ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 4, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರ್ದಾ ನಹೀ ಜಬ್ ಕೋಯೀ ಖುದಾ ಸೇ,..

ಅವಳು ನಖಾಬ್ (ಬುರ್ಖಾ) ಧರಿಸುತ್ತಾಳೆ. ನೆಲ ನೋಡುತ್ತ ಸಾಗುತ್ತಾಳೆ. ಸಂಪರ್ಕಕ್ಕೆ ಬಂದ ಎಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಾಳೆ. ಮನೆಗೆ ಸಂತೆ, ಹಾಲು ... ಎಲ್ಲ ಅವಳೇ ತರುತ್ತಾಳೆ. ಮಾರ್ಕೆಟ್‌, ಅಂಗಡಿ ಅಲೆದಾಡಿ. ಸಬ್ಜಿ ಮಂಡಿಯಲ್ಲಿ ಕಾಯಕಕ್ಕೂ ಹೋಗುತ್ತಾಳೆ. ಅವಳ ಶೋಹರ್‌ (ಗಂಡ)  ಗಡ್ಡ ನೆರೆತಿದೆ. ಶುಭ್ರ ಮತ್ತು ಸ್ವಚ್ಛ ಜುಬ್ಬಾ, ಪೈಜಾಮು ಮತ್ತು ತಲೆ ಮೇಲೊಂದು ಗೋಲ್‌ ಟೋಪಿ, ಸದಾ ನಗುಮುಖ ಹೊತ್ತ ಷರೀಫ್‌ ಆದಮಿ. ಅವಳು ಅವನನ್ನು ತುಂಬ ಜತನದಿಂದ ನೋಡಿಕೊಳ್ಳುತ್ತಾಳೆ. ಊಟ, ಬಟ್ಟೆ ಮತ್ತು ಬಹುಶಃ ಮೊಹಬ್ಬತ್‌ ... ಇದಾವುದರಲ್ಲೂ ಕಮ್ಮಿ ಮಾಡಿಲ್ಲ ಎನ್ನುವುದು ಅವನ ಪ್ರಶಾಂತ ಮತ್ತು ಟೆನ್ಶನ್‌ ಮುಕ್ತ ನಗುಮುಖದಿಂದಲೇ ತಿಳಿಯುತ್ತದೆ. ಫಜರ್‌ ನಮಾಜಿಗೆ ಅವನ ಕೈಹಿಡಿದು ಮಸೀದಿ ಬಾಗಿಲವರೆಗೂ ಕರೆತರುತ್ತಾಳೆ. ಅವನು ನಮಾಜು ಮುಗಿಸಿ ಬರುವವರೆಗೆ ಮಸೀದಿ ಗೇಟ್‌ ಬಳಿ, ನಡುಗುವ ಚಳಿಯಲ್ಲಿ ಬುರ್ಖಾದೊಳಗೆ ಅವುಚಿ ಕುಳಿತುಕೊಳ್ಳುತ್ತಾಳೆ. ರಾತ್ರಿ ಈಶಾ ನಮಾಜಿಗೂ ಹಾಗೆಯೇ. ಅವನು ನಮಾಜು ಮುಗಿಸಿ ಬಂದೊಡನೆ ದುವಾ ಮಾಡಿ ಅವಳ ತಲೆ ನೇವರಿಸುತ್ತಾನೆ. ಮತ್ತೆ ಅವಳು ಅವನ ಕೈಹಿಡಿದು ಜೋಪಡಿಯತ್ತ ಸಾಗುತ್ತಾಳೆ. ಅವನು ಹುಟ್ಟು ಕುರುಡ. ಅವಳು ಅವನ ಕಣ್ಣಬೆಳಕು! ಅಲ್ಲಾಹು, ಅವನ ರಸೂಲ್‌ ಮೊಹಮ್ಮದರು, ಆಯೇಷಾ ಮತ್ತು ಈಮಾನ್ ಮನುಷ್ಯ ಬದುಕಿನಲ್ಲಿ ಬಾಳುತ್ತಿರುವುದು ಕಾಣಿಸುತ್ತದೆ.