ವಿಷಯಕ್ಕೆ ಹೋಗಿ

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..
 ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು.
* * *
 ಈ ಪೀಠಿಕೆಗೆ ಹಿನ್ನೆಲೆ ಇಷ್ಟೇ - ನಾಡಿನ ಹೆಸರಾಂತ ನಾಟಕಕಾರ ಕೆ.ವೈ. ನಾರಾಯಣಸ್ವಾಮಿ ಇತ್ತೀಚೆಗೆ  'ಅನಭಿಜ್ಞ ಶಾಕುಂತಲ' ಎನ್ನುವ ರಂಗಕೃತಿ ರಚಿಸಿದ್ದಾರೆ. ಬೆಂಗಳೂರಿನ 'ಪ್ರಸಂಗ' ರಂಗತಂಡ ಈಗಾಗಲೇ ಇದನ್ನು ರಂಗಕ್ಕೆ ಅಳವಡಿಸಿ ಹತ್ತಾರು ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಮಹಾಕವಿ ಕಾಳಿದಾಸನ ವೈಯಕ್ತಿಕ ಬದುಕಿನ ಕೆಲವು ವಿವರಗಳು ಮತ್ತು ಶಾಕುಂತಲೆಯ ಪ್ರಸಂಗವನ್ನು ಇಟ್ಟುಕೊಂಡು ಸ್ತ್ರೀ-ಪುರುಷ ಅಹಮಿಕೆಗಳಾಚೆಗೆ ಮನುಷ್ಯ ಬದುಕಿನ ಸಹಜ ಸೌಂದರ್ಯ ಮತ್ತು ದುರಂತದ ಪರಿಯನ್ನು ಕಟ್ಟಿಕೊಡಲೆತ್ನಿಸಿದ ನಾಟಕ, ಸಾಹಿತ್ಯಕವಾಗಿಯೂ ಸಮರ್ಥ ರಂಗಕೃತಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಪ್ರಯೋಗದ ದೃಷ್ಟಿಯಿಂದಲೂ ವಿಭಿನ್ನ.
ನಾಟಕದ ಸಾರಾಂಶ:
 ಒಬ್ಬ ಗಂಡಸಿನ ಬದುಕಲ್ಲಿ ವಿಭಿನ್ನ ಮನಸುಗಳ ಹಲವು ಹೆಣ್ಣುಗಳು ಏಕಕಾಲಕ್ಕೆ ಬಂದು ಹೋಗುವ ಸಾಧ್ಯತೆಗಳಿವೆ. ವೈಸಾ ವರ್ಸಾ. ನಾವು ಯಾರನ್ನೋ ಬಯಸುತ್ತೇವೆ. ಯಾರೋ ನಮ್ಮಲ್ಲಿ ಬಯಕೆ ಹುಟ್ಟಿಸುತ್ತಾರೆ. ಇನ್ಯಾರೋ ನಮ್ಮನ್ನು ಗಾಢವಾಗಿ ಪ್ರೀತಿಸುತ್ತಾರೆ. ಇನ್ನು ಕೆಲವರು ಬಯಸಿದ ಪ್ರೇಮವನ್ನು ವಶ ಮಾಡಿಕೊಂಡೇ ಸಿದ್ಧ ಎಂಬ ಹಟಕ್ಕೆ ಬೀಳುತ್ತಾರೆ. ಒಟ್ಟು ಸಾಂಕೇತಿಕ ಅರ್ಥದಲ್ಲಿ ಒಬ್ಬರ ಪ್ರೇಮ ಬದುಕಿನಲ್ಲಿ ಆಗಬಹುದಾದ ಸಾಧ್ಯತೆಗಳಿವು. ಮಹಾಕವಿ ಕಾಳಿದಾಸನ ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ 'ಅನಭಿಜ್ಞ ಶಾಕುಂತಲ' ನಾಟಕದಲ್ಲಿ ಆತನ ನಿಜ ಬದುಕಿನ ಪ್ರೀತಿ, ಪ್ರೇಮ, ಸಂಬಂಧಗಳ ಕೆಲ ವಿವರಗಳು ಇಂಥದೇ ಹಟಕ್ಕೆ ಸಿಕ್ಕಿ ಒದ್ದಾಡುವ ಒಂದು ರೋಮಾಂಚನಕಾರಿ ಕಥನವಿದೆ.
* * *
ಪ್ರಯೋಗ:
  ರಂಗಪ್ರಯೋಗದ ಆಳಕ್ಕಿಳಿಯುವ ಮುನ್ನ ಕಾಳಿದಾಸ ಮತ್ತವನ ಕೃತಿಗಳ ಬಗ್ಗೆ ಕೊಂಚ ಹೇಳಲೇಬೇಕು.
'ಅಭಿಜ್ಞಾನ ಶಾಕುಂತಲೆ' ಕಾಳಿದಾಸನ ಒಂದು ಮಹತ್ವದ ಕೃತಿ. ಇದಕ್ಕೆ ಪುರಾಣಗಳ ಹಿನ್ನೆಲೆ ಇದೆ. ಸ್ವರ್ಗ, ಕಣ್ವರ ಆಶ್ರಮ, ದೂರ್ವಾಸ ಮುನಿಯ ಶಾಪ ಈ ಮೂರು ಹಂತಗಳ ಅತಿರಮ್ಯ ಕಲ್ಪನೆಯ ನೆಲೆಯಲ್ಲಿ ಕಥೆ ಸಾಗುತ್ತದೆ. ಇದರ ಒಟ್ಟು ಟೆಕ್ಸ್ಟ್  ಅಥವಾ, ಸಬ್ ಟೆಕ್ಸ್ಟ್ ಅನ್ನು ಹೇಗೆ ಗಮನಿಸಿದರೂ ದಕ್ಕುವ ಅಂತಿಮ ಸತ್ಯವೆಂದರೆ, ಪ್ರೇಮ ಪಯಣದ ಅಂತ್ಯ ಸುಖಾಂತ್ಯವೂ ಹೌದು, ದುಃಖಾಂತ್ಯವೂ ಹೌದು ಎನ್ನುವುದು. ಪ್ರೇಮ ಯಾವ ಕಾಲಕ್ಕೂ ಮನುಷ್ಯ ಬದುಕಿನ ಅಂತರಂಗದ ಜೀವದ್ರವ್ಯವೇ. ಅದು ಬಹುತೇಕವಾಗಿ ಸುಖಾಂತ್ಯವನ್ನೊ ಅಥವಾ ದುಃಖಾಂತ್ಯವನ್ನೋ ಆಹ್ವಾಯಿಸಿಕೊಳ್ಳುವುದೇ ಆಗಿರುತ್ತದೆ. ಬದುಕಿನ ಸಾರ್ಥಕತೆಯತ್ತ ನಮ್ಮನ್ನು ಒಯ್ಯಬಲ್ಲ ಸಾಮರ್ಥ್ಯವೂ ಪ್ರೇಮಕ್ಕಿದೆ.
 ಕಾಳಿದಾಸನ ಕಾಲ ಜೀಸಸ್ ಗೂ ಮುಂಚಿನದು ಎನ್ನುತ್ತದೆ ಇತಿಹಾಸ. ವ್ಯಾಸ, ವಾಲ್ಮೀಕಿ ಪರಂಪರೆಯ ಕವಿ ಈತ ಎಂದು ದಾಖಲಿಸಲಾಗಿದೆ. ವಾಲ್ಮೀಕಿ ರಾಮಾಯಣದ ಮೂಲಕ, ವ್ಯಾಸ ಮಹಾಭಾರತದ ಮೂಲಕ ಹೇಳಹೊರಟಿದ್ದು ಮನುಷ್ಯನ ಪ್ರೀತಿ-ಪ್ರೇಮ-ಕಾಮ-ಮತ್ಸರ-ದ್ವೇಷವನ್ನೇ. ಪ್ರೇಮ-ಕಾಮಗಳ ನಡುವೆ ಆಕಸ್ಮಿಕ ತಿರುವುಗಳು ಅಥವಾ ಆಹ್ವಾನಿಸಿಕೊಂಡ ದ್ವೇಷಾಸೂಯೆಗಳು ಮನುಷ್ಯ ಪ್ರೀತಿ ಬದುಕನ್ನು ಟ್ರಾಜಿಡಿಯತ್ತ ಕೊಂಡೊಯ್ಯುತ್ತವೆ ಎನ್ನುವುದು ರಾಮ-ರಾವಣರ ಯುದ್ಧದ ಮೂಲಕವೂ ಕಂಡುಕೊಳ್ಳಬಹುದು. ಹೆಣ್ಣು ಮತ್ತು ಅಧಿಕಾರಕ್ಕಾಗಿ ನಡೆಯುವ ಸಂಘರ್ಷಗಳಲ್ಲಿ ಹತಾಶೆಯ ಹತಾರುಗಳಿಗೆ ಮಾತು ಬಂದುಬಿಟ್ಟರೆ ನೆತ್ತರಿನ ಹೊಳೆ ಹರಿಯುತ್ತದೆ ಎನ್ನುವುದು  ಕುರುಕ್ಷೇತ್ರದ ಹಿಂಸೆಯ ಮೂಲಕವೂ 'ಧರ್ಮ' ದರ್ಶನವಾಗಬಲ್ಲುದು. ಇಂಥ ಮನೋಧರ್ಮವನ್ನೇ ಕಾಳಿದಾಸ, ಮನುಷ್ಯ ಸಂಬಂಧದ ನೆಲೆಯಲ್ಲಿ ಸಹಜ ಪ್ರೀತಿ ಮತ್ತು ಮತ್ಸರಗಳನ್ನರಸುತ್ತ ಒಟ್ಟು ಪ್ರೀತಿಯ ಟ್ರಾಜಿಡಿಯನ್ನು ತನ್ನ ಕಾವ್ಯಗಳಲ್ಲಿ ಅತ್ಯಂತ ನವಿರಾಗಿ, ರಕ್ತಪಾತವಿಲ್ಲದೇ ಹೇಳಿಬಿಡುತ್ತಾನೆ. ಕಾಳಿದಾಸ ಸಂಪ್ರದಾಯಸ್ಥ ಕವಿ. ಕ್ರಾಂತಿಕಾರಿ ವಿಚಾರಧಾರೆಯವನಲ್ಲ. ವೈದಿಕ ಪುನರುತ್ಥಾನಕ್ಕೆ ಶ್ರಮಿಸಿದ ಕವಿ ಎಂದೂ ಈತನನ್ನು ವಿಮರ್ಶಕರು ಗುರುತಿಸಿದ್ದಾರೆ.
 ಸಂಪ್ರದಾಯಕ್ಕೆ ಜೋತುಬೀಳುವ ಕಾಳಿದಾಸ ವಸ್ತುವಿಗಾಗಿ ಪುರಾಣಗಳನ್ನೇ ಆಶ್ರಯಿಸಿದ್ದನ್ನು ಆತನ ಮೂರೂ ನಾಟಕಗಳಲ್ಲಿ ಕಾಣಬಹುದು. ಆತ ಕಾಲಕ್ಕೆ ಅನುಗುಣವಾಗಿ ಪುರಾಣದ ವಸ್ತುವನ್ನು ಅಡಾಪ್ಟ್ ಮಾಡಿಕೊಳ್ಳುತ್ತಿದ್ದ ಎನ್ನುವುದು ಅವನ ರಂಗಕೃತಿಗಳ ಅಧ್ಯಯನದಿಂದ ಸ್ಪಷ್ಟವಾಗುತ್ತದೆ. ಆತನ ಕೃತಿಗಳ ಬಗ್ಗೆ ಬಂದ ಹಲವಾರು ವಿಮರ್ಶೆಗಳಲ್ಲಿಯೂ ಇದನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದು.
 ಕಾಳಿ ಮಾತೆ ಅವನಿಗೊಲಿದಳು, ಅವನ ನಾಲಗೆ ಮೇಲೆ ಬುದ್ಧಿ, ಪ್ರತಿಭೆ ಬರೆದಳು. ಅವನ ಕಾವ್ಯ ಒಂದು ವರ. ದೈವವೇ ಅವನ ಮೂಲಕ ಕಾವ್ಯ ಬರೆಯಿತು ಎನ್ನುವುದೆಲ್ಲ ಆತನನ್ನು ದೈವೀಕರಿಸುವ ಒಂದು ಯತ್ನ. ದೈವಿಚ್ಛೆಯ ಮುಂದೆ ಅವನ ಪ್ರತಿಭೆ, ಜೀವನಾನುಭವ ಏನು ಮಹಾ? ಎನ್ನುವಂಥ ಮನೋಧರ್ಮಕ್ಕೆ ಬಂದು ನಿಲ್ಲುವಂಥ ನಡೆಯೂ ಅನಿಸುತ್ತದೆ. ಕಾಳಿದಾಸನ ಒಟ್ಟು ಸಾಹಿತ್ಯ ರಚನೆಯ ಹಿಂದೆ ವೈದಿಕ ಪುನರುತ್ಥಾನದ ಮನೋಧರ್ಮ ಕೆಲಸ ಮಾಡಿದೆ ಎನ್ನುವ ಬಲವಾದ ಆರೋಪ ಆತನ ಬಗ್ಗೆ ಬಂದ ವಿಮರ್ಶೆಗಳಲ್ಲಿ ಗಮನಾರ್ಹವಾಗಿದೆ. ಕಾಳಿದಾಸನ ಮೂರೂ ನಾಟಕಗಳ ವಸ್ತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮತ್ತು ಆತನ ವಸ್ತು ಯಾವ ಆಶಯಗಳನ್ನು ಆತುಕೊಂಡಿದೆ ಎನ್ನುವುದನ್ನು ಗಮನಿಸುತ್ತಾ ಹೋದರೆ, ಆತ ವೈದಿಕ ಪರಂಪರೆಯ ನಿಲುವುಗಳಿಗೆ ಹೆಚ್ಚು ಹತ್ತಿರ ಎಂದೆನಿಸಿಬಿಡುತ್ತದೆ. ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತ, ವ್ಯಾಕರಣ, ಛಂದಸ್ಸು, ಅಲಂಕಾರ, ಶಾಸ್ತ್ರ... ಹೀಗೆ ವೈದಿಕ ಪರಂಪರೆಯ 'ಪರಿಪೂರ್ಣ ಶಿಕ್ಷಣ'ವನ್ನು ಕಾಳಿದಾಸ ಹೊಂದಿದ್ದ. ಈ ಹಿನ್ನೆಲೆಯಲ್ಲೇ ವೈದಿಕ ಪರಂಪರೆಯ ಪುನರುತ್ಥಾನಕ್ಕೆಂದೇ ಆತ ಈ ನೆಲೆಗಳಿಂದಲೇ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ವಿಮರ್ಶಕರು ಆರೋಪಿಸುತ್ತಾರೆ. ಆತ ನಾಟಕಕ್ಕೆ ಆಯ್ದುಕೊಂಡ ವಸ್ತುಗಳು ಇದನ್ನು ಪುಷ್ಠೀಕರಿಸುತ್ತವೆ ಕೂಡ.
 ಅಭಿಜ್ಞಾನ ಶಾಕುಂತಲದ ಕಥೆ ಮಹಾಭಾರತದಲ್ಲಿದೆ. ಶಾಕುಂತಲೆ ಮೇನಕೆಯ ಮಗಳು. ಕಾಳಿದಾಸ ವೇದ-ಪುರಾಣಗಳಿಂದ ಪ್ರೇರಿತನಾಗಿದ್ದ ಎನ್ನುವುದಕ್ಕೆ ಆತನ ಇಂಥ ಕಥಾವಸ್ತುಗಳಲ್ಲೇ ಬಹುದೊಡ್ಡ ಸಾಕ್ಷಿ ದೊರಕುತ್ತದೆ. "ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು" ಎನ್ನುವ ಲೋಕರೂಢಿಯಂತೆ ಆತ ಕಾಲಕ್ಕೆ ತಕ್ಕ ಪಂಡಿತ. ಅಷ್ಟೇ ಅಲ್ಲ ಆತ ವೈದಿಕ ಸಂಪ್ರದಾಯಕ್ಕೆ ತಕ್ಕಂತೆ ವೈಚಾರಿಕ ನಿಲುವುಗಳನ್ನು ತನ್ನ ಕಾವ್ಯದ ಮೂಲಕ ವ್ಯಕ್ತಪಡಿಸುತ್ತಿದ್ದ ಎಂದೂ ವಿಮರ್ಶಕರು ಆತನ ಬಗ್ಗೆ ದೂರಿದ್ದಾರೆ. ಆತನ ನಾಟಕಗಳಲ್ಲಿ ಬರುವ ಎಲ್ಲ ಪಾತ್ರಗಳು ಹಿಂದೂ ಸಂಪ್ರದಾಯಸ್ಥ ಪಾತ್ರಗಳೇ.

* * *

 ನಮ್ಮ ಪ್ರಸ್ತುತ ದೇಶ-ಕಾಲದಲ್ಲಿ ವೈದಿಕ ಪುನರುತ್ಥಾನದ ಯತ್ನಗಳು ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕವಾಗಿ  ಅತ್ಯಂತ ವ್ಯವಸ್ಥಿತವಾಗಿಯೇ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ವೈದಿಕ ಪುನರುತ್ಥಾನದ ಯತ್ನವೆಂದು ವಿಮರ್ಶೆ ಗುರುತಿಸಿದ ನಾಟಕಕಾರನನ್ನೇ (ಕಾಳಿದಾಸ) ಪ್ರೊಟಗಾನಿಸ್ಟ್ ಆಗಿಟ್ಟುಕೊಂಡು ರಚಿಸಿದ 'ಅನಭಿಜ್ಞ ಶಾಕುಂತಲ'ವನ್ನು ಕೆ.ವೈ. ನಾರಾಯಣಸ್ವಾಮಿ ನಮ್ಮ ಮುಂದಿಟ್ಟಿದ್ದಾರೆ. ಬೆಂಗಳೂರಿನ ಪ್ರಸಂಗ ತಂಡ ಇದನ್ನು ರಂಗದ ಮೇಲೆ ಪ್ರಸ್ತುತ ಪಡಿಸಿದೆ. ಈ ಕೃತಿ/ಪ್ರಯೋಗ ವೈದಿಕ ಪುನರುತ್ಥಾನದ ಆರೋಪಗಳ ಕಾಳಿದಾಸನನ್ನು ಆರೋಪದಿಂದ ಮುಕ್ತಗೊಳಿಸುವಂಥದೋ, ಅಥವಾ ಅದರಿಂದ ಕಳಚಿಕೊಂಡು ಆತ ಹಾಡಿಗರ ಅಸಲಿ ದೇಸಿ ಪ್ರತಿಭೆ ಎನ್ನುವುದು ಮುಖ್ಯ ಎಂದು ನಿರೂಪಿಸುವಂಥ ಯತ್ನವೋ... ಕೊಂಚ ಕನಫ್ಯೂಷನ್. ಈ ರಂಗಸಾಹಸಕ್ಕೆ ಇನ್ನೂ ಕೊಂಚ ಕ್ಲಾರಿಟಿ ಬೇಕಿತ್ತು. ಅಂತೂ ನಾಟಕಕಾರನ ಧೈರ್ಯ ಮೆಚ್ಚುವಂಥದೇ.


 ಕಾಳಿದಾಸನ ನಾಟಕಗಳಿಂದಲೇ ಕಾಳಿದಾಸನನ್ನು ಗ್ರಹಿಸಿ ಅವನನ್ನೇ ಕೇಂದ್ರವಾಗಿಟ್ಟುಕೊಂಡು ಅವನ ವೈಯಕ್ತಿಕ ಬದುಕಿನ ವಿವರಗಳನ್ನು ರೋಮ್ಯಾಂಟಿಕ್ ನೆಲೆಯಲ್ಲಿ ವಿಭಿನ್ನವಾಗಿ ಕಟ್ಟಿಕೊಡುವ ನಾರಾಯಣಸ್ವಾಮಿ ಅವರ ವಿಶಿಷ್ಠ ಎನ್ನಬಹುದಾದ ಈ ರಂಗನಡೆ ಮೆಚ್ಚುಗೆಯಾಗುವಂಥದೇ. ನಾಟಕದಲ್ಲಿ ಕಾಳಿದಾಸ ಹೀರೋ ಅಲ್ಲವಾದರೂ ಟ್ರಾಜಿಡಿ ಕಿಂಗ್ ಆಗಿ ಕಾಣಿಸಿಕೊಳ್ಳುತ್ತಾನೆ. ಕಾಳಿದಾಸನ ಪ್ರೀತಿಗಾಗಿ ಹಂಬಲಿಸುವ ಹೆಣ್ಣುಗಳೇ ಇಲ್ಲಿ ನಿಜವಾದ ಹೀರೋ. ಅವರಿಗೆ ತಮ್ಮ ಪ್ರೇಮ ನಿವೇದನೆಯ ಬಗ್ಗೆ ಮತ್ತು ಅದನ್ನು ಬದುಕುವ ಬಗ್ಗೆ ದಿಟ್ಟತನವಿದೆ.
 ಜೀವನಸಂಗೀತ ಹೇಗೆ ಪ್ರೇಮ, ಕಾಮವೆಂಬ ಶೃತಿ ಲಯಗಳ ಮೇಲೆ ನಿಂತಿದೆಯೋ, ಗಂಡು ಬದುಕಿನ ಅಸಲಿ ಶೃತಿ- ಲಯ ಹೆಣ್ಣುಗಳ ಕೈಯಲ್ಲೇ ಇದೆ ಎನ್ನುವುದು ಪ್ರಯೋಗದ ಪ್ರಮುಖ ಒಳದನಿ. ಹೀಗಾಗಿ ಇದು ಜನಪ್ರಿಯ ಸ್ತ್ರೀವಾದದೆಡೆಗೆ ಹೆಚ್ಚು ವಾಲಿಕೊಂಡಿದೆ. ಇದರ ನಡುವೆಯೂ ಸ್ತ್ರೀ-ಪುರುಷ ಎನ್ನುವ ವಿಂಗಡನೆಯ ಹಂಗಿಲ್ಲದ ಒಟ್ಟು ಮನುಷ್ಯ ಬದುಕಿನ ಪ್ರೇಮ-ಕಾಮದ ಅಸಲಿ ಜೀವಸೆಲೆಯ ಹುಡುಕಾಟಕ್ಕೂ ತನ್ನದೇ ಮಿತಿಯಲ್ಲಿ ಪ್ರೇರಣೆಯಂತೆಯೂ ಅನಿಸುತ್ತದೆ.

 ಕಾಳಿದಾಸನದು ಬಹುಮುಖಿ ವ್ಯಕ್ತಿತ್ವ. ಆತ ನಿರುಪದ್ರವಿ ಮತ್ತು ಅಷ್ಟೇ ಕಿಡಿಗೇಡಿ. ಆದರ್ಶವಾದಿ. ವೇದ-ಪುರಾಣ ಪಂಡಿತನೂ ಹೌದು. ಆತನ ಲೋಕಾನುಭವ ಗಮನಾರ್ಹ. ಅತ್ಯಂತ ಮೃದು ಹೃದಯೀ ಅಷ್ಟೇ ಸೊಗಸುಗಾರ. ಮುಖ್ಯವಾಗಿ ಆತ ಸಂಪ್ರದಾಯಸ್ಥ. ಕ್ರಾಂತಿಕಾರಕ ವಿಚಾರಗಳನ್ನು ಕೂಡ ಆತ ಸೌಮ್ಯವಾಗೇ ಹೇಳುವಂಥವನು. ತಾನು ಬೆಳೆದ ಹಾಡಿಗಳಿಂದ ಬಲವಂತದಿಂದಲೇ ದೂರಾಗಿ ರಾಜಾಶ್ರಯ ಸೇರಿದ ಮೇಲಂತೂ ಆತ ಯಾರಿಗೂ ನೋವುಂಟು ಮಾಡದಂತೆ ಬರೆಯುವುದನ್ನು ಕಲಿತುಬಿಟ್ಟಿದ್ದನೆನಿಸುತ್ತದೆ. ರಾಜಾಶ್ರಯಗಳಲ್ಲಿ ಇದು ಅನಿವಾರ್ಯ. ನಾಟಕದಲ್ಲಿ ಪ್ರಮುಖವಾಗಿ ಕಾಣಿಸುವ ಕಾಳಿದಾಸನ ಜೀವನಶೈಲಿ ಇದು. ಆದರೆ ಕಾಳಿದಾಸನ ಇಂಥ ವೈಯಕ್ತಿಕ ಬದುಕಿನ ವಿವರಗಳು ಅಧಿಕೃತವಾಗಿ ಎಲ್ಲಿಯೂ ದಾಖಲಾಗಿಲ್ಲ.. 

  ಪ್ರಯೋಗದಲ್ಲಿ ಕಾಶ್ಮೀರದ ಹಾಡಿಗಳ ಬದುಕನ್ನು ಕಟ್ಟಿಕೊಟ್ಟ ಬಗೆ ಸೊಗಸಾಗಿದೆ. ಹಾಡಿಗರು ತಮ್ಮ ನೋವು ನಲಿವುಗಳನ್ನು ಹೇಳುವಾಗೆಲ್ಲ ಅದು ಸಂಗೀತದಂತೆನಿಸುತ್ತದೆ. ಅದು ಅವರ ಒಟ್ಟು ಬದುಕಿನ ಶೃತಿ ಲಯದ ಸಂಕೇತ. ಹಾಡಿಗರ ಎದೆಯ ಹಾಡುಗಳೆಲ್ಲ ಶಾಸ್ತ್ರೀಯ ಸಂಗೀತದಂತಲ್ಲ. ಅವರ ಲೋಕವೇ ಸಂಗೀತಮಯವಾದ್ದರಿಂದ ಅದು ಸಹಜ ಲೋಕಸಂಗೀತ. ಇಂಥ  ಹಾಡಿಯ ಸಹಜ ಸೌಂದರ್ಯ ಮತ್ತು ಸರಳ ಬದುಕಿನ ನಡುವೆ ಕಾಳಿದಾಸನ ಅನುಭವ ಜಗತ್ತು ತೆರಕೊಳ್ಳುತ್ತದೆಯಾದರೂ ಅದು ಮುಂದೆ ಆರ್ಯನ್ ಸಂಸ್ಕೃತಿಯ ಭಾಷೆ, ಆಚಾರ, ವಿಚಾರಗಳ ಕಾವ್ಯದೆಡೆಗೆ ಸಾಗುತ್ತದೆ. ಕ್ರಮೇಣವಾಗಿ ಕಾಳಿದಾಸನ ಕಾವ್ಯ  ಆಸ್ಥಾನದ ಆಶಯಗಳನ್ನು ಬದುಕಬೇಕಾದ ಅನಿವಾರ್ಯತೆಗೆ ಸರಿದು ನಿಲ್ಲುತ್ತದೆ. ಇಂಥ ಅತ್ಯಂತ ಸಾಹಿತ್ಯಕ ಸೂಕ್ಷ್ಮಗಳ ನೆಲೆಯಲ್ಲಿ ನಾಟಕದ ವಸ್ತು ಗಟ್ಟಿ ಎನಿಸುತ್ತದೆ.
  ಒಂದು ಹಂತದಲ್ಲಿ ಸರಳ, ಸಹಜ ಮನೋಧರ್ಮದ ಕವಿ ಕಾಳಿದಾಸ ರಾಜಾಶ್ರಯದ ಮುಜುಗರ ಮತ್ತಿತರ ಸಂದಿಗ್ಧತೆಯಿಂದ ಮುಕ್ತನಾಗುವ ನಿರ್ಧಾರ ಕೈಗೊಳ್ಳುತ್ತಾನೆ. ಕಾವ್ಯ ಬಲವಂತದ ಮದುವೆಯಾಗಲಾರದು ಎನ್ನುವುದು ಈ ಹಂತದಲ್ಲೇ ಅವನಿಗೆ ಮನದಟ್ಟಾಗಿರುತ್ತದೆ. ಒತ್ತಡಕ್ಕೆ ಕಾಯ ಒಲಿದರೂ ಮನಸು ಒಲಿಯಬಲ್ಲುದೇ? ಎನ್ನುವುದು ಆತನ ನಿಲುವಾಗಿಬಿಡುತ್ತದೆ. ನಾಟಕದ ನಿಜವಾದ ಆತ್ಮ ತೆರಕೊಳ್ಳಲು ಹವಣಿಸಲಾರಂಭಿಸುವುದು ಇಲ್ಲಿಂದಲೇ. ಕಾಳಿದಾಸನ ಪ್ರೇಮ ಬದುಕಿನಲ್ಲಿ ಇಂಥದೇ ಸಂದಿಗ್ಧತೆ ಮತ್ತು ಒತ್ತಡಗಳಿರುತ್ತವೆಯಾದ್ದರಿಂದ ನಾಟಕದ ಸಾಹಿತ್ಯಕ ಅಂಶ ಮತ್ತು ಕಾಳಿದಾಸನ ನಿಜ ಬದುಕಿನ ವಿವರಗಳ ಸೆಲೆ ಪ್ರಯೋಗದ ಈ ಹಂತದಲ್ಲಿ ಒಟ್ಟೊಟ್ಟಿಗೆ ಪುಟಿದೇಳಲಾರಂಭಿಸುತ್ತದೆ. ಒಂದೆಡೆ ನಾಡದೊರೆಯಾದವನು ಕಾಳಿದಾಸನನ್ನು ಆಸ್ಥಾನಕವಿ ಎನ್ನುವ ಬಂದೀಖಾನೆಗೆ ದೂಡಲು ಹವಣಿಸುತ್ತಾನೆ. ಮತ್ತೊಂದೆಡೆ ಕಾಳಿದಾಸನ ವೈಯಕ್ತಿಕ ಬದುಕಲ್ಲಿ ಬಂದ ಹೆಣ್ಣುಗಳು ಪ್ರೀತಿ-ಪ್ರೇಮ-ಕಾಮದ ಬಲೆ ಹಿಡಿದು ಬೆನ್ನು ಹತ್ತಿರುತ್ತಾರೆ.
 ಆದರೆ ಇಂಥ ಬಂಧನ ಮತ್ತು ಬಲೆಗಳಿಗೆ ಬಲಿಯಾಗುವುದನ್ನು ಅವನ ಹೃದಯ ಅಥವಾ ಮನೋಧರ್ಮವೇ ಒಪ್ಪದು. (ಕಾಳಿದಾಸನ ಬಹುತೇಕ ಕೃತಿಗಳು ನಿಸ್ಸಂಧೇಹವಾಗಿ ನಿರೂಪಲೆತ್ನಿಸುವುದು ಸಹಜ ಮತ್ತು ನಿಷ್ಕಲ್ಮಶ ಪ್ರೇಮವನ್ನು ಎನ್ನುವುದನ್ನು ಇಲ್ಲಿ ಗಮನಿಸಬೇಕು). ಪ್ರೀತಿ-ಪ್ರೇಮ ಎರಡು ಹೃದಯಗಳ ನಡುವಿನ ಹರವು. ಒಲವ ನದಿಯಲ್ಲಿ ಈಜಾಡಿದ ಪ್ರೇಮಿಗಳ ನೆನಪು ತೀರದ  ಕಲ್ಲುಬಂಡೆಗಳೆದೆಯಲ್ಲೂ ಕಾವ್ಯವಾಗಿ ಅರಳುವಂಥದು. ಪ್ರೀತಿಗೆ ಅಂಥ ಆವರಿಸಿಕೊಳ್ಳುವ, ಪ್ರಭಾವಿಸುವ ಶಕ್ತಿ ಇದೆ ಎನ್ನುವುದು ಆತನ ನಿಲುವು. ಆದರೂ ಅದೇಕೋ ಅವನ ಕಾವ್ಯದಲ್ಲಿ ಫೇಟಲಿಸಂಗೆ ಪ್ರೇಮಿಗಳದೇ ತಲೆದಂಡ!


 ಕಾಳಿದಾಸ ನಾಟ್ಯಶಾಸ್ತ್ರದ ಮಿತಿಗಳನ್ನು ಒಪ್ಪಿಕೊಂಡ ಕವಿ. ರಂಗದ ಮೇಲೆ ಸಾವನ್ನಾಗಲಿ ಇಲ್ಲವೇ ಚುಂಬಿಸುವುದನ್ನಾಗಲಿ ನಾಟ್ಯಶಾಸ್ತ್ರ ಒಪ್ಪುವುದಿಲ್ಲ. ಕಾಳಿದಾಸನ ನಾಟಕಗಳು ನಾಟ್ಯಶಾಸ್ತ್ರದ ಮಿತಿಗಳಲ್ಲೇ ರೂಪುಗೊಂಡಂಥವು. ಆದರೆ ಕೆ.ವೈ. ನಾರಾಯಣಸ್ವಾಮಿ ಅವರ 'ಅನಭಿಜ್ಞ ಶಾಕುಂತಲ' ರಂಗಪ್ರಯೋಗದಲ್ಲಿ ಚುಂಬನ ಇಲ್ಲದಿದ್ದರೂ ಪ್ರಣಯಚೇಷ್ಟೆ ಇದೆ. ಅದು ಹೆಚ್ಚು ರೋಮ್ಯಾಂಟಿಕ್ ಆಗಿದೆ, ಆಪ್ತವಾಗಿದೆ. ಕೊಲೆಯ ದೃಶ್ಯದ ಮೂಲಕ ರಂಗದ ಮೇಲೆ ಸಾವು ಕೂಡ ಸಂಭವಿಸುತ್ತದೆ.  ಪ್ರೀತಿ-ಪ್ರೇಮದಲ್ಲಿ ಘಾಸಿಗೊಂಡ ಹೃದಯಗಳ ಮೇಲೆಲ್ಲ ತನ್ನವರ ಚೂರಿಗಳ ಕುರುಹುವಲ್ಲದೇ ಮತ್ತೇನಿರಲು ಸಾಧ್ಯ ಎನ್ನುವಂತೆ ಆ ಸಾವಿನ ದೃಶ್ಯ ಕಾಡುತ್ತದೆ.
 ದೇವತೆ ತನ್ನ ಕೈಯಿಂದಲೇ ಕಾಳಿದಾಸನ ನಾಲಗೆಯ ಮೇಲೆ ಪ್ರತಿಭೆ ಬರೆದಳೆನ್ನುವ ದಂತಕಥೆ ನಾಟಕ ನೋಡುವಾಗ ನೆನಪಿಗೆ ಬಂದಿತು. ಆತನಿಗೆ ದೇವತೆ ಒಲಿದಿದ್ದು ಜ್ಞಾನದ ಹಸಿವಿಗಾಗಿ ಮಾತ್ರ, ವೈಯಕ್ತಿಕ ಬದುಕಿನ ಗೆಲುವಿಗಾಗಿ ಅಲ್ಲ! ಅಂದರೆ ದೇವತೆ ಕೂಡ ತನ್ನಿಚ್ಛೆಯಂತೆ ಕುಣಿಸಲು ಮತ್ತು ಚೇಷ್ಟೆಗೆಂದು ಮನುಷ್ಯನನ್ನು ಸೃಷ್ಟಿಸಿದಳೇ ಎನ್ನುವ ಪ್ರಶ್ನೆ ಕಾಡುತ್ತದೆ. ಆದರೂ ಕೈಯಲ್ಲಿ ಒಂದು ಲೇಖನಿ, ಒಂದಷ್ಟು ಓಲೆಗರಿಗಳು ಇದ್ದಮಾತ್ರಕ್ಕೆ ಬುದ್ಧಿಪೂರ್ವಕವಾಗಿ ಯಾರೂ ಮಹಾಕವಿಯಾಗಬಹುದಾ ಎನ್ನುವ ಗುಮಾನಿ ಕೂಡ ಮುಖ್ಯವೇ.

ಕಾಳಿ ಶಕ್ತಿ ದೇವತೆ. ದುಷ್ಟ ಶಿಕ್ಷೆ ಅವಳ ಧರ್ಮ. ಕಾಳಿದಾಸ ಅವಳ ಪರಮ ಭಕ್ತ. ವಿಚಿತ್ರವೆಂದರೆ ಆತನಲ್ಲಿ ದುಷ್ಟ ಶಿಕ್ಷೆಯ ಯಾವ ಶಕ್ತಿಸ್ವರೂಪವೇ ಇಲ್ಲ! ತನ್ನ ಪ್ರೀತಿ ಜಗತ್ತಿನಲ್ಲಿ ಆತ ಸ್ವತಃ ಬಲಿಪಶುವಾಗುತ್ತಾನೆ. ವಿಧಿ ಅವನ ಶತ್ರು. ಅದನ್ನು ಗೆಲ್ಲುವುದು ಅವನಿಂದ ಸಾಧ್ಯವಿಲ್ಲ. ಅವನೊಳಗಿನ ಕಾಳಿ ಅಸಹಾಯಕಿ!

 ಸೆರೆಸಿಕ್ಕ ಕಾಳಿದಾಸನ ಒಂದು ಹೆಣ್ಣು ಆತನೊಂದಿಗಿನ ತನ್ನ ಪ್ರೇಮವನ್ನು ನೆನೆದು ಪರಿತಪಿಸುವ ದೃಶ್ಯ ಇಡೀ ನಾಟಕಕ್ಕೆ ಮನೋಜ್ಞತೆಯನ್ನು ಕಟ್ಟಿಕೊಟ್ಟಿದೆ.  ಕ್ಯಾರೆಕ್ಟರ್ ಪ್ರತಿನಿಧಿಸುವ ಮನಸ್ಥಿತಿಯನ್ನು ಅಭಿನಯದ ಮೂಲಕ ಅಕ್ಷರಶಃ ಬದುಕಿದ್ದು ಆ ಪಾತ್ರಧಾರಿಯೊಬ್ಬರೇ. ಕಾಳಿದಾಸನ ಮೂರು ವೇಷಧಾರಿ ಹೆಣ್ಣುಗಳು ಒಂದೆಡೆ ಸೇರುವ ದೃಶ್ಯ ಮನೋಜ್ಞವಾಗಿದೆ. ಇಂಥ  ದಟ್ಟ ಅನುಭವ ಕೊಡುವ ಮತ್ತಷ್ಟು ದೃಶ್ಯಗಳು ಪ್ರಯೋಗಕ್ಕೆ ಬೇಕಿತ್ತು ಅನಿಸಿತು. ಮತ್ತೊಂದು ದೃಶ್ಯದಲ್ಲಿ ಕಾಳಿದಾಸನ ಪ್ರೀತಿಸುವ ಹೆಣ್ಣು ಒಬ್ಬ ವಿವಾಹಿತೆ. ಆ ಹೆಣ್ಣು ತನ್ನ ಸಂಸಾರದಲ್ಲಿ ಎದುರಿಸುವ ದುಗುಡ ಮತ್ತು ತನ್ನ ಪ್ರೇಮಕಥೆಯನ್ನು ನಿವೇದಿಸಿಕೊಳ್ಳುವ, ಒಪ್ಪಿಕೊಳ್ಳುವ ಸ್ಥಿತಿ ಮತ್ತು ಆಕೆಯ ಮಾವ, ಪ್ರೀತಿಸಿದ ಜೀವವನ್ನು ಸೇರುವುದೇ ನಿಜವಾದ ಮಾನವೀಯತೆ ಎಂದು ಸೊಸೆಯ ಭಾವನೆಗೆ ಗೌರವ ನೀಡುವರ್ಥದಲ್ಲಿ ಕೊಟ್ಟ ತೀರ್ಪು ಖುಷಿಕೊಡುವಂಥ ಸನ್ನಿವೇಶಗಳು. ಆ ನಿಟ್ಟಿನಲ್ಲಿ ಇದೊಂದು ಅರ್ಥಪೂರ್ಣ ದೃಶ್ಯ. ಇದಲ್ಲದೇ ಮೂವರು ವೇಷಧಾರಿ ಹೆಣ್ಣುಗಳು ಒಂದೆಡೆ ಸೇರಿದ ಮತ್ತೊಂದು ದೃಶ್ಯದಲ್ಲಿ ನ್ಯಾಯಪಂಚಾಯ್ತಿ ಮಾಡುವವರು ನೀಡುವ ತೀರ್ಪು ಕೂಡ ನ್ಯಾಯ ವ್ಯವಸ್ಥೆಗೊಂದು ಮಾದರಿಯಂತಿದೆ.
  ಕೊನೆಯಲ್ಲಿ ಕಾಶ್ಮೀರದಿಂದ ಕೊಲಂಬೊದವರೆಗೂ ಶಾಕುಂತಲ ಪಾತ್ರ ಹಬ್ಬುತ್ತದೆ. ಉಂಗುರ ಕಳೆದುಹೋದುದಕ್ಕೆ ಪರಿತಪಿಸುವ, ಆ ದೆಸೆಯಿಂದ ರಾಜಕುಮಾರ ದುಷ್ಯಂತನಿಂದ ಗೇಲಿಗೊಳಗಾಗುವ ಮತ್ತು ಸಾಕುತಂದೆ ಕಣ್ವರ ಪಾರಂಪರಿಕ ಅಸಹಾಯಕತೆಯನ್ನು ಎದುರಿಸುವ ಶಾಕುಂತಲೆ ಬಗ್ಗೆ ಈಗಿನ ಕಾಲಘಟ್ಟದಲ್ಲಿ ನಿಂತು ನೋಡಿದರೆ ನಿಜಕ್ಕೂ ಮರುಕ ಹುಟ್ಟುತ್ತದೆ.  
 ಒಟ್ಟಾರೆ ರಂಗಪ್ರಯೋಗ ದೃಶ್ಯರೂಪವಾಗಿ ಶ್ರೀಮಂತವಾಗಿದೆ. ಆದರೆ, ಪ್ರೊಟಗನಿಸ್ಟ್ ಕಾಳಿದಾಸನ ಪಾತ್ರಕ್ಕೆ ಟ್ರೀಟಮೆಂಟ್ ಅಂಡರ್ ಪ್ಲೇ ಥರ ಅನಿಸಿತು. ಕಾಳಿದಾಸ ಸಂಭಾವಿತನೇ ಇದ್ದಿರಬಹುದು. ಆದರೆ ತೀರ ಸಪ್ಪೆಯಾಗಿದ್ದನೆ ಎನ್ನುವ ಅನುಮಾನ  ಪಾತ್ರಧಾರಿಯ ಆಂಗಿಕ ಅಭಿನಯ ಗಮನಿಸಿದಾಗ ಕಾಡಿತು. ಕಾಳಿದಾಸನ ಪಾತ್ರ ಜೀವಂತಿಕೆಯನ್ನಾಗಲಿ, ಚೈತನ್ಯವನ್ನಾಗಲಿ ಸೂಸಲೇ ಇಲ್ಲ. ಕೆಲವು ನಿರ್ದೇಶಕರು ಒಮ್ಮೊಮ್ಮೆ ಹೀಗೆ ನಟನನ್ನು ಮತ್ತು ಕ್ಯಾರೆಕ್ಟರ್ ಪ್ರಭಾವವನ್ನು ಗೌಣವಾಗಿಸಿ ತಮ್ಮ ಆಲೋಚನೆಯ ಪರ್ಸೆಪ್ಷನ್ ಅನ್ನು ಪರಿಣಾಮಕಾರಿಯಾಗಿಸಲು ಯತ್ನಿಸುತ್ತಾರೆ. ಒಟ್ಟಾರೆ ನಾಟಕದ ವಸ್ತು, ಸಾಹಿತ್ಯಕವಾಗಿ ಸತ್ವಯುತ ಡೈಲಾಗ್, ಸಂಗೀತ ಮತ್ತು ಅದ್ದೂರಿ ರಂಗವಿನ್ಯಾಸ, ಇವಷ್ಟರಿಂದಲೇ ಸುಂದರ ಆಟ ಕಟ್ಟಿಕೊಡಲು ನಿರ್ದೇಶಕರು ಹೆಣಗಿದ್ದು ಸ್ಪಷ್ಟ.


 ನಾರಾಯಣಸ್ವಾಮಿ ಅವರ ಲಿಟರರಿ ಸೆನ್ಸಿಬಿಲಿಟಿ ಮೂಸೆಯಿಂದ ರೂಪುಗೊಂಡ 'ಅನಭಿಜ್ಞ ಶಾಕುಂತಲ' ಹೆಚ್ಚು ಸಾಹಿತ್ಯಿಕವಾಗಿದೆ. ಆಟಕ್ಕೆ ಬೇಕಾದ ನಾಟಕೀಯ ಅಂಶ ಕಥೆಯ ಫ್ಲೆಕ್ಸಿಬಿಲಿಟಿಯಲ್ಲೇ ಹೇರಳವಾಗಿದೆ. ಶಾಕುಂತಲೆಯ ಕಥೆ ಪ್ರೇಕ್ಷರಿಗೆ ಗೊತ್ತಿರುವ ಕಾಡು. ಹೀಗಾಗಿ ನಾಟಕಕಾರನ ಕೆಲಸವೂ ಸುಲಭ. ಶಾಕುಂತಲೆ ಇಂಡಿಯನ್ ರಂಗಭೂಮಿಗೆ ಅತ್ಯಂತ ಪರಿಚಿತ ಕ್ಯಾರೆಕ್ಟರ್. ಕಾಳಿದಾಸ ಅತ್ಯಂತ ಪರಿಚಿತ ನಾಟಕಕಾರ. ಈ ಬೇಸ್ ಇಟ್ಟುಕೊಂಡು ಕಥಾವಸ್ತುವನ್ನು ಕೊಂಚ ವಿಭಿನ್ನ ನೆಲೆ ಮತ್ತು ಸಾಹಿತ್ಯಿಕ ವಿಮರ್ಶೆಯ  ಆಯಾಮದಲ್ಲಿ  ನಾಟಕವನ್ನು ಕಟ್ಟಿಕೊಟ್ಟ ನಾಟಕಕಾರರ ನಿಲುವು ಮೆಚ್ಚುಗೆಯಾಗುವಂಥದು.
 ಆದರೆ, ನಿರ್ದೇಶಕನಿಗೆ ಕೃತಿಯ ಅಂತಃಸತ್ವವನ್ನು ತನ್ನದೇ ದೃಷ್ಟಿಕೋನದಿಂದ ನೋಡುವುದಕ್ಕೆ ಪ್ರಯೋಗದಲ್ಲಿ ಅಷ್ಟು ಸಾಧ್ಯವಾಗಿಲ್ಲ ಅನಿಸುತ್ತದೆ. ಶಾಕುಂತಲೆ, ಕಾಳಿದಾಸ, ಮಲ್ಲಿಕಾ, ಗಂಧರ್ವಕನ್ಯೆ... ಇವೆಲ್ಲವನ್ನು ಅತಿರಮ್ಯ ಕಲ್ಪನೆಯಲ್ಲಿ ಕ್ಯಾರೆಕ್ಟರ್ ಗಳನ್ನಾಗಿಟ್ಟುಕೊಂಡು ದೃಶ್ಯ ಹೆಣೆಯುವುದು ಕಷ್ಟವೆನಿಸಲಾರದು. ಆದರೂ ಪ್ರತಿ ದೃಶ್ಯಗಳಿಗೆ ತಮ್ಮದೇ ಕಲಾತ್ಮಕ ಸ್ಪರ್ಶ ನೀಡಲು ನಿರ್ದೇಶಕ ಪ್ರಕಾಶ್ ಶೆಟ್ಟಿ ಯತ್ನಿಸಿದ್ದಾರೆ. ಕರಾವಳಿಯ ಅಚ್ಚುಕಟ್ಟು ಮನಸ್ಥಿತಿಯ ರಂಗವಿನ್ಯಾಸ (ವಿಠಲ ಅಪ್ಪಯ್ಯ) ನಾಟಕವನ್ನು ಹೆಚ್ಚು ಆವರಿಸಿಕೊಂಡುಬಿಟ್ಟಿದೆ. ಬೆಳಕು ವಿನ್ಯಾಸ, ಸಂಗೀತ ಕೆಲವೆಡೆ ಹದವಾಗಿ ಸೇರಿದ್ದರಿಂದ ಪ್ರಯೋಗ ದೃಶ್ಯಕಾವ್ಯದಂತಾಗಲು ಹವಣಿಸುವುದು ಸ್ಪಷ್ಟವಾಗಿದೆ. ನಾರಾಯಣ ರಾಯಚೂರ್ ಸಂಗೀತ ಯಾವುದೋ ಹಳೆಯ ಹಿಂದಿ ಹಾಡು, ಭಜನ್ ನೆನಪಿಸುವ ಬದಲು ಇನ್ನಷ್ಟು ಲೋಕಸಂಗೀತವಾಗಿದ್ದರೆ ಚೆನ್ನಿತ್ತು. ಹಡಪದ ಅವರ ಹಾಡುಗಾರಿಕೆ ಪಕ್ವತೆಯಿಂದ ಕೂಡಿದೆ. ಹೀಗೆ ಎಲ್ಲವೂ ವೆಲ್ ಅಸೆಂಬಲ್ಡ್ ಆದ ಒಂದು ಸುಂದರ ಪ್ರೊಡಕ್ಷನ್ ಎನಿಸಿತು. ಆದರೆ ಮುಖ್ಯವಾಗಿ ನಟನೆ ಮತ್ತು ಆ ಮೂಲಕ ನಾಟಕದ ಕ್ಯಾರೆಕ್ಟರ್ ಗಳ ಭಾವಜಗತ್ತು ಅಷ್ಟು ಸಂವಹನಕ್ಕಿಳಿಯಲಿಲ್ಲ. ನಾಟಕ ನಟನ ಮಾಧ್ಯಮ ಎನ್ನುವ ಮನೋಧರ್ಮದಿಂದ ದೂರವೇ ಉಳಿದುಬಿಟ್ಟಂತೆನಿಸಿತು. ಪ್ರಯೋಗದ ಒಟ್ಟಂದದಲ್ಲಿ ನಟನೆ ಎನ್ನುವುದು ನೆಪವಾಗಿ ಸಂಗೀತ, ದೃಶ್ಯವೈಭವ, ಸಾಹಿತ್ಯವೈಭವಗಳೇ ಆವರಿಸಿಕೊಂಡಿದ್ದರಿಂದ ಪ್ರಯೋಗದ ಕೆಲ ದೃಶ್ಯಗಳು, ಸಂಭಾಷಣೆಯ ಕೆಲ ಸಾಲುಗಳು ಮಾತ್ರ ನೆನಪಾಗುಳಿದವು. ರಂಗಸಾಹಿತ್ಯದ ಆಶಯ ಮತ್ತು ನಾಟಕೀಯತೆ ಹಿಡಿದಿಟ್ಟುಕೊಳ್ಳಲಿಲ್ಲ. 
 ರಂಗಭೂಮಿ ಬಹುಶಿಸ್ತೀಯ ಮಾಧ್ಯಮ. ನಿರ್ದೇಶಕ, ತಂತ್ರಜ್ಞರು.. ಹೀಗೆ ಎಲ್ಲರ ಪ್ರತಿಭೆಗೂ ಇಲ್ಲಿ ಹೊಸ ಆಯಾಮ ದಕ್ಕುತ್ತಿದೆ. ಇದೆಲ್ಲ ಉತ್ತಮ ಬೆಳವಣಿಗೆಯೇ. ಆದರೆ ನಟವರ್ಗ ಎನ್ನುವುದು ನಿರ್ದೇಶಕನ ಕಾಲಾಳುವಿನಂತಲ್ಲವಲ್ಲ.


 ಕರ್ಟನ್ ಕಾಲ್: ಬಹು ಸಮಯದ ನಂತರ ಇಂಥದೊಂದು ರಮ್ಯ ಪ್ರಯೋಗ, ಬಿಗ್ ಪ್ರೊಡಕ್ಷನ್ ನೀಡಿದ ಕೃಷ್ಣ ರಾಯಚೂರ್, ನೆಪೊಲಿಯನ್, ಶೆಟ್ಟಿ ಮತ್ತಿತರರ ಸಾಂಗತ್ಯದ ಪ್ರಸಂಗ ತಂಡಕ್ಕೆ ಅಭಿನಂದನೆಗಳು. ಹೊಸ ನಾಟಕಗಳ ಬರ ನೀಗಿಸುವಲ್ಲಿ ಗೆಳೆಯ ಕೆ.ವೈ. ನಾರಾಯಣ ಸ್ವಾಮಿ ವಹಿಸುತ್ತಿರುವ ಬಹುಮುಖ್ಯವಾದ ಕಾಳಜಿಗೆ ಹಾಗೂ ನಿರ್ದೇಶನದ ಪಟ್ಟುಗಳನ್ನು ಮತ್ತಷ್ಟು ಹದಗೊಳಿಸಿಕೊಳ್ಳಬಲ್ಲ ಭರವಸೆ ಹುಟ್ಟಿಸುವ ಶೆಟ್ಟಿಯವರಿಗೆ, ತಂಡದ ಉತ್ಸಾಹಿ ಯುವ ರಂಗಕರ್ಮಿಗಳಿಗೆ, ಬೆಳಕು ವಿನ್ಯಾಸ, ರಂಗವಿನ್ಯಾಸದಲ್ಲಿ ಶ್ರಮಿಸಿದ ಹುಡುಗರಿಗೆ ಮತ್ತು ಸಂಗೀತ ಮೇಳದವರಿಗೆ ಅಭಿನಂದನೆಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...