ವಿಷಯಕ್ಕೆ ಹೋಗಿ

ಕಲೆ ಮತ್ತು ನೈತಿಕತೆ


ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.
  ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮಾಜೋ–ರಾಜಕೀಯ ಆಯಾಮವೂ ಹೌದು. ಅದರಲ್ಲಿ ಆತನ ಸಾಮಾಜಿಕ ಮತ್ತು ಮುಖ್ಯವಾಗಿ ರಾಜಕೀಯ ಪ್ರಜ್ಞೆಯೂ ಕೂಡಿರುತ್ತದೆ. ಕಲಾವಿದ ಇಂಟಲೆಕ್ಚುಯಲ್‌ ಕೂಡ. ಇಂಟಲೆಕ್ಟ್‌ ಅನ್ನುವುದು ಯಾವುದೋ ಒಂದು ಕ್ಷೇತ್ರದ ಸ್ವತ್ತಲ್ಲ.. ಕಲಾವಿದರು ಇದನ್ನು ತುಂಬ ಮುಖ್ಯವಾಗಿ ಗಮನಿಸಬೇಕು. ಚಿತ್ರ ಕಲಾವಿದರು ತಾವು ಸೃಜಿಸುವ ಯಾವ ಅಭಿವ್ಯಕ್ತಿಯೂ ಬುದ್ಧಿಜೀವಿಯೊಬ್ಬನ ಬೌದ್ಧಿಕ ಪ್ರತಿಪಾದನೆ, ಕವಿಯೊಬ್ಬನ ಮಹಾಕಾವ್ಯದಂತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
  ಆತ್ಮಸಮ್ಮಾನ (ಡಿಗ್ನಿಟಿ) ಎನ್ನುವುದು ತುಂಬ ಮುಖ್ಯ. ಅದಿಲ್ಲದೇ ಹೋದರೆ ಯಾವ ಪ್ರಕಾರದ ಕಲಾವಿದನಿಗೂ ಯಾವುದೇ ಮಾನ್ಯತೆ ದಕ್ಕುವುದಿಲ್ಲ. ಕಲಾವಂತಿಕೆ ದೈವದತ್ತ ಎನ್ನುವುದು ಮೂಢ ನಂಬಿಕೆ. ಕಲೆ ನಮ್ಮೊಳಗಿನ ಸುಪ್ತ ಪ್ರಜ್ಞೆ. ಅದನ್ನು ಕಂಡುಕೊಳ್ಳಬೇಕು. ಅದನ್ನೇ ಜೀವಸೆಲೆಯಾಗಿಟ್ಟುಕೊಂಡು ಸುತ್ತಲ ಜಗತ್ತನ್ನು ಕಾಣುವ ಯತ್ನ ನಡೆಸಬೇಕು. ತನ್ನೊಳಗಿನ ಜಗತ್ತು ಹೊರ ಜಗತ್ತಿನೊಂದಿಗೆ ಅನುಸಂಧಾನ ನಡೆಸ ತೊಡಗಿದರೆ ಅಲ್ಲೊಂದು ತಾತ್ವಿಕ ಸಂಘರ್ಷ ನಡೆಯುತ್ತದೆ. ಅದನ್ನೇ ಬುದ್ಧಿಯೊಂದಿಗೆ, ವಿವೇಕದೊಂದಿಗೆ ಮತ್ತು ಜೀವನದರ್ಶನದೊಂದಿಗೆ ಸಮೀಕರಿಸಿ ಅಭಿವ್ಯಕ್ತಿಸುವುದು ಸಾಧ್ಯವಾಗಬೇಕು. ಆಗ ಅದೊಂದು ಬರಿಯ ಕಲಾಕೃತಿಯಾಗದೇ  ವಿಶಿಷ್ಟ ಅನುಭೂತಿಯಾಗಬಲ್ಲುದು. ನಿರಂತರ ಅಧ್ಯಯನದಿಂದ ರೂಪಿಸಲ್ಪಟ್ಟಿದ್ದಾದರೆ ಅದೊಂದು ವೈಜ್ಞಾನಿಕ ಸಂಶೋಧನೆಯೇ ಆಗಬಲ್ಲುದು. ಹೊಸ ಬೆಳಕೇ ಆಗಬಹುದು. ಈ ಅರ್ಥದಲ್ಲಿ ಕಲೆ ಮತ್ತು ನೈತಿಕತೆ ಬೇರಲ್ಲ. ಅವೆರಡೂ ಒಂದೇ.
  ಕಲೆ ಮತ್ತು ನೈತಿಕತೆ ಇವೆರಡೂ ಪ್ರತ್ಯೇಕ ಅಸ್ತಿತ್ವ ಅಥವಾ ಸ್ವಾಯತ್ತ ಅಂಶಗಳು. ಒಂದು ಕಲಾಕೃತಿಯಲ್ಲಿನ ಕಲಾವಂತಿಕೆ ಮತ್ತು ಅದು ಸೃಜಿಸುವ ತತ್ವಾದರ್ಶ ಅಥವಾ ಅನುಭೂತಿ ಮುಖ್ಯವೇ ಹೊರತು ಅದನ್ನು ಸೃಷ್ಟಿಸಿದ ಕಲಾವಿದನ ಒಟ್ಟು ಮನೋಧರ್ಮ ಮುಖ್ಯವಾಗಲಾರದು ಎನ್ನುವ ವಾದವೂ ಇದೆ.
  ನಾವು ಕಲೆಯನ್ನು ಹೊಗಳುವಾಗ ಅಥವಾ ಗುರುತಿಸುವಾಗ ಕಲಾವಿದನನ್ನು ಕೂಡ ಪರಿಗಣಿಸುತ್ತೇವೆ. ನನ್ನ ಅತ್ಯಂತ ನೆಚ್ಚಿನ ಪೇಂಟರ್‌ ವ್ಯಾನ್‌ ಗೋ. ಆತ ವಾಸಿಸಿದ ಮನೆ, ಆತನ ಓರಿಜಿನಲ್‌ ಪೇಂಟಿಂಗ್ಸ್‌ ಎಲ್ಲವನ್ನು ನಾನು ಅಮ್‌ಸ್ಟರ್‌ಡಂನಲ್ಲಿ ಕಂಡು ಖುಷಿಪಟ್ಟಿದ್ದೇನೆ. ಆತ ಸುಳಿದಾಡಿದ ಜಾಗವನ್ನು ಸ್ಪರ್ಶಿಸಿ ಹರ್ಷಿಸಿದ್ದೇನೆ. ವ್ಯಾನ್‌ ಗೋ ರಚಿಸಿದ ಸನ್‌ ಫ್ಲವರ್‌, ಗೋಧಿ ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತ ಮಹಿಳೆಯರು, ವಿಂಡ್‌ ಮಿಲ್‌ನಂಥ ಕಲಾಕೃತಿಗಳನ್ನು ನೋಡುವಾಗ ಆ ಕಲಾಕೃತಿಗಳಷ್ಟೇ ಕಲಾವಿದ ವ್ಯಾನ್‌ ಗೋ ಕೂಡ ಮುಖ್ಯವಾಗಿ ಬಿಡುತ್ತಾನೆ. ಆಗ ನಿಸ್ಸಂಧೇಹವಾಗಿ ಅವನು ಕಲಾಕೃತಿಯ ಮೂಲಕ ಪ್ರತಿಪಾದಿಸುವ ನೆಲ ಸಂಸ್ಕೃತಿ, ಕಾಯಕ ಸಂಸ್ಕೃತಿ ಮತ್ತು ಕಲೆಯ ಮೂಲಕ ಗೌರವಿಸಿದ ಆ ಗೌರವ ಭಾವದ ಮೌಲ್ಯವೂ ಮುಖ್ಯವಾಗುತ್ತದೆ. ಯಾವುದೇ ಕಲಾಕೃತಿ ಮೌಲ್ಯವನ್ನೇ ಸೃಜಿಸದಿದ್ದರೆ ಅದು ನಮ್ಮೊಳಕ್ಕೆ ಅಥವಾ ನೋಡುಗನ ಒಳಕ್ಕೆ  ಪ್ರವೇಶ ಪಡೆಯುವುದಾದರೂ ಹೇಗೆ? ಆ ಮೌಲ್ಯವನ್ನು ಬಾಳದ ಕಲಾವಿದ ನಮ್ಮ ಮನಸಿನೊಳಕ್ಕೆ ಸುಪ್ತ ಪ್ರಜ್ಞೆಯಾಗುಳಿವುದಾದರೂ ಹೇಗೆ?
 Art is virtue ಕಲೆ ನೈತಿಕ ಅಥವಾ ಧರ್ಮ ಎಂದು ಅರಿಸ್ಟಾಟಲ್‌ ಹೇಳುತ್ತಾನೆ. Art is not necessity of the nature ಹಾಗೆ necessity ಎನ್ನುವ ಕಾರಣಕ್ಕೆ man cannot exercise his freedom, man cannot act except in the desire for happiness.
 ಕಲಾವಿದನಲ್ಲೂ ಒಂದು ಪ್ರಜ್ಞೆ ಕೆಲಸ ಮಾಡುತ್ತದೆ. ಅದು ಕಲಾತ್ಮಕ ಪ್ರಜ್ಞೆ. ಒಬ್ಬ ವಿಜ್ಞಾನಿ ಮತ್ತು ವೈದ್ಯನೊಳಗೆ ಹೇಗೆ ವೈಜ್ಞಾನಿಕ ಪ್ರಜ್ಞೆ ಕೆಲಸ ಮಾಡುತ್ತದೋ ಹಾಗೆ. ಯಾವುದೇ ಕಲಾವಿದನಿಗೆ ಅವನ ಕಲಾತ್ಮಕ ಪ್ರಜ್ಞೆ ಅವನನ್ನು ಕಲೆಗೆ ದ್ರೋಹ ಬಗೆಯುವುದರಿಂದ ತಡೆಯುತ್ತದೆ. ಕಲೆಗೆ ಸಂಬಂಧಿಸಿದ ಅಪರಾಧದಿಂದ ಅವನನ್ನು ತಡೆಯುತ್ತದೆ. ತುಂಬ ಸಹಜ ಅದು. ಏಕೆಂದರೆ ಕಲಾ ವಲಯದಲ್ಲಿ ಅಂಥದೊಂದು ದ್ರೋಹಕ್ಕೆ ಮತ್ತು ಪಾಪಕ್ಕೆ ಮಾನ್ಯತೆ ದಕ್ಕುವುದಿಲ್ಲ ಎನ್ನುವ ಅರಿವು ಕಲಾವಿದನಿಗಿರುತ್ತದೆ.
  ಜಾರ್ಜ್‌ ರೌಲ್ಟ್ ಒಬ್ಬ ಮಹಾನ್‌ ಕಲಾವಿದ. ಆ ಕಲಾವಿದನಿಗೆ ‘ನಿಮ್ಮ ಕಲೆಯ ನೈಪುಣ್ಯ ಮತ್ತು ಫಾರಂ ಹಳತಾಯಿತು. ಅದು ತುಂಬ ಆದರ್ಶವನ್ನೊ, ತತ್ವವನ್ನೋ ಪ್ರತಿಪಾದಿಸುತ್ತದೆ. ಈಗಿನ ಯುಗದಲ್ಲಿ ಅದು ನಡೆಯುವುದಿಲ್ಲ. ನಿಮ್ಮ ಕಲಾವಂತಿಕೆ, ಶೈಲಿ ಮತ್ತು ಒಟ್ಟಾರೆ ಅಪ್ರೋಚ್‌ ಅನ್ನು ಬದಲಾಯಿಸಿಕೊಳ್ಳಿ. ರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಡಲು ಬೇಕಾದ ಮಾನದಂಡಕ್ಕೆ ಸೂಕ್ತವಾಗಿ ಪೇಂಟಿಂಗ್‌ ಮಾಡಿ. ಜನ ಇಷ್ಟಪಡುವಂತೆ ಮತ್ತು ಭಾರಿ ಬೆಲೆಗೆ ಕೊಂಡುಕೊಳ್ಳುವಂತೆ ಪೇಂಟಿಂಗ್‌ ಮಾಡಿ. ಆ ಮೂಲಕ ನಿಮ್ಮ ಕುಟುಂಬದ ಸದಸ್ಯರು ಆರ್ಥಿಕ ದಿವಾಳಿ ಆಗುವುದನ್ನು ತಪ್ಪಿಸಿ. ಅವರನ್ನು ಬಡತನದಿಂದ ಮೇಲಕ್ಕೆತ್ತಲು ನೀವು ನಿಮ್ಮ ಪೇಂಟಿಂಗ್‌ ಪಟ್ಟುಗಳನ್ನು ಬದಲಿಸಿಕೊಳ್ಳಿ’ ಎಂದು ಸಲಹೆ ಕೊಟ್ಟು ನೋಡಿ. ಆತ ಖಂಡಿತವಾಗಿ ಹೀಗೆ ಉತ್ತರಿಸುತ್ತಾನೆ..– ಗೆಟ್‌ ಔಟ್‌. ಹೊರಟು ಹೋಗು. ನನ್ನನ್ನು ನನ್ನ ಪಾಡಿಗೆ ಬಿಟ್ಟು ತೊಲಗಾಚೆ. ಯು ಫೂಲ್‌. ನಿನ್ನ ಈ ಸಲಹೆಗಳು ನನ್ನ ಕಲಾತ್ಮಕ ಪ್ರಜ್ಞಾವಂತಿಕೆಗೇ ಅವಮಾನ. ಒಬ್ಬ ಕಲಾವಿದನಾಗಿ ನನಗೆ ನಾನೇ ಮಾಡಿಕೊಳ್ಳುವ ಮೋಸ. ನನ್ನ ಕುಟುಂಬ ಸಾಕುವುದಕ್ಕೆ ಅವರನ್ನು ಬಡತನದಿಂದ ಪಾರು ಮಾಡುವುದಕ್ಕೆ ಅವರನ್ನು ಹಸಿವಿನಿಂದ ಉಳಿಸಿಕೊಳ್ಳುವುದಕ್ಕೆ ನಾನು ಅವರಿಗಾಗಿ ಕೃಷಿಕ ಆಗಬಲ್ಲೆ. ಕಾರ್ಮಿಕನಾಗಬಲ್ಲೆ. ಹೌಥರ್ನ್‌ ಅಥವಾ ಹೆನ್ರಿ ರೌಸೆಒ ತರಹ ಕಲೆಯನ್ನೇ ಬಿಟ್ಟುಬಿಡಬಲ್ಲೆ. ಆದರೆ ನಾನು ನನ್ನ ಕಲಾವಂತಿಕೆ ಮತ್ತು ನನ್ನದೇ ದೃಷ್ಟಿಕೋನ ಬಿಟ್ಟು ಯಾರದೋ ಕಾರಣಕ್ಕೆ ಅದನ್ನು ಬದಲಾಯಿಸಿಕೊಳ್ಳಲಾರೆ. ಆ ಮೂಲಕ ನನ್ನ ಕಲಾ ಕೆಲಸವನ್ನೇ ಹಾಳು ಮಾಡಲಾರೆ’ ಎಂದು ಬಿಡುತ್ತಾನೆ. ಇದು ಕಲಾವಿದನೊಬ್ಬನ ನೈತಿಕತೆ.
 ಪಿಕಾಸೊ ಕೂಡ  ಅಂಥ ಸಂದರ್ಭದಲ್ಲಿ ನೀಡುವ ಉತ್ತರ ಇದೇ ನಿಲುವಿನದ್ದಾಗಿರುತ್ತದೆ.. ‘ನಾನು ಕಲಾವಿದ. ನಿನ್ನ ಮನೆಯ ಗೋಡೆಗಳನ್ನು ಅಲಂಕಾರ ಮಾಡುವ ಡೆಕೊರೇಟರ್‌ ಅಲ್ಲ. ನಿನಗೆ ನಿನ್ನ ವಿರುದ್ಧವೇ ಒಂದು ಅಸ್ತ್ರ ಮಾಡಿಕೊಡುವಂಥವ’ ಎಂದೆಲ್ಲ ಸಿಡಿಯಲಾರನೇ  ಪಿಕಾಸೋ?  ಇಂಥ ನೆಲೆಯಿಂದ ಹೊಮ್ಮಿದ, ನಮ್ಮೊಳಗಿನ ಅಹಂಕಾರವನ್ನು ಬಗ್ಗು ಬಡಿಯಬಲ್ಲ  ಅದೆಷ್ಟು ಕಲಾಕೃತಿಗಳು ಈ ಜಗತ್ತಿನಲ್ಲಿ ಸೃಷ್ಟಿಯಾಗಿಲ್ಲ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ