ವಿಷಯಕ್ಕೆ ಹೋಗಿ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?...
- ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.

   * * *

ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿಚಾರ ಸಂಕಿರಣವನ್ನೂ ಆಲಿಸಿದೆ. ಈ ಕಾಲದ ಬಹುಮುಖ್ಯ ತಲ್ಲಣಗಳಲ್ಲಿ ಹಿಜಡಾ ಬದುಕೂ ಒಂದು. ಸಮಾಜ ಇದನ್ನು ಸ್ವೀಕರಿಸುವ, ಪರಿಭಾವಿಸುವ ವಿಚಾರದಲ್ಲಿ ಮಾನವೀಯ ನೆಲೆಯಲ್ಲಿ ದಿಟ್ಟ ನಿಲುವನ್ನು ತಾಳಬೇಕಾದ ತುರ್ತು ಇದೆ ಎನ್ನುವುದು ವಿಚಾರಸಂಕಿರಣದ ಒಟ್ಟು ಆಶಯವಾಗಿತ್ತು. ಇದಕ್ಕೆ ನನ್ನ ಸಹಮತವೂ ಇದೆ.
* * *
"ಬದುಕು-ಬಯಲು" : ಹಿಜಡಾ (ಎ. ರೇವತಿ) ಒಬ್ಬರ ಆತ್ಮಕಥನದ ಪ್ರೇರಣೆಯಿಂದ ರಂಗರೂಪ ಪಡೆದ ನಾಟಕ.
ನಾಟಕದ ಪ್ಲಾಟ್:   ನಿಸರ್ಗ ಸಹಜ ಹುಟ್ಟಿನಿಂದ ಗಂಡೂ ಅಲ್ಲದ, ಹೆಣ್ಣು ಅಲ್ಲದ ಸ್ವರೂಪ ಪಡೆದುಕೊಂಡ ದೊರೆಸ್ವಾಮಿ ಹೆತ್ತವರಿಂದ, ಬಂಧು-ಬಳಗದಿಂದ, ಸಹಜೀವಿಗಳಿಂದ ಪಟ್ಟ ಹಿಂಸೆ, ಅವಮಾನ ಹೃದಯ ಹಿಂಡುವಂಥದು. ದೊರೆಸ್ವಾಮಿ ಎನ್ನುವ ಗಂಡಸು ರೇವತಿಯಾಗಿ ಲಿಂಗ ಪರಿವರ್ತನೆಗೊಳ್ಳುವ ಮತ್ತು ಆನಂತರದಲ್ಲಿ ಎದುರಿಸಿದ ನೋವು, ಅವಮಾನ ಮೆಟ್ಟಿ ಹಿಜಡಾ ಕೂಡ ಸಾಮಾನ್ಯ ಲಿಂಗಿಯೊಬ್ಬ ಮಾಡುವಂಥ ಸಾಧನೆ ಮಾಡಬಲ್ಲ ಎಂದು ನಿರೂಪಿಸುವ ಕಥನ. ಒಟ್ಟು ಮನುಷ್ಯ ಬದುಕಿನ ಈ ಕಥನ ರೋಚಕವೂ ಹೌದು. ಮನಮಿಡಿಯುವ, ಹೃದಯವಿದ್ರಾವಕ ಮನುಷ್ಯ ಚರಿತ್ರೆಯೂ ಹೌದು.


ಜೀವದ್ರವ್ಯ: ದೊರೆಸ್ವಾಮಿ ಎಂಬ ತಮಿಳು ಹುಡುಗ ಗಂಡಸಿನ ಅಂಗಾಂಗವನ್ನೇ ಹೊತ್ತು ಹುಟ್ಟಿದವ. ಅಂಗಾಂಗ ಗಂಡಸಿನದಾದರೂ ಆತನ ಮೈಮಾಟ, ಹಾವಭಾವವೆಲ್ಲ ಹೆಂಗಸಿನ ಹಾಗೆ ಆದದ್ದು ಆತನ ತಪ್ಪಿನಿಂದಲ್ಲ. ಅದನ್ನು ಸೃಷ್ಟಿಯ ಲೀಲೆ, ವಿಧಿಯಾಟ ಅಥವಾ ಪಾಲಕರ ಸೆಕ್ಸ್ ಗುದಮುರಗಿ ಯಡವಟ್ಟಿನಿಂದಾದ ದೋಷ... ಎಂದೆಲ್ಲ ಏನೇನೋ ಆರೋಪಿಸಬಹುದು, ವಿಶ್ಲೇಷಿಸಬಹುದು. ಆದರೆ, ವೈಜ್ಞಾನಿಕ ಮನೋಧರ್ಮದ ಹಿನ್ನೆಲೆಯಲ್ಲಿ ಯೋಚಿಸುವುದಾದರೆ, ಅಂಥದೊಂದು ಹುಟ್ಟು ನಿಸರ್ಗ ಸಜಹ. ಇದು ದೊರೆಸ್ವಾಮಿ ಬದುಕಿನಲ್ಲಿ ನಡೆದ ಸತ್ಯ. ಈ ಸತ್ಯದ ಜತೆಯಲ್ಲಿ ಆತ ಎದುರಿಸುವ ಸಂಘರ್ಷವಿದೆಯಲ್ಲ ಅದು ಘೋರವಾದದ್ದು. ಇದೇ  ನಾಟಕದ ಜೀವದ್ರವ್ಯ.
* * *
 ಲೇಖಕ ಜೆರಿ ಬಗ್ಗೆ ಪ್ರಸ್ತಾಪ ಯಾಕಾಗಿ?
ಜೆರಿ ಶತಮಾನದಷ್ಟು ಹಿಂದಿನ (1897-1907) ಕಾಲದ ಬರಹಗಾರ, ನಾಟಕಕಾರ. ಆದರೆ ಈತ ವೈಯಕ್ತಿಕವಾಗಿ ಹೇಗಿದ್ದ?  ಸಂಕ್ಷಿಪ್ತವಾಗಿ ಹೇಳುವುದಾದರೆ, ಇವನನ್ನು  Renter (ಸಲಿಂಗಿಸೂಳೆ)  ಎಂದೇ ಆಗ ಗುರುತಿಸುತ್ತಿದ್ದರಂತೆ.  ( Renter : London slang for a homosexual prostitute). ಜೆರಿ ನೋಡಲು ಅತ್ಯಂತ ಸ್ಫುರದ್ರೂಪಿ ಪುರುಷನಂತೆಯೇ ಕಾಣಿಸುತ್ತಿದ್ದನಂತೆ. 1891ರಲ್ಲಿ ಈತನ ಕುಟುಂಬ ಮೂಲ ಸ್ಥಳವನ್ನು ತೊರೆದು ಪ್ಯಾರಿಸ್ ಸೇರಿದ ನಂತರದಲ್ಲಿ ಜೆರಿ ತನ್ನ ಸಹವರ್ತಿ ಲಿಯನ್ ಪಾಲ್ ಗ್ರಾನೇ ಎನ್ನುವವನ ಜತೆ ಗಾಢವಾದ ಸಲಿಂಗ ಕಾಮ ಸಂಬಂಧ ಹೊಂದಿದನಂತೆ. ಈತ ನೋಡಲು ಪಕ್ಕಾ ಲಂಡನ್ ರೆಂಟರ್ ನಂತೆ ಎಂದು  ಸಮಕಾಲೀನರು ಮೂದಲಿಸುತ್ತಿದ್ದರಂತೆ.


 ಸ್ಯಾಂಡರ್ ಪೀರ್ಸನ್ ಎನ್ನುವ ಕಲಾ ವಿಮರ್ಶಕನ ಪ್ರಕಾರ "ಈತ ಹೆಣ್ಣು ವೇಷ ಧರಿಸಲು ಬಯಸುವ ಗಂಡಸು (transvestite), ಹಾಗೂ ಗಂಡೂ ಅನಿಸುವ ಹೆಣ್ಣೂ ಅನಿಸುವ (androgynous)* ಒಬ್ಬ ವಿಚಿತ್ರ ಜೀವಿಯಂತೆ."
ಜೆರಿ, ಬದುಕಿದ್ದೇ ಅತ್ಯಂತ ಕಡಿಮೆ ಅವಧಿ. ಜೆರಿ ತನ್ನ ಜೀವಿತಾವಧಿಯಲ್ಲೇ, ಪಾಟಾಫಿಜಿಕ್ಸ್ (ಎಲ್ಲವನ್ನೂ ನಂಬುವ ವಿಶಾಲ ತತ್ವ- ಇದರ ಒಂದು ಬಹುಮುಖ್ಯವಾದ ಅಂಶ) ಎನ್ನುವ ಫಿಲಾಸಫಿ ಹಬ್ಬುವುದಕ್ಕೆ ಕಾರಣನಾದ. ಜೆರಿ, ಹೆಸರಾಂತ ತತ್ವಜ್ಞಾನಿಯೂ ಹೌದು. ಮನುಷ್ಯನ ಬೌದ್ಧಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಗೆ ಲಿಂಗವೆನ್ನುವುದು ಅಡ್ಡಿ ಏನಲ್ಲ ಎನ್ನುವುದಕ್ಕೆ ಈ ಜೆರಿ ಕೂಡ ಒಂದು ಉದಾಹರಣೆ.

ಇದು "ಬದುಕು-ಬಯಲು" ನಾಟಕದ ಪ್ರೊಟಗಾನಿಸ್ಟ್ ದೊರೆಸ್ವಾಮಿ ಅಲಿಯಾಸ್ ರೇವತಿ ಕಥೆಗೆ ಯಥಾವತ್ ಸಾಮ್ಯತೆಯಂತೂ ಖಂಡಿತ ಅಲ್ಲ. ಲೈಂಗಿಕ ನಡಾವಳಿಗೆ ಸಂಬಂಧಿಸಿದಂತೆ ಹಾಗೂ ತನ್ನ ಹಿಜಡಾ ವ್ಯಕ್ತಿತ್ವದ ಅನನ್ಯತೆ ಜತೆಗೆ ಹಲವು ಕೊರತೆಗಳ ನಡುವೆಯೂ ಸಾಧನೆ ಮಾಡಬಹುದೆನ್ನುವುದನ್ನು ನಿರೂಪಿಸುವ ರೇವತಿ ಕಥೆಗೆ ಇದು ರಿಲೆವೆಂಟ್ ಅನಿಸಿತು. ಪ್ರಸ್ತಾಪಿಸಿದೆ.
* * *
ನಾಟಕ ಪ್ರಯೋಗಕ್ಕೆ ಬರೋಣ:
 ಉಳ್ಳವರ ಮನೆತನಕ್ಕೆ ಸೇರಿದ ದೊರೆಸ್ವಾಮಿ ಗಂಡು ಮಗುವಾಗೇ ಅಮ್ಮನ ಮಡಿಲು ತುಂಬಿದವ. ತಮಿಳು ಭಾಷಿಕ ಕುಟುಂಬದ ಐದು ಮಕ್ಕಳ ಪೈಕಿ ಇಬ್ಬರು ಹೆಣ್ಣುಮಕ್ಕಳು, ಮೂವರು ಗಂಡು ಮಕ್ಕಳಲ್ಲಿ ಕಡೆಯ ಮಗ ಈ ದೊರೆಸ್ವಾಮಿ. ಆದರೆ, ದೊರೆಸ್ವಾಮಿ ಬೆಳೆಯುತ್ತ ಹೋದಂತೆ ಹೆಣ್ಣು ಮಕ್ಕಳ ಜತೆಯಲ್ಲೇ ಆಡಲು ಇಷ್ಟಪಡುತ್ತಾನೆ. ಅಕ್ಕನ ಲಂಗ ತೊಟ್ಟು ಖುಷಿಪಡುತ್ತಾನೆ. ಅದೇ ಅವನಿಗೆ ಇಷ್ಟದ ದಿರಿಸಾಗತೊಡುತ್ತದೆ. ಹೆಣ್ಮಕ್ಕಳಂತೆಯೇ ಹಾವ ಭಾವ ಹೊಂದಿದ ಅವನಲ್ಲಿ ತಾನೊಂದು ಹೆಣ್ಣು ಎನ್ನುವ ಭಾವನೆ ದಟ್ಟವಾಗಿ ಬೆಳೆದುಬಿಡುತ್ತದೆ. ಅದು ಮನದಟ್ಟಾಗುತ್ತಿದಂತೆಯೇ ತನಗೊಂದು ಹೆಣ್ಣಿನ ಅಸ್ತಿತ್ವವೇ ಸೂಕ್ತ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಅಪ್ಪ-ಅಮ್ಮ ಮತ್ತು ಸಹೋದರರ ತಾತ್ಸಾರ ಅವನನ್ನು ಘಾಸಿಗೊಳಿಸಿಬಿಟ್ಟಿರುತ್ತದೆ. ಆತ ಇದರಿಂದ ಬೇಸತ್ತು ಹೋಗಿರುತ್ತಾನೆ. ದೊರೆಸ್ವಾಮಿ ಅನುಭವಿಸುತ್ತಿರುವ ತುಮುಲಗಳು, ಹೆಣ್ಣು ಎನ್ನಿಸುವ ಸಹಜ ಭಾವನೆಗಳನ್ನು ಆತನ ಪಾಲಕರು ಅರ್ಥ ಮಾಡಿಕೊಳ್ಳುವುದರಲ್ಲಿ ಸೋತಿರುತ್ತಾರೆ. ಯಾಕೆ ಇವ ಹೀಗೆ? ಎನ್ನುವದರ ಸ್ಪಷ್ಟ ಅರಿವು ಅವರಿಗಿರುವುದಿಲ್ಲ.
 -ಇದು ನಾಟಕದ ಆರಂಭದಲ್ಲಿ ವಸ್ತುವಿನ ಕೇಂದ್ರ ಬಿಂದುವೊಂದರ ಸರಳ ಕಥನ. ಬಿಡಿ ಬಿಡಿಯಾಗಿ ಸಿನಿಮಾದ ಮಾಂಟೇಜ್ ಶಾಟ್ ನಂತೆ ಮೂಡಿ, ಫೇಡ್ ಆಗುವ ಈ ದೃಶ್ಯಕಥನ ಒಂದು ಮಿತಿಯೊಳಗೆ ಸಹನೀಯ.
 ಪೂರಕ ದೃಶ್ಯಗಳಲ್ಲಿ, ದೊರೆಸ್ವಾಮಿ ಶಾಲೆಗೆ ಹೋದರೆ ಸಹಪಾಠಿಗಳು 'ಹೇ ನಂಬರ್ 9', 'ಹೆಣ್ಣಿನಂಥ ಹುಡುಗ' ಎಂದು ಮೂದಲಿಸುವುದು ದೊರೆಸ್ವಾಮಿಯಲ್ಲಿ ಬೇಸರ ಮೂಡಿಸುತ್ತದೆ. ಕಿರಿ ಕಿರಿ ಹುಟ್ಟಿಸುತ್ತದೆ. ಹಿಂಸೆ, ಅವಮಾನ ತಾಳದೇ 10ನೇ ತರಗತಿ ಓದಿನ ನಂತರ ಮನೆಬಿಟ್ಟು ಓಡುತ್ತಾನೆ. ದಿಂಡಿಗಲ್,  ದೆಹಲಿ... ಹಲವೆಡೆ ಪ್ರಯಾಣ ಬೆಳೆಸುತ್ತಾನೆ.
 ಮನೆ ಬಿಟ್ಟು ಹೊರಡುವ ಚಿತ್ರಣವೊಂದರಲ್ಲಿ ಪ್ರಯಾಣಕ್ಕೆ ಸಾಂಕೇತಿಕವಾಗಿ ದೊರೆಸ್ವಾಮಿ ಪಾತ್ರ ಸ್ಟಿಲ್ ಆಗುವ, ಹಿಂದಿನಿಂದ ರೈಲಿನ ಓಟದ ಸದ್ದು ಕೇಳಿಸುವ ಒಂದು ಪುಟ್ಟ ರಂಗತಂತ್ರ ಬಳಸಿದ್ದು ಸೂಕ್ತವಾಗಿತ್ತು. ಪರಿಣಾಮಕಾರಿಯಾಗಿತ್ತು ಕೂಡ. ದೊರೆಸ್ವಾಮಿಯಿಂದ ರೇವತಿಯಾಗುವ ಹಾಗೇ ಮುಂದುವರಿದು ಒಟ್ಟು ವ್ಯಕ್ತಿತ್ವದ ಅನನ್ಯತೆಗೆ ಸಂಘರ್ಷ ನಡೆಸುವುದು... ನಾಟಕದಲ್ಲೇ ನಡೆಯುವ ನಿರಂತರ ಪಯಣವೊಂದಿದೆ. ಈ ಪಯಣದ ನಡಿಗೆ ಒಮ್ಮೊಮ್ಮೆ ಎಡವುತ್ತ, ಕುಂಟುತ್ತ ಮತ್ತು ಇದ್ದಕ್ಕಿದ್ದಂತೆ ವೇಗ ಪಡೆಯುತ್ತ ಅಂತೂ ಗಮನ ಹಿಡಿದಿಡುವಂಥದು.
 ಊರುಬಿಟ್ಟ ದೊರೆಸ್ವಾಮಿಗೆ ಅಸಲಿ ಹಿಜಡಾ ಲೋಕದ ಪರಿಚಯವಾಗುತ್ತದೆ. ತಾನೂ ಲಿಂಗ ಪರಿವರ್ತನೆಗೊಳಗಾಗುತ್ತಾನೆ. 'ನೀನು ಥೇಟು ಚಿತ್ರನಟಿ ರೇವತಿ ತರಹ ಕಾಣಿಸ್ತಿಯಾ' ಎಂದು ಸಹ ಹಿಜಡಾನೊಬ್ಬ ಅಂದಿದ್ದೇ ತಡ ದೊರೆಸ್ವಾಮಿಗೆ ಆ ಹೆಸರು ಮತ್ತು ಅಂಥದೇ ಹೆಣ್ಣು ತಾನೆಂಬ ಅಭಿಮಾನ ಮೂಡುತ್ತದೆ. ದೊರೆಸ್ವಾಮಿ ಈಗ ರೇವತಿಯಾಗುತ್ತಾಳೆ. ಈ ಪರಿಯ ಹೆಣ್ಣಾಗಿ ಬದುಕಿಗೆ ಬಿದ್ದಾಗಲೇ ಅದರ ಭೀಕರತೆಯ ಪರಿಚಯವೂ ಆಗುತ್ತದೆ. ಹೊಟ್ಟೆಪಾಡಿಗಾಗಿ ಪರದಾಡುವ ಸಂದರ್ಭದಲ್ಲಿ ಕಾಮುಕರಿಗೆ ಆಹಾರವೂ ಆಗಬೇಕಾಗಿ ಬರುತ್ತದೆ. ವೇಶ್ಯಾವೃತ್ತಿಗೂ ಇಳಿಯಬೇಕಾಗುತ್ತದೆ. ಈ ನಡುವೆ ಹಿಜಡಾಗಳ ಬಗ್ಗೆ ರಾಮಾಯಣದ ರಾಮನ ಕಾಲದಲ್ಲೂ ಪ್ರಸ್ತಾಪ ಇರುವುದನ್ನು ನೆನಪಿಸುವ ಯತ್ನ ರಂಗದ ಮೇಲೆ ನಡೆಯುತ್ತದೆ.
 ಈ ಹಂತದವರೆಗಿನ ದೃಶ್ಯಕಥನ ಬಿಡಿ ಬಿಡಿಯಾಗಿ ಕೊಲಾಜ್ ರೀತಿಯಲ್ಲಿ ಒಂದು ಇನ್ನೊಂದರಲ್ಲಿ ಸೂಪರ್ ಇಂಪೋಜ್ ಆಗುತ್ತ  ರೇವತಿ ಬದುಕಿನ ಬಹುಮುಖ್ಯ ಮಜಲನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ. ಬೆಳಕು ವಿನ್ಯಾಸಕಾರನ ಟೈಮಿಂಗ್ ಸೆನ್ಸ್, ನಟರ ಚಾಕಚಕ್ಯತೆ, ದೃಶ್ಯ ಸಂಯೋಜನೆಯ ರಂಗಮಿತಿಗಳನ್ನು ರೀಡಿಸೈನ್ ಮಾಡಿಕೊಂಡರೆ ನಾಟಕದ ಈ ಭಾಗವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು.
*
 ವೇಶ್ಯಾವೃತ್ತಿಯ ಸಂದರ್ಭದಲ್ಲಿ ಪೊಲೀಸರಿಂದ ಥಳಿತ, ಲೈಂಗಿಕ ದೌರ್ಜನ್ಯ, ಹಫ್ತಾ ವಸೂಲಿ ಮತ್ತು ಬೀದಿ ಕಾಮುಕರ ಕೆಕ್ಕರು ವರ್ತನೆ... ಈ ಎಲ್ಲವನ್ನು ಎಲ್ಲಿಯತನಕ ಸಹಿಸಿಕೊಳ್ಳುವುದು? ಎನ್ನುವ ಪ್ರಶ್ನೆ ರೇವತಿಗೆ ಕಾಡತೊಡಗುತ್ತದೆ. ತನ್ನೊಳಗಿನ ತನ್ನನ್ನು ಹೊರಹೊಮ್ಮಿಸುವ, ತನ್ನದೇ ಅಸ್ತಿತ್ವಕ್ಕೆ, ಅನನ್ಯತೆಗೆ ಪರಿತಪಿಸುವ ತುಡಿತ ಈ ಸಂದರ್ಭದಲ್ಲಿ ಜಾಸ್ತಿಯಾಗುತ್ತಿದ್ದಂತೆ ರೇವತಿ, ಸ್ವಗ್ರಾಮಕ್ಕೆ ವಾಪಸಾಗುತ್ತಾಳೆ. ಆದರೆ, ಮನೆಯಲ್ಲಿ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ. ಅಮ್ಮ-ಅಪ್ಪ ರೇವತಿಯನ್ನು ಒಪ್ಪಿದರೂ ಆಕೆಯ ಸಹೋದರ ಆಸ್ತಿ ಕಾರಣಕ್ಕೆ ಒಪ್ಪಲಾರ. ತನ್ನ ಹೆಣ್ಣಿನ ಅಸ್ತಿತ್ವದ ಸಂಘರ್ಷದಲ್ಲೇ ಮುಳುಗಿಹೋದ ರೇವತಿ ಆಸ್ತಿ ಎನ್ನುವ ಐಹಿಕ ಸಂಪತ್ತಿನ ಬಗ್ಗೆ ಗಮನ ಹರಿಸುವುದಿಲ್ಲ. ತನ್ನ ಸ್ವರೂಪದ ಅನನ್ಯತೆಯೇ ಮುಖ್ಯವೆಂದು ಭಾವಿಸುವ ರೇವತಿ ಆಸ್ತಿಯನ್ನು  ಧಿಕ್ಕರಿಸುವ ಸ್ಪಷ್ಟ ನಿರ್ಧಾರಕ್ಕೆ ಬರುತ್ತಾಳೆ. ರೇವತಿಯ ಈ ನಿಲುವು ಆಕೆಯ ತಂದೆಯಲ್ಲಿ ಅಭಿಮಾನ ಮೂಡಿಸುತ್ತದೆ.
 ಇಲ್ಲಿಯವರೆಗಿನ ದೃಶ್ಯಗಳು ದೊರೆಸ್ವಾಮಿ ಆರಂಭದ ಬದುಕು ಮತ್ತು ರೇವತಿಯಾಗಿ ಪರಿವರ್ತನಗೊಳ್ಳುವ ಹಂತದ ಚಿತ್ರಣಗಳಾಗಿ ಮನಮುಟ್ಟುತ್ತವೆ. ದೊರೆಸ್ವಾಮಿಯಿಂದ ರೇವತಿಯಾಗುವ ಈ ಟ್ರಾನ್ಸಫಾರ್ಮೇಷನ್ ಇದೆಯಲ್ಲ, ಅದನ್ನು ಕಟ್ಟಿಕೊಡುವುದಕ್ಕೆ ನಿರ್ದೇಶಕ ಪಟ್ಟಿರಬಹುದಾದ ಶ್ರಮ ಎದ್ದು ಕಾಣಿಸುವಂಥದು. ನಡುವೆ ಕೆಲವು ಹಾಸ್ಯ ಪ್ರಸಂಗಗಳನ್ನು ಬಳಸಿಕೊಳ್ಳುವ ಮೂಲಕ ನಿರ್ದೇಶಕ ಎಂ. ಗಣೇಶ ಹೆಗ್ಗೋಡು ಒಟ್ಟು ಈ ಹಂತದ ನಾಟಕವನ್ನು ಪ್ಲೇಫುಲ್ ಆಗಿಸಿದ್ದಾರೆ.
 *
 ಯಾವಾಗ ರೇವತಿ ತನ್ನೊಳಗಿನ ನಿಜವಾದ ವ್ಯಕ್ತಿತ್ವಕ್ಕಾಗಿಯೇ ಹಾತೊರೆಯಲಾರಂಭಿಸುತ್ತಾಳೋ, ಆ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲಾರಂಭಿಸುತ್ತಾಳೋ ಅಂಥದೊಂದು ಜೀವದ ಸಾಹಸ ಸಹಜವಾಗಿಯೇ ಕುತೂಹಲವನ್ನು ಸೃಷ್ಟಿಸುತ್ತದೆ.  ಆ ಭಾವತೀವ್ರತೆ, ತುಮುಲ ಮತ್ತು ತಾನು ಹೆಣ್ಣಾಗೇ ಬದುಕಬೇಕೆಂಬ ದೃಢನಿಶ್ಚಯ... ಇವೆಲ್ಲವೂ ರೇವತಿಯನ್ನು ಒಂದು ಅದ್ಭುತ ವ್ಯಕ್ತಿತ್ವದ ಮಟ್ಟಕ್ಕೇರಿಸುತ್ತವೆ. ಪ್ರಯೋಗದ ಈ ಹಂತದಲ್ಲಿ ಪಾತ್ರದ ಇಂಥ ಭಾವನಾತ್ಮಕ ತುಮುಲಗಳನ್ನು ಅಭಿನಯದಲ್ಲಿ ಕಟ್ಟಿಕೊಡುವುದು ನಟನೊಬ್ಬನಿಗೆ ನಿಜಕ್ಕೂ ದೊಡ್ಡ ಸವಾಲು. ಪುರುಷನಂಥ ದೆಹದಲ್ಲಿ ಹೆಣ್ಣಿನ ಭಾವನೆಗಳು ಪುಟಿದೇಳುವುದು ಮತ್ತು ತಾನು ಹೆಣ್ಣೇ ಎಂದು ಭಾವಿಸುವುದು, ಅಂತಿಮವಾಗಿ ಹೆಣ್ಣಾಗುವತ್ತಲೇ ಮನಸು ಹಾತೊರೆಯುವುದು, ಆ ಮೂಲಕ ಹೆಣ್ಣು-ಗಂಡು ಎನ್ನುವ ವ್ಯಕ್ತಿತ್ವಗಳ ನಡುವೆ ತೊಳಲಾಡುವುದನ್ನು ಅಭಿನಯದಲ್ಲಿ ಬದುಕುವುದಕ್ಕೆ ನಟನೊಬ್ಬನಿಗೆ ಪಾತ್ರದ ಪರಕಾಯ ಪ್ರವೇಶದಂಥ ತನ್ಮಯತೆ ಬೇಕೆನಿಸುತ್ತದೆ. ಈ ನಿಟ್ಟಿನಲ್ಲಿ ಆರಂಭದ ದೊರೆಸ್ವಾಮಿ ಮತ್ತು ಹೆಣ್ಣಾಗಿ ಪರಿವರ್ತನೆ ಹೊಂದಿ ರೇವತಿಯಾಗುವ ಪಾತ್ರಗಳೆರಡೂ ಅತ್ಯಂತ ಎನರ್ಜೆಟಿಕ್ ಆಗಿ ಪೋಷಿಸಲ್ಪಟ್ಟವು. ನೀನಾಸಂ ಚಂದ್ರು ತಾವೊಬ್ಬ ಅತ್ಯಂತ ಪೊಟೆನ್ಷಿಯಲ್ ಇರುವ ದಿಟ್ಟ ನಟ ಎನ್ನುವುದನ್ನು ರೇವತಿ ಪಾತ್ರದ ಮೂಲಕ ಸಾಬೀತುಪಡಿಸಿದರು. ಚಂದ್ರುಗೆ ಅಭಿನಯದ ಶ್ರೇಣಿಯಲ್ಲಿ ಎ+ ಗೌರವ ನೀಡಬಹುದು. ದೊರೆಸ್ವಾಮಿ ಪಾತ್ರವನ್ನು ಇಷ್ಟೇ ಪರಿಣಾಮಕಾರಿಯಾಗಿ ಪೋಷಿಸಿದ ಮತ್ತೊಬ್ಬ ನಟನಲ್ಲೂ ಅದ್ಭುತ ಎನರ್ಜಿ ಇದೆ. ಇಬ್ಬರೂ ಅಭಿನಂದನೆಗೆ ಅರ್ಹರು.

 ಅಂತಿಮ ದೃಶ್ಯಗಳಲ್ಲಿ, ಹೆತ್ತ ಮನೆಯಲ್ಲಿ ಹಿಂಸೆಗೀಡಾದ, ಹೊರಗೆ ಕಾಮಾಂಧರಿಂದ ವೇಶ್ಯಾವೃತ್ತಿಗೂ ಇಳಿದ ರೇವತಿ ಅನುಭವಿಸಿದ ನರಕ ಮನುಷ್ಯಲೋಕವನ್ನೇ ತಲ್ಲಣಗೊಳಿಸುವಂಥದು. ಇದನ್ನು ಮೆಟ್ಟಿ ನಿಂತ ರೇವತಿ ನಾಗರಿಕ ಸಮಾಜದಲ್ಲಿ ತನ್ನದೇ ಆದೊಂದು ಅಸ್ತಿತ್ವ, ಬದುಕು ಕಂಡುಕೊಂಡ ಸಂತೃಪ್ತ ಮನಸ್ಥಿತಿಯಲ್ಲಿದ್ದಾಳೆ. 'ಸಂಗಮ' ಎನ್ನುವ ಸರ್ಕಾರೇತರ ಸಂಸ್ಥೆಯಲ್ಲಿ ತನ್ನಂತೇ ಬದುಕುತ್ತಿರುವ, ತನ್ನ ಹಾಗೆ ಕಷ್ಟ, ಇರಿಸುಮುರಿಸನ್ನು ಎದುರಿಸಿದ ಹಿಜಡಾಗಳ ಕಲ್ಯಾಣ, ಪುನರ್ವಸತಿಗಾಗಿ ಕೆಲಸ ಮಾಡುತ್ತಿದ್ದಾಳೆ.  ಹೊಸ ಸಂಘರ್ಷಕ್ಕೆ ಇಳಿಯುವ ಮೂಲಕ ಪ್ರಖರ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾಳೆ. ಒಟ್ಟಾರೆ ಬದುಕಿನ ಇಂಥ ದೊಡ್ಡ ಪಯಣದ ಮೂಲಕ ಪ್ರಸ್ತುತ ಸಮಾಜಕ್ಕೆ ದೊಡ್ಡ ಮಾದರಿ ಎನಿಸುತ್ತಾಳೆ.
*
ಇಷ್ಟು ವಸ್ತುವನ್ನಿಟ್ಟುಕೊಂಡ "ಬದುಕು-ಬಯಲು" ನಾಟಕ, ರೇವತಿಯೊಬ್ಬಳ ಆತ್ಮಕಥನ ಹೇಳುತ್ತ ಅಂಥದೊಂದು ಲೋಕದ ಮನುಷ್ಯ ಚರಿತ್ರೆಯನ್ನು ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಕನ್ನಡದ ರಂಗಭೂಮಿಗೆ ಮತ್ತು ಇಡೀ ಸಾಂಸ್ಕೃತಿಕ ಲೋಕಕ್ಕೆ ಇಂಥ ವಸ್ತು ಕೊಂಚ ಹಾರ್ಷ್ ಅನ್ನಿಸಬಹುದು. ಹಾಗೆ ನೋಡಿದರೆ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಕ್ಯಾರೆಕ್ಟರ್ ಗಳು ಜನಪದ ರಂಗಲೋಕಕ್ಕೆ ಹೊಸದೇನೂ ಅಲ್ಲ. ಕೃಷ್ಣ ಪಾರಿಜಾತದಂಥ ಸಣ್ಣಾಟಗಳಲ್ಲಿ ಬಳಕೆಯಾಗುವ ಧೂತೆ ಎನ್ನುವ ಪಾತ್ರ ಹೆಣ್ಣೂ ಅಲ್ಲದ ಗಂಡೂ ಅಲ್ಲದ ಒಂದು ವಿಶಿಷ್ಟ ಕ್ಯಾರೆಕ್ಟರ್. ಸಿನಿಮಾಕ್ಕೆ ಬಂದರೆ ಇಂಥ ಹಲವು ಪಾತ್ರಗಳನ್ನು ನೆನಪಿಸಿಕೊಳ್ಳಬಹುದು. ಸಡಕ್ ಸಿನಿಮಾದಲ್ಲಿ ಸದಾಶಿವ ಅಮ್ರಾಪೂರಕರ್ ನಿಭಾಯಿಸಿದ ಡಾನ್ ಪಾತ್ರವೂ ಇಂಥದೇ. ಧಾರ್ಮಿಕ ಆಚರಣೆ ವಿಷಯಕ್ಕೆ ಬಂದರೆ, ಸವದತ್ತಿ ಎಲ್ಲಮ್ಮನ ಜಾತ್ರೆಯಲ್ಲಿ ಹರಕೆ ಹೊತ್ತು ಭಂಡಾರ ಹಚ್ಚುತ್ತ ಅಲೆದಾಡುವ  ಜೋಗುತಿಯಂಥ ಕ್ಯಾರೆಕ್ಟರ್ ನಮಗೆ ಪರಿಚಿತವೇ. ಆದರೆ ನಾಟಕದ ದೊರೆಸ್ವಾಮಿ ಅಲಿಯಾಸ್ ರೇವತಿ ಕ್ಯಾರೆಕ್ಟರ್ ಇವೆಲ್ಲದಕ್ಕೂ ಭಿನ್ನವಾಗಿ ನಿಲ್ಲುವಂಥದು. ವೈಜ್ಞಾನಿಕ ದೃಷ್ಟಿಕೋನದಲ್ಲೇ ಈ ಕ್ಯಾರೆಕ್ಟರ್ ನೋಡಬೇಕಾಗುತ್ತದೆ. ರಂಗದ ಮೇಲೆ ಈ ಕ್ಯಾರೆಕ್ಟರ್ ಕಾಮಿಡಿಯಾಗುವ ಸಾಧ್ಯತೆಯೇ ಹೆಚ್ಚು. ಸಹಜವಾಗಿ ಅದು ಕಾಮಿಕ್ ಆಗಿಯೇ ಕಾಣಿಸುವಂಥದು ಕೂಡ. ಪ್ರಯೋಗದ ಆರಂಭಿಕ ದೃಶ್ಯಗಳಲ್ಲಿ ಇದೇ ಆಯ್ತು. ಆದರೆ ಕ್ರಮೇಣ ನಾಟಕದ ವಸ್ತುವಿಗೆ ಕಲಾತ್ಮಕ ಸ್ಪರ್ಶ ನೀಡಲೆತ್ನಿಸಿದ ನಟರು, ದೊರೆಸ್ವಾಮಿ ಮತ್ತು ರೇವತಿ ಪಾತ್ರಗಳನ್ನು ಮನೋಜ್ಞವಾಗಿಸಿದರು.

 ರಂಗದ ಮೇಲೆ ಸೊಳ್ಳೆ ಪರದೆ ಅಥವಾ ವ್ಹಾಲಿಬಾಲ್ ನೆಟ್ ನಂಥ ಬ್ಯಾಕ್ ಡ್ರಾಪ್ ಅನ್ನು ಪ್ರಮುಖ ರಂಗವಿನ್ಯಾಸವನ್ನಾಗಿ ನಿರ್ದೇಶಕರು ಬಳಸಿಕೊಂಡಿದ್ದರು. ಅದು ಪ್ರಮುಖ ಪಾತ್ರದ ಗತ ಮತ್ತು ವಾಸ್ತವಗಳ ನಡುವೆ ಕನ್ನಡಿಯಂತೆ,  ತಿಳಿಗೊಳದಂತೆ. ಜತೆಗೆ ಒಟ್ಟು ವಸ್ತುವಿಗೆ ಸಂಬಂಧಿಸಿದಂತೆ ಪ್ರೇಕ್ಷಕ ಹಾಗೂ ನಾಟಕದ ನಡುವಿನ ಜೀವಸೇತುವಿನಂತೆ ಬಳಕೆಯಾಯ್ತು. ಪ್ರಯೋಗಕ್ಕೊಳಪಡಿಸಲು ತೀರ ಕಷ್ಟ ಎನಿಸುವ ನಾಟಕದ ವಸ್ತುವಿನ ಭಾವಸಾಂದ್ರತೆಯನ್ನು ಅದರದೇ ಮಾನವೀಯ ನೆಲೆಯಿಂದ ರಂಗದ ಮೇಲೆ ಕಟ್ಟಿಕೊಟ್ಟಿದ್ದಕ್ಕೆ ತಂಡಕ್ಕೊಂದು ಹ್ಯಾಟ್ಸಾಫ್. ಪ್ರಸ್ತುತ ಸಮಾಜವೊಂದರಲ್ಲಿನ ಜ್ವಲಂತ ಮಾನವ ಸಮಸ್ಯೆಯೊಂದರ ಬಗ್ಗೆ ಕನ್ನಡಿ ಹಿಡಿದಂತೆನಿಸಿದ ಪ್ರಯೋಗ ಇನ್ನಷ್ಟು ಉತ್ತಮ ರಂಗತಂತ್ರ ಅಳವಡಿಸಿಕೊಳ್ಳಬಹುದಾಗಿತ್ತು. ತನ್ನ ಮಿತಿಯಲ್ಲೇ ಇದೊಂದು ವಿಶಿಷ್ಠ ಪ್ರಯೋಗವಾದ್ದರಿಂದ ನಿರ್ದೇಶಕ ಎಂ. ಗಣೇಶ ಹೆಗ್ಗೋಡು ಅವರಿಗೆ ಮ್ಯಾಕ್ಸಿಮಮ್ ಮಾರ್ಕ್ಸ್.


ಕಾಡುವ ರೇವತಿ ಡೈಲಾಗ್: ನಾನು ಹಾಗೂ ನನ್ನ ತರಹದವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ್ದು ಈ ಸಮಾಜ ಮತ್ತು ಕಾನೂನು. ಎರಡೂ ನಮ್ಮನ್ನು ಅವಮಾನದಿಂದ ಕಂಡು, ಬೀದಿಸೂಳೆ ಅಂತ ಹಣೆಪಟ್ಟಿ ಕಟ್ಟಿವೆ. ಆದರೆ, ಬೀದಿಯಲ್ಲಿ ನಮ್ಮನ್ನ ಬಳಸಿಕೊಳ್ಳುವ ಮತ್ತು ನಮ್ಮಿಂದಲೇ ದುಡ್ಡು ಕೀಳುವ ಪೊಲೀಸರನ್ನ ಏನಂತ ಕರೆಯಬೇಕು? ನಾನು ಕೊಲೆ ಮಾಡಿದವಳಲ್ಲ, ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ ಆದರೂ ಅಪರಾಧಿಯಂತೆ ಜಗತ್ತು ನನ್ನನ್ನು ಕಾಣುತ್ತದೆ...
* * *
ಸೈಡ್ ವಿಂಗ್: 
ಹೌದು. ರೇವತಿಯಂಥವರ ಬದುಕನ್ನು 'ಹಿಜಡಾ' ಎನ್ನುವ ಟ್ಯಾಗ್ ಲೈನಿನಲ್ಲಿ ಅಸಹ್ಯಕರವಾಗಿ ಗುರುತಿಸುವ ನಮ್ಮ ಸಮಾಜ, ಕಾನೂನಿನ ಸ್ಥಿತಿಯೇ ರೋಗಗ್ರಸ್ಥ. ನಿಸರ್ಗ ಸಹಜ ಹುಟ್ಟು ಪಡೆದ ಮನುಷ್ಯ ಜೀವವೊಂದು ಹೀಗೆ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಅಥವಾ ಎರಡರ ಮಿಶ್ರಣ ರೂಪದಲ್ಲಿ ಬೆಳೆದು ನಿಲ್ಲುವುದು ಸಮಾಜಕ್ಕೆ ಅಸಹಜದಂತೆ ಕಾಣಿಸುತ್ತದೆ. ನಿಜದ ಅರ್ಥದಲ್ಲಿ ನೋಡುವ ಪರಿಯಲ್ಲಿನ ದೋಷವಿದು. ಅಥವಾ ಇದು ವೈಜ್ಞಾನಿಕ ಮನೋಧರ್ಮದ ಕೊರತೆಯ ಸೀಮಿತ ದೃಷ್ಟಿ. ಸೋಶಿಯೊ-ರಿಲಿಜಿಯಸ್ ದೃಷ್ಟಿಯನ್ನು ಇದಕ್ಕೆ ಸಂವಾದಿಯಾಗಿಸುವುದಾದರೆ  ಅರ್ಧನಾರೀಶ್ವರ ಕಲ್ಪನೆಯೊಂದಿದೆಯಲ್ಲ ಅದನ್ನು ಯಾವ ನೆಲೆಯಲ್ಲಿ ನೋಡುವುದೋ?
 ಹಿಜಡಾ, ಖೋಜಾ, ಬೈ ಸೆಕ್ಸ್ಯುಯಲ್, ಹೋಮೋ, ಛಕ್ಕಾ, ಲೆಸ್ಬಿಯನ್... ಹೀಗೆ ವಿವಿಧ ಹೆಸರುಗಳಿಂದ ಅವಮಾನಿತರಾಗುತ್ತಿರುವ ಲೈಂಗಿಕ ಅಲ್ಪಸಂಖ್ಯಾತರು, ಈ ಮನುಷ್ಯ ಜಗತ್ತಿನ ಒಂದು ಭಾಗವೇ ಆಗಿದ್ದಾರೆ. ಆದರೆ, ವಾಸ್ತವವಾಗಿ ಅವರನ್ನು 'ಸಮಾಜದ ಭಾರ'ವೆಂದೇ ಭಾವಿಸಲಾಗುತ್ತಿದೆ. ಇಂಥ ಹಿಜಡಾಗಳು ಬೀದಿ ಬೀದಿಯಲ್ಲಿ ತುತ್ತಿಗಾಗಿ ಕೈಯೊಡ್ಡುವ ಪರಿಸ್ಥಿತಿ ಇದೆ. ತಮ್ಮದಲ್ಲದ ತಪ್ಪಿಗೆ ಹುಟ್ಟಿನಿಂದ ಈ ಸ್ವರೂಪ ಪಡಕೊಂಡು, ಬದುಕನ್ನು ಎದುರಿಸುವ ಸವಾಲಿಗೆ ಬೀಳುವ ಹಿಜಡಾಗಳ ಬಗ್ಗೆ ಸಮಾಜ ನೋಡುವ ದೃಷ್ಟಿಕೋನ, ತಾತ್ಸಾರ ನೆನೆದರೆ, ನನ್ನಲ್ಲಿ ಮೂಡುವ ಪ್ರಶ್ನೆ ಒಂದೇ. ನಿಸರ್ಗ ಸಹಜ ಸಾಮಾನ್ಯ ಮನುಷ್ಯರಾದ ನಾವು, ನಮ್ಮ ಅಸ್ತಿತ್ವಕ್ಕಾಗಿ ಬಹುತೇಕ ಸಂದರ್ಭಗಳಲ್ಲಿ ವ್ಯವಸ್ಥೆಯೊಂದಿಗೆ ರಾಜೀ ಮಾಡಿಕೊಳ್ಳುವಾಗ ವರ್ತಿಸುತ್ತೇವಲ್ಲ! ಅದನ್ನು ಹೇಗೆ ನೋಡುವುದು?


"We are all androgynous, not only because we are all born of a woman impregnated by the seed of a man but because each of us, helplessly and forever, contains the other—male in female, female in male, white in black and black in white. We are a part of each other. Many of my countrymen appear to find this fact exceedingly inconvenient and even unfair, and so, very often, do I. But none of us can do anything about it."

"ಅನದರ್ ಕಂಟ್ರಿ" ಮತ್ತು "ಟೆಲ್ ಮಿ ಹೌ ಲಾಂಗ್ ದಿ ಟ್ರೈನ್ಸ್ ಬೀನ್ ಗಾನ್" ಎನ್ನುವ ಕೃತಿಗಳಲ್ಲಿ ಕರಿಯ, ಬಿಳಿಯ ಪಾತ್ರಗಳ ಜತೆಗೆ ಸಲಿಂಗಿ, ಹೆಟರೋಸೆಕ್ಸ್ಯುವಲ್, ಬೈಸೆಕ್ಸ್ಯುವಲ್ ಪಾತ್ರಗಳನ್ನಿಟ್ಟುಕೊಂಡು ಅದ್ಭುತ ಮಾನವೀಯ ನೆಲೆಗಳನ್ನು ಚರ್ಚಿಸಿದ ಅಮೆರಿಕದ ನಾಟಕಕಾರ, ವಿಮರ್ಶಕ ಜೇಮ್ಸ್ ಆರ್ಥರ್ ಬಾಲ್ಡವಿನ್ ಹೇಳಿದ ಈ ಮಾತು ಅರ್ಥಪೂರ್ಣ.
__________________________________________________________________________________
* Androgynous means (1.being both male and female; hermaphroditic. 2. having both masculine and feminine characteristics. 3. having an ambiguous sexual identity. 4. neither clearly masculine nor clearly feminine in appearance: the androgynous look of many rock stars. 5. Botany . having staminate and pistillate flowers in the same inflorescence.) 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ