ವಿಷಯಕ್ಕೆ ಹೋಗಿ

‘ನಮೋ..’ ರಾಜಕೀಯ ಸಂಸ್ಕೃತಿಯ ಕ್ಯಾರಿಕೇಚರ್


ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ.ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ ಪವಾಡ ಎನ್ನುವಂಥ ಭ್ರಮೆಯನ್ನಾಗಿಸಿ  ಜನರನ್ನು ಹುಚಪ್ಯಾಲಿ ಮಾಡುವ ಕಾಯಕಕ್ಕೆ ಇಳಿದುಬಿಡುತ್ತಾನೆ. ತಾನು ಮದುವೆಯಾಗಿದ್ದ ಹೆಣ್ಣನ್ನು ನೋಡಲು ಅತ್ತೆ ಮನೆಗೆ ಹೋದಾಗ ಈತನ ಪವಾಡ ದೊಡ್ಡ ಹರವನ್ನೇ ಪಡೆದುಕೊಳ್ಳುತ್ತದೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಕಡೆಗೆ ಅವಳನ್ನು ಮರೆತೇ ಹೋಗುವ ಈತ ವೆಂಕಟೇಶನಾಗಿ ಅವತಾರಿ ಪುರುಷನೇ ಆಗಿ ‘ನಮೋ ವೆಂಕಟೇಶ’ನಾಗುತ್ತಾನೆ. ನಾಡ ಅರಸನಿಗೂ ಪವಾಡದ ಮಂಕು  ಬೂದಿ ಎರಚಿ ರಾಜಕುಮಾರಿಯನ್ನೇ  ವರಿಸುತ್ತಾನೆ. ಅಂದರೆ ಅಧಿಕಾರ ಎನ್ನುವ ಮೋಹಿನಿಯನ್ನು ವರಸಿ ರಾಜನೇ ಆಗುತ್ತಾನೆ. ಆ ಕ್ಷಣದಿಂದ ಈತನ ಪವಾಡ ಮೇಲ್ದರ್ಜೆಗೇರುತ್ತಲೇ ಸಾಗುತ್ತದೆ. ಜನರನ್ನು ಹುಚಪ್ಯಾಲಿ ಮಾಡುವುದಕ್ಕೆ ಅಧಿಕೃತ ಲೈಸನ್ಸದಾರನಂತೆ ವಿಜೃಂಭಿಸ ತೊಡಗುತ್ತಾನೆ. ಇದು ರಾಜಸ್ಥಾನೀ ಜಾನಪದೀಯ ಕಥೆ.
 ಇದನ್ನು ಸಮಕಾಲೀನ ಸಮಾಜೋ-ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳ ಸಂದರ್ಭಕ್ಕೆ ಹೋಲಿಸಿ ನೋಡಿದರೆ ನಮ್ಮ ನಡುವೆಯೂ ಇಂಥ ಒಬ್ಬ ‘ನಮೋ’ ಸೃಷ್ಟಿಯಾಗಿದ್ದಾನೆ ಮತ್ತು ಇಂಥದೇ ಪವಾಡದ ಪುಡಿ, ಹುಡಿ ಚೆಲ್ಲಿ ಗೆಲುವಿನ ನಗೆ ಬೀರುತ್ತಿದ್ದಾನೆ,.. ಒಟ್ಟು ಈ ಅರ್ಥದ ರಂಗಪ್ರಯೋಗವೊಂದನ್ನು ಸಮುದಾಯ ಬೆಂಗಳೂರು ಇತ್ತೀಚೆಗೆ ರಾಜಧಾನಿಯಲ್ಲಿ ಪ್ರಸ್ತುತಪಡಿಸಿತು. ಎಂಥ ಸಕಾಲಿಕ ರಾಜಕೀಯ ಕಾರ್ಟೂನ್‌!
ಊರ ಪ್ಯಾಲಿ ಯಂಕಟೇಸಾ ವೆಂಕಟೇಶನಾದ... ಅವನ ಸುತ್ತ ಭಜನಾ ಮಂಡಳಿಯೊಂದು ರೂಪುಗೊಂಡು ಅದರ ಭಾಗೀದಾರನಾದ ಭಟ್ಟಂಗಿತನ (ಮಾಧ್ಯಮ) ಆತನನ್ನು ನಮೋ ವೆಂಕಟೇಶನನ್ನಾಗಿಸಿದ ರಾಜಕೀಯ ವಿಡಂಬನೆಯ ಕಥನವಿದು. ಪ್ರಜಾಸತ್ತಾತ್ಮಕವಾಗಿ ಅಂದರೆ ಮಾನವೀಯವಾಗಿ ಯೋಚಿಸಿದರೆ ಯಾರೂ ಯಾರನ್ನೂ ಪ್ಯಾಲಿ ಅಂತ ಭಾವಿಸಲೇಬಾರದು. ಇಂಥದೊಂದು ವಿವೇಕವನ್ನಿಟ್ಟುಕೊಂಡೇ ಸಮಕಾಲೀನ ರಾಜಕೀಯದ ಒಟ್ಟು ಮನೋಧರ್ಮವನ್ನು ವಿಮರ್ಶೆ ಮತ್ತು ಟೀಕೆ ಮಾಡುವುದು ಕೂಡ ಪ್ರಜಾಸತ್ತಾತ್ಮಕ ಲಕ್ಷಣ. ಆರೋಗ್ಯಕರವೂ ಆದ ಒಂದು ಪ್ರಜ್ಞೆ. ಪ್ರಜಾಪ್ರಭುತ್ವ ಅಥವಾ ಪ್ರಜಾಸತ್ತಾತ್ಮಕ ಮೌಲ್ಯ ಜೀವಂತಿಕೆಯಿಂದ ಬಾಳಲು ಇದು ಅತ್ಯಂತ ಅಗತ್ಯ ಎನ್ನುವುದು ವಿನಯವೂ ಹೌದು.
ಯಂಕಟೇಶ ಇಲ್ಲಿ ಎರಡು ಪ್ರಮುಖ ಸಂಜ್ಞೆಗಳನ್ನು ಬಳಸುತ್ತಾನೆ. ತೋರುಬೆರಳು ಮತ್ತು ಹಸ್ತ. ಇವು ಸ್ಟೇಟ್ಸಮನ್‌ ಮತ್ತು ಮಹಾ ಮುತ್ಸದ್ದಿ ಬಳಸಬಹುದಾದ್ದು. ಇದನ್ನು ರಾಜಕಾರಣಿಗಳು ಬಳಸುವುದು ಹೆಚ್ಚು. ದೇಶದ ಮೊದಲ ಪ್ರಧಾನಿ ನೆಹರು ಸ್ಟೇಟ್ಸಮನ್‌ ತರಹ ತೋರು ಬೆರಳು ತೋರಿಸುತ್ತಿದ್ದುದು ಮತ್ತು ಆ ನಂತರದಲ್ಲಿ ಕೆಲವು ರಾಜಕಾರಣಿಗಳು ಅಂದರೆ ಇಂದಿರಾ ಗಾಂಧಿಯಂಥವರು ಹಸ್ತವನ್ನು ಸಾರ್ವಜನಿಕವಾಗಿ ಬೀಸುವುದು ಇತ್ಯಾದಿ. ಹಾಗೆ ನಾಟಕದಲ್ಲಿ ಯಂಕಟೇಶ ಇವನ್ನು ಬಳಸಿಕೊಳ್ಳುತ್ತಾನೆ. ಅಲ್ಲದೇ ದೊಡ್ಡ ಧಾರ್ಮಿಕ ಪವಾಡ ಪುರುಷರ ಕೆಲವು ಸಂಜ್ಞೆಗಳನ್ನು ನಕಲು ಮಾಡುವಂತೆಯೂ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಕೆಲವು ನಾಯಕರು ತಮ್ಮನ್ನು ತಾವು ನೆಹರು ಗೆಟಪ್‌ನಲ್ಲಿ (ಧಿರಿಸು), ಅವರಂತೆ ಹಾವಭಾವ, ತೋರು ಬೆರಳು ಮತ್ತು ಹಸ್ತವನ್ನು ಮತ್ತೆ ಮತ್ತೆ ಬೀಸಿ ಏನೋ ಘನಂದಾರಿ ಸಾಧಿಸಿದವರಂತೆ ಖಾಲಿ ಫುಕಟ್‌ ಬೀಸು ಮಾತುಗಳನ್ನು ಉಲಿಯುತ್ತ ಜನರನ್ನು ಪೊಳ್ಳು ಪವಾಡದಂಥ ಭ್ರಮೆಗಳಲ್ಲಿಯೇ ಕಟ್ಟಿ ಹಾಕುತ್ತಿರುವುದನ್ನು ಕಾಣುತ್ತಿದ್ದೇವಲ್ಲವೇ?
ಭಟ್ಟಂಗಿ ಜನ ಜನಪದ ಕಥನಗಳಲ್ಲಿ ಬರುವ ಹಾಗೆ, ವಾಸ್ತವ ಜಗತ್ತಿನಲ್ಲಿ ‘ಸುದ್ದೀಶ್ವರರು’ ಇದ್ದಾರಲ್ಲವೇ? ಇವರು ಬಹುತೇಕ ಮಾಡುತ್ತಿರುವುದು ಇದೇ ಕೆಲಸವನ್ನು. ಪ್ರಚಾರ ಮಾಧ್ಯಮ ಒಂದು ಭ್ರಮೆಯನ್ನು ಅದೆಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲುದು ಎನ್ನುವುದು ಅದರ ಶಕ್ತಿಯೂ ಹೌದು. ಎವಿಲ್‌ ಫೋರ್ಸ್‌ನಂತೆಯೂ ಹೌದು. ಸಮಕಾಲೀನ ಸಂದರ್ಭದಲ್ಲಿ ನಾವು ಕಾಣುತ್ತಿರುವ ಚಿತ್ರಣವಿದು.
ಜನಪದದ ಒಬ್ಬ ಪ್ಯಾಲಿ ಯಂಕಟೇಶನ ಕಥೆಯನ್ನಿಟ್ಟುಕೊಂಡ ರಂಗ ನಿರ್ದೇಶಕ ಅಫ್ಸರ್‌ ಹುಸೇನ್‌ ಅದನ್ನು ಆಧುನಿಕ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ನೆಲೆಗಳಿಗೆ ಸಮೀಕರಿಸಿದ್ದಾರೆ. ರಂಗದ ಮೇಲೆ ದೃಶ್ಯ ಮತ್ತು ವಿನ್ಯಾಸಗಳ ಮೂಲಕ ಅದ್ಭುತವಾದ ಕಾರ್ಟೂನ್‌ಗಳನ್ನು ಸೃಷ್ಟಿಸುತ್ತಲೇ ಯಂಕಟೇಶನೊಬ್ಬ ‘ನಮೋ ವೆಂಕಟೇಶ’ ಆದ ಪವಾಡ ಮಾದರಿಯನ್ನು ಕ್ಯಾರಿಕೇಚರ್‌ ಆಗಿಸಿದ್ದಾರೆ. ಇದು ಸಮಕಾಲೀನ ಇಂಡಿಯಾ ರಾಜಕಾರಣದ ಒಂದು ಅದ್ಭುತ ಕ್ಯಾರಿಕೇಚರ್‌.
 ಒಬ್ಬ ಪ್ಯಾಲಿ ಮನುಷ್ಯ ಜನ್ಮತಃ ಬೈ ಡಿಫಾಲ್ಟ್‌ ದಕ್ಕುವ ಕಾಮನ್‌ ಸೆನ್ಸ್‌ ಬಳಸಿಕೊಂಡು ಏನೇನೋ ಆಗಬಲ್ಲ ಸಾಧ್ಯತೆ ಇದೆ. ಇರಬೇಕು ಕೂಡ. ಅಂಥದೊಂದು ಆರೋಗ್ಯಕರ ‘ಸಾವಯವ ಕೃಷಿ’ಗೆ ಪೂರಕ ಪರಿಸರ ಉಳಿಸಿಕೊಳ್ಳಬೇಕಾದ ಅಗತ್ಯವೂ ಇದೆ. ಆದರೆ ಅದು ಪವಾಡದಂತೆ ಬಿಂಬಿತವಾಗಬೇಕೇನು? ಪವಾಡಗಳೆಲ್ಲವೂ ಜನರನ್ನು ಅಂದಃಶ್ರದ್ಧೆಗೆ ನೂಕುವ ಅಪಾಯಗಳೇ ಹೆಚ್ಚು. ಅಂದಃಶ್ರದ್ಧೆ ನಾಗರಿಕತೆಯ ದೊಡ್ಡ ಮೌಲ್ಯವೇ? ಅದರಲ್ಲೂ ದೇಶಕ್ಕೆ ಮತ್ತದರ ಜನಸಮುದಾಯಕ್ಕೆ ಅದು ರಾಜಕೀಯ ಆದರ್ಶವಾಗಬೇಕಾಗಿಲ್ಲ. ಹಾಗಾದಲ್ಲಿ ಆಡಳಿತ ಎನ್ನುವುದು ಹೋಗಿ ಬರಿಯ ಆಶಿರ್ವಾದ, ಕೃಪೆಗಳು ನೆಲೆಗೊಳ್ಳುತ್ತವೆ. ನಾಯಕನಾದವನು ಬರಿಯ ಬೂದಿ ಬಾಬಾ ಆಗಿಬಿಡುತ್ತಾನೆ. ಪ್ರಜೆಗಳೆಲ್ಲ ‘ನಮೋ..’ ಭಜನಾ ಮಂಡಳಿಯಾಗುತ್ತದೆ. ಮಣ್ಣು, ಕಲ್ಲು, ಗಾಳಿ, ಬೆಳಕು ದೇವರಾಗಿಸಿದಂತೆ ಮನುಷ್ಯನನ್ನೂ ದೇವರಾಗಿ ನಿಲ್ಲಿಸುವ ಚಾಳಿ ಮತ್ತೆ ಬೆಳೆಯುತ್ತದೆ. ಒಬ್ಬ ದೇವರಾಗಿ ಉಳಿದವರೆಲ್ಲ ಅವನ ಭಕ್ತರಾಗಿ ಅವನ ದಯಾಳು ಮತ್ತು ಕೃಪೆಯ ದೃಷ್ಟಿಯನ್ನು ಎದುರು ನೋಡುತ್ತ, ಆದದ್ದೆಲ್ಲಾ ಒಳಿತು, ದಕ್ಕಿದ್ದೆಲ್ಲವೂ ಅವನದೇ ಪ್ರಸಾದ ಎನ್ನುವ ಮನೋಧರ್ಮ ನೆಲೆಗೊಳಿಸಲು ನೋಡಿದ ಹಾಗಾಗುತ್ತದೆ. ಇದು ಆಧುನಿಕ ಇಂಡಿಯಾದ ಪ್ರಜಾಪ್ರಭುತ್ವಕ್ಕೆ ನಿಜವಾದ ಅಪಚಾರ ಮತ್ತು ಅಪಾಯಕರ. ಅಷ್ಟೇ ಅಲ್ಲ ಅತ್ಯಂತ ಅಸಹ್ಯಕರ. ಈ ಅರ್ಥದಲ್ಲಿ ಅಫ್ಸರ್‌ ಹುಸೇನ್ ಮತ್ತು ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸಿದ ‘ನಮೋ’ ವೆಂಕಟೇಶ, ಸಮಕಾಲೀನ ಸಂದರ್ಭಕ್ಕೆ ಕಟ್ಟಿಕೊಟ್ಟ ‘ನಮೋ...’ ಸಂಸ್ಕೃತಿಯ ಕ್ಯಾರಿಕೇಚರ್‌.
ಕೊನೆಯಲ್ಲಿ ನೊಣಗೇಶ ಅಲಿಯಾಸ್‌ ಯಂಕಟೇಶ ಅಲಿಯಾಸ್ ನಮೋ ವೆಂಕಟೇಶ ತಾನು ಕಟ್ಟಿಕೊಂಡ ಹೆಂಡತಿ ಪಾರ್ವತಿಯನ್ನು ಬೀದಿ ಪಾಲು ಮಾಡಿದ ಘಟನೆ ಮಾತ್ರ ನಾಟಕದ ಒಳಶುಂಠಿ. ಪಾಪ ‘ಪಾರ್ವತಿ’ಯದೇನು ತಪ್ಪು? ನಮೋ... ನನ್ನು ಮದುವೆಯಾಗಿದ್ದಾ? ಅವಳಿಗ್ಯಾಕೆ ಗಂಡಿನಿದ್ದೂ ಸತ್ತಂಥ ಸ್ಥಿತಿ? ಕಟ್ಟಿಕೊಂಡವಳದೇ ಈ ಗತಿ! ಇನ್ನು ಅವನ ಸಮಸ್ತ ಭಕ್ತಗಣದ ಸುರಕ್ಷತೆ, ಬದುಕಿಗೇನು ಗ್ಯಾರಂಟಿ? ಎನ್ನುವಂಥ ಪ್ರಶ್ನೆ ಮುಂದಿಡುವುದು ಈ ನಾಟಕದ ಅತ್ಯಂತ ಚಿಂತನಾರ್ಹವಾದ ಮತ್ತು ಮನಕಲಕುವ ನಾಟಕೀಯತೆ.
ರಾಜಸ್ಥಾನಿ ಜನಪದ ಕಥೆ ತನ್ನ ನೆಲದಿಂದ ಇಡಿಯ ಇಂಡಿಯಾ ವ್ಯಾಪಿಸಿ ಇಂಥದೊಂದು ಅರ್ಥಪೂರ್ಣ ಹೊಳಹು ಮತ್ತು ಚಿತ್ರಣ ಕಟ್ಟಿಕೊಡುವುದು ನಿಜಕ್ಕೂ ಅರ್ಥಪೂರ್ಣ. ಇದನ್ನು ಕನ್ನಡಕ್ಕೆ ಒಗ್ಗಿಸಿಕೊಟ್ಟ ಡಾ. ವೇಣುಗೋಪಾಲ್‌, ವಿಭಿನ್ನ ರಂಗವಿನ್ಯಾಸದ ಮೂಲಕ ಕಾರ್ಟೂನ್‌ ತಂತ್ರಗಳನ್ನು ದೃಶ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡ ನಿರ್ದೇಶಕ ಹುಸೇನ್‌ ಮತ್ತು ಸಮುದಾಯ ಬೆಂಗಳೂರು ತಂಡದ ಈ ಸಾಂಘಿಕ ಯತ್ನ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಕ್ಕೆ ನೀಡಿದ ಅತ್ಯಂತ ನಿರ್ಭಿಡೆಯ, ಕಲಾತ್ಮಕ ಮತ್ತು ಅಷ್ಟೇ ರಚನಾತ್ಮಕವಾದ ಪ್ರತಿಕ್ರಿಯೆ.
ಅಪೇಕ್ಷೆ: ಪ್ರೊಡಕ್ಷನ್ ದೃಷ್ಟಿಯಿಂದ ಇದು ವಿಭಿನ್ನ ರಂಗಪ್ರಸ್ತುತಿ. ವಿನ್ಯಾಸದ ದೃಷ್ಟಿಯಿಂದ ಅತ್ಯಂತ ಹೊಸತನದಿಂದ ಕೂಡಿದ ಪ್ರಯೋಗ. ಕಲರ್‌ಫುಲ್‌ ಕೂಡ. ಪರದೆಯ ಮೇಲೆ ಹುಲಿ, ಆನೆ, ಹೂವು, ಸೂರ್ಯ, ಮತ್ತಿತರ ಚಿತ್ರಣಗಳು ರಾಜಕೀಯ ಮೊಹರುಗಳಂತೆ ಮತ್ತು ಧಾರ್ಮಿಕ ಸಂಕೇತಗಳಂತೆಯೂ ಧ್ವನಿಸುವುದು ಒಟ್ಟು ವಸ್ತುವಿನ ಧ್ವನಿಗೆ ಪೂರಕವಾಗಿದೆ. ಕಲಾವಿದರು ಇದರ ಸಟೈರ್‌ ಅನ್ನು ತೀವ್ರವಾಗಿ ಗ್ರಹಿಸಿ ಪ್ರಸ್ತುತಪಡಿಸಿದಂತೆ ಅನ್ನಿಸಲಿಲ್ಲ. ಕಾರ್ಟೂನ್‌ ಮನಸ್ಥಿತಿಯ ಈ ವಸ್ತುವಿಗೆ ಶಾರ್ಪ್‌ ಆದ ಕಲಾತ್ಮಕ ಪ್ರತಿಕ್ರಿಯೆ ಕಲಾವಿದರಿಂದ ದಕ್ಕಬೇಕಿತ್ತು. ದೃಶ್ಯದಿಂದ ದೃಶ್ಯಕ್ಕೆ ನಾಟಕ ಸಾಗುವಾಗ ತುಂಬ ಲ್ಯಾಗ್‌ ಅನಿಸಿತು. ಟೈಮಿಂಗ್‌ ಸೆನ್ಸ್‌ ಕೊರತೆಯಂತಿದೆ. ಅಫ್ಸರ್‌ ಅವರ ಈ ವಿಶಿಷ್ಠ ವಿನ್ಯಾಸ ಮತ್ತು ಅದಕ್ಕೆ ಪೂರಕವಾಗಿ ದೃಶ್ಯಾಂತರಗಳಲ್ಲಿ ಒಟ್ಟು ಟೆಂಪೊ ಕೊಂಚ ತೀಕ್ಷ್ಣತೆಯನ್ನು ಪಡೆದುಕೊಂಡರೆ ನಾಟಕವನ್ನು ಹೆಚ್ಚು ಲವಲವಿಕೆಯಾಗಿ ಮತ್ತು ಅಷ್ಟೇ ಹರಿತವಾಗಿ ಕಟ್ಟಿಕೊಡಬಹುದೇನೋ..  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ