ವಿಷಯಕ್ಕೆ ಹೋಗಿ

ಏಯ್ ಧೀರ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ, ನನ್ನ ಪರವಾಗಿ...


ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು.
ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್  ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ.
ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗೆಯ ಮುಂಚೆ ಆಕೆ ಎದುರಿಸಿದ ಆತಂಕದ ಕ್ಷಣಗಳನ್ನು ಕಂಡವನು ನಾನು. ಹೆರಿಗೆಯ ನಂತರ ಆಕೆ ಅತ್ಯಂತ ಕೇರ್ ಯುನಿಟ್ ನಲ್ಲಿ ನಿರಾಳವಾಗಿ, ಹೊಸ ಜೀವವೊಂದಕ್ಕೆ ಜನ್ಮವಿತ್ತ ಖುಷಿ ಅನುಭವಿಸುತ್ತ, ಹೆಮ್ಮೆಪಡುತ್ತ ಮಲಗಿದ್ದಾಳೆ ಎಂದು ಆಕೆಯ ಗಂಡ ಖಾನ್ ಸಾಹೇಬರು ಹೇಳಿದರು. ಜೀ ಹುಜೂರ್ ಎಂದು ತಲೆಯಲ್ಲಾಡಿಸಿ ನಿಂತುಬಿಟ್ಟೆ. ಅವಳ ಬಳಿಗೆ ನಾವೆಲ್ಲ ಹೋಗುವುದಕ್ಕೆ ಅನುಮತಿಯೇ ಇಲ್ಲ. ಆದರೆ ಆಗಷ್ಟೇ ಕಣ್ತೆರೆದ ಮಗುವನ್ನು ಅದರಪ್ಪ ಟ್ರಾಲಿಯಲ್ಲಿ ತಂದು ನನಗೂ ದರ್ಶನ ಮಾಡಿಸಿದರು. ಕಣ್ಣುಗಳ ಜತೆ ಮನಸೂ ತುಂಬಿಬಂತು. ಅದರಮ್ಮನ ಕಂಡು ಒಂದು ದಿಲ್ ಪೂರ್ವಕ ಸೆಲ್ಯುಟ್, ವಿಶ್ ಮಾಡಬೇಕು, ಒಂದು ಹಗ್ ಮಾಡಬೇಕೆಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಆಕೆ ಇನ್ನು ಮನೆ ಸೇರುವುದು ನಾಲ್ಕು ದಿನಗಳ ನಂತರವೇ.
ನಾನಿಲ್ಲಿಗೆ ಬಂದ ಸಮಯ ಸಾರ್ಥಕವಾಯ್ತು. ಮತ್ತೆ ಮರಳಿ ನಮ್ಮ ನೆಲ ತುಳಿಯುವ ಸಮಯವೂ ಬಂದೇಬಿಟ್ಟಿತು. ದೇಶ ನಮ್ಮಪ್ಪಂದಲ್ಲವಲ್ಲ. ಒಂದು ವಾರ ಮರುಪ್ರಯಾಣದ ಟಿಕೆಟ್ ಪೋಸ್ಟಪೋನ್ ಮಾಡಬಹುದಿತ್ತು. ಆಗಲಿಲ್ಲ. ಇಲ್ಲಿ ಕಂಡ ಮೋಹಕ ಜಗತ್ತು, ಪಡೆದ ಅನುಭವ ಮಹತ್ತದ್ದೇ. ನನಗೆ ಇದನ್ನು ಮಿಸ್ ಮಾಡಿಕೋತಿದಿನಿ ಅನಿಸೋದೇ ಇಲ್ಲ. ಆದರೆ, ತಂಗಿಗೊಂದು ತಾಯ್ತನದ ಸಂಭ್ರಮಕ್ಕೆ ಅಭಿನಂದನೆ ಸಲ್ಲಿಸಿ ಹಗ್ ಮಾಡಲಾಗಲಿಲ್ಲ, ಸೆಲ್ಯೂಟ್, ವಿಶ್ ಮಾಡಲಾಗಲಿಲ್ಲ. ಫೋನಲ್ಲಿ ಅದೆಲ್ಲ ಮಾಡಿದೆ. ಮನಸು ತುಂಬಲಿಲ್ಲ. ಆ ತಾಯಿಯ ಸ್ಪರ್ಶ ನನಗೆ ಈ ಸಂದರ್ಭದಲ್ಲಿ ಸಿಕ್ಕಲಿಲ್ಲ ಆ ನೋವು ನನ್ನ ಕಾಡುತ್ತಲೇ ಇರುತ್ತದೆ. ಹೊಕ್ಕಳುಬಳ್ಳಿ ಕತ್ತರಿಸುವುದಕ್ಕೆ ಮುಂದಾದ ವೈದ್ಯರ ಕತ್ತರಿಯನ್ನೇ ಹಿಡಿದೆಳೆದನಲ್ಲ ಈ ಧೀರ, ಎಂಥ ದೊಡ್ಡ ಸಂದೇಶ ಕೊಟ್ಟುಬಿಟ್ಟ ಈ ಜೀವಜಗತ್ತಿಗೆ! ಇವ ನನ್ನ ದಿಲ್ ಗಿಳಿದುಬಿಟ್ಟ. ಆ ಕೈಗಳನ್ನೊಮ್ಮೆ ಮುಟ್ಟಿದೆ. ಹಣೆಗಿಟ್ಟುಕೊಂಡೆ, ತುಟಿಗಳಿಂದ ಮುದ್ದಿಸಿದೆ. ಅವನ ಕಿವಿಯಲ್ಲಿ ಹೇಳಿದೆ, ಏಯ್ ಧೀರ, ನಾ ಹೋಗಿ ಬರುವೆ, ಈ ಹೆಮ್ಮೆಯ ಕೈಗಳಿಂದ ಒಮ್ಮೆ ನನ್ನ ಪರವಾಗಿ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ