ವಿಷಯಕ್ಕೆ ಹೋಗಿ

ಸೋರುತಿಹುದು ಮನೆಯ ಮಾಳಿಗಿ...

HOME
Directed By: Yann Arthus-Bertrand
Plot: With aerial footage from 54 countries, Home is a depiction of how the Earth's
         problems are all interlinked.
Genre(s): Documentary
Released: June, 2009
Running Time: 1 Hour, 35 Minutes

HOME has been made for you : share it! And act for the planet."



ಸೋರುತಿಹುದು ಮನೆಯ ಮಾಳಿಗಿ... ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ...
ಷರೀಫರು ಶತಮಾನದ ಹಿಂದೆಯೇ  ಈ ದೇಹವೆನ್ನುವ ಮತ್ತು ಒಟ್ಟಾರೆ ವಿಶ್ವವೆನ್ನುವ ಮನೆಯ ಬಗ್ಗೆ  ತುಂಬ ಸ್ಪಷ್ಟವಾಗಿ ಗ್ರಹಿಸಿದರು! ಕಲ್ಲಿಂದ, ಮಣ್ಣಿಂದ ಕಟ್ಟಿಕೊಂಡ ನಾವಿರುವ ಮನೆಯೇ ಎಷ್ಟೊಂದು ತೂತುಗಳಿಂದ ತುಂಬಿಕೊಂಡಿರುತ್ತದೆ ಅಲ್ವಾ?

(ತೂತು ತುಂಬಿಕೊಳ್ಳಲು ಸಾಮಾನ್ಯರಿಗೆ ಅವಕಾಶವಿದೆಯೇ? ಕಲ್ಲು, ಮಣ್ಣಿಗೆ ಕೈ ಹಚ್ಚುವ ಸ್ಥಿತಿಯಲ್ಲೂ ಅವರಿಲ್ಲ! ಅದೆಲ್ಲದರ ಮೇಲೆ ಪಾಟೀಲರು, ಶೆಟ್ಟರು, ಗೌಡರು, ರೆಡ್ಡಿ, ಲಾಡ್, ಘೋರ್ಪಡೆ, ಜೆ.ಕೆ. ಸಿಂಘಾನಿಯಾ... ಅಂಥವರದಷ್ಟೇ ಲೈಸನ್ಸ್ ಇದೆ, ಅಧಿಕಾರವಿದೆ! ಆ ಮಾತು ಬೇರೆ.)

ಮನೆಯಲ್ಲಿ ಆಹಾರಕ್ಕಾಗಿ ಒಲೆ ಹೊತ್ತಿ ಉರಿಯುತ್ತದೆ. ಹೊಗೆ ಜಾಸ್ತಿಯಾದಾಗ, ಉಸಿರುಗಟ್ಟುವ ಸ್ಥಿತಿ ಬಂದಾಗ ಒಲೆಯನ್ನು ಆರಿಸುವ ಬದಲು ಕಿಟಕಿ, ಬಾಗಿಲು, ಹೊಗೆ ಮಾಳಿಗೆ ಮಾತ್ರ ತೆರೆದಿಟ್ಟುಬಿಡುತ್ತೇವೆ. ಒಲೆ ಆರಬಾರದು. ಯಾಕೆಂದರೆ ಊಟ ರೆಡಿಯಾಗಬೇಕು!... ಬದುಕು ಸಾಗಬೇಕಲ್ಲ!... ಹೀಗೆ ಅನಿವಾರ್ಯದ ಸ್ಥಿತಿ ನಮ್ಮ ವಾಸ್ತವ ಬದುಕನ್ನು ನಿಯಂತ್ರಿಸುತ್ತಿರುತ್ತದೆ.

ಅಗತ್ಯ ಆಹಾರ ಸಾಮಗ್ರಿಗಳಿದ್ದ ಮಾತ್ರಕ್ಕೆ ಊಟ ತಯಾರಾಗಲ್ಲ. ಪಾತ್ರೆಯೂ ಬೇಕು! ಪಾತ್ರೆ ತಯಾರಾಗೋದೇ ಕಾರ್ಖಾನೆಯಲ್ಲಿ. ಈಗಂತೂ ಆಹಾರ ತಯಾರು ಮಾಡುವ ಫ್ಯಾಕ್ಟರಿಗಳನ್ನು ಹಾಕಿಕೊಂಡು ಫುಡ್ ಪ್ರಾಸೆಸೆಂಗ್ ಅನ್ನೇ ದೊಡ್ಡ ಇಂಡಸ್ಟ್ರಿಯಾಗಿಸಿಕೊಂಡಿದ್ದೇವಲ್ಲವೇ!

ಮಡಿಕೆ, ಕುಡಿಕೆ ಯುಗದಲ್ಲೂ ಅನಿವಾರ್ಯತೆಗಳಿದ್ದವು. ಅದಕ್ಕೂ ಬೆಂಕಿ, ಕಾವು ಬೇಕಿತ್ತು. ಹೊಗೆ ಎಬ್ಬಿಸಲೇಬೇಕಿತ್ತು. ಅದು ತಕ್ಕಮಟ್ಟಿಗೆ ಇತ್ತು. ಈಗ ಹೊಗೆ ಎಬ್ಬಿಸುವುದೇ ದೊಡ್ಡ ಧಂಧೆಯಾಗಿದೆ. ಈ ಹೊಗೆ ಎಬ್ಬಿಸುವ ಶ್ರೀಮಂತರು, ಗಣಿಧಣಿಗಳು ಮಹಾಮಾನವರಿಗಷ್ಟೇ ಬದುಕುವ ಹಕ್ಕಿದೆ. ಅವರಿಗೆಂದೇ ಕಾರ್ಖಾನೆಗಳು, ಮಷಿನ್ ಗಳು, ಮೋಟಾರ್, ವಾಹನಗಳು, ಪೆಟ್ರೋಲ್ ಬಾವಿಗಳು ರೋಡ್, ಫ್ಲೈ ಓವರ್, ಮೆಟ್ರೊ ಮತ್ತೊಂದು...

ವಾಸ್ತವದಲ್ಲಿ ಕಾರ್ಖಾನೆಗಳ ಚಕ್ರ ತಿರುಗದೇ ಈ ನೆಲದಲ್ಲಿ ಯಾವ ವಸ್ತುವೂ ರೂಪುಗೊಳ್ಳೋದಿಲ್ಲ (ಕೆಲವು ಅಪವಾದಗಳಿರಬಹುದು). ಪೆಟ್ರೋಲ್ ಇಲ್ಲದೇ ಚಕ್ರ ತಿರುಗುವುದು ದುಸ್ತರ. ಒಂದಷ್ಟು ಅಮೆರಿಕ, ಜರ್ಮನಿ, ಯುರೋಪ್ ತಂತ್ರಜ್ಞರು ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಪೆಟ್ರೋಲ್ ಧಿಮಾಕಿನವರು ಸೇರಿ ರೂಪಿಸಿದ ಒಟ್ಟಾರೆ ಮಟಿರಿಯಲಿಸ್ಟಿಕ್ ಜಗತ್ತು ಸೃಷ್ಟಿ ಮಾಡಿದ ಈ ಅನಿವಾರ್ಯತೆಗಳು ಇಂದು ಅತ್ಯಂತ ಕ್ರೂರವಾದ ಸ್ಥಿತಿ ತಲುಪಿವೆ. ಪರಿಸರದ ದೃಷ್ಟಿಯಿಂದಲೂ ತುಂಬ ಆಘಾತಕಾರಿ ಬೆಳವಣಿಗೆಯಾಗಿ ಕಾಣಿಸುತ್ತಿವೆ.

ಮನುಷ್ಯನ ಮೂರು ಮುಖ್ಯ ಆವಿಷ್ಕಾರಗಳೆಂದರೆ ಚಕ್ರ, ಕರೆನ್ಸಿ ಮತ್ತು ದೇವರು. ಯಾವಾಗ ಚಕ್ರ ಆವಿಷ್ಕಾರಗೊಂಡಿತೊ ಯಂತ್ರಗಳ ಯುಗ ಶುರುವಾಯ್ತು. ಅದು ಫ್ಯಾಕ್ಟರಿ, ಗಿರಣಿ, ಬೃಹತ್ ಉದ್ಯಮಗಳ ಉಗಮಕ್ಕೆ ಹಾದಿಯಾಯ್ತು. ಬದುಕಿನ ವಿಭಿನ್ನ ನೆಲೆಗಳು ಅದರ ಆಧಾರದಲ್ಲೇ ರೂಪುಗೊಂಡವು. ಕರೆನ್ಸಿ ಕೂಡ ಆರ್ಥಿಕ ವ್ಯವಸ್ಥೆಗೆ ಬುನಾದಿ ಹಾಕಿತು. ಅದೀಗ ದೊಡ್ಡ ಸೊಕ್ಕಾಗಿ ಬೆಳೆದು ನಿಂತಿದೆ. ಆಕಾಶಕ್ಕೆ ಏಣಿ ಕಟ್ಟುವ ಸಾಹಸದ ಭಾಗಗಳಾಗಿ ವರ್ಲ್ಡ ಟ್ರೇಡ್ ಸೆಂಟರ್, ದುಬೈನ ಅತ್ಯಂತ ಎತ್ತರದ ಬುರ್ಜ ಕಟ್ಟಡ, ನ್ಯೂಯಾರ್ಕ್, ಚೀನಾದ ಗಗನಚುಂಚಿ ಇಮಾರತುಗಳು, ಜಪಾನ್, ಟೋಕಿಯೋ ಕಾಂಕ್ರೀಟ್ ಜಂಗಲ್ ಗಳು ಮನುಷ್ಯನ ಅಹಮಿಕೆಯ ದೊಡ್ಡ ಪ್ರತಿಮೆಗಳಂತಾಗಿವೆ.

ನೆಲದೊಡಲ ಕೊರೆದು ಪೆಟ್ರೋಲ್ ಬಸಿಯುವ ಅರಬರು, ಅಮೆರಿಕನ್ನರು, ಚಕ್ರಗಳ ಮೇಲೆ ಚಕ್ರಗಳ ರೂಪಿಸುವ ಜರ್ಮನಿಗಳು ಈ ಭೂಮಂಡಲವನ್ನು ಪ್ರಯೋಗಕ್ಕೆ ಬಳಸುವ ಒಂದು ವಸ್ತುವನ್ನಾಗಿಸಿದರು. ಇದರ ಆಧಾರದಲ್ಲಿ ಹುಟ್ಟಿಕೊಂಡ ಬದುಕಿನ ನೆಲೆಗಳು ಇಂದು ಇಡೀ ವಿಶ್ವಜನರನ್ನು ಪರಸ್ಪರ ಪೈಪೋಟಿ, ಈರ್ಷೆಗಳಿಗೆ ಇಳಿಸಿಬಿಟ್ಟಿವೆ. ಪ್ರತಿಷ್ಠೆ ಮತ್ತು ಅಹಮಿಕೆಯ ಉದ್ದೇಶಕ್ಕಾಗಿ ಬದುಕುತ್ತಿದ್ದೇವೆನ್ನುವ ಮಟ್ಟಿಗೆ ನಮ್ಮಲ್ಲಿ ಹುಚ್ಚು ಬೆಳೆದುನಿಂತಿದೆ. ಸೂಪರ್ ಪವರ್ ಎನ್ನುವ ಭ್ರಮೆಯಲ್ಲಿ  ಇಡೀ ಭೂಮಿಯನ್ನು ರಣರಂಗವಾಗಿಸಿಕೊಂಡಿದ್ದೇವೆ. ಎಲ್ಲೆಲ್ಲೂ ಯುದ್ಧ, ಬಾಂಬು, ರಕ್ತ! ಧರೆ ಹತ್ತಿ ಉರಿದೊಡೆ...

ಪೆಟ್ರೋಲ್ ಬಸಿಯುವುದಕ್ಕೆ ಮಿತಿಯೇ ಇಲ್ಲ, ಅದಿರಿಗಾಗಿ ನೆಲದೊಡಲ ಬಗೆಯುವುದಕ್ಕೆ ಕಡಿವಾಣವೇ ಇಲ್ಲ, ಕಟ್ಟಡಗಳ ಮೇಲೆ ಕಟ್ಟಡಗಳ ರೂಪಿಸುವ ಗಗನಚುಂಬಿ ಬದುಕಿನ ನೆತ್ತಿ ಮೇಲೆ ಕುಕ್ಕುವವರಾರು? ಯಾರ ಲಂಗು ಲಗಾಮಿಲ್ಲದ ಈ ಆಧುನಿಕ ಬದುಕಿನ ಹುಚ್ಚು ಕುದುರೆಯ ಓಟ ನಿಲ್ಲುತ್ತಲೇ ಇಲ್ಲ. ಇದರ ತುಳಿತಕ್ಕೆ ನಮ್ಮ ನಡುವಿನ ಜೀವವೈವಿಧ್ಯವೇ ನಾಶಗೊಳ್ಳುತ್ತಿದೆ. ಹೇಗೆ ಬಚಾವಾಗೋದು?

ಆಲ್ಗೀಯಂಥ ಸೂಕ್ಷ್ಮ ಜೀವಾಣುವಿಂದ ಈ ಸಕಲ ಜೀವರಾಶಿಯ ಸೃಷ್ಟಿಯಾಗಿದ್ದು. ಅದೇ ಈ ಭೂಮಿ ಮತ್ತದರ ವಾತಾವರಣಕ್ಕೆ ಹೊಸ ಭಾಷ್ಯ ಬರೆಯಿತು. ಆಗಿನಿಂದಲೇ ಬದುಕು ಎನ್ನುವ ವ್ಯವಸ್ಥೆ ರೂಪುಗೊಂಡಿದ್ದು. ಇದಕ್ಕಾಗಿ ಸಂಘರ್ಷ ಎನ್ನುವುದು ಕೂಡ ಜತೆಯಲ್ಲೇ ಜನ್ಮ ತಾಳಿತು.

ವಿಶ್ವವೆನ್ನುವ ಮನೆಯಲ್ಲಿ ಏನಿಲ್ಲ? ಆಹಾರದ ಸರಪಣಿ ನೋಡಿದರೆ ಯಾವುದಕ್ಕೂ ಅಳಿಗಾಲವಿಲ್ಲ ಮತ್ತು ಉಳಿಗಾಲವೂ ಇಲ್ಲ. ಒಂದೊಮ್ಮೆ ಎಲ್ಲ ಜೀವಗಳ ದೈತ್ಯನೆನಿಸಿಕೊಂಡಿದ್ದ ಡೈನೋಸಾರ್ ಇಂದೆಲ್ಲಿ? ಹೀಗೆ ಅಳಿವು ಉಳಿವಿನ ನಿರ್ಧಾರವನ್ನೆಲ್ಲ ಈ ಪರಿಸರವೇ ಕೈಗೊಳ್ಳುತ್ತದೆ. ಮನುಷ್ಯನಿಗೂ ಮುಂದೊಂದು ದಿನ ಡೈನೊಸಾರ್ ಗತಿಯೇ ಆಗಬಹುದೇನೋ?

ದೇವರು ಎನ್ನುವ ಕಲ್ಪನೆಯ ಹಿಂದೆ ಅದೆಷ್ಟು ಧರ್ಮ ಸಿದ್ಧಾಂತಗಳು! ಈ ಪುರೋಹಿತಷಾಹಿ ಧಿಮಾಕುಗಳಿಗಾಗಿ ಅದೆಷ್ಟು ಪೈಪೋಟಿಗಳು! ಅದಕ್ಕಾಗಿ ನಡೆಯುವ ಸಂಘರ್ಷಗಳು ಈಗ ಬಾಂಬು, ಅಣುಬಾಂಬು ರೂಪು ಪಡೆದುಕೊಂಡು ವಿಶ್ವವಿನಾಶಕ್ಕೆ ಕ್ಷಣಗಣನೆ ಎಣಿಸುತ್ತಿವೆ. ಇದರಿಂದ ಮುಕ್ತಿ ಸಾಧ್ಯವೇ?

ನಿರ್ದೇಶಕ ಯಾನ್ ಆರ್ಥಸ್ ಬರ್ಟ್ರಂಡ್ ತನ್ನ ಪುಟ್ಟ ಟೀಮಿನೊಂದಿಗೆ ಸೇರಿ ರೂಪಿಸಿದ "ಹೋಮ್" (HOME) ಸಿನಿಮಾ ಇಡೀ ಭೂಮಿಯ ದರ್ಶನ ಮಾಡಿಸುವ ಒಂದು ಅದ್ಭುತ ಯತ್ನ. ನಮಗೆ ತಿಳಿದೇ ಇಲ್ಲದ, ನೋಡಿಯೇ ಇರದ ಭೂಮಿಯ ಮುಖವನ್ನು ಅದು ತೋರಿಸುತ್ತದೆ. ನಾವಿರುವ ಭೂಮಿ ಅದೆಷ್ಟು ವಿಶಾಲ, ನಯನಮನೋಹರ ಮತ್ತು ಜೀವಂತಿಕೆಯಿಂದ ಕೂಡಿದೆ ಎನ್ನುವುದು ಆರಂಭದ ಪ್ರತಿ ದೃಶ್ಯಗಳಲ್ಲಿ ಅನ್ನಿಸಿಬಿಡುತ್ತದೆ. ಅದರ ಆಳಕ್ಕೆ ಕ್ಯಾಮೆರಾ ಇಳಿಯುತ್ತಿದ್ದಂತೆ ಭೂಮಿಯ ಮೇಲೆ ಮನುಷ್ಯ ಮಾಡಿದ ಹಲ್ಲೆಗಳು, ಮೂಡಿಸಿದ ಗಾಯಗಳು ಬೊಬ್ಬೆ ಇಡುತ್ತ ನೋವಿನ ದನಿಯಲ್ಲಿ ಚೀರಲಾರಂಭಿಸುತ್ತವೆ. ಅದು ಮನುಷ್ಯ ತನ್ನ ಉಳಿವಿಗಾಗಿ ಮಾಡಿದ ಕೃತ್ಯ. ಅದೀಗ ಇಡೀ ಭೂಮಂಡಲದ ಅವಸಾನಕ್ಕೂ ದಾರಿಯಾಗುತ್ತಿದೆ ಎನ್ನುವುದೆಲ್ಲ ಚಿತ್ರದಲ್ಲಿ ತುಂಬ ಸರಳವಾಗಿ ನಿರೂಪಣೆಗೊಂಡಿದೆ.

ದಿ ಸಿನೆಫ್ಲೆಕ್ಸ್ ಕ್ಯಾಮೆರಾ, ಎ ಗೈರೊ ಸ್ಟ್ಯಾಬಿಲೈಸ್ಡ್ ಬಾಲ್ ಬಳಸಿಕೊಂಡು ರೂಪಿಸಿದ ಈ ಚಿತ್ರ ಡಾಕ್ಯುಮೆಂಟರಿ ಚಿತ್ರ ನಿರ್ಮಾಣದ ಮೇರು ಕೃತಿಯಾಗಿ ಕಾಣಿಸುತ್ತದೆ.... ಯುದ್ಧ ಸಂದರ್ಭದಲ್ಲಿ ಎಲ್ಲೆಲ್ಲ ಬಾಂಬು ಇಕ್ಕಬೇಕೆಂದು ಗುರುತಿಸಲು ಈ ಕ್ಯಾಮರಾವೊಂದನ್ನು ಮಿಲಿಟರಿ ಉದ್ದೇಶಗಳಿಗಾಗಿ ರೂಪಿಸಲಾಗಿತ್ತು. ಮನರಂಜನಾ ಜಗತ್ತಿಗೂ ಅದರ ಬಳಕೆ ಅವ್ಯಾಹತವಾಗಿ ನಡೆಯಿತು. ಈಗ ಅದನ್ನೇ ಜಗತ್ತು ಉಳಿಸುವ ಕಾಳಜಿಗೂ ಬಳಸಿಕೊಳ್ಳಲಾಗಿದೆ. ಈ ಕ್ಯಾಮೆರಾ ವೈಬ್ರೇಷನ್ ಅನ್ನು ಸಂಪೂರ್ಣ ಅವೈಡ್ ಮಾಡುತ್ತದೆ. ಚಿತ್ರಗಳಿಗೆ ಅದ್ಭುತ ಕ್ಲ್ಯಾರಿಟಿ ನೀಡುತ್ತದೆ. ಸ್ಟೆಡಿ ಕ್ಯಾಮ್ ಅಥವಾ ಡಾಲಿ ಬಳಸಿ ಮಾಡಿದ ಚಿತ್ರೀಕರಣದಂತೆ ಭಾಸವಾಗುತ್ತದೆ. ಒಂದೊಂದು ಏರಿಯಲ್ ಶಾಟ್ ಗಳು ಕ್ರೇನ್ ಬಳಸಿ ತೆಗೆದ ಶಾಟ್ ಗಳಂತೆ ಅನಿಸುತ್ತದೆ. ಇದಕ್ಕೆ ಬಳಸುವ ಟೇಪುಗಳೂ  ವಿಶಿಷ್ಠವಾದವು. ಎಂಥ ಪ್ರತಿಕೂಲ ವಾತಾವರಣದಲ್ಲೂ ಕೈಕೊಡುವುದಿಲ್ಲ.


ಕ್ಯಾಮರಾ, ಕ್ಯಾಮರಾ ಎಂಜಿನಿಯರ್, ಕ್ಯಾಮರಾಮನ್ ಥಾಂಗುಯ್ ಥಾವುದ್ (Tanguy Thuaud), ಒಬ್ಬ ಪೈಲಟ್ ಮತ್ತು ನಿರ್ದೇಶಕ ಯಾನ್ ಆರ್ಥಸ್ ಬರ್ಟ್ರಂಡ್ ಇವರದಷ್ಟೇ ಪುಟ್ಟ ಟೀಂ ಕನಿಷ್ಠ 54 ದೇಶಗಳ ಮೇಲೆ ಹಾರಾಡುತ್ತ ಇಡೀ ವಿಶ್ವವನ್ನೇ ಸೆರೆಹಿಡಿದಿದೆ. ಚಿತ್ರ ನೋಡಿದವರಿಗೆಲ್ಲ ಬ್ರಹ್ಮಾಂಡ ದರ್ಶನದ ಅನುಭವ!

 ಕ್ಯಾಮರಾ ಮತ್ತು ಹೆಲಿಕಾಪ್ಟರ್ ವಾತಾವರಣದಲ್ಲಿ ಕೆಲವು ಅಪರಿಚಿತ ಜೀವಿಗಳು, ವಸ್ತುಗಳೊಂದಿಗೆ ಡಿಕ್ಕಿ ಹೊಡೆಯುವ ಅಪಾಯ ಎದುರಿಸುವ ಸಾಧ್ಯತೆಗಳಿದ್ದವು. ಕಾಪ್ಟರ್ ಟೇಕಾಫ್ ಆಗುವಾಗ ಮತ್ತು ಇಳಿಯುವಾಗ ಆಗಬಹುದಾಗಿದ್ದ ಅವಘಡಗಳು,... ಸಿನೆಫ್ಲೆಕ್ಸ್ ಫ್ರಂಟ್ ಲೆನ್ಸ್ ಛಿದ್ರಗೊಳ್ಳುವ ಅಪಾಯ.. ಇವೆಲ್ಲ ಸಂಭವಿಸಬಹುದಾದ ಸಾಧ್ಯತೆಗಳೂ ಇದ್ದವು. ಇದೆಲ್ಲವನ್ನು ಲೆಕ್ಕಿಸದೇ ಆ ಪುಟ್ಟ ಟೀಂ ನಡೆಸಿದ  ಚಿತ್ರೀಕರಣವೇ ಒಂದು ಅದ್ಭುತ ರೋಮಾಂಚಕ ಸಿನಿಗಾಥೆ ಎಂದರೂ ತಪ್ಪಲ್ಲ.

ತಿಪಟೂರಿನ ಗೆಳೆಯರಾದ ವಿಷ್ಣು, ಜಿ. ತಿಪ್ಪೇಸ್ವಾಮಿ, ಮನೋಹರ ಪಟೇಲ್, ಶ್ರೀಕಾಂತ್ ಇವರೆಲ್ಲ  ಪರಿಸರದ ಕಾಳಜಿಯನ್ನು ಎಲ್ಲೆಡೆ ಬಿತ್ತುವ ಕೆಲಸದಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲರು. ಅವರೊಂದಿಗೆ ನಾನೂ ಆಗಾಗ ಸೇರಿಕೊಂಡಿರುತ್ತೇನೆ. ಮೊದಲ ಬಾರಿಗೆ ಈ ಚಿತ್ರ ನೋಡಿದ್ದು ತಿಪಟೂರು ಗೆಳೆಯರೆಲ್ಲ ಏರ್ಪಡಿಸಿದ್ದ ಕೊನೆಹಳ್ಳಿಯ ಒಂದು ಶಿಬಿರದಲ್ಲಿ. ಇಂಥ ಚಿತ್ರಗಳನ್ನು ಎಲ್ಲೆಡೆ ಪ್ರದರ್ಶಿಸುವ ಮೂಲಕ ಒಂದು ದೊಡ್ಡ ಪರಿಸರ ಕಾಳಜಿ ಬಿತ್ತಬಹುದಲ್ಲವೇ? ಎಂದು ಆ ಚಿತ್ರ ನೋಡಿದಾಗ ಅನಿಸಿದ್ದನ್ನು ಚರ್ಚಿಸಿದ್ದೆವು. ಈಗದು ಕಾರ್ಯಗತಗೊಳ್ಳುತ್ತಿದೆ. ಶ್ರೀಕಾಂತ್, ಮನು, ತಿಪ್ಪಣ್ಣ ಮತ್ತಿತರ ಗೆಳೆಯರು ಸೇರಿ ಕಳೆದ ಭಾನುವಾರ (18-07-20010) ತಿಪಟೂರಿನ ಕಲ್ಪತರು ಕಾಲೇಜಿನ ಒಂದು ಸಭಾಂಗಣದಲ್ಲಿ "ಹೋಮ್" ಚಿತ್ರದ ಪ್ರದರ್ಶನ ಇಟ್ಟುಕೊಂಡಿದ್ದರು. ಪಟ್ಟಣದ ಹತ್ತಾರು ಪರಿಸರ ಕಾಳಜಿಯ ಚಿತ್ರಪ್ರೇಮಿಗಳು ಚಿತ್ರ ವೀಕ್ಷಿಸಿದರು. ನಾನೂ ಮತ್ತೆ ಚಿತ್ರ ವೀಕ್ಷಿಸಿದೆ. ನನ್ನೊಳಗೊಂದು ವಿಶ್ವವಿದೆಯಲ್ಲ ಅದರೊಂದಿಗೆ ಇಂಥದೊಂದು ಸಂವಾದ ನಡೆದೇಬಿಟ್ಟಿತು ನೋಡಿ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ