ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ನಮೋ..’ ರಾಜಕೀಯ ಸಂಸ್ಕೃತಿಯ ಕ್ಯಾರಿಕೇಚರ್

ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ.ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ ಪವಾಡ ಎನ್ನುವಂಥ ಭ್ರಮೆಯನ್ನಾಗಿಸಿ  ಜನರನ್ನು ಹುಚಪ್ಯಾಲಿ ಮಾಡುವ ಕಾಯಕಕ್ಕೆ ಇಳಿದುಬಿಡುತ್ತಾನೆ. ತಾನು ಮದುವೆಯಾಗಿದ್ದ ಹೆಣ್ಣನ್ನು ನೋಡಲು ಅತ್ತೆ ಮನೆಗೆ ಹೋದಾಗ ಈತನ ಪವಾಡ ದೊಡ್ಡ ಹರವನ್ನೇ ಪಡೆದುಕೊಳ್ಳುತ್ತದೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಕಡೆಗೆ ಅವಳನ್ನು ಮರೆತೇ ಹೋಗುವ ಈತ ವೆಂಕಟೇಶನಾಗಿ ಅವತಾರಿ ಪುರುಷನೇ ಆಗಿ ‘ನಮೋ ವೆಂಕಟೇಶ’ನಾಗುತ್ತಾನೆ. ನಾಡ ಅರಸನಿಗೂ ಪವಾಡದ ಮಂಕು  ಬೂದಿ ಎರಚಿ ರಾಜಕುಮಾರಿಯನ್ನೇ  ವರಿಸುತ್ತಾನೆ. ಅಂದರೆ ಅಧಿಕಾರ ಎನ್ನುವ ಮೋಹಿನಿಯನ್ನು ವರಸಿ ರಾಜನೇ ಆಗುತ್ತಾನೆ. ಆ ಕ್ಷಣದಿಂದ ಈತನ ಪವಾಡ ಮೇಲ್ದರ್ಜೆಗೇರುತ್ತಲೇ ಸಾಗುತ್ತದೆ. ಜನರನ್ನು ಹುಚಪ್ಯಾಲಿ ಮಾಡುವುದಕ್ಕೆ ಅಧಿಕೃತ ಲೈಸನ್ಸದಾರನಂತೆ ವಿಜೃಂಭಿಸ ತೊಡಗುತ್ತಾನೆ. ಇದು ರಾಜಸ್ಥಾನೀ ಜಾನಪದೀಯ ಕಥೆ.  ಇದನ್ನು ಸಮಕಾಲೀನ ಸಮಾಜೋ-ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳ ಸಂದರ್ಭಕ್ಕೆ ಹೋಲಿಸಿ ನೋಡಿದರೆ ನಮ್ಮ ನಡುವೆಯೂ ಇಂಥ ಒಬ್ಬ ‘ನಮೋ’ ಸೃಷ್ಟಿಯಾಗಿದ್ದಾನೆ ಮತ್ತು ಇಂಥದೇ ಪವಾಡದ ಪುಡಿ, ಹುಡಿ ಚೆಲ್ಲಿ ಗೆಲುವಿನ ನಗೆ ಬೀರುತ್ತಿದ್ದಾನೆ,.. ಒಟ್ಟು ಈ ಅರ್ಥದ ರಂಗಪ್ರಯೋಗವೊಂದನ್ನು ಸಮುದಾ

ಬದನಾಮ್‌ ಕಾಶ್ಮೀರ ಬದ್ಮಾಶ್‌ ‘ವಜೀರ’

ವಜೀರ್, ಅಂದರೆ ಪ್ರಧಾನಿ. ಶತರಂಜ್‌ (ಚದುರಂಗ) ನ ಆಟದಲ್ಲಿ ಇದೊಂದು ಪ್ರಮುಖ ದಾಳ. ಬಾದಷಾಹನನ್ನು ರಕ್ಷಿಸುವ ಹೊಣೆ ದಳಪತಿಯದು. ರಾಜನ ಆಡಳಿತದ ಆಶಯಗಳನ್ನು ಪ್ರಜೆಗಳಿಗೆ ತಲುಪಿಸುವುದಕ್ಕಿರುವ ಒಂದು ವ್ಯವಸ್ಥೆಯಲ್ಲಿ ವಜೀರನದು ಪ್ರಮುಖ ಪಾತ್ರ. ಯುದ್ಧ ಹೊರಗೆ ನಡೆದಷ್ಟು ಒಳಗೂ ನಡೆಯುತ್ತದೆ. ಸಾಮ್ರಾಜ್ಯ ವಿಸ್ತರಣೆಗೆ ಯಾ ಸಾಮ್ರಾಜ್ಯ ರಕ್ಷಣೆಗೆ ಬಾದಷಾಹ ತಲೆಕೆಡಿಸಿಕೊಳ್ಳುವಷ್ಟು ಸಾಮ್ರಾಜ್ಯಕ್ಕೆ ಅಧಿಪತಿಯಾಗುವ ಕನಸಿನ ಬಗ್ಗೆ ವಜೀರನೂ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾನೆ. ಬಾದಷಾಹನಿಗೆ ಹತ್ತಿರದ ಈ ಪದವಿ ಒಮ್ಮೊಮ್ಮೆ  ನೇರ ಬಾದಷಾಹನಿಗೇ ಮುಳುವಾದ ಕಥೆಗಳು ಸಾಕಷ್ಟಿವೆ. ವಜೀರ ಹುದ್ದೆ ಬಹುತೇಕ ಸೃಷ್ಟಿ ಅಥವಾ ನೇಮಕಾತಿ. ಅತ್ಯಂತ ಅರ್ಹನಾದವನು ಈ ಹಂತಕ್ಕೆ ಏರುವುದು ಕಷ್ಟ. ಬಹುಶಃ ಇದು ಬಾದಷಹ ಆದವನಿಗೂ ಇಷ್ಟವಾಗುವಂಥದ್ದಲ್ಲ. ಬಾದಷಾಹ ತನಗೆ ಅನುಕೂಲವಾಗಬಲ್ಲ ಮತ್ತು ತನ್ನ ಮಾತುಗಳನ್ನು ಶಿರಸಾವಹಿಸಿ ಪಾಲಿಸುವ ವ್ಯಕ್ತಿಯನ್ನೇ ವಜೀರನನ್ನಾಗಿಸುವುದು. ಕೆಲವು ಸಂದರ್ಭಗಳಲ್ಲಿ ವಜೀರನಾದವನು ಬಾದಷಾಹನ ಚಮಚ್ಯಾ ಆಗುವುದೂ ಇದೆ. ಇವೆಲ್ಲ ರಾಜಕೀಯ ಗುರಿ ಮತ್ತು ಅಧಿಕಾರ ಚದುರಂಗದಾಟಕ್ಕೆ ಪೂರಕವಾಗಬಲ್ಲ ಮೊಹರುಗಳಷ್ಟೇ. ಹೀಗಾಗಿ ವಜೀರ್‌ ಎನ್ನುವುದು ನಿಜವಾದರ್ಥದಲ್ಲಿ ಒಂದು ಮೊಹರಾ ಅಷ್ಟೇ. ವಜೀರ ಸಿನಿಮಾ ಇಂಥದೊಂದು ರಾಜಕೀಯ ಚದುರಂಗದಾಟದ ಪ್ಲಾಟ್‌ ಹೊಂದಿದೆ. ಇಲ್ಲಿ ವಜೀರ ಒಂದು Ghost. ಜನಾಂಗದ ಅಂತಃಕಲಹ, ಜನಾಂಗಗಳ ನಡುವಿನ ಸಂಘರ್ಷದಲ್ಲಿಯೂ

ಪರ್ದಾ ನಹೀ ಜಬ್ ಕೋಯೀ ಖುದಾ ಸೇ,..

ಅವಳು ನಖಾಬ್ (ಬುರ್ಖಾ) ಧರಿಸುತ್ತಾಳೆ. ನೆಲ ನೋಡುತ್ತ ಸಾಗುತ್ತಾಳೆ. ಸಂಪರ್ಕಕ್ಕೆ ಬಂದ ಎಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಾಳೆ. ಮನೆಗೆ ಸಂತೆ, ಹಾಲು ... ಎಲ್ಲ ಅವಳೇ ತರುತ್ತಾಳೆ. ಮಾರ್ಕೆಟ್‌, ಅಂಗಡಿ ಅಲೆದಾಡಿ. ಸಬ್ಜಿ ಮಂಡಿಯಲ್ಲಿ ಕಾಯಕಕ್ಕೂ ಹೋಗುತ್ತಾಳೆ. ಅವಳ ಶೋಹರ್‌ (ಗಂಡ)  ಗಡ್ಡ ನೆರೆತಿದೆ. ಶುಭ್ರ ಮತ್ತು ಸ್ವಚ್ಛ ಜುಬ್ಬಾ, ಪೈಜಾಮು ಮತ್ತು ತಲೆ ಮೇಲೊಂದು ಗೋಲ್‌ ಟೋಪಿ, ಸದಾ ನಗುಮುಖ ಹೊತ್ತ ಷರೀಫ್‌ ಆದಮಿ. ಅವಳು ಅವನನ್ನು ತುಂಬ ಜತನದಿಂದ ನೋಡಿಕೊಳ್ಳುತ್ತಾಳೆ. ಊಟ, ಬಟ್ಟೆ ಮತ್ತು ಬಹುಶಃ ಮೊಹಬ್ಬತ್‌ ... ಇದಾವುದರಲ್ಲೂ ಕಮ್ಮಿ ಮಾಡಿಲ್ಲ ಎನ್ನುವುದು ಅವನ ಪ್ರಶಾಂತ ಮತ್ತು ಟೆನ್ಶನ್‌ ಮುಕ್ತ ನಗುಮುಖದಿಂದಲೇ ತಿಳಿಯುತ್ತದೆ. ಫಜರ್‌ ನಮಾಜಿಗೆ ಅವನ ಕೈಹಿಡಿದು ಮಸೀದಿ ಬಾಗಿಲವರೆಗೂ ಕರೆತರುತ್ತಾಳೆ. ಅವನು ನಮಾಜು ಮುಗಿಸಿ ಬರುವವರೆಗೆ ಮಸೀದಿ ಗೇಟ್‌ ಬಳಿ, ನಡುಗುವ ಚಳಿಯಲ್ಲಿ ಬುರ್ಖಾದೊಳಗೆ ಅವುಚಿ ಕುಳಿತುಕೊಳ್ಳುತ್ತಾಳೆ. ರಾತ್ರಿ ಈಶಾ ನಮಾಜಿಗೂ ಹಾಗೆಯೇ. ಅವನು ನಮಾಜು ಮುಗಿಸಿ ಬಂದೊಡನೆ ದುವಾ ಮಾಡಿ ಅವಳ ತಲೆ ನೇವರಿಸುತ್ತಾನೆ. ಮತ್ತೆ ಅವಳು ಅವನ ಕೈಹಿಡಿದು ಜೋಪಡಿಯತ್ತ ಸಾಗುತ್ತಾಳೆ. ಅವನು ಹುಟ್ಟು ಕುರುಡ. ಅವಳು ಅವನ ಕಣ್ಣಬೆಳಕು! ಅಲ್ಲಾಹು, ಅವನ ರಸೂಲ್‌ ಮೊಹಮ್ಮದರು, ಆಯೇಷಾ ಮತ್ತು ಈಮಾನ್ ಮನುಷ್ಯ ಬದುಕಿನಲ್ಲಿ ಬಾಳುತ್ತಿರುವುದು ಕಾಣಿಸುತ್ತದೆ.