Theatre Olympics 2018/Organised by: NSD Bengaluru Centre
Play (Nob-verbal): Caesarean Section. Essays on Suicide/Enacted by: ZAR Theatre Polland
Direction- Jarosław Fret


ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ ಧ್ಯಾನಕ್ಕೆ , ಆತ್ಮಹತ್ಯೆಯಂಥ ಪ್ರವೃತ್ತಿಗಿಳಿವುದೇ! ಆಸೆ, ಪಡೆವ. ಕಳಕೊಳ್ಳುವ ಹಂಬಲ, ತುಡಿತ ... ಎಲ್ಲದರಲ್ಲೂ ಸೋತು ನಿಂತಾಗ, ಇಷ್ಟು ವಿಶಾಲ ಟೈಂ ಅಂಡ್ ಸ್ಪೇಸ್‌ನಲ್ಲಿ ತನ್ನದೇ ಸ್ಪೇಸ್‌ಗಾಗಿ ತಡಕಾಡಿ ನಿರಾಶಗೊಂಡಾಗ ಎಲ್ಲವನ್ನು ಶಾಶ್ವತವಾಗಿ ಮರೆಯಲು ಅಂಥದೊಂದು ಪ್ರವೃತ್ತಿ ಶುರುವಾಗುತ್ತದೆ. ಸೋಲುಗಳನ್ನೋ, ಅವಮಾನಗಳನ್ನೋ, ಹತಾಶಗಳನ್ನೋ, ನೋವುಗಳನ್ನೋ, ಮುಜುಗರಗಳನ್ನೋ... ಅದೇನೇನನ್ನೋ ಕಾರಣಗಳ ಮಾಡಿಕೊಳ್ಳಬಹುದು ಆ ಪ್ರವೃತ್ತಿ ! ಆತ್ಮ ಹತ್ಯೆಯ ನಿರ್ಣಾಯಕ ಕ್ಷಣದಲ್ಲಿ ಅದಾವುದೋ ನಮ್ಮೊಳಗಿನ ಚೇತನ ಮತ್ತೆ ರಚ್ಚೆ ಹಿಡಿದು ಹಿಂದಕ್ಕೆಳೆಯುತ್ತದೆ. ತನಗೆ ಈ ಕ್ಷಣ ನೀನು ಬೇಕೇ ಬೇಕೆನ್ನುವ ಹಟಕ್ಕೆ ಬಿದ್ದ ಪುಟ್ಟ ಕಂದ, ಅಮ್ಮನ ಸೆರಗು ಹಿಡಿದು ನಿಲ್ಲುವ ಹಾಗೆ. ಸ್ವಲ್ಪ ನಿಂತು ಬಿಡೋ, ಕತ್ತಲಾವರಿಸುತ್ತಿದೆ, ಮಳೆ ಜೋರು, ಗಾಳಿಯೂ ಬಿರು ಬೀಸುತ್ತಲಿದೆ, ಗುಡುಗು ಮಿಂಚೂ ಮೂಡುತ್ತಿದೆ, ಪ್ರಶಾಂತ ನದಿಯ ಅಲೆಗಳು ಯಾಕೋ ರೊಚ್ಚಿಗೆದ್ದಂತಿವೆ, ದೋಣಿ ಸಾಗದು, ಸ್ವಲ್ಪ ಸಮಯ ನಿಂತು ಬಿಡೋ... ಹೊರಟೇ ನಿಂತವರನ್ನು ತಡೆಯುವ ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ.
ದೇಹ ಗೂಡಲ್ಲಿ ಸ್ವಚ್ಛಂದವಾಗಿ ಹಾರಾಡುವ ಪ್ರಾಣ ಪಕ್ಷಿ ಅನಂತದೆಡೆ ರೆಕ್ಕೆ ಅಗಲಿಸಲು ತಾವು ತೊರೆಯುವುದಕ್ಕೆ ಸಜ್ಜಾಗುವುದಾದರೂ ಹೇಗೆನ್ನುವ ದಿಗಿಲು ನನ್ನದು! ಉಳಿಸಿಕೊಳ್ಳಲು ಅದರೊಂದಿಗೆ ಒಳಗಿನ ಚೇತನದ ಸೆಣಸಾಟ ಕಲ್ಪನೆಗೆ ಮೀರಿದ್ದು. ದಾರ್ಶನಿಕನಿಗೆ ದಕ್ಕಬಹುದಾದ ಇಂಥ ಅನುಭವವನ್ನು ರಂಗಮುಖೇನ ಅದ್ಭುತ ಬಹುಸ್ವರ ಸಂಗೀತದೊಂದಿಗೆ ಕಟ್ಟಿಕೊಟ್ಟ ಪೊಲೆಂಡ್ ನ ಝಾರ್ ತಂಡದ ಪ್ರತಿ ನಟ, ನಟಿ, ಸಂಗೀತ ಕಲಾವಿದರು, ನಾಟಕದ ವಸ್ತುವಿನ ಆತ್ಮದ ಬೆಳಕನ್ನೇ ರಂಗದ ಮೇಲೆ ಸೂಸಿದಂಥ ಬೆರಗು ಸೃಷ್ಟಿಸಿದ ಬೆಳಕು ವಿನ್ಯಾಸಕಾರ, ತಂತ್ರಜ್ಞರಿಗೆ ನಾನು ಫುಲ್ ಫಿದಾ. ಸಂಭಾಷಣೆಗಳಿಲ್ಲದೇ ಅಭಿನಯ, ಸಂಯೋಜನೆ, ಪ್ರತಿ ಪರಿಕರದ ಜೊತೆಗಿನ ನಟ, ನಟಿಯರ ಅನುಸಂಧಾನದಂಥ ತೀವ್ರ, ತೀಕ್ಷ್ಣ ಮೂವ್‌ಮೆಂಟ್‌ಗಳೊಂದಿಗೆ ತನಗೇ ದರ್ಶನವಾದಂತಿರುವ ಭಾವವನ್ನು ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕನಿಗೆ ದಿಲ್ ಸೇ ಸಲಾಂ. ಇಂಥದೊಂದು ಅದ್ಭುತ ಅನುಭವ ಸವಿಯಲು ಥಿಯೇಟರ್ ಓಲಿಂಪಿಕ್ಸ್ ಮೂಲಕ ಅವಕಾಶ ಮಾಡಿಕೊಟ್ಟ ಸಿ. ಬಸವಲಿಂಗಯ್ಯ.. ಥ್ಯಾಂಕ್ ಯು.
ಚಿತ್ರ ಕೃಪೆ: Thai Lokesh
ಕಾಮೆಂಟ್‌ಗಳು