ವಿಷಯಕ್ಕೆ ಹೋಗಿ

ಇದು ನಾವು ಬದುಕುತ್ತಿರುವ ವ್ಯವಸ್ಥೆ... ನಮಗೇನು ಬೇಕು?

ನಮ್ಮದನ್ನು ಇನ್ನಾರೋ ಬಳಿಯಬೇಕು. ನಮ್ಮದಕ್ಕೆ ನಾವೇ ಮೂಗುಮುಚ್ಚಿಕೊಂಡರೂ ಅವರು ಮಾತ್ರ ಮೂಗು, ಬಾಯಿ ತೆರಕೊಂಡೇ ಎಲ್ಲ ಸಹಿಸಿಕೊಂಡು ಬಳಿಯಬೇಕು. ಹೇಲು, ಉಚ್ಚೆ ಬಳಿವ ಕೈಗಳಿಗೆ ಹಣ ದಕ್ಕುವುದಾದರೂ ಎಷ್ಟು? ಅದರ ವಾಸನೆ ಹೋಗುವಂತೆ ಕೈಗೆ ಬಳಿಯಬೇಕಾದ ಸಬಕಾರಕ್ಕೂ ಅದು ಸಾಲದು. ಇನ್ನು ಇವರ ನಂಬಿದವರ ಹೊಟ್ಟೆಗೆ?
ಸಾರ್ವಜನಿಕ ಸ್ಥಳಗಳನ್ನು ನಾವು ಬಳಸಿಕೊಳ್ಳುವ ಮತ್ತು ಅದರ ಬಗ್ಗೆ ನಮಗಿರುವ ಕಾಳಜಿಯ ಪರಿ ಇದು. ರೈಲುಗಳಲ್ಲಿ ಹೇಲುವುದಕ್ಕೆ, ಉಚ್ಚೆ ಹೊಯ್ಯುವುದಕ್ಕೆ ಒಂದು ನಮ್ಮದೇ ಮಿತಿ, ರೀತಿ, ರಿವಾಜುಗಳಿರಬೇಕು ಎಂದೆನಿಸುವುದೇ ಇಲ್ಲ. ಅದು ಹೇಳಿ ಕೇಳಿ ಬರುತ್ತದೆಯೇ ಎನ್ನುವ ಮಾತಲ್ಲಿ ಇರುವುದು ನಮ್ಮ ಉಡಾಫೆ ಅಷ್ಟೇ ಅನ್ನೋದು ನಮ್ಮರಿವಿಗೇ ಬರುವುದಿಲ್ಲ. ಅಥವಾ ಇಲಾಖೆಗಳು ಅದರ ನಿರ್ವಹಣೆಯ ಬಗ್ಗೆ ಹೊಸದಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಅದನ್ನು ಒಂದೆರಡು ಬೋಗಿಗೆ ಹೋಗಿ ಶೇಖರಣೆಯಾಗುವಂತೆ ನೋಡಿಕೊಳ್ಳುವ ಪೈಪಿಂಗ್ ವ್ಯವಸ್ಥೆ ಮತ್ತು ಅದನ್ನು ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವೂ ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಏನು?
ಹಸಿದವನಿಗೆ ರಸ್ತೆಯಾದರೇನು ರೈಲ್ವೆ ಟ್ರ್ಯಾಕ್ ಆದರೇನು... ಜನ ಸುತ್ತುವ ಜಾಗವೊಂದಿದ್ದರೆ ಆತ ಭಿಕ್ಷೆ ಬೇಡಿಯಾದರೂ ತನ್ನ ದಿನದ ತೊತ್ತಿನ ಚೀಲ ತುಂಬಿಸಿಕೊಂಡಾನು.. ನಮ್ಮೊಳಗಿನ ಈ ಮಾನವೀಯ ತುಡಿತವನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಬಡವರು ಮತ್ತು ಭಿಕ್ಷಾಟನೆ ಇದನ್ನು ಸಮೀಕರಿಸುವುದು ಬೇಡ. ಭಿಕ್ಷಾಟನೆ ನಮ್ಮಲ್ಲಿ ಒಂದು ದಂಧೆಯಾಗಿದೆ ಎನ್ನುವುದು ವಾಸ್ತವ. ಯಾರದೋ ಅಸಹಾಯಕತೆಯನ್ನು ಇನ್ನಾರೋ ಎನಕ್ಯಾಶ್ ಮಾಡಿಕೊಳ್ಳುವ ಅಸಹ್ಯಕರ ಪ್ರವೃತ್ತಿಯನ್ನು ಮೊದಲು ಡೀಲ್ ಮಾಡಬೇಕೇನೋ... "ನಾನ್ ಕಡವುಳ್" ಎನ್ನುವ ತಮಿಳು ಸಿನಿಮಾ ಕೊಂಚ ಈ ಸಬ್ಜೆಕ್ಟ್ ಅನ್ನು ಡೀಲ್ ಮಾಡಿದ್ದನ್ನು ನಾನು ಚಿತ್ರದಲ್ಲಿ ಗಮನಿಸಿದೆ.
ಇದಕ್ಕಿಂತ ಮುಖ್ಯವಾಗಿ ಈ ಫೊಟೊಗ್ರಾಪ್ ನಲ್ಲಿ ಗಮನಿಸಬೇಕಾದ್ದು, ರೈಲ್ವೆ ಕ್ರಾಸಿಂಗ್ ವ್ಯವಸ್ಥೆಯನ್ನು ನಾವು ಕಾಣುತ್ತಿರುವುದು ಎಷ್ಟು ಅಪಾಯಕಾರಿ ಮತ್ತು ಅಸಹನೀಯವೆನ್ನುವುದು. ರಾತ್ರೋರಾತ್ರಿ ಊರ ತುಂಬ ಫ್ಲೈ ಓವರ್ ಮಾಡಿಟ್ಟುಕೊಂಡ ನಾವು ಅದರ ಕೆಳಗಿನ ಪರಿಸ್ಥಿತಿಯನ್ನು ಅಸಹನೀಯಗೊಳಿಸಿಬಿಟ್ಟೆವು. ಕಾರು, ಮೋಟಾರು ಬೈಕುಗಳಿಗೆ ರಹದಾರಿ ಮಾಡಿಕೊಂಡ ನಾವು, ಸಾಮಾನ್ಯನ ಕೈಕಾಲುಗಳ ಬಗ್ಗೆ ಗಮನವನ್ನೇ ಕೊಡಲಿಲ್ಲ. ಅವರು ದೈತ್ಯ ಟ್ರೈನ್ ಮೇಲೆರಗುವ ಅಪಾಯವಿದ್ದರೂ ಅಂಗೈಯಲ್ಲಿ ಜೀವ ಹಿಡಕೊಂಡು ಹಳಿ ದಾಟಬೇಕು. ಬೈಕ್, ಕಾರ್, ಬಸ್ ಹಾರ್ನ್ ಗಳ ಧಿಮಾಕು ಸಹಿಸಿಕೊಂಡು, ಅದಕ್ಕೆ ಹೆದರಿಕೊಂಡೇ ರಸ್ತೆ, ಫ್ಲೈ ಓವರ್ ಕೆಳಕ್ಕೆ ಸಾಗಬೇಕು. ಈಗೀಗ ನಡೆದುಕೊಂಡು ಹೋಗುವುದೆಂದರೆ ಅತ್ಯಂತ ಅಸಹ್ಯಕರ ಮತ್ತು ಅವಮಾನದ ಸಂಗತಿಯಾಗಿ ನಮಗೆ ಕಾಣಿಸುತ್ತಿದೆ.

ನಮಗೆಲ್ಲ ವ್ಯವಸ್ಥೆ ಇದ್ದರೂ ಅದರ ನಿರ್ವಹಣೆಯಲ್ಲಿ ನಾವು ಸೋಲುತ್ತಿರುವುದಾದರು ಏಕೋ! ನಾವು ನಿತ್ಯ ಬಳಸುವ ಸಾರ್ವಜನಿಕ ವ್ಯವಸ್ಥೆ ನಮ್ಮ ಪಡಸಾಲೆಯಂತೆ ಒಪ್ಪವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಹೊಣೆ ಎಂದೆನಿಸುವುದೇ ಇಲ್ಲ. ಅದನ್ನು ಹಿತ್ತಲ ತಿಪ್ಪೆಗುಂಡಿಯಂತೆ ಕಂಡರೆನೇ ನಮಗೆ ಸಮಧಾನವೇನೋ...
ಯುರೋಪಿನಲ್ಲಿ ಕಂಡಲ್ಲೆಲ್ಲ ಸಾರ್ವಜನಿಕ ಸ್ಥಳಗಳು ಅತ್ಯಂತ ಸ್ವಚ್ಛ ಮತ್ತು ಸೂಕ್ತ ನಿರ್ವಹಣಾ ವಿಧಾನಗಳನ್ನು ಹೊಂದುವ ಮೂಲಕ ಜನರೇ ರೂಪಿಸಿಕೊಂಡಂಥ ಜನೋಪಯೋಗಿ ವ್ಯವಸ್ಥೆಯಾಗಿ ಕಾಣಿಸುತ್ತವೆ. ಅದನ್ನು ಜನರೇ ಅತ್ಯಂತ ಗೌರವಾದರದಿಂದ ಮತ್ತು ಜವಾಬ್ದಾರಿಯುತವಾಗಿ ಕಾಣುತ್ತಾರೆ. ತಮ್ಮೊಂದಿಗೆ ತರುವ ನಾಯಿ ಹೇತರೆ, ಗಲೀಜು ಮಾಡಿದರೆ ಅದನ್ನು ಅವರೇ ಬಳಿದುಕೊಂಡು, ಆ ಜಾಗವನ್ನು ನೀರಿನಿಂದ, ವೇಸ್ಟ್ ಪೇಪರಿನಿಂದ ಸ್ವಚ್ಛಗೊಳಿಸಿ, ಅದನ್ನೆಲ್ಲ ಕಚರಾ ಡಬ್ಬದಲ್ಲಿ ಭದ್ರವಾಗಿ ತುಂಬಿ ಮುಂದಕ್ಕೆ ಸಾಗುತ್ತಾರೆ. ನಾನಿದನ್ನು ಎಷ್ಟೋ ಕಡೆ ಕಣ್ಣಾರೆ ಕಂಡಿದ್ದೇನೆ.
ನಮಗೆ ಬೇಕಿರುವುದು ಇಂಥ ಮನೊಧರ್ಮದ ಪ್ರಗತಿ ಅಥವಾ ಅಭಿವೃದ್ಧಿ ಅಲ್ಲವೇ ಅಲ್ಲ.  ನಮ್ಮ ಸಾರ್ವಜನಿಕ ಸ್ಥಳಗಳು, ನಗರ ಸಾರಿಗೆ, ಲೋಕಲ್ ಟ್ರೈನ್ ವ್ಯವಸ್ಥೆ ಹೇಗಾದರೂ ಇದ್ದುಕೊಳ್ಳಲಿ ನಮಗೇನಿದ್ದರೂ ದಿಢೀರ್ ಆದೊಂದು "ಮೆಟ್ರೋ" ತರಹದ ಚಮತ್ಕಾರಿಕ ಬದಲಾವಣೆ, ಕಾಸ್ಮೆಟಿಕ್ ಚೇಂಜ್ ಬೇಕು ಅಷ್ಟೇ.

ಕಾಮೆಂಟ್‌ಗಳು

Ramakrishna hulikunteಹೇಳಿದ್ದಾರೆ…
e deshada katta kadeya manushanige nittusiru biduva kaala bandaga e deshada vyvastege onedu artha barutte

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...