ವಿಷಯಕ್ಕೆ ಹೋಗಿ

ಬಂದ್ ದರವಾಜಾ



ಸೂರ್ಯ ಕ್ಷಿತಿಜದ ಬಗಲಿನಿಂದ ಬಿಡಿಸಿಕೊಂಡ. ಮಗುವಿನ ಲಾಲನೆ ಪಾಲನೆ, ಆಹಾ... ಅದೊಂದು ಸ್ನಿಗ್ಧತೆ, ಲಾಲಿ, ಒಂದರ್ಥದ ಅಮಲು ಮತ್ತು ಬೆಳಕು. ನಾನು ಮುಖಮಂಟಪದಲ್ಲಿ ವಿರಾಜಮಾನನಾಗಿದ್ದೆ. ಮಗು ಬಾಗಿಲಿನಿಂದ ಇಣುಕಿತು.  ಮುಗುಳ್ನಕ್ಕು ಬಾ ಎಂದು ಸನ್ನೆ ಮಾಡಿದೆ. ಬಳಿ ಬಂದ ಮಗು ತೊಡೆಯೇರಿ ಕುಳಿತುಕೊಂಡಿತು. ಜೇಬಿನಿಂದ ಪೆನ್ನು ಜಗ್ಗೋದು, ಕಾಗದಕ್ಕೆ ಕೈಹಾಕೋದು.. ಹೀಗೆ ಅದರ ತಮಾಷೆಗಳು ಗರಿಗೆದರತೊಡಗಿದವು. ಮಗುವನ್ನು ಕೆಳಕ್ಕಿಳಿಸಿಬಿಟ್ಟೆ. ಪಾಪ ಅದು ಮೇಜಿನ ಒಂದು ಕಾಲು ಹಿಡಿದುಕೊಂಡು ನನ್ನನ್ನೇ ದಿಟ್ಟಿಸುತ್ತ ನಿಂತುಕೊಂಡಿತು. ಮನೆಯೊಳಕ್ಕೆ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!...
ಚಿಂವ್ ಚಿಂವ್ ಎನ್ನುತ್ತಾ ಗುಬ್ಬಿಯೊಂದು ಎದುರಿನ ಕಿಟಕಿ ಸರಳಿಗೆ ಹಾರಿ ಬಂತು. ಮಗುವಿಗೆ ಮನರಂಜನೆಯ ಹೊಸ ಆಟಿಗೆಯೊಂದು ಬಂದಂತೆ. ಖುಷಿಗೊಂಡ ಮಗು ಗುಬ್ಬಚ್ಚಿಯತ್ತ ಜೋರಾಗಿ ಕೈಬೀಸಿತು. ಗುಬ್ಬಚ್ಚಿ ಕೊಂಚವೂ ವಿಚಲಿತಗೊಳ್ಳಲಿಲ್ಲ. ಆಹಾ... ಗರಿಯಂಥ ಈ ಆಟಿಕೆ ವಸ್ತು ಇನ್ನು ನನ್ನ ಕೈಸೇರಿದಂತೆಯೇ ಎಂದುಕೊಂಡಿತು ಮಗು. ತನ್ನೆರಡೂ ಕೈಗಳನ್ನೆತ್ತಿ ಬ್ಬಾ ಬ್ಭಾ ಎಂದು ಗುಬ್ಬಚ್ಚಿಯನ್ನು ಹತ್ತಿರಕ್ಕೆ ಕರೆಯಲೆತ್ನಿಸಿತು. ಗುಬ್ಬಚ್ಚಿ ಚಿಂವ್ ಗುಟ್ಟುತ್ತ ಪುರ್ ಎಂದು ಹಾರಿ ಹೋಯಿತು. ನಿರಾಶಗೊಂಡ ಮಗು ಅಳತೊಡಗಿತು. ಬಾಗಿಲಿನತ್ತ ತಿರುಗಿಯೂ ನೋಡಲಿಲ್ಲ. ಬಾಗಿಲು ತೆರೆದೇ ಇತ್ತು!...
* * *
ಹಲ್ವಾದ ತಾಜಾ ತಾಜಾ ಸಿಹಿಗಾಳಿ ತೇಲಿ ಬಂತು. ಮಗುವಿನ ಮುಖ ಅರಳತೊಡಗಿತು. ಮಿಠಾಯಿ ಗಾಡಿಯವ ಹತ್ತಿರದ ಹಾದಿಯಲ್ಲಿ ಸಾಗುತ್ತಿದ್ದ. ಮಗು ವಿನಯದ ಕಂಗಳಲ್ಲಿ ನನ್ನನ್ನೇ ನೋಡತೊಗಿತು. ಮಿಠಾಯಿ ಗಾಡಿಯವ ದೂರ ದೂರ ಸಾಗುತ್ತಿದ್ದಂತೆ ಮಗುವಿನ ವಿನಯದ ಕಂಗಳು ರೋಷಕ್ಕೆ ತಿರುಗತೊಡಗಿದವು. ಮಿಠಾಯಿ ಗಾಡಿ ಮರೆಯಾಗುತ್ತಿದ್ದಂತೆ ಮಗುವಿನ ರೋಷದ ಕಂಗಳು ಸಿಡಿಯತೊಡಗಿದವು. ಮುಖದಲ್ಲಿ ಗಟ್ಟಿ ದನಿಯ ಬೇಡಿಕೆಯೊಂದು ಮಾರ್ದನಿಸತೊಡಗಿತು.
ಆದರೆ, ಹ್ಞೂ ಹ್ಞೂ  ನಾನು ಹಾದಿ ಬೀದಿಯ ಮಿಠಾಯಿಯನ್ನು ಮಕ್ಕಳಿಗೆ ಕೊಡೊದೇ ಇಲ್ಲ.  ಹೀಗಾಗಿ ಮಗುವಿನ ನಿವೇದನೆ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಮುಂದಿನದನ್ನು ಯೋಚಿಸುತ್ತಾ ಮತ್ತಷ್ಟು ವಿಚಲಿತನಾದೆ. ಈ ಬಗ್ಗೆ ಅಮ್ಮನ ನ್ಯಾಯಾಲಯದಲ್ಲಿ ಅಪೀಲು ಮಾಡುವ ಅವಶ್ಯಕತೆಯ ಬಗ್ಗೆ ಮಗು ಯೋಚಿಸಿತೋ ಏನೋ ನಾನರಿಯೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲೆಲ್ಲ ಮಕ್ಕಳು ಅಮ್ಮನ ಮುಂದೆ ಅಪೀಲು ಮಾಡುತ್ತವೆ. ಮಗು ಬಹುಶಃ ಫಿರ್ಯಾದು ನೀಡುವುದನ್ನು ಮುಂದೂಡಿರಬಹುದೆಂದುಕೊಂಡೆ. ಆದರೆ, ಅದು ಬಾಗಿಲಿನತ್ತ ಸಾಗುವ ಗೋಜಿಗೇ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!...
* * *
ಅಳುವ ಕಂದನ ಕಣ್ಣೊರೆಸುವ ಯೋಚನೆಯಿಂದ ಫೌಂಟೆನ್ ಪೆನ್  ಅನ್ನು ಮಗುವಿನ ಕೈಗಿತ್ತೆ.  ಸಂಭ್ರಮಗೊಂಡಿತು. ಜಗತ್ತಿನ ಸುಖದ ಗಣಿಯೇ ಕೈಸೇರಿತೇನೋ! ಅದರ ಇಂದ್ರಿಯಗಳೆಲ್ಲ ಹೊಸ ಸಮಸ್ಯೆಯ ಪರಿಹಾರಕ್ಕಾಗಿ ಸಾಂಘಿಕ ಯತ್ನಕ್ಕಿಳಿದಂತೆನಿಸಿತು. ಅಚಾನಕ್ ಬೀಸಿದ ಜೋರು ಗಾಳಿಗೆ ಬಾಗಿಲು ಧಡ್ ಅಂತ  ಮುಚ್ಚಿಕೊಂಡ ಭಾರಿ ಸದ್ದೊಂದು ಮಗುವಿನ ಕಿವಿಗಪ್ಪಳಿಸಿತು. ಬೆಚ್ಚಿದ ಮಗು ಬಾಗಿಲಿನೆಡೆ ಗಾಬರಿಯಿಂದ ನೋಡಿತು. ಅದರ ಸಂಭ್ರಮದ ಕ್ಷಣಗಳು ಕ್ಷಣಾರ್ಧದಲ್ಲೇ ಕಳೆದುಹೋದವು.
ಅದೀಗ ಫೌಂಟೆನ್ ಪೆನ್  ಅನ್ನು ಎಸೆದು ಜೋರಾಗಿ ಅಳುತ್ತ, ಗಾಬರಿಯಿಂದ ಬಾಗಿಲಿನತ್ತ ಧಾವಿಸಿತು.  ಯಾಕೆಂದರೆ ಬಾಗಿಲು ಮುಚ್ಚಿಕೊಂಡಿತ್ತು!
__________________________________________________________________________________
* ಮಗುವಿನ ತಾಯಿಪ್ರೇಮ ಬಯಕೆಯ ತೀವ್ರತೆಯನ್ನು ಧ್ವನಿಸುವ ಮುನ್ಶಿ ಪ್ರೇಮಚಂದರ ’ಬಂದ್ ದರವಾಜಾ’ ಸಣ್ಣ ಕಥೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...