ವಿಷಯಕ್ಕೆ ಹೋಗಿ

ನಂದಬೂಪತಿ (ಲೇಖಕ: ಗೋಪಾಲ್ ವಾಜಪೇಯಿ) ರಂಗಕೃತಿ ಪರಿಚಯ ಮತ್ತು ನನ್ನ ಮಾತು

 20-01-2013 ರಂದು ಭಾನುವಾರ ಬೆಂಗಳೂರಿನ ಸಾಹಿತ್ಯ ಪರಿಷತ್ನ ಮೂರನೇ ಮಹಡಿ  ಸಭಾಂಗಣದಲ್ಲಿ ಗೋಪಾಲ ವಾಜಪೇಯಿ ಅವರ "ನಂದಬೂಪತಿ" ನಾಟಕ ಬಿಡುಗಡೆಯಾಯ್ತು. ಅವತ್ತು ಪುಸ್ತಕದ ಪರಿಚಯ ಮಾಡಿಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ವಾಜಪೇಯಿ ಪ್ರೀತಿ, ಅಭಿಮಾನದಿಂದ ನನಗ ಈ ಜವಾಬ್ದಾರಿ ವಹಿಸಿದ್ರು.  .
* * *
ಪುಸ್ತಕಾ ಮಾಡೂ ಮುಂಚೆ ನಂದಬೂಪತಿನ್ನ ಕಳೆದ ಮೂವತ್ತು ವರ್ಷದ ಹಿಂದನ ರಂಗದ ಮ್ಯಾಲೆ ನಿಲ್ಲಿಸಿದ್ರು ಗೋಪಾಲ್ ಸರ್. ಅದರೊಳಗ ಪಾರ್ಟ್ ಮಾಡಿದ ಹಲವರು ಅವತ್ತ ಸೇರಿದ್ರು. ಡಾ. ಜಮಾದಾರ್, ಪ್ರಮೋದ ಶಿಗ್ಗಾಂವ್ ಮತ್ತಿತರ ಅವರ ರಂಗಾಪ್ತರೂ ಸೇರಿದ್ರು. ಅವರ ತಾಯಿನೂ ಕಾರ್ಯಕ್ರಮಕ್ಕ ಬಂದಿದ್ರು. ಪ್ರಕಾಶಕರ ಇತರ ಎರಡು ಕೃತಿಗಳ ಬಿಡುಗಡೆನೂ ಇದರ ಜತೀಗೇ ಇತ್ತು. ಹೊಟ್ಯಾಗಿನ ಮಾತು, ಎದಿಯಾಗಿನ ಪ್ರೀತಿ ಮಾತಿನ್ಯಾಗ ಹರಿದಾಡಿದ್ವು. ಕಣ್ಣುಗಳು ತುಂಬಿ ಬಂದ್ವು. ಕಾರ್ಯಕ್ರಮಾ ಭಾವಪೂರ್ಣಾಗಿತ್ತು.

* * *
ಪೈಲಾಕ್ಕ ನನ್ನ ಮಾತಿಗೆ ಕರದ್ರು. ಮಾತು ಆರಂಭಿಸುವ ಮುಂಚೆ ವಿನಮ್ರವಾಗಿ ಹೇಳಿದೆ.
ನಾನು ಭಾಷಣಕಾರನಲ್ಲ. ಮಾತು ನನ್ನ ಮಾಧ್ಯಮ ಅಲ್ಲಾ. ಬರವಣಿಗೆ, ಸಂವಹನ ನನ್ನ ಮಾಧ್ಯಮ. ಮಾತಿಗೆ ನಾಲಗೀನ ಮುಖ್ಯ ಆಗಿರೋದ್ರಿಂದ ನನಗದು ಕಷ್ಟಾ. ಮತ್ತ ಬೆಂಗಳೂರಿನ ದೋಸಾ, ಇಡ್ಲಿ ತಿಂದ ನನ್ನ ನಾಲಗಿ ದಪ್ಪನೂ ಆಗಿಬಿಟ್ಟೈತಿ. ಹೆಂಗ ಬೇಕೋ ಹಂಗ್ ಹೊಳ್ಳಾಡಂಗಿಲ್ಲ.ಕಟಕ್ ರೊಟ್ಟಿ, ಖಡಕ್ ಚಹಾ ಇಳೀತು ಅಂದ್ರ ನಮ್ಮದೂ ಖನ್ ಖನ್ ಅಂತ ಹೊಡೀಬಹುದು. ವಾಜಪೇಯಿ ಅವರು ಬಳಸಿದ ಭಾಷಾದ್ಹಾಂಗ. ನನಗ ಪುಸ್ತಕ ಸಿಗಲಿಲ್ಲ. ಸಿಕ್ಕಿದ್ದು ಮೊದಲ ಪ್ರೂಫ್ ಮಾಡಲು ಸಿದ್ಧಪಡಿಸಿದ ಡಿಟಿಪಿ ಸೆಟ್. ಅದರೊಳಗ ಭಾಳ ಸ್ಪೆಲಿಂಗ್ ಮಿಸ್ಟೇಕಗಳಿದ್ವು. ಇರಲಿ. ಕಿಂಗ್ ಲಿಯರ್ ಪ್ಲಾಟ್ ಇದು ಅಂದಮ್ಯಾಲ ನನಗ ಇಡೀ ನಾಟಕ ಅರ್ಥ ಮಾಡಿಕೋಳಾಕ ಕಷ್ಟಾ ಏನೂ ಅನಿಸಲಿಲ್ಲ.
 ಅಪ್ಪಟ ದೇಸಿ ಸೊಗಡಿನ ಭಾಷಾ ಬಳಸುವ ವಾಜಪೇಯಿ ಒಬ್ಬ ಪರಿಪೂರ್ಣ ನಾಟಕಕಾರ. ನಟನಾಗಿ, ಕವಿಯಾಗಿ, ರಂಗಭೂಮಿಯ ಎಲ್ಲಾ ಆಯಾಮಗಳಲ್ಲಿ ಪಳಗಿದ ಪಹಿಲ್ವಾನ್. ಹಿಂಗಾಗಿ ಅವರ ರಂಗಯಾತ್ರೆ ಒಂದು ಪರಿಪೂರ್ಣಾದ್ದ ಕಡೀಗ ಸಾಗೈತಿ. ಶೇಕ್ಸಪಿಯರ್ ನ ಕಿಂಗ್ ಲಿಯರ್ ನಾಟಕದ ಬೆನ್ನುಹತ್ತಿ ಹೊಂಟ ಗೋಪಾಲ್ ಸರ್ ನಂದಬೂಪತಿಯನ್ನು ಹಿಡದಕೊಟ್ಟಾರ.
* * *
1608ರ ಅವಧಿಯೊಳಗ ಬ್ರಿಟನ್ ರಾಜ ಲಿಯರ್ ಕಥೀ ಇಟಗೊಂಡು ಶೇಕ್ಸಪಿಯರ್ "ಕಿಂಗ್ ಲಿಯರ್" ನಾಟಕ ಬರದಾ. ಅದು ಕಾಲ ಕಾಲಕ್ಕ ಪರಿಷ್ಕೃತ ಆಕ್ಕೊಂತನ ಹೊಂಟಿತ್ತು. ಅದರ ಮ್ಯಾಲ ಅನೇಕ ಅನ್ವೇಷಣೆಗಳೂ ನಡದ್ವು. ನನಗ ಈ ಕ್ಷಣಕ್ಕ ತಟ್ಟನ ಹೊಳದಿದ್ದು ಶಿರವಾಡಕರ್ ಅವರ ಮರಾಠಿ ನಾಟಕ "ನಟಸಾಮ್ರಾಟ್". ಅವರು ಲಿಯರ್ ನ ಹುಡುಕಾಟಕ್ಕಿಳದು ಬಂದ ಮುಟ್ಟಿದ್ದು ಗಣಪತರಾವ್ ಬೆಲವಲಕರ್ ಅಂಬೋ ಪ್ರಸಿದ್ಧ ನಟಸಾಮ್ರಾಟ್ ನ ಹಂತ್ಯಾಕ. ಇಲ್ಲಿ ಗೋಪಾಲ್ ಸರ್ ಕೂಡ ಲಿಯರ್ ಅನ್ವೇಷಣೆಗಿಳಿದು ಬಂದ ಮುಟ್ಟಿದ್ದು ನಂದಬೂಪತಿಗೆ. 
ಶೇಕ್ಸಪಿಯರ್ ಒಂದು ಕಾಲ, ದೇಶದ ಸ್ಪಷ್ಟ ಚಿತ್ರಣ ನೀಡತಾನ. ಆದರ  ನಂದಬೂಪತಿ ನಾಟಕಕ್ಕ ಕಾಲ ಮತ್ತು ದೇಶದ ಹಂಗಿಲ್ಲ.
ಲಿಯರ್ ನಾಟಕದ ಪ್ಲಾಟ್ ಅನ್ನು ಬಳಸಿಕೊಂಡ ಗೋಪಾಲ್ ಸರ್ ಅದನ್ನ ನಮ್ಮ ನೆಲಕ್ಕ ಸರಿಹೊಂದುವಂಥಾ ಪಾತ್ರ ಸೃಷ್ಟಿಯ ಮೂಲಕ ನಮ್ಮ ನೆಲದ ಪ್ಲಾಟ್ ಮಾಡಿಬಿಟ್ಟಾರ. ತಂದೆಯೊಬ್ಬ ತನ್ನ ಆಸ್ತಿ, ಅಧಿಕಾರವನ್ನೆಲ್ಲಾ ಮಕ್ಕಳಲ್ಲಿ ಹಂಚಿಕೊಡುವ ನಂತರದಲ್ಲಿ ಕಾಣುವ ದಾರುಣ ಸ್ಥಿತಿ ನಾಟಕದ ಮೂಲ ಎಳೆ. ಇಡೀ ನಾಟಕಾ ದುರಂತಗಳ ಸರಮಾಲೆ.
 ತಂದಿಯೊಬ್ಬ ತನ್ನ ಮೂವರು ಹೆಣ್ಮಕ್ಕಳಿಗೆ (ಲಿಯರ್ (ನಂದಬೂಪತಿ)ಗೆ ಗಂಡು ಸಂತಾನ ಇಲ್ಲ) ತನ್ನ ಆಸ್ತಿ ಮತ್ತ ಅಧಿಕಾರ ಹಂಚಿಕೊಡುವ ಯತ್ನಕ್ಕ ಕೈ ಹಾಕ್ತಾನ. ಅವನ ದುರಂತ ಇಲ್ಲಿಂದನ ಸುರುವಾಕ್ಕೈತಿ. ಅದಕ್ಕ ಅಂವ ಮಕ್ಕಳ ಪ್ರೇಮ ಪರೀಕ್ಷಾಕ್ಕ ಇಳಿತಾನ. ಯಾರು ತನ್ನ ಎಷ್ಟ ಪ್ರೀತಿ ಮಾಡ್ತಾರ ಅನ್ನೋದನ್ನ ಕಂಡಕೊಳ್ಳಾಕ ನೋಡ್ತಾನ. ಇದು ಇನ್ನೊಂದ್ ದುರಂತ. ಇಬ್ಬರು ಪ್ರ್ಯಾಕ್ಟಿಕಲ್ ಮನಸ್ಥಿತಿ ಹೆಣ್ಮಕ್ಕಳು ಅಪ್ಪನ ನಿರೀಕ್ಷಾ ಏನೈತೊ ಅದಕ್ಕ ಪೂರಕವಾಗೇ ತಮ್ಮ ಪ್ರೀತಿ ಮಾತು ಹೇಳಿಬಿಡ್ತಾರ. ಮೂರನೇ ಮಗಳು (ಸತ್ಯವತಿ) ಮಾತ್ರ "ಅಪ್ಪನ ಮ್ಯಾಲೆ ಎಷ್ಟ ಪಿರುತಿ ತೋರಸಬೇಕೊ ಅಷ್ಟ ಪಿರುತಿ ಮಾಡ್ತಿನಿ. ಮದುವಿ ಆಗೂತನಕ. ಮದುವಿ ಆದ ಮ್ಯಾಲ ಏನಿದ್ರೂ ನನ್ನ ಕೈಹಿಡದಾಂವಗ ಪಿರುತಿ. ಆಸ್ತಿ ಸಿಗತೈತಿ ಅಂತ ಬಾಯಿಗೆ ಬಂದಹಾಂಗ ಹೇಳ್ಯಾಕಲ್ಲನಾ" ಅಂತ ಕಡ್ಡಿ ಮುರದ್ಹಂಗ ಮಾತಾಡಿಬಿಡ್ತಾಳ. ಇಕೀ ಮ್ಯಾಗ ಭಾಳ ಜೀವಾ ಇಟಗೊಂಡ ನಂದಬೂಪತಿಗೆ ಆಘಾತ ಆಗಿಬಿಡತೈತಿ. ನಿನಗ ಆಸ್ತಿ ಕೊಡಂಗಿಲ್ಲ ನಾ ಅಂದಬಿಡತಾನ. ಇಬ್ಬರೂ ಹೆಣ್ಮಕ್ಕಳೊಳಗ ಆಸ್ತಿ, ಅಧಿಕಾರ ಹಂಚಿಬಿಡ್ತಾನ. ಮೂರನೇ ಮಗಳು ಹೇಳಿದ ಬದುಕಿನ ಸತ್ಯಾನ ಅರ್ಥ ಮಾಡಿಕೊಳ್ಳದ ನಂದಬೂಪತಿ ಮತ್ತೊಂದ್ ದುರಂತ ಕಾಣ್ತಾನ.
ಇನ್ನ, ಎರಡೂ ಹೆಣ್ಮಕ್ಕಳ ಹಂತ್ಯಾಕ ತಾ ಹಾಕಿದ ಷರತ್ತಿನ್ಹಾಂಗ ಒಂದೊಂದ್ ತಿಂಗಳ, ತನ್ನ ನೂರಾಳು ಸಮೇತ ಇರುವ ಸಾಹಸಾ ಮಾಡ್ತಾನ. ಆಸ್ತಿ, ಅಧಿಕಾರ ಸಿಕ್ಕ ಮ್ಯಾಲ ಅವರಿಬ್ಬರೂ ತನ್ನ ಹೆಣ್ಮಕ್ಕಳಾಗೆಲ್ಲಿ ಉಳಿತಾರ? ಅದರ ಲಾಲಸೆಗೆ ಅವರೂ ಬಿದ್ದ ಬಿಟ್ಟಿರ್ತಾರ. ಅಪ್ಪಗ ಕೊಡೊ ಕನಿಷ್ಠ ಮರ್ಯಾದಿ, ಕಾಳಜಿನೂ ತೋರಸಾಂಗಿಲ್ಲಾ. ಅಲ್ಲಿ ನಂದಬೂಪತಿ ದೊಡ್ಡ ದುರಂತನ ಕಂಡಬಿಡ್ತಾನ. ಆ ಇಬ್ಬರೂ ಹೆಣ್ಮಕ್ಕಳು ತಮ್ಮ ಗಂಡಂದಿರರಿಗೂ ನಿಷ್ಠಾ ಇಟಗೊಳ್ಳದ ನಂದಬೂಪತಿ ಪ್ರದಾನಿ ಪಂಚಪ್ಪನ ಅಕ್ರಮ ಸಂತಾನ (ಅಕ್ರಮ ಸಂತಾನಕ್ಕ ಅವ ಹಂಗ ಹುಟ್ಟಿದಾಂವ ಅನ್ನುವ ಪದ ಬಳಸ್ತಾರು ವಾಜಪೇಯಿ) ಚಲುವನ ಜತೆ ಹಾದರಕ್ಕಿಳಿತಾರ. ಅವನ ಸಲುವಾಗೇ ಇಬ್ಬರೂ ಒಬ್ಬರಿಗೊಬ್ಬರು ಕೊಲೆ ಮಾಡಾಕ ಹೆಣಗ್ಯಾಡಿ ಸತ್ತು ಹೋಗ್ತಾರ. ಇದು ನಾಟಕದೊಳಗಿನ ಮಹಾ ದುರಂತ. ಹಿಂಗ ನಂದಬೂಪತಿ ಅಧಿಕಾರ ಮರಳಿ ಪಡೆಯುವ ಹಪಾಹಪಿ, ಕಳಕೊಂಡದರ ಹಳವಂಡ ಮತ್ತ ಮುಖ್ಯವಾಗಿ ತಂದಿಯಾಗಿ ಕಾಣುವ ದುರಂತದ ಸರಮಾಲೆ.  ಒಟ್ಟಾರ ಹೇಳಬೇಕು ಅತಂದ್ರ ಮನುಷ್ಯ ಬದುಕಿನ ದುರಂತಗಳ ಸರಮಾಲೀನ ಈ ನಾಟಕದೊಳಗ ಅತಿ. ನಂದಬೂಪತೀದು ಒಂದು ನಮೂನಿ ಮನೋದೌರ್ಬಲ್ಯ ಅಂತ ಹೇಳಬೇಕ್ಕಾಕ್ಕೈತಿ. ಇದು ಸೈಕೊಜೆನಿಕ್ ಅಮ್ನೆಶಿಯಾ ತರಹದ ಒಂದು ಮನೋದೌರ್ಬಲ್ಯ ಅಂತ ಕೆಲವು ವಿಮರ್ಶಕರ ಗುರುತಿಸ್ಯಾರು. ಅಧಿಕಾರ ಕಳಕೊಂಡ ಮ್ಯಾಲ ಹುಚಪ್ಯಾಲಿ ಆಗೋ ನಂದಬೂಪತಿ ಚಿತ್ರಣ ನಮ್ಮ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರನ್ನು  ನೆನಪಿಸಿಕೊಂಡಾಗ ಸಾಮ್ಯತಾ ಅನಿಸತೈತಿ. ಅಧಿಕಾರ ಕಳಕೊಂಡವರ ಹಳವಂಡ, ಚಡಪಡಿಕೆ ಎಂಥಾದ್ದು ಅನ್ನೋದು ನಮ್ಮ ರಾಜಕಾರಣಿಗಳನ್ನ ಕಂಡ್ರ ಸುಲಭವಾಗಿ ಅರ್ಥ ಆಗತೈತಿ. ನಾಟಕಕಾರ ಶೆಕ್ಸಪಿಯರ್ ಮನೋವಿಶ್ಲೇಷಣೆಗಿಳಿಯೋದ ಹೆಚ್ಚಾದ್ದರಿಂದ ಹಿಂಗ್ ಅಂವ ಯಾವ ಕಾಲಕ್ಕೂ ಒಗ್ಗಿಬಿಡ್ತಾನ. ಈ ನೆಲಿಯೊಳಗ ವಾಜಪೇಯಿ ಅವರು ನಂದಬೂಪತಿನ ಸಮಕಾಲೀನ ಮನುಷ್ಯ ಸಂಬಂಧಕ್ಕ ಸಂವಾದಿಯಾಗುಹಂಗ ನಾಟಕವಾಗಿ ಪುನರ್ ಸೃಷ್ಟಿ ಮಾಡಿ ಕೊಟ್ಟಾರ. 
* * *

ತಮ್ಮ ಬೆನ್ನುಡಿಯೊಳಗ ಜಿ.ಎನ್. ಮೋಹನ್ ಒಂದು ಮಾತು ಹೇಳ್ಯಾರ. "ಶೆಕ್ಸಿಪಿಯರನ ಕಿಂಗ್ ಲಿಯರ್ ಅನ್ನು ಗೋಪಾಲ್ ಕನ್ನಡಕ್ಕೆ ತಂದ್ರು ಅನ್ನೂದಕಿಂತ, ಗೋಪಾಲ್ ಸರ್ ನಂದಬೂಪತಿಯನ್ನ ಶೆಕ್ಸಿಪಿಯರ್ ಇಂಗ್ಲೀಷಿಗೆ ತಂದಾನೇನೋ ಅನ್ನುವಷ್ಟ ಪರಿಣಾಮಕಾರಿ ರೂಪಾಂತರ ಇದು" ಅನ್ನೋವರ್ಥದಲ್ಲಿ. ಬೆನ್ನುಡಿಯ ಈ ಸಾಲು ನನಗ ಹಿಡಿಸ್ತ್ಯು.
* * *
ಗೋಪಾಲ್ ಸರ್ ನಂದಬೂಪತಿ ನಾಟಕದ ಒಂದೊಂದು ಮಾತೂ ಹಸೀ ಗ್ವಾಡ್ಯಾಗ ಹಳ್ಳಾ ಹೆಟ್ಟಿದ್ಹಂಗ ಅದಾವು. ಜವಾರಿ ರೊಟ್ಟಿ, ಕಟಕ್ ರೊಟ್ಟಿ, ಚಟ್ನಿ, ಬೆಣ್ಣಿ, ಮಸರಾ ಹಾಕ್ಕೊಂಡು ತಿಂದ್ಹಂಗ ರಸಪೂರಾ ಓದಿದ್ಹಂಗೆಲ್ಲಾ... ಬಳಸಿದ ಭಾಷಾ ಸಹಜವಾದ ಸ್ವಾಭಾವಿಕ ಶೈಲಿಯೊಳಗ ಅತಿ. ಶೇಕ್ಸಪಿಯರ್ ಭಾಷಾನೂ ಈಗಿನ ಇಂಗ್ಲೀಷಿನ್ಹಂಗ ಎಲ್ಲಿತ್ತು?  "Hell hath no fury like women scorned" ಅಂತ ಅಂವ ಬರೀತಾನ. ಇದನ್ನ ಇಂಗ್ಲೀಷಿನೊಳಗ ಹೇಳೂದಾದ್ರ "If woman feels something unfair, her anger will be limitless"  ಇದನ್ನ ಕನ್ನಡದೊಳಗ ಅಕ್ಷರಶಃ ಮಾಡಿದ್ರ ಮಜಾ ಬರೂವಂಗಿಲ್ಲ. "ಒಲಿದರೆ ನಾರಿ ಮುನಿದರೆ ಮಾರಿ" ಅನ್ನುವಂಥ ಸಾಲು ಇದಕ್ಕ ಸರಿಹೊಂದಬಹುದೇನೋ. ವಾಜಪೇಯಿ ಮಾತ್ರ ಭಾಳ ಸೂಕ್ಷ್ಮವಾಗಿ ದೇಸಿ ಭಾಷಾನ್ನ ಒಳ್ಳೆ ಹದವಾಗೇ ಬಳಸ್ಯಾರ.
 ಮತ್ ಇನ್ನೊಂದು, ಭಾಷೆ ಸ್ಲ್ಯಾಂಗ್ ಆಗಿ ಬಳಕಿ ಆತು ಅತಂದ್ರ ಅದನ್ನ ಜನಪದ ಶೈಲಿಯ ಭಾಷೆ ಅಂತ ಅಂದಬಿಡ್ತಾರು. ನಾಟಕ ನಿರೂಪಣೆ ಜನಪದ ಶೈಲಿಯೊಳಗ ಐತಿ ಖರೆ. ಆದರ ಭಾಷಾನೂ ಜನಪದ ಶೈಲಿ ಅನ್ನಾಕ ಬರಾಂಗಿಲ್ಲಾ. ಉತ್ತರ ಕರ್ನಾಟಕದೊಳಗ ಮುಕಳಿ ಮುಚಗೊಂಡ ಹೋಗ್ಲೆ ಮಗನ, ಅನ್ನೂದನ್ನ ಬೆಂಗಳೂರಿನೊಳಗ ತಿಕಾ ಮುಚಗೊಂಡು ಹೋಗು ಅಂದಬಿಡ್ತಾರ. ತಿಕಾ, ಮಕಾ, ಮುಕಳಿ ಅಂತ ಭಾಷೆ ಬಳಸಿದ್ರ ಜನಪದ ಅನ್ನಾಕಾಕ್ಕೈತಿ? ಜನಪದನೂ ಅನಬಹುದು. ಆದರ ಸಹಜ, ಸ್ವಾಭಾವಿಕ ಭಾಷಾ ಅಂದ್ರ ಅದಕ್ಕೊಂದು ಮೆರಗ ಬರತೈತಿ. ಭಾಷೆ ಅನ್ನೋದು ನಮ್ಮ ಪರಿಸರ, ಅನ್ನ, ಆಹಾರ, ಗಾಳಿ, ಬೆಳಕು ಮತ್ತು ಮಣ್ಣಿನ ಜತೆಗಿನ ನಮ್ಮ ಸಂಬಂಧ. ದನ, ಕರು, ಹಕ್ಕಿ, ಪಕ್ಷಿಗಳ ಉಲಿದಾಟದ ಜತೆಗೂ ತಳಕ ಹಾಕ್ಕೊಂಡಿರತೈತಿ. ಹರಿಯುವ ನದಿ, ಹಳ್ಳ, ಕೊಳ್ಳದ ನೀರು ಹರಿಯುವ ವೇಗದ ಜತಿಗೂ ಸಂಬಂಧ ಹೊಂದಿರತೈತಿ. ನಮ್ಮ ಕೊಟಿಗ್ಯಾಗಿನ ಎಮ್ಮಿ ಅಂಬಾ ಅಂತ ಕರೀತೈತಿ ನಾವೂ ಅವ್ವಾ ಅಂತ ಕರೀತೀವಿ. ಭಾಷಾದ್ದ ಲಯ, ರಿದಂ, ಇಂಟೋನೇಷನ್ ಎಲ್ಲವೂ ಹೀಂಗ ಪರಿಸರದ ಜತೆ ಒಂದರ್ಥದೊಳಗ ತಳಕ ಹಾಕ್ಕೊಂಡಿರತೈತಿ. ಮತ್ತ ಆ ವ್ಯಾಪ್ತಿಯನ್ನೂ ಮೀರಿ ಭಾಷೆ ಹರೀಲಿಕ್ಕೂ ಸಾಧ್ಯ ಅತಿ. ಬೆಂಗಳೂರು, ಮಂಗಳೂರು ಮಂದಿ ಎಮ್ಮಿ ಮತ್ತಿತರ ನಮ್ಮ ಪರಿಸರ ನೋಡಿರಲಿಕ್ಕಿಲ್ಲ, ಬ್ಯಾರೆ ನೋಡ್ತಾರು. ಅದು ಅವರ ಮ್ಯಾಲ ಪ್ರಭಾವ ಬೀರತೈತಿ. 

ಮತ್ ಇನ್ನೊಂದು ಮೊನ್ನೆ ಅತ್ಯಾಚಾರ ಪ್ರಕರಣಾ ಇಟಗೊಂಡು ಯಾರೋ ಮಹಾನುಭಾವರು ಹೇಳಿದ್ರ ನೋಡ್ರಿ. ಇಂಥವು ಇಂಡಿಯಾದಾಗ ನಡೀತಾವು ಭಾರತದೊಳಗಲ್ಲ ಅಂತ. ಹಿಂದೂಸ್ಥಾನ ಎನ್ನುವ ಭಾವಜಗತ್ತಿನೊಳಗ ಭಾರತ ಮತ್ ಇಂಡಿಯಾ ಅಂತ ಎರಡು ಕಲ್ಪನಾಗಳಿದ್ಹಾಂಗ ಕಾಣ್ತಾವು. ಈ ಕಲ್ಪನಾದ್ದ ಜಗಳಗಳು ಮುಗಿಯೂಹಂಗಿಲ್ಲ. ಏನೇ ಆಗಲಿ. ದೇಶವನ್ನ ಭಾರತ ಅಂತನ ಕರದ್ರೂ ಅಸಲಿಗೆ ನಾವು ಭಾರತ, ಬಾರತ ಅಂತ ಎರಡ ದೇಶದೊಳಗ ಬದಕಾಕ್ಹತ್ತೀವಿ. ಅಲ್ಪಪ್ರಾಣ, ಮಾಹಾಪ್ರಾಣ, ಕಾಮಾ, ಫುಲ್ ಸ್ಟಾಪ್ ಎನ್ನುವ ಒಂದು ಭಾರತವಾದರೆ ಇನ್ನೊಂದು ಅಲ್ಪಪ್ರಾಣ, ಮಹಾಪ್ರಾಣಗಳ ಹಂಗೇ ಇಲ್ಲದೆ ಸಹಜವಾದ ಬಾರತ. ವಾಜಪೇಯಿ ಮಾಸ್ತರು ಎರಡನೇ ಬಾರತ ಅಂದ್ರ ಅಸಲಿ ಬಾರತಾ ನ ದೃಷ್ಟಿಯಲ್ಲಿಟ್ಟುಕೊಂಡ ಭಾಷಾಪ್ರಯೋಗ ಮಾಡ್ಯಾರ. ಅದರ ರಿದಂ, ಲಯ, ಸಹಜತಾ ಕೃತಿಯೊಳಗ ನವುಲ್ (ನವಿಲು) ಕುಣದ್ಹಾಂಗ  ಆಗೈತಿ.
* * *
ಗೋಪಾಲ್ ಸರ್ ನಾಟಕದ ಮಾತು ಮತ್ತ ಹಾಡುಗಳಿಗೆ ಬಳಸಿದ ಭಾಷಾ ಎಷ್ಟ ಸ್ವೀಟ್ ಆಗೈತಿ ಅಂದ್ರ ಅವರು ಬೇಂದ್ರೆ ಮಾಸ್ತರ್ ಕಿಂತ ಒಂದ ಕೈ ಮುಂದ ಅದಾರ ಅನಿಸ್ತೈತಿ ಅನ್ನೋದು ನಮ್ಮ ಅಭಿಮಾನ... ಹಿಂಗ ಪುಸ್ತಕ ಪರಿಚಯದಾಚೆಗೂ ಒಂದಷ್ಟು ಮಾತನಾಡಿದೆ. ಸಾಹಿತ್ಯದ ವಿದ್ಯಾರ್ಥಿ ಅಲ್ಲದಿದ್ರೂ ಸಂವಹನ ವಿದ್ಯಾರ್ಥಿಯಂತೂ ಹೌದು. ಥಿಯೇಟರ್ ಒಂದು ಪರಿಣಾಮಕಾರಿ ಸಂವಹನ ಮಾಧ್ಯಮ. ಸಮೂಹ ಮಾಧ್ಯಮದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ನನ್ನಂಥವನಿಗೆ ಇಂಥದ್ದೂ ಒಂದು ಪಾಲ್ಗೊಳ್ಳುವಿಕೆ ಖುಷಿ ಕೊಡುವಂಥಾದ್ದ. ಗೋಪಾಲ್ ಸರ್ ನಂದಬೂಪತಿ ಓದು ನನಗಂತೂ ಬಲು ಮಜಾ ಕೊಟ್ಟೈತಿ. ನೀವೂ ಓದ್ರಿ. ಆಮ್ಯಾಲ ನನ್ನ ಜತೆಗೂ ಓದಿನ ಅನುಭವಾ ಹಂಚಿಕೊಂಡ್ರ ಇನ್ನೂ ಖುಷಿ ಆಕ್ಕೈತಿ.

ಆಡಬೇಕಂದಿದ್ದು ಅಥವಾ ಉಳದಹೋದ ಮಾತು: ನಂದಬೂಪತಿ ನಾಟಕದೊಳಗಿನ ಹುಚಮಲ್ಲ, ಕೆಂಚಪ್ಪನ ಮಾತುಗಳು ಅನುಭಾವ ಜಗತ್ತಿನ ಸೂಫಿಗಳು, ಸಂತರ ಮಾತಿನ್ಹಂಗ ಮಿಸ್ಟಿಕ್ ಪೊಯಟ್ರಿಯಂಥ ಗುಣದ್ವು. ಶರೀಫ್, ಸೂಫಿ ಸಂತರ ತತ್ವಪದಗಳನ್ನ ಗೋಪಾಲ್ ಸರ್ ಸಾಕಷ್ಟ ಕೇಳಿರಲಿಕ್ಕೂ ಸಾಕು. ಅಂಥ ಮಿಸ್ಟಿಕ್ ಪೊಯಟ್ರಿ ಗುಣಾ ಅವರು ಬರೆದ ಒಂದೊಂದ ಹಾಡಿನೊಳಗೂ ಕಾಣಬಹುದು. ಈ ಹಾಡುಗಳನ್ನು ಹಿಂದಿ ಮತ್ ಇಂಗ್ಲೀಷಿಗೆ ಮಾಡಿದ್ರ ಅವು ಎಲ್ಲಿಗೋ ಹೋಗಿ ಮುಟ್ಯಾವು.  ಉತ್ತರ ಕರ್ನಾಟಕದ ಭಾಷಾ ಮಾತಾಡುವಷ್ಟ ಓದಾಕ ಸುಲಭ ಅಲ್ಲಾ. ನಟ ಈ ಭಾಷಾ ಬದುಕಲಿಲ್ಲಾ ಅಂದ್ರ ಮಾತಾಡೂದು ಕಷ್ಟ ಆಕ್ಕೈತಿ. ಭಾಷಾ ಬದುಕಿದ್ರ ಮಾತ್ರ ಅದರ ಮ್ಯಾಲ ಹಿಡತಾ ಸಾಧ್ಯ ಆಕ್ಕತಿ. ನಮ್ಮವ್ವನ್ಹಂಗ ಭಾಷಾನೂ ಕೂಡಾ. ನಮ್ಮವ್ವನ ಜತೆ ಸಲಗಿ ಇದ್ದಟ ಬ್ಯಾರೆಯವ್ರ ಅವ್ವನ ಜತೆ ಸಾಧ್ಯಾ ಆಕ್ಕೈತೆನು?

* * *
ಅವತ್ತಿನ ಸಮಾರಂಭದ ಆಹ್ವಾನ ಪತ್ರಿಕಾ ಇದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...