ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಯ್ ಧೀರ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ, ನನ್ನ ಪರವಾಗಿ...

ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು. ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್  ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ. ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗ...

ಹೊಸ ಬೆಳಕು ಹಬ್ಬಿಸಲು ಕಾದು ಕೂತ ದೀಪಗಳು...

ಈ ಜೀವಜಗತ್ತಿನ ಬಂಡಿ ಸಾಗಿಸುವ ಭಾರವೆಲ್ಲ ಹೆಣ್ಣಿಗೇ ಏಕೆ? ಹಟಕ್ಕೆ ಹೆಸರಾದ ಹೆಣ್ಣು ತಾಯಿಯಾಗುವಾಗ ನಮ್ಮನ್ನೆಲ್ಲ ಸಣ್ಣಗೆ ಅಲುಗಾಡಿಸಿಬಿಡುತ್ತಾಳೆ. ಅದಕ್ಕೇ ಜನಪದ ಮತ್ತು ಎಲ್ಲ ಧರ್ಮ ಗ್ರಂಥಗಳಲ್ಲೂ ತಾಯಿಗೆ ದೊಡ್ಡ ಸ್ಥಾನವಿದೆ. ಖುರಾನ್ ನಲ್ಲೂ. ಒಂದು ಉರ್ದು ಕವಿತೆ ಹೀಗೆ ಬಣ್ಣಿಸಿದೆ. ಈ ಜಗವ ರೂಪಿಸಿದವ ತಾಯಿಗೆಂಥಾ ಶ್ರೇಷ್ಠ ದರ್ಜೆ ಕೊಟ್ಟ ಅವಳ ಒಂದು ಪ್ರಾರ್ಥನೆಯಲ್ಲಿ ಎರಗಿದ ಕಂಟಕ ಪರಿಹರಿಸುವ ಶಕ್ತಿಯನಿತ್ತ! ಖುರಾನ್ ಇವಳ ಮಮತೆಯ ಹೀಗೆ ಬಣ್ಣಿಸಿದೆಯಲ್ಲಾ ದೇವರು ಸ್ವರ್ಗವನ್ನೇ ತಾಯ ಪಾದಕ್ಕೆಸೆದುಬಿಟ್ಟ!  ಅದೆಷ್ಟು ಬರಹಗಾರರು ಹೆಣ್ಣಿನ ತಾಯಿಗುಣ ಬಣ್ಣಿಸಿದ್ದು ಸುಮ್ಮನೇ ಅಲ್ಲ. ಈ ಉಪಖಂಡ ಕಂಡ ಅದ್ಭುತ ಕವಿ ಅಲ್ಲಾಮಾ ಇಕ್ಬಾಲ್ ತಮ್ಮ "ಮಾ ಕಾ ಖ್ವಾಬ್" ಕವಿತೆಯಲ್ಲಿ ತಾಯಿಯ ಕನಸು ಜೀವದ ಒಂದಿಡೀ ಪಯಣವನ್ನೇ ಬಿಚ್ಚಿಡುತ್ತದೆ. ಅಲ್ಲಿ ಜನ್ಮಭೂಮಿ, ದೇಶ, ಜಗತ್ತು ತಾಯಿಪಾದದ ಧೂಳಿನ ಕಣದಂತೆನಿಸಿಬಿಡುತ್ತದೆ. ಇದೇ ಜಾಡಿನಲ್ಲಿ ನಮ್ಮ ಲಂಕೇಶ್ ಕೂಡ... "ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ..." ಎಂದರಲ್ಲವೇ. ನೆಲವೆಂದರೆ ತಾಯ್ನೆಲವೂ ಹೌದು, ಜಗತ್ತೂ ಹೌದು. ಕೆಲವರಿಗದು ಭಾರತಮಾತೆ, ಕರ್ನಾಟಕಮಾತೆ....  ತಾಯಿ ಒಂದು ಸೀಮಿತ ವ್ಯಾಪ್ತಿಯಲ್ಲ. ಎಲ್ಲದರ ಮೂಲ. ಅದರ ಹರವು ಕ್ಷಿತಿಜದಾಚೆಗೂ....  ಆರ್ಕಿಮಿಡಿಸ್ ಹೇಳುತ್ತಿದ್ದನಂತೆ, ನಿಲ್ಲಲು ಜಾಗ ...

ರೈಲ್ವೆ: ಕನಿಷ್ಠ ವ್ಯವಸ್ಥೆ ಮತ್ತು ಸೇವಾ ಕಮಿಟಮೆಂಟ್

ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ! ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್  ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ. ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ. ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ...

ಇದು ನಾವು ಬದುಕುತ್ತಿರುವ ವ್ಯವಸ್ಥೆ... ನಮಗೇನು ಬೇಕು?

ನಮ್ಮದನ್ನು ಇನ್ನಾರೋ ಬಳಿಯಬೇಕು. ನಮ್ಮದಕ್ಕೆ ನಾವೇ ಮೂಗುಮುಚ್ಚಿಕೊಂಡರೂ ಅವರು ಮಾತ್ರ ಮೂಗು, ಬಾಯಿ ತೆರಕೊಂಡೇ ಎಲ್ಲ ಸಹಿಸಿಕೊಂಡು ಬಳಿಯಬೇಕು. ಹೇಲು, ಉಚ್ಚೆ ಬಳಿವ ಕೈಗಳಿಗೆ ಹಣ ದಕ್ಕುವುದಾದರೂ ಎಷ್ಟು? ಅದರ ವಾಸನೆ ಹೋಗುವಂತೆ ಕೈಗೆ ಬಳಿಯಬೇಕಾದ ಸಬಕಾರಕ್ಕೂ ಅದು ಸಾಲದು. ಇನ್ನು ಇವರ ನಂಬಿದವರ ಹೊಟ್ಟೆಗೆ? ಸಾರ್ವಜನಿಕ ಸ್ಥಳಗಳನ್ನು ನಾವು ಬಳಸಿಕೊಳ್ಳುವ ಮತ್ತು ಅದರ ಬಗ್ಗೆ ನಮಗಿರುವ ಕಾಳಜಿಯ ಪರಿ ಇದು. ರೈಲುಗಳಲ್ಲಿ ಹೇಲುವುದಕ್ಕೆ, ಉಚ್ಚೆ ಹೊಯ್ಯುವುದಕ್ಕೆ ಒಂದು ನಮ್ಮದೇ ಮಿತಿ, ರೀತಿ, ರಿವಾಜುಗಳಿರಬೇಕು ಎಂದೆನಿಸುವುದೇ ಇಲ್ಲ. ಅದು ಹೇಳಿ ಕೇಳಿ ಬರುತ್ತದೆಯೇ ಎನ್ನುವ ಮಾತಲ್ಲಿ ಇರುವುದು ನಮ್ಮ ಉಡಾಫೆ ಅಷ್ಟೇ ಅನ್ನೋದು ನಮ್ಮರಿವಿಗೇ ಬರುವುದಿಲ್ಲ. ಅಥವಾ ಇಲಾಖೆಗಳು ಅದರ ನಿರ್ವಹಣೆಯ ಬಗ್ಗೆ ಹೊಸದಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಅದನ್ನು ಒಂದೆರಡು ಬೋಗಿಗೆ ಹೋಗಿ ಶೇಖರಣೆಯಾಗುವಂತೆ ನೋಡಿಕೊಳ್ಳುವ ಪೈಪಿಂಗ್ ವ್ಯವಸ್ಥೆ ಮತ್ತು ಅದನ್ನು ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವೂ ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಏನು? ಹಸಿದವನಿಗೆ ರಸ್ತೆಯಾದರೇನು ರೈಲ್ವೆ ಟ್ರ್ಯಾಕ್ ಆದರೇನು... ಜನ ಸುತ್ತುವ ಜಾಗವೊಂದಿದ್ದರೆ ಆತ ಭಿಕ್ಷೆ ಬೇಡಿಯಾದರೂ ತನ್ನ ದಿನದ ತೊತ್ತಿನ ಚೀಲ ತುಂಬಿಸಿಕೊಂಡಾನು.. ನಮ್ಮೊಳಗಿನ ಈ ಮಾನವೀಯ ತುಡಿತವನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಬಡವರು ಮತ್ತು ಭಿಕ್ಷಾಟನೆ ಇದನ್ನು ಸಮೀಕರಿಸುವುದು ಬೇಡ. ಭಿಕ್ಷ...

ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

"ನಮ್ಮ ಮೆಟ್ರೊ" ಜನ ಒಪ್ಪಿದರೋ ಬಿಟ್ಟರೋ ಅಂತೂ ಹೊಸದೊಂದು ಅತ್ಯಾಧುನಿಕ (ನಮ್ಮ ಮಟ್ಟಿಗೆ) ಸಂಚಾರ ವ್ಯವಸ್ಥೆಗೆ ಇದೇ ಹೆಸರು ಬಂದುಬಿಟ್ಟಿತು. ಇದಕ್ಕೆ ಮೊದಲ ದಿನವೇ ದಕ್ಕಿದ ಸ್ಪಂದನೆ ನೋಡಿದರೆ ಈ ಹೆಸರು ನಿಜವಾದ ಅರ್ಥದಲ್ಲಿ ಅತ್ಯಂತ ಸೂಕ್ತವೆನಿಸಿತು. ಯುರೋಪ್ ಮತ್ತಿತರ ಮುಂದುವರಿದ ದೇಶದ ಜನರ ಹಾಗೆ ನಾವಿದನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ, ನಮ್ಮದಾಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಎಂಜಿ ರಸ್ತೆಯುದ್ದಕ್ಕೂ ಅವತ್ತು ಸೇರಿದ ಜನ ಅಬ್ಬಾ! ಟಿಕೆಟ್ ಗಾಗಿ ನಿಂತ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅವತ್ತು ರಾಜಕೀಯ ಮೈಕ್ ಗಳ ಭರಾಟೆ, ಮಾರುಕಟ್ಟೆ ಶಕ್ತಿಗಳಿಗೆಲ್ಲ ಹಬ್ಬ! ಬಹುತೇಕ ಅಂಗಡಿಗಳು ತಮ್ಮನ್ನು ತಾವು ಸಿಂಗರಿಸಿಕೊಂಡು ಹರೆಯದ ಹುಡುಗಿ ಕಾಮದೇವನ ಕಾದುನಿಂತಂತೆ ಕಾಣಿಸುತ್ತಿದ್ದವು. ಅರ್ಧ ಕುಂಡೆ ಕಾಣಿಸುವಂತೆ ಜೀನ್ಸ್ ತೊಟ್ಟ ಲಟಪಟ ಸುತ್ತುತ್ತಿದ್ದ ಸುಂದರಿಯರಂತೆ ಕಾಣಿಸುವ ಹೆಣ್ಣುಗಳು, ಮತ್ತವರ ಹಿಂದೆ ಕಣ್ಣು ಮಿಟುಕಿಸದೇ ಸುತ್ತುವ ಹಪಾಹಪಿ ಹರೆಯದ ಗಂಡುಗಳು... ಏನ್ ಮಜಾ ಅವರದು. ಮತ್ತೆ, ಇದ್ದಬಿದ್ದ ಕೋಟು, ಸೂಟು ಹಾಕಿಕೊಂಡು ಎಂಜಿ ರಸ್ತೆಗಿಳಿದ ರಿಟೈರಮೆಂಟ್ ಹೊಸ್ತಿಲಲ್ಲಿರುವವರು , ಯೌವ್ವನದ ಬಿಡುಬೀಸನ್ನೆಲ್ಲ ಕಳಕೊಂಡರೂ ಚಮಕ್ ಬಿಟ್ಟುಕೊಡದ 40 ಪ್ಲಸ್ ಆಂಟಿಯರು ಮಗಳಿಗೂ ಕಾಂಪಿಟಿಷನ್ ಕೊಡುವವರಂತೆ ಸಿಂಗರಿಸಿಕೊಂಡು ಮೆಟ್ರೋ ರೈಲು ಟಿಕೆಟ್ ಗಾಗಿ ಕಾದಿದ್ದೇ ಕಾದಿದ್ದು. ಇನ್...

ಯುರೋಪಿನಲ್ಲಿ ಮೊದಲ ಮೆಟ್ರೊ ಪಯಣ...

ಬೆಂಗಳೂರಿನಿಂದ ಪ್ರಯಾಣ ಹೊರಟ ಹೊತ್ತಲ್ಲಿ ನಗರಕ್ಕೆ ಮೆಟ್ರೊ ದಾಂಗುಡಿ ಇಟ್ಟಿತ್ತು. ಅದಕ್ಕೆ ದಕ್ಕಿದ ಅದ್ದೂರಿ ಸ್ವಾಗತಕ್ಕೆ ಎಲ್ಲರೂ ದಂಗಾಗಿದ್ದೆವು. ಇಲ್ಲಿ ಯುರೋಪಿನಲ್ಲಿ ಅದು ಆಗಲೇ ಜನಜೀವನದ ಒಂದು ಭಾಗವೇ ಆಗಿಹೋಗಿದೆ. ಅವರು ಇನ್ನೇನೋ ಹೊಸದು ಯೋಚಿಸುತ್ತಿರುವ ಹೊತ್ತು ಇದು. ಒಸ್ಲೊವಿನ ಮೂಲಕ ಮೊದಲ ಯುರೋಪ್ ಮೆಟ್ರೊ ಪಯಣ (ಅಕ್ಟೋಬರ್ 29, 2011) ಮಜವಾಗಿತ್ತು.