20-01-2013 ರಂದು ಭಾನುವಾರ ಬೆಂಗಳೂರಿನ ಸಾಹಿತ್ಯ ಪರಿಷತ್ನ ಮೂರನೇ ಮಹಡಿ ಸಭಾಂಗಣದಲ್ಲಿ ಗೋಪಾಲ ವಾಜಪೇಯಿ ಅವರ "ನಂದಬೂಪತಿ" ನಾಟಕ ಬಿಡುಗಡೆಯಾಯ್ತು. ಅವತ್ತು ಪುಸ್ತಕದ ಪರಿಚಯ ಮಾಡಿಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ವಾಜಪೇಯಿ ಪ್ರೀತಿ, ಅಭಿಮಾನದಿಂದ ನನಗ ಈ ಜವಾಬ್ದಾರಿ ವಹಿಸಿದ್ರು. . * * * ಪುಸ್ತಕಾ ಮಾಡೂ ಮುಂಚೆ ನಂದಬೂಪತಿನ್ನ ಕಳೆದ ಮೂವತ್ತು ವರ್ಷದ ಹಿಂದನ ರಂಗದ ಮ್ಯಾಲೆ ನಿಲ್ಲಿಸಿದ್ರು ಗೋಪಾಲ್ ಸರ್. ಅದರೊಳಗ ಪಾರ್ಟ್ ಮಾಡಿದ ಹಲವರು ಅವತ್ತ ಸೇರಿದ್ರು. ಡಾ. ಜಮಾದಾರ್, ಪ್ರಮೋದ ಶಿಗ್ಗಾಂವ್ ಮತ್ತಿತರ ಅವರ ರಂಗಾಪ್ತರೂ ಸೇರಿದ್ರು. ಅವರ ತಾಯಿನೂ ಕಾರ್ಯಕ್ರಮಕ್ಕ ಬಂದಿದ್ರು. ಪ್ರಕಾಶಕರ ಇತರ ಎರಡು ಕೃತಿಗಳ ಬಿಡುಗಡೆನೂ ಇದರ ಜತೀಗೇ ಇತ್ತು. ಹೊಟ್ಯಾಗಿನ ಮಾತು, ಎದಿಯಾಗಿನ ಪ್ರೀತಿ ಮಾತಿನ್ಯಾಗ ಹರಿದಾಡಿದ್ವು. ಕಣ್ಣುಗಳು ತುಂಬಿ ಬಂದ್ವು. ಕಾರ್ಯಕ್ರಮಾ ಭಾವಪೂರ್ಣಾಗಿತ್ತು. * * * ಪೈಲಾಕ್ಕ ನನ್ನ ಮಾತಿಗೆ ಕರದ್ರು. ಮಾತು ಆರಂಭಿಸುವ ಮುಂಚೆ ವಿನಮ್ರವಾಗಿ ಹೇಳಿದೆ. ನಾನು ಭಾಷಣಕಾರನಲ್ಲ. ಮಾತು ನನ್ನ ಮಾಧ್ಯಮ ಅಲ್ಲಾ. ಬರವಣಿಗೆ, ಸಂವಹನ ನನ್ನ ಮಾಧ್ಯಮ. ಮಾತಿಗೆ ನಾಲಗೀನ ಮುಖ್ಯ ಆಗಿರೋದ್ರಿಂದ ನನಗದು ಕಷ್ಟಾ. ಮತ್ತ ಬೆಂಗಳೂರಿನ ದೋಸಾ, ಇಡ್ಲಿ ತಿಂದ ನನ್ನ ನಾಲಗಿ ದಪ್ಪನೂ ಆಗಿಬಿಟ್ಟೈತಿ. ಹೆಂಗ ಬೇಕೋ ಹಂಗ್ ಹೊಳ್ಳಾಡಂಗಿಲ...