ನೀವು ಸಾವಿನ ರಹಸ್ಯ ತಿಳಿಯಲು ಶೋಧನೆ ನಡೆಸಬಹುದು. ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು? ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ, ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...! ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ? ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ, ಅದು ಲೀನವಾಗಲಿ ಬದುಕಿನ ಶರೀರದೊಳಗೆ... ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ. ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ. ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ ವಸಂತದ ಕನಸು ಕಾಣುತ್ತಿರುತ್ತದೆ. ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ, ಅನಂತದೆಡೆಗೆ ತೆರಕೊಳ್ಳುವ ಹಾದಿಗೆ! ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ? ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು, ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ? ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು! ಶಿಖರ-ಪರ್ವತಗಳ ತುದಿ ತಲುಪಿದ ಮೇ...