ವಿಷಯಕ್ಕೆ ಹೋಗಿ

ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

"ನಮ್ಮ ಮೆಟ್ರೊ" ಜನ ಒಪ್ಪಿದರೋ ಬಿಟ್ಟರೋ ಅಂತೂ ಹೊಸದೊಂದು ಅತ್ಯಾಧುನಿಕ (ನಮ್ಮ ಮಟ್ಟಿಗೆ) ಸಂಚಾರ ವ್ಯವಸ್ಥೆಗೆ ಇದೇ ಹೆಸರು ಬಂದುಬಿಟ್ಟಿತು. ಇದಕ್ಕೆ ಮೊದಲ ದಿನವೇ ದಕ್ಕಿದ ಸ್ಪಂದನೆ ನೋಡಿದರೆ ಈ ಹೆಸರು ನಿಜವಾದ ಅರ್ಥದಲ್ಲಿ ಅತ್ಯಂತ ಸೂಕ್ತವೆನಿಸಿತು. ಯುರೋಪ್ ಮತ್ತಿತರ ಮುಂದುವರಿದ ದೇಶದ ಜನರ ಹಾಗೆ ನಾವಿದನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ, ನಮ್ಮದಾಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ.

ಎಂಜಿ ರಸ್ತೆಯುದ್ದಕ್ಕೂ ಅವತ್ತು ಸೇರಿದ ಜನ ಅಬ್ಬಾ! ಟಿಕೆಟ್ ಗಾಗಿ ನಿಂತ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅವತ್ತು ರಾಜಕೀಯ ಮೈಕ್ ಗಳ ಭರಾಟೆ, ಮಾರುಕಟ್ಟೆ ಶಕ್ತಿಗಳಿಗೆಲ್ಲ ಹಬ್ಬ! ಬಹುತೇಕ ಅಂಗಡಿಗಳು ತಮ್ಮನ್ನು ತಾವು ಸಿಂಗರಿಸಿಕೊಂಡು ಹರೆಯದ ಹುಡುಗಿ ಕಾಮದೇವನ ಕಾದುನಿಂತಂತೆ ಕಾಣಿಸುತ್ತಿದ್ದವು. ಅರ್ಧ ಕುಂಡೆ ಕಾಣಿಸುವಂತೆ ಜೀನ್ಸ್ ತೊಟ್ಟ ಲಟಪಟ ಸುತ್ತುತ್ತಿದ್ದ ಸುಂದರಿಯರಂತೆ ಕಾಣಿಸುವ ಹೆಣ್ಣುಗಳು, ಮತ್ತವರ ಹಿಂದೆ ಕಣ್ಣು ಮಿಟುಕಿಸದೇ ಸುತ್ತುವ ಹಪಾಹಪಿ ಹರೆಯದ ಗಂಡುಗಳು... ಏನ್ ಮಜಾ ಅವರದು.
ಮತ್ತೆ, ಇದ್ದಬಿದ್ದ ಕೋಟು, ಸೂಟು ಹಾಕಿಕೊಂಡು ಎಂಜಿ ರಸ್ತೆಗಿಳಿದ ರಿಟೈರಮೆಂಟ್ ಹೊಸ್ತಿಲಲ್ಲಿರುವವರು , ಯೌವ್ವನದ ಬಿಡುಬೀಸನ್ನೆಲ್ಲ ಕಳಕೊಂಡರೂ ಚಮಕ್ ಬಿಟ್ಟುಕೊಡದ 40 ಪ್ಲಸ್ ಆಂಟಿಯರು ಮಗಳಿಗೂ ಕಾಂಪಿಟಿಷನ್ ಕೊಡುವವರಂತೆ ಸಿಂಗರಿಸಿಕೊಂಡು ಮೆಟ್ರೋ ರೈಲು ಟಿಕೆಟ್ ಗಾಗಿ ಕಾದಿದ್ದೇ ಕಾದಿದ್ದು.

ಇನ್ನು ಮೊದಲ ಬಾರಿಗೆ ಮೆಟ್ರೊ ಹತ್ತಿದವರದು ಏನ್ ಕೇಳ್ತಿರಾ! ಏಯ್ ಅಲ್ನೋಡು ಕಬ್ಬನ್ ಪಾರ್ಕು, ಕಿಡ್ಸ್ ಕೆಂಪ್, ಏಯ್ ಲಿನೊ ಥಿಯೇಟರ್... ಇಲ್ಲೇ ಅಲ್ವಾ ನಾವಿಬ್ಬರು ಮೊದಲ ಬಾರಿಗೆ ಆಫೀಸಿನವರ ಕಣ್ಣಿಗೆ ಮಣ್ಣೆರಚಿ ಸಿನಿಮಾ ನೋಡುತ್ತ ಲೊಚ ಲೊಚ ತುಟಿ ತುಂಡರಿಸಿಕೊಂಡಿದ್ದು ಎಂದು ಕನವರಿಸುವ ಓಲ್ಡ್ ಲವರ್ಸ್, ಛೇ, ನಾನವನ ಮೊದಲ ಬಾರಿ ಕೈಹಿಡಿದುಕೊಂಡು ಕೂತಿದ್ದು, ಅವನು ನನ್ನ ಹೆಗಲ ಮೇಲೆ ಕೈ ಹಾಕಿ ಕೆನ್ನೆ ಸವರಿದ್ದು, ಮೈತುಂಬ ಕಚಗುಳಿ ಇಟ್ಟಿದ್ದು, ಸಾಂಗ್ ಬಂದಾಗ ನಾ ಬೆಚ್ಚಗೆ ಅವನ ತಬ್ಬಿಕೊಂಡು ತೆಳುವಾದ ತುಟಿಗಳಿಂದ ಉಮ್ಮಾ ಎಂದಿದ್ದು ಈ ಪ್ಲಾಝಾ ಥಿಯೇಟರ್ ನಲ್ಲೇ ಅಲ್ಲವಾ! ಅರೇ ಇದೇನಿದು ಪ್ಲಾಝಾ ಮಂಗಮಾಯ! ನನ್ನ ಸುಂದರ ನೆನಪುಗಳನ್ನೆಲ್ಲಾ ಗುಡುಸಿಹಾಕಿಬಿಟ್ಟಿತಾ ಈ ಮೆಟ್ರೊ ಎಂದು ಇತಿಹಾಸದಿಂದಲೇ ಅಳಿದುಹೋದ ಥಿಯೇಟರ್ ಅವಶೇಷಗಳನ್ನು ನೋಡಿ ಮರುಗುವ ಭಗ್ನಪ್ರೇಮಿಕೆಯರು... ಹೋ ಇನ್ನು ನೀನು ಟ್ರಾಫಿಕ್ ನೆವ ಹೇಳಲಿಕ್ಕೇ ಇಲ್ಲಾ. ಸೀದಾ ಆಫೀಸು ಮುಗಿದು ಹತ್ತು ನಿಮಿಷದಲ್ಲಿ ಮನೇಲೇ ಇರಬೇಕು. ಇಲ್ಲಾಂದ್ರೆ ಡಿವೋರ್ಸ್ ಎನ್ನುವ ಹೊಸದಾಗಿ ಮದುವೆಯಾದ ಜೋಡಿಗಳು ತಮ್ಮಲ್ಲೇ ಒಣಜಗಳವಾಡಿದ್ದು... ಹೋ.. ಒಬ್ಬೊಬ್ಬರದು ಒಂದೊಂದು ತರಹದ ರೈಲುಗಳು ಮೆಟ್ರೊ ವೇಗದ ಜತೆ ಭರಗುಟ್ಟಿದವು.

ನಗರದ ರಸ್ತೆಯ ಮೇಲೆ ದೈತ್ಯನಂತೆ ಎದ್ದು ನಿಂತ ಪಿಲರ್ಸ್, ಎದೆಯ ಮೇಲೇ ಮಲಗಿದಂತೆನಿಸುವ ಸೇತುವೆ, ಅದರ ಮೇಲೆ ಕಾಲದ ಎಲ್ಲ ಜಡವನ್ನು ದರ ದರ ಎಳೆದೊಯ್ಯುವಂತೆನಿಸುವ ಮೆಟ್ರೊ ರೈಲು. ಕೆಳಗೆ ಮತ್ತದೇ ಆಟೊ, ಗಾಡಿ, ಕಾರು, ಬೈಕು ಟ್ರಾಫಿಕ್,  ಹಾರ್ನ್, ಪೊಲೀಸ್ ಸೀಟಿ, ಜನರ ಸದ್ದು ಗದ್ದಲ... ರಸ್ತೆ ದಾಟಲು ಪರದಾಡುತ್ತಲೇ ಇರುವ ಪಾಪದ ಪಾದಚಾರಿ...
ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...