ವಿಷಯಕ್ಕೆ ಹೋಗಿ

ಜೋಗುಳ ೨೦೦; ತಾಯ್ತನದ ಸಂಭ್ರಮ ಮತ್ತು ಇತರ ನೆನಪುಗಳು


ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು.
ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ!
ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ...
ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ...
ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು ಹುಡುಕುತ್ತ ಹೋದಂತೆ ವಾಸ್ತವ ಚಿತ್ರಣ ದಕ್ಕುತ್ತ ಹೋಯಿತು. ಇದರ ಮಾನವೀಯ ಮುಖದ ದರ್ಶನವಾಯಿತು. ಈ ಕಾಲದ ಬಹುದೊಡ್ಡ ತಲ್ಲಣ ಇದೆನಿಸಿತು.
ಮನುಷ್ಯ ಬದುಕಿನ ಇಂಥದೊಂದು ವಿಲಕ್ಷಣ ಮುಖ ಮತ್ತೊಂದರ್ಥದಲ್ಲಿನ ಮಾನವೀಯ ಮುಖ... ಕಥೆಯಾಗಿ, ದೃಶ್ಯವಾಗಿ, ಚಿತ್ತಾರವಾಗಿ, ಕಾವ್ಯವಾಗಿ ಬರೋದು ಹೇಗೆ... ? ಕಿರುತೆರೆಯ ಸೂಕ್ಷ್ಮ ಸಂವೇದನೆಯ ನಿರ್ದೇಶಕ ವಿನು ಬಳಂಜ ಇಂಥದೊಂದು ಸಾಹಸಕ್ಕೆ ಕೈಹಾಕಿದ್ದರು. ಬಹುಕಾಲದ ಒಡನಾಡಿ, ರಂಗಸಂಗಾತಿ ನರೇಶ್ ನನ್ನನ್ನು ಬಳಂಜ ಅವರಿಗೆ ಪರಿಚಯಿಸಿದ. ಆ ಮೂಲಕ ಹೊಸ ಗೆಳೆಯನತ್ತ ಮತ್ತು ಒಂದು ಅರ್ಥಪೂರ್ಣ ಸೃಜನಶೀಲ ಚಟುವಟಿಕೆಯತ್ತ ಮತ್ತೆ ನನ್ನ ಸೆಳೆದ. ಥ್ಯಾಂಕ್ಸ್ ನರೇಶ್.
ನಚಿಕೇತ (ಝೀ ಚಾನೆಲ್ ನ ಕಥಾ ವಿಭಾಗದ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ) ನೀಡಿದ ಒಂದು ಸಣ್ಣ ಕಥಾ ಎಳೆ ಹಿಡಿದು ಕುಳಿತಿದ್ದರು ವಿನು ಬಳಂಜ. ಸ್ಕ್ರಿಪ್ಟ್, ಸಂಭಾಷಣೆ ಕೆಲಸ ಸತ್ಯಮೂರ್ತಿ ಆನಂದೂರ್ ಮಾಡುತ್ತಿದ್ದರು. ಪ್ರಭಾಕರ್ ಕ್ಯಾಮೆರಾ ಕನ್ಯೆಯ ಪಾಲಾಗಿದ್ದರು. ಅದರ ಹರವನ್ನು ವಿಸ್ತರಿಸುವ ಕೆಲಸದಲ್ಲಿ ವಿನು, ಸತ್ಯ, ನರೇಶ್ ಅವರುಗಳ ಜತೆ ನಾನೂ ಸೇರಿಕೊಂಡೆ. ಕಥಾ ವಿಸ್ತರಣೆಯಲ್ಲಿ ನನಗೂ ಜವಾಬ್ದಾರಿ ಸಿಕ್ಕಿದ್ದು ಖುಷಿ ಕೊಟ್ಟಿತು.
ಬಾಡಿಗೆ ತಾಯಿ ಎನ್ನುವುದೊಂದು ಧಂಧೆಯಾಗಿ ಹೋಗಿದೆ ಎನ್ನುವ ನನ್ನ ಜರ್ನಲಿಸ್ಟ್ ಬುದ್ಧಿಯ ಜತೆಗೆ ತಾಯ್ತನದ ಜೀವಪ್ರೀತಿಯ ಸೆಳೆತವೂ ನನಗಿತ್ತು. ಕೆಲವು ಸಂದರ್ಭಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ. ನನ್ನ ಸಹೋದರಿ (ಅವಳ ಹೆಸರು ಷಹನಾಜ್) ಮೊದಲ ಮಗುವಿಗೆ ಜನ್ಮವಿತ್ತಾಗ, ಅದೇ ಸಮಯದಲ್ಲಿ ಸಹೋದರನ (ಝಕೀರ್) ಹೆಂಡತಿಯೂ ಮೊದಲ ಬಾರಿಗೆ ತಾಯಿ ಆದಾಗ ಮನೆಯ ಟೆರೇಸ್ ಮೇಲೊಂದು 'ತಾಯ್ತನದ ಸಂಭ್ರಮ' ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ನನ್ನ ಅಮ್ಮ (ಮುಮ್ತಾಜ್) ಮತ್ತು ನಮ್ಮೆಲ್ಲ ಬಳಗಕ್ಕೆ, ಸ್ನೇಹಿತರಿಗೆ ಅದೊಂದು ಟಚಿ ಈವೆಂಟ್ ಅನಿಸಿತ್ತು. ಅವತ್ತು ನಾನು ಮತ್ತು ಚಿಕ್ಕ ತಂಗಿ (ಅಮೀರಜಾನ್) ಸೇರಿ ಅದ್ಭುತ ಸ್ಟೇಜ್ ರೂಪಿಸಿದ್ದೆವು. ನೂರಾರು ಬಲೂನು, ಕ್ಯಾಂಡೆಲ್ ಮತ್ತು ಹಣತೆ ಬಳಸಿ ಒಂದು ಪುಟ್ಟ ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದೆವು. ಅವತ್ತು ಇಬ್ಬರೂ ತಾಯಂದಿರಿಗೆ ಪುಷ್ಟವೃಷ್ಟಿ! ಜತೆಗೆ ಹೊಸ ವಸ್ತ್ರ, ಪುಟ್ಟ ಚಿನ್ನದ ದಿಲ್, ಫ್ಲಾವರ್ ಬುಕೇ, ನೆನಪಿನ ಪತ್ರ, ತಾಯ್ತನ ಮತ್ತು ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಬರೆದ ಕೆಲವು ಸಾಲುಗಳ ಜತೆ ನನ್ನದೂ ಒಂದಷ್ಟು ಸಾಲುಗಳನ್ನು ಹೊಂದಿದ ಮತ್ತು ಕೊನೆಯ ಕೆಲ ಪುಟಗಳಲ್ಲಿ ಕಂದಮ್ಮಗಳ ತಾಯಂದಿರು, ಅಜ್ಜ, ಅಜ್ಜಿಯರು, ಅಪ್ಪ, ನನ್ನಮ್ಮ ಉರ್ದುವಿನಲ್ಲಿ ಬರೆದ ಶುಭಾಶಯಗಳು ಹಾಗೂ ಅಂದು ಬಂದ ನೂರಾರು ಬಂಧು ಮಿತ್ರರ ಶುಭಾಶಯಗಳನ್ನು ಅವರಿಂದಲೇ ದಾಖಲಿಸಿ ಒಂದು ಪುಸ್ತಕ ರೂಪಿಸಿದ್ದೆ. ಹ್ಯಾಂಡ್ಮೇಡ್ ಕಾಗದ ಬಳಸಿ ಮಾಡಿದ ಆ ಪುಸ್ತಕವನ್ನು ನನ್ನ ಅಮ್ಮ ಅಪ್ಪ ಮತ್ತು ಅತ್ತಿಗೆಯ ಅಮ್ಮ ಅಪ್ಪ ಹಾಗೂ ಸಹೋದರಿಯ ಅತ್ತೆ-ಮಾವ ಅವರುಗಳ ಮೂಲಕ ಇಬ್ಬರೂ ತಾಯಂದಿರ ಉಡಿಯಲ್ಲಿಟ್ಟಾಗ ನೆರೆದವರ ಕಣ್ಣಾಲಿಗಳು ಹಸಿಗೊಂಡಿದ್ದವು, ಮುಖಗಳಲ್ಲಿ ಪ್ರೀತಿಯ ಹಾರೈಕೆಗಳ ಲಾಸ್ಯವಿತ್ತು... ನನ್ನಮ್ಮ ಮುಮ್ತಾಜ್ ಆದ ಸಂತಸಕ್ಕೆ ಗಳ ಗಳನೇ ಅತ್ತುಬಿಟ್ಟಿದ್ದಳು...
ಮತ್ತೊಂದು ಸಂದರ್ಭ. ಗೆಳೆಯ, ಸಹೋದ್ಯೋಗಿ ರೋನಾಲ್ಡ್ ಮತ್ತು ಹೂಮನದ ರೋಹಿಣಿ ಪುತ್ರಿ ಮುದ್ದು ಋತು ಮೂರನೇ ವಸಂತಕ್ಕೆ ಕಾಲಿಟ್ಟ ಸಂತಸದ ಘಳಿಗೆಯಂದು ಹೆಗಡೆ ನಗರದಲ್ಲಿನ ಅವರ ನಿವಾಸದ ಟೆರೇಸ್ ಮೇಲೆ ಒಂದು ಸುಂದರ ಸಮಾರಂಭ ಮಾಡಿದ್ದೆವು. ಋತು ಅಪ್ಪ ಅಮ್ಮನಿಗೆ ಪುಷ್ಪವೃಷ್ಟಿಯ ಸ್ವಾಗತದ ಮೂಲಕ, ನೂರಾರು ಬಲೂನು, ನೂರು ಕ್ಯಾಂಡೆಲ್ ಬೆಳಕಿನ ನಡುವೆ ಋತುಗೆ ಶುಭಾಶಯ ಹೇಳಿದ ಅರ್ಥಪೂರ್ಣ ಘಳಿಗೆಯದು. ರೋಹಿಣಿ ಮುಖದಲ್ಲಿನ ತಾಯ್ತನದ ಸಂಭ್ರಮ ಕಳೆಕಟ್ಟಿದ ರೀತಿ ಇನ್ನೂ ನನ್ನ ನೆನಪಲ್ಲಿ ಹಸಿರಾಗೇ ಇದೆ.
ತಾಯ್ತನ ಮತ್ತು ಹೆಣ್ಣಿನ ಬದುಕಿಗೆ ಹೀಗೆ ನನ್ನೊಳಗೊಂದು ಹೆಮ್ಮೆಯ ಅಭಿಮಾನದ ವಿಶಾಲ ಜಾಗೆಯಿತ್ತು. ಅದು ಮತ್ತೆ ವಿಸ್ತಾರಗೊಂಡಂತೆನಿಸಿದ್ದು ಜೋಗುಳ ಧಾರಾವಾಹಿಯ ನಿರ್ಮಾಣ ಕಾರ್ಯದಲ್ಲಿ ನಾನೂ ತೊಡಗಿಕೊಂಡಾಗ. ನಡುವೆಲ್ಲೊ ನನ್ನೊಳಗಿನ ಕೆಲವು ತುಮುಲಗಳಿಗೆ, ಸೂಕ್ಷ್ಮ ಸಂವೇದನೆಗಳಿಗೊಂದು ದೊಡ್ಡ ಏಟಾಗಿತ್ತು. ಪ್ರೀತಿಯ ಮೇಲಿನ ನಂಬಿಕೆ ಯಾಕೊ ಸಡಿಲಗೊಂಡಿದ್ದ ಹೊತ್ತು. ಕೊಂಚ ನೆಮ್ಮದಿ ಕಂಡುಕೊಳ್ಳುವ ಮತ್ತೆ ಬದುಕಿನ ಹೊನಲಿಗೆ ಬಂದು ನಿಲ್ಲುವ ಮನಸು ಮಾಡಿದ್ದ ಹೊತ್ತೂ ಆಗಿತ್ತು. ಅದೇ ಸಮಯಕ್ಕೆ ಜೋಗುಳದ ಹಾಡು ಮಾರ್ದನಿಸತೊಡಗಿತು. ಮತ್ತೆ ಸೃಜನಶೀಲ ಲೋಕಕ್ಕೆ ಎಳೆದು ತಂದಿತ್ತು ನನ್ನೊಳಗಿನ ಮಗು.
ಭೀಷ್ಮ ಸಹಾನಿ ಅವರ ಮಾಧವಿ ನಾಟಕ ಓದಿದ್ದೆ. ನನ್ನ ಮತ್ತೊಬ್ಬ ರಂಗಸಂಗಾತಿ ಧನಂಜಯ್ ಕುಲಕರ್ಣಿ ನಾಟಕ ಮಾಡಿಸುವುದಕ್ಕೆ ಓಡಾಡುತ್ತಿದ್ದ. ಅದರೊಳಗಿನ ಗಾಲವ ಪಾತ್ರ ನನ್ನಿಂದ ಮಾಡಿಸುವ ಮನಸೂ ಇತ್ತು ಆತನಿಗೆ. ನಾವು ಮಾಧವಿ ಪಾತ್ರಕ್ಕೆ ಹುಡಗಿಯೊಬ್ಬಳ ತಲಾಶ್ ನಡೆಸಿದೆವು. ಅದಕ್ಕೆ ಸೂಕ್ತವಾಗುವ ಒಬ್ಬ ಸುಂದರ ಹೆಣ್ಣು ಸಿಕ್ಕಿರಲಿಲ್ಲ. ಹೀಗಾಗಿ ಆ ಮಾಧವಿ ಮನದೊಳಗೇ ಉಳಿದುಬಿಟ್ಟಿದ್ದಳು.ವಿನು ಜತೆ ಜೋಗುಳದ ಕಥೆ ಚರ್ಚೆ ನಡೆಸುತ್ತಿದ್ದಾಗ ಮಾಧವಿ ಮತ್ತೆ ನೆನಪಾದಳು. ವಿನು ಜೋಗುಳದ ದೇವಕಿ ಪಾತ್ರಕ್ಕೂ ಮಾಧವಿಗೂ ಒಂದರ್ಥದ ಸಾಮ್ಯತೆ ಇದೆ ಎನಿಸಿತು. ಅದನ್ನೇ ವಿನುಗೆ ಹೇಳಿದೆ. ತಕ್ಷಣ ಮಾಧವಿಯನ್ನು ಜೋಗುಳಕ್ಕೆ ರಿಲೇಟ್ ಮಾಡುವ ನಿರ್ಧಾರವಾಯ್ತು. ಒಂದಷ್ಟು ಎಪಿಸೋಡ್ ಗಳಲ್ಲಿ ಮಾಧವಿ ಬಂದು ಹೋದಳು.
ಮಾಧವಿ ಕಥೆಯ ಒಟ್ಟು ಸಾರಾಂಶ...
ವಿಶ್ವಾಮಿತ್ರನಿಗೆ ಒಬ್ಬ ಶಿಷ್ಯ ಇರುತ್ತಾನೆ. ಆತನ ಹೆಸರು ಗಾಲವ. ವಿದ್ಯಾಭ್ಯಾಸ ಎಲ್ಲ ಮುಗಿದ ನಂತರ ಗಾಲವ ಗುರುವಿನ ಬಳಿ ತೆರಳಿ ಗುರುದಕ್ಷಿಣೆ ಕೊಟ್ಟೇ ತೀರುವೆ ಎಂದು ಹೇಳುತ್ತಾನೆ. ಶಿಷ್ಯನ ಗರ್ವಕ್ಕೆ ವಿಶ್ವಾಮಿತ್ರ ಕಠಿಣವಾದ ಗುರುದಕ್ಷಿಣೆಯನ್ನೇ ಕೇಳುತ್ತಾರೆ. ಎಂಟು ನೂರು ಅಶ್ವಮೇಧ ಕುದುರೆ ತಂದುಕೊಡು ಎಂದು ಗಾಲವನಿಗೆ ಆಜ್ಞಾಪಿಸುತ್ತಾರೆ. ಗಾಲವ ಒಪ್ಪಿಕೊಳ್ಳುತ್ತಾನೆ. ಅಷ್ಟು ದೊಡ್ಡ ಗುರುದಕ್ಷಿಣೆ ಹೊಂದಿಸುವಲ್ಲಿ ಸುಸ್ತಾದ ಗಾಲವ ಆತ್ಮಹತ್ಯೆಗೆಂದು ನದಿ ತೀರಕ್ಕೆ ಬಂದಿರುತ್ತಾನೆ. ಅಲ್ಲೊಬ್ಬ ಈತನಿಗೆ ಯಯಾತಿ ಮಹರಾಜನ ಬಗ್ಗೆ ಹೇಳುತ್ತಾನೆ. ದಾನದಲ್ಲಿ ದೊಡ್ಡ ಶೂರ ಎಂದೆಲ್ಲ ಹೆಸರು ಮಾಡಿರುವ ಯಯಾತಿ ಮಹಾರಾಜ ಯಾರು ಏನೇ ಕೇಳಿದರೂ ನೆರವಾಗುತ್ತಾನೆ ಎಂದೂ ಹೇಳುತ್ತಾನೆ. ಗಾಲವ, ಯಯಾತಿ ಮಹಾರಾಜನ ಆಸ್ಥಾನಕ್ಕೆ ತೆರಳಿ ತನ್ನ ಅಳಲನ್ನು ಹೇಳಿಕೊಳ್ಳುತ್ತಾನೆ. ತನ್ನ ಬಳಿ ಕೆಲವೇ ನೂರು ಕುದುರೆಗಳಿರುವುದಾಗಿ ಹೇಳಿದ ಮಹಾರಾಜ, ಅವನ್ನು ಕೊಟ್ಟುಬಿಡುತ್ತಾನೆ. ಆದರೆ, ಉಳಿದ ಕುದುರೆಗಳನ್ನು ವ್ಯವಸ್ಥೆ ಮಾಡಲು ತಾವೇ ನೆರವಾಗಬೇಕು ಎಂದು ಗಾಲವ ಮಹಾರಾಜರಿಗೆ ಅಂಗಲಾಚುತ್ತಾನೆ.
ಯಯಾತಿ ಮಹಾರಾಜನಿಗೆ ಒಬ್ಬ ಮಗಳಿರುತ್ತಾಳೆ. ಆಕೆ ವರಪುತ್ರಿ. ಆಕೆ ಯಾವಾಗ ಬೇಕೋ ಆಗ ಮತ್ತೆ ಕನ್ಯತ್ವ ಪಡೆದುಕೊಳ್ಳುವ ವಿಶಿಷ್ಠ ವರವೊಂದನ್ನು ಹೊಂದಿರುತ್ತಾಳೆ. ಅವಳ ಹೊಟ್ಟೆಯಿಂದ ಹುಟ್ಟುವ ಮಗು ಚಕ್ರವರ್ತಿ ಆಗುವನೆಂಬ ವರವು ಆಕೆಗಿರುತ್ತದೆ. ಅವಳೇ ಮಾಧವಿ. ಅವಳನ್ನೇ ಗಾಲವನಿಗೆ ನೀಡಿಬಿಡುತ್ತಾನೆ ಯಯಾತಿ ಮಹಾರಾಜ!
ವಿವಿಧ ರಾಜರುಗಳ ಬಳಿ ಇರುವ ಅಷ್ಟು ಇಷ್ಟು ಸಂಖ್ಯೆಯಲ್ಲಿರುವ ಅಶ್ವಮೇಧ ಕುದುರೆಗಳನ್ನು ಪಡೆದುಕೊಳ್ಳಲು ಮಾಧವಿಯನ್ನೇ ಬಳಸಿಕೊಳ್ಳುವಂತೆ ಯಯಾತಿ ಮಹಾರಾಜ ಗಾಲವನಿಗೆ ಸಲಹೆ ನೀಡುತ್ತಾನೆ!
ಚಕ್ರವರ್ತಿಯಾಗಬಲ್ಲ ಸಂತಾನವಿಲ್ಲದೇ ಕೊರಗುತ್ತಿದ್ದ ಹಲವು ರಾಜರುಗಳ ಬಳಿ ಮಾಧವಿ ತೆರಳುತ್ತಾಳೆ. ಅವರ ಅಂತಃಪುರದಲ್ಲಿ ಅವಳ ದೇಹ ಬಳಲಿಹೋಗುತ್ತದೆ. ಸಂತಾನ ಕೊಟ್ಟು ಒಡಲು ಬರಿದಾದಂತೆನಿಸಿರುತ್ತದೆ. ಈ ನಡುವೆ ಮಾಧವಿ ಮತ್ತು ಗಾಲವರ ನಡುವೆ ಪ್ರೇಮಾಂಕುರವಾಗಿರುತ್ತದೆ. ಪ್ರೇಮಿಯ ಗುರಿ ಮುಟ್ಟಿಸುವುದು ಈಗ ಅವಳ ಬದುಕಿನ ಸಹಜವಾದ ಗುರಿಯೇ ಆಗಿಬಿಟ್ಟಿರುತ್ತದೆ. ಪ್ರೇಮಕ್ಕಾಗಿ ಎಂಥ ತ್ಯಾಗಕ್ಕೂ ಆಕೆ ಸಜ್ಜಾಗಿರುತ್ತಾಳೆ.
ಅಂತೂ ಗಾಲವನಿಗೆ ಬೇಕಾದಷ್ಟು ಅಶ್ವಮೇಧ ಕುದುರೆಗಳನ್ನು ಮಾಧವಿ ಕೂಡಿಸಿಕೊಡುತ್ತಾಳೆ. ತನ್ನ ಶಿಷ್ಯನ ಗುರುದಕ್ಷಿಣೆ ಪಡೆಯಲು ವಿಶ್ವಾಮಿತ್ರ ದೊಡ್ಡ ಸಮಾರಂಭವನ್ನೇ ಏರ್ಪಡಿಸುತ್ತಾರೆ. ಅಂದು ಮಾಧವಿಯನ್ನು ವರಿಸುವುದು ಗಾಲವನ ನಿರ್ಧಾರವಾಗಿರುತ್ತದೆ. ಆದರೆ, ಗಾಲವ ತನ್ನ ಮಾಧವಿ ಮತ್ತೆ ಕೌಮಾರ್ಯ ಪಡೆದುಕೊಳ್ಳಬೇಕು ಎಂದು ಬೇಡಿಕೆ ಮುಂದಿಡುತ್ತಾನೆ. ನನ್ನನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪುವುದಾದರೆ ಮಾತ್ರ ನಿನ್ನ ವರಿಸುವೆ ಗಾಲವ ಎಂದು ಮಾಧವಿ ಸ್ಪಷ್ಟವಾಗಿ ಹೇಳಿಬಿಡುತ್ತಾಳೆ. ಗಾಲವ ಇದನ್ನು ಒಪ್ಪುವುದಿಲ್ಲ. ಅತ್ತ ಸಮಾರಂಭದಲ್ಲಿ ಗುರುಗಳಿಂದ, ಹಿರಿಯರಿಂದ, ವಿವಿಧ ಗಣ್ಯರಿಂದ ಗಾಲವನ ಗುಣಗಾನ ನಡೆಯುತ್ತಿರುತ್ತೆ. ಗಾಲವ ಹೆಮ್ಮೆಯಿಂದ ಬೀಗುತ್ತಿರುತ್ತಾನೆ. ಇತ್ತ ತನ್ನ ಪ್ರೇಮಿಯಿಂದ ತಿರಸ್ಕರಿಸಲ್ಪಟ್ಟ ಹೆಣ್ಣು ಮಾಧವಿ ಕಾಡಿನಲ್ಲಿ ಮರೆಯಾಗುತ್ತಾಳೆ...
ಈ ಕಥೆ ಹೇಳಿದಾಗ ವಿನು ದಂಗಾದರು. ತಕ್ಷಣ ಇದನ್ನು ಜೋಗುಳದಲ್ಲಿ ತರುವ ನಿರ್ಧಾರವನ್ನೂ ಕೈಗೊಂಡರು. ಮಾಧವಿ ಪುಸ್ತಕ ಎಲ್ಲಿಂದಲೋ ನರೇಶ್ ತಂದೇಬಿಟ್ಟ. ಜೋಗುಳದ ವಿದ್ಯಾಧರ ಕ್ಯಾರೆಕ್ಟರ್ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಮಾಧವಿ ನಾಟಕ ಆಡಿಸುವ ಒಂದು ಸೀನ್ ಸಿದ್ಧಗೊಂಡಿತು. ಮಾಧವಿ ಪುಸ್ತಕ ದೇವಕಿ ಕೈಗೂ ಸಿಕ್ಕು ದೇವಕಿ ಅದರ ಮಾಧವಿಯ ಕ್ಯಾರೆಕ್ಟರ್ ಒಳಗಿಳಿಸಿಕೊಳ್ಳುವ ಸಿಕ್ವೆನ್ಸ್ ಭರ್ಜರಿಯಾಗೇ ಸಿದ್ಧವಾಯ್ತು. ತೆರೆಯ ಮೇಲೂ ಪ್ರೇಕ್ಷಕರು ಅದನ್ನು ಸ್ವೀಕರಿಸಿದರು... ಹೀಗೆ ಒಂದು ಧಾರಾವಾಹಿಯ ಮುಖ್ಯ ಪ್ರವಾಹಕ್ಕೆ ನಮ್ಮೆಲ್ಲರ ಆಶಯಗಳೂ ಅಂಡರ್ ಕರೆಂಟ್ ಆಗಿ ಸೇರಿಕೊಂಡು ಝೀ ಚಾನೆಲ್ ನಲ್ಲಿ ಜೋಗುಳ ಧುಮ್ಮಿಕ್ಕಿ ಹರಿಯಿತು. ಹೊಸ ಹೊಸ ತಿರುವುಗಳಿಂದ ಜೋಗುಳ ಅರ್ಥಪೂರ್ಣವಾಗಿ ಬೆಳೆಯುತ್ತಿದೆ.
ಇದೇ 2009 ಆಗಸ್ಟ್ 29ರಂದು ಅದರ 200ರ ಎಪಿಸೋಡ್ ದಾಟಿದ ಸಂಭ್ರಮ ಸಾಲಿಟೇರ್ ಹೊಟೇಲಿನಲ್ಲಿ ಕಳೆಕಟ್ಟಿತ್ತು. ಎಲ್ಲ ನೆನಪಾಯಿತು... ಕಳೆದ ಬಾಲ್ಯ, ಕಂಡುಂಡ ನೋವು, ನಲಿವುಗಳ ಭಾವಲೋಕದಲ್ಲಿ ಮತ್ತೆ ತೇಲಾಡಿದಂತಾಯಿತು. ಅದರಲ್ಲಿ ಮಿಂಚಿದವರ ಮುಖಗಳಲ್ಲಿನ ಒಬ್ಬೊಬ್ಬರ ನಗು ನನಗೊಂದು ದಿವ್ಯಬೆಳಕಾಗಿ ಕಾಡಿತು. ನನ್ನೊಳಗಿನ ದೇವಕಿ ಬಹುವಾಗೇ ಕಾಡಿದಳು... ನನ್ನೊಳಗೇ ಆವರಿಸಿದ ಕತ್ತಲಲ್ಲಿ ಕರಗಿಹೋದೆ...
ನನ್ನ ದಿಲ್ ಪೂರ್ವಕ ಸಲಾಂ ದೇವಕಿಯಂಥ ಹೆಣ್ಣಿಗೆ, ಗೆಳೆಯ ನರೇಶ್ ಗೆ ಮತ್ತು ಒಟ್ಟಾರೆ ಜೋಗುಳ ತಂಡದ ಪ್ರತಿ ಚೇತನಕೂ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ