದ ಇಲ್ಲಿಯವರೆಗೆ ಮಾನವೀಯ ಸಂಬಂಧವನ್ನು ಜಾತ್ಯತೀತ, ಭಾಷಾತೀತ, ಧರ್ಮಾತೀತ, ಸೀಮಾತೀತ ಮತ್ತು ಮಾನವೀಯ ನೆಲೆಯಲ್ಲಿ ಕಟ್ಟಿಕೊಂಡು ಉಳಿಸಿಕೊಂಡು ಬಂದ ಬಗೆಯನ್ನು ವಿವರಿಸಿದೆ.  ಸಾಮರಸ್ಯದ ಬದುಕನ್ನು ಪ್ರತಿಪಾದಿಸುವುದು ಸರಳ. ಅದನ್ನು ಅಕ್ಷರಶಃ ಬಾಳುವುದಕ್ಕೆ, ಬದುಕುವುದಕ್ಕೆ ಬದ್ಧತೆಯೇ ಮುಖ್ಯ. ಅಂಥ ಬದುಕನ್ನು ಸಹಜವಾಗಿ ಮತ್ತು ಯಾವ ಆಡಂಬರವಿಲ್ಲದೇ ಈಗಲೂ ಬದುಕುತ್ತಿರುವ ಮತ್ತು ಆ ಬದ್ಧತೆಯನ್ನು  ಕಾಪಾಡಿಕೊಂಡು ಬಂದಿರುವ ಈ ಕುಟುಂಬಕ್ಕೆ ದಿಲ್‌ ಸೇ ಸಲಾಂ.
 ಮನುಷ್ಯ ಮನಸುಗಳು ಸಂಭ್ರಮವನ್ನು ಅತ್ಯಂತ ಸಹಜವಾಗಿ ಜೊತೆಯಾಗಿ ಸವಿಯುವುದು ಸಾಧ್ಯವಾಗಬೇಕು. ಅದನ್ನು ಸಾಧ್ಯವಾಗಿಸಿದ ಮತ್ತು ಯಾವ ಹಮ್ಮು ಬಿಮ್ಮುಗಳಿಲ್ಲದೇ ಸಮಾರಂಭಕ್ಕೆ ಬಂದ ಎಲ್ಲರೊಂದಿಗೆ ಮನಃಪೂರ್ವಕವಾಗಿ ಬೆರೆತ ಕುಟುಂಬ ಸದಸ್ಯರದು ಅತ್ಯಂತ ಹೃದ್ಯವಾದ ಮಾನವೀಯ ನಡೆ. ಮನುಷ್ಯ ಭಾವ ಒಳಗಿನಿಂದಲೇ ಶ್ರೀಮಂತವಾದಾಗ ಇದೆಲ್ಲ ಸಾಧ್ಯ ಎನ್ನುವುದು ನನ್ನ ನಂಬಿಕೆ. ಇದು ನನ್ನ ಬಹುಮುಖ್ಯವಾದ ಹುಡುಕಾಟ ಕೂಡ.  ಇಂಥದ್ದಕ್ಕೆ ಸಾಕ್ಷಿಯಾದಾಗಲೆಲ್ಲ ದಿಲ್‌ ಖುಷ್‌.
ನಿಖಿಲ್‌ ವೈವಾಹಿಕ ಬದುಕು ಸುಖಮಯವಾಗಿರಲಿ. ಅರ್ಥಪೂರ್ಣವಾಗಿರಲಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...