ವಿಷಯಕ್ಕೆ ಹೋಗಿ

ರೈಲ್ವೆ: ಕನಿಷ್ಠ ವ್ಯವಸ್ಥೆ ಮತ್ತು ಸೇವಾ ಕಮಿಟಮೆಂಟ್

ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ!
ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್  ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ.
ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ.
ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ ಎಸ್ಕೆಲೇಟರ್ ಗಳಿವೆ. ನಿಗದಿತ ಟಿಕೆಟ್ ಪಡೆದು ಇಲ್ಲಿ ನಿಂತರೆ ಸೇರಬೇಕಾದ ಪ್ಲ್ಯಾಟಫಾರ್ಮ ತಲುಪುತ್ತೇವೆ. ಕನಫ್ಯೂಷನ್ ಆಗುವ ಸಾಧ್ಯತೆಯೇ ಇಲ್ಲ. ಇಳಿದ ಮೇಲೆ ಬಂದು ನಿಲ್ಲುವ ಟ್ರೈನ್ ಹತ್ತಿಕೊಂಡರೆ ಸಾಕು ಸೇರಬೇಕಾದ ಸ್ಟೇಷನ್ ತಲುಪುವುದು ಸುಲಭ.   
ಇದು ಶರವೇಗದ ಬುಲೆಟ್ ಟ್ರೈನ್. ಬೆಂಗಳೂರಿಗೆ ಈ ವ್ಯವಸ್ಥೆ ಬರುವ ದಿನಗಳು ದೂರವಿಲ್ಲ. ಇದು ಪ್ರಯಾಣಿಕರನ್ನು ಸೆಂಟ್ರಲ್ ಸ್ಟೇಷನ್ ನಿಂದ ಏರ್ ಪೋರ್ಟ್ ಗೆ ಬರಿಯ 20 ನಿಮಿಷಗಳಲ್ಲಿ ತಲುಪಿಸುತ್ತದೆ. ಅದು ಕಮ್ಮಿಯೆಂದರೂ ನಗರ ಪ್ರದೇಶದಿಂದ 65 ಕಿಮೀ ದೂರದಲ್ಲಿದೆ.
ಇದೇ ಸೆಂಟ್ರಲ್ ರೈಲ್ವೆ ಸ್ಟೇಷನ್. ಸುಂದರ ಒಳನೋಟ. ಯಾವ ಟ್ರೈನ್ ಎಷ್ಟು ಗಂಟೆಗೆ, ಯಾವ ಪ್ಲ್ಯಾಟಫಾರಂ ಎಂಬೆಲ್ಲ ಮಾಹಿತಿಯನ್ನು ಗೊಂದಲವಿಲ್ಲದೇ ಸೈನ್ ಬೋರ್ಡ್ ಗಳು ಧ್ವನಿ ಸಮೇತ ವಿವರಿಸುತ್ತಿರುತ್ತವೆ.
ಇಡೀ ಸೆಂಟ್ರಲ್ ಸ್ಟೇಷನ್ ಸ್ವರೂಪ ಮುಂದೆ ಹೇಗಿರುತ್ತದೆಂಬ ಮಾಹಿತಿಯನ್ನು ಅಲ್ಲಲ್ಲಿ ಅಳವಡಿಸಿರುವ ಟಿವಿ ಮಾನಿಟರ್ ಗಳು ವಿವರಿಸುತ್ತಲೇ ಇರುತ್ತವೆ. ಈ ಯೋಜನೆ ಕೈಗೆತ್ತಿಕೊಳ್ಳಲು ಸಾಕಷ್ಟು ಸಮಯವಿರುವುದರಿಂದ ಈಗಲೇ ಜನರನ್ನು ಅದಕ್ಕೆ ಸಜ್ಜುಗೊಳಿಸುವ ಇಲಾಖೆಯ ವಿಧಾನ, ಮತ್ತು ಕಮಿಟಮೆಂಟ್ ನನ್ನ ಸೆಳೆಯಿತು. ಈ ಶಿಸ್ತು, ಕಮಿಟಮೆಂಟ್ ನಮಗೂ ಸಾಧ್ಯವಿದೆ, ಸಾಧ್ಯವಾಗಿಸಿಕೊಳ್ಳಬೇಕು.
ನಾರ್ವೆ ದೇಶದ ಒಂದು ಜನರಲ್ ಟ್ರೈನ್ ನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದುದರ ನೆನಪಿಗೆ..
ಟಿಕೆಟ್/ಪಾಸ್ ಕೊಂಡು ಪ್ಲ್ಯಾಟಫಾರಂನತ್ತ ಪಯಣ ಬೆಳೆಸುವ ಮುನ್ನ...
ನಗರದ ಒಂದು ಪ್ರಮುಖ ಪ್ರದೇಶವಾಗಿರುವ ನ್ಯಾಷನಲ್ ಥಿಯೇಟರ್ ಎನ್ನುವ ಸ್ಟೇಷನ್. ಇಲ್ಲಿಂದಲೂ ದೇಶದ ಎಲ್ಲ ಭಾಗಗಳಿಗೆ ಟ್ರೈನ್ ಮೂಲಕ ಪ್ರಯಾಣಿಸಬಹುದು. ಇದು ಸಂಪೂರ್ಣ ಅಂಡರ್ ಗ್ರೌಂಡ್ ನಲ್ಲಿದೆ. ಇಲ್ಲಿಂದ ಹೊರಕ್ಕೆ ಬಂದು ಕೊಂಚ ದೂರ ಹೆಜ್ಜೆ ಹಾಕಿದರೆ ಅಕೆರ್ ಬ್ರಿಗೆ ತಲುಪಬಹುದು. ಇದು ಪುಟ್ಟ ಕ್ರುಸರ್, ದೋಣಿ ಮತ್ತು ಹಡಗು ನಿಲ್ಲುವ ಬಂದರು. ಇಲ್ಲಿಂದ ದೇಶದ ವಿವಿಧ ದ್ವೀಪಗಳು ಮತ್ತು ಇತರ ದೇಶಗಳಿಗೆ ಜಲಮಾರ್ಗವಾಗಿ ಪ್ರಯಾಣಿಸಬಹುದು.
ಇದು ಬುಲೆಟ್ ಟ್ರೈನ್ ಟಿಕೆಟ್ ಕೌಂಟರ್. ಏರ್ ಪೋರ್ಟ್ ಗೆ ಈ ಟ್ರೈನ್ ನಲ್ಲಿ ಪ್ರಯಾಣಿಸಲು 200 ನಾಕ್ಸ್ (ಕ್ರೋನರ್) ಅಂದರೆ ನಮ್ಮ ಲೆಕ್ಕದಲ್ಲಿ ಹೆಚ್ಚು ಕಮ್ಮಿ 2000 ರೂಪಾಯಿ!
ಜನರಲ್ ಟ್ರೈನ್ ಗಳಿಗೆ ಇಲ್ಲಿಂದಲೇ ಟಿಕೆಟ್ ಅಥವಾ ಪಾಸ್ ಪಡೆದುಕೊಳ್ಳಬಹುದು. ಇದರ ಪಕ್ಕದಲ್ಲೇ ಇಡೀ ದೇಶ ಮತ್ತು ನಗರಕ್ಕೆ ಸಂಬಂಧಿಸಿದ ವರ್ಣರಂಜಿತ ರೂಟ್ ಮ್ಯಾಪ್ ಲಭ್ಯವಿರುತ್ತವೆ. ಪ್ರವಾಸಿ ತಾಣಗಳ ಆಕರ್ಷಕ ಬುಕಲೆಟ್ ಗಳೂ ಉಚಿತವಾಗಿ ದೊರೆಯುತ್ತವೆ. ನಾರ್ಗಿ ಲ್ಯಾಂಗ್ವೇಜ್ ಗೆ ಎಲ್ಲ ಪ್ರಾಶಸ್ತ್ಯ. ವಿದೇಶಿಯರಿಗೆ ಅಲ್ಲಲ್ಲಿ ಇಂಗ್ಲಿಷ್ ಮಾಹಿತಿ.
ಅಂಧರಿಗೆ ಅನುಕೂಲವಾಗಲಿ ಎಂದು ಬ್ರೈಲ್ ಲಿಪಿ ಮಾದರಿಯ ಒಂದು ಕಾಲ್ನಡಿಗೆ ವ್ಯವಸ್ಥೆ. ಮೇಲೆ ಕಾಲಿಟ್ಟು ಇದರಗುಂಟ ಸಾಗಿದರೆ ಟಿಕೆಟ್ ಕೌಂಟರ್, ಎಸ್ಕೆಲೇಟರ್, ಟಾಯ್ಲೆಟ್, ಪ್ಲ್ಯಾಟಫಾರಂ ಮತ್ತಿತರ ಕಡೆ ಸುಲಭವಾಗಿ ತಲುಪಬಹುದು. ವಿಕಲಾಂಗರಿಗೆ ಯಾವ ತೊಂದರೆಯೇ ಆಗದಂತೆ ನಿಲ್ದಾಣಗಳ ಸಿಬ್ಬಂದಿ ನೋಡಿಕೊಳ್ಳುತ್ತದೆ.
ಸ್ಯಾಂಡವಿಕಾ ಎನ್ನುವ ಒಂದು ಸುಂದರ ಪುಟ್ಟ ಪ್ರದೇಶದ ರೈಲ್ವೆ ಸ್ಟೇಷನ್ ಮುಂಭಾಗ. ಇದಕ್ಕೆ ಹೊಂದಿಕೊಂಡೇ ಸಾರಿಗೆ ಬಸ್ ನಿಲ್ದಾಣ, ಟ್ಯಾಕ್ಸಿ ನಿಲ್ದಾಣವಿದೆ.
ಸ್ಯಾಂಡವಿಕಾ ಸ್ಟೇಷನ್ ನ ಎಂಟ್ರಿ. ಎಲ್ಲ ನೀಟ್, ಕ್ಲೀನ್ ಮತ್ತು ಯಾವುದೇ ಗದ್ದಲ, ಗಲೀಜುಗಳಿಲ್ಲ. ಟಿಕೆಟ್ ಕೊಳ್ಳುವುದು ಟ್ರೈನ್ ಹತ್ತುವುದು ಅಷ್ಟೇ. ಖಾನ್ ಮತ್ತು ಗೆಳೆಯ ಮುರುಳಿ ಶರ್ಮಾ ಸ್ಟೇಷನ್ ನ ಒಂದೊಂದು ವಿಶೇಷತೆಯನ್ನು ಮುಂಚೆಯೇ ವಿವರಿಸಿದ್ದರು. ಅವರೇ ಈ ಪ್ರಯಾಣಕ್ಕೆ ನನ್ನ ಅಣಿಗೊಳಿಸಿದ್ದು.
ರಾಜಧಾನಿಯಿಂದ ದೂರದ ಪ್ರದೇಶವೊಂದರ ಜನರಲ್ ಟ್ರೈನ್ ಮತ್ತಲ್ಲಿನ ಪ್ಲ್ಯಾಟಫಾರಂ.
ಅಟೊಮ್ಯಾಟಿಕ್ ಆಗಿ ತೆರಕೊಳ್ಳುವ/ಮುಚ್ಚಿಕೊಳ್ಳುವ ಬಾಗಿಲು, ಬರಲಿರುವ ಮತ್ತು ತಲುಪಲಿರುವ ಪ್ರತಿ ಸ್ಟೇಷನ್ ಬಗ್ಗೆ ಮಾಹಿತಿ ಕೊಡುವ ಬೋರ್ಡ್ ಮತ್ತು ಧ್ವನಿ ವ್ಯವಸ್ಥೆ ಜನರಲ್ ಟ್ರೈನಿಗೂ ಇರುವುದು ಇಲ್ಲಿ ವಿಶೇಷವೇ ಅಲ್ಲ. ಸಾಮಾನ್ಯ. ಕೂರುವ ಕುರ್ಚಿ ವ್ಯವಸ್ಥೆ ಮತ್ತು ಒಳಾಂಗಣ ವಿನ್ಯಾಸ ನಮ್ಮ ಜನಶತಾಬ್ದಿ ಎಕ್ಸ್ ಪ್ರೆಸ್ ನ ಎಸಿ ಬೋಗಿಗಿಂತ ಹತ್ತು ಪಾಲು ಉತ್ತಮ ಎಂದರೂ ಅಡ್ಡಿ ಇಲ್ಲ.
ಒಂದು ದೇಶ, ರಾಜ್ಯ ಮತ್ತಲ್ಲಿನ ಸರ್ಕಾರ ಅಥವಾ ಆಡಳಿತ ಜನರಿಗೆ ಮೂಲ ಸೌಕರ್ಯಗಳನ್ನು ಹೇಗೆ ಒದಗಿಸಿಕೊಡಬೇಕು, ಅವುಗಳ ನಿರ್ವಹಣೆ ಮತ್ತು ಸೇವಾ ಕಮಿಟಮೆಂಟ್ ಹೇಗಿರಬೇಕೆನ್ನುವುದಕ್ಕೆ ಇದೂ ಒಂದು ಮಾದರಿಯಾಗುವಂಥದು. ನಮ್ಮ ದೇಶದ ಮಟ್ಟಿಗಾದರೂ... ಇದೆಲ್ಲ ವ್ಯವಸ್ಥೆಯನ್ನು ಇಲ್ಲಿನ ಪ್ರತಿ ಜನಸಾಮಾನ್ಯ ವರ್ಷಗಳಿಂದ ಅನುಭವಿಸಿದ್ದಾನೆ. ಸಮಯ, ಕ್ವಾಲಿಟಿ, ಕಂಫರ್ಟ್... ಯಾವ ದೃಷ್ಟಿಯಿಂದಲೂ ಜನಸಾಮಾನ್ಯರಿಗೆ ಕಂಪ್ಲೆಂಟ್ ಗಳೇ ಇಲ್ಲ. ಮೆಟ್ರೊದಂಥ ಹೈಯರ್ ವೆರ್ಸನ್ ಗೆ ಹೋಗುವ ಮುನ್ನ ಸಾಮಾನ್ಯ ಸಾರಿಗೆಯಲ್ಲಿ ಈ ಕನಿಷ್ಠ ವ್ಯವಸ್ಥೆಗಳ ಬಗ್ಗೆ ನಾವೆಂದಾದರೂ ಗಮನಹರಿಸಿದ್ದೇವಾ? 

ಕಾಮೆಂಟ್‌ಗಳು

ಶ್ರೀಹೇಳಿದ್ದಾರೆ…
ಒಮ್ಮೆಯಾದರೂ ನೋಡಲೇಬೇಕೆಂದೆನಿಸುತ್ತಿದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...